ಠಾಣೆಯೆದುರು ಪ್ರತಿಭಟನೆ-ಬೆಳಿಗ್ಗೆ 8 ಗಂಟೆಯೊಳಗೆ ಬಂಧಿಸಲು ಗಡುವು
ಬಂಧಿಸದಿದ್ದರೆ ವೈದ್ಯಕೀಯ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ-ಐಎಂಎ ಎಚ್ಚರಿಕೆ
ಡಾ.ಆಶಾಜ್ಯೋತಿಯವರ ಮೇಲೆ ಹಲ್ಲೆಗೆ ಯತ್ನ-ತಾಯಿ,ಮಗನ ವಿರುದ್ಧ ಪ್ರಕರಣ
ಪುತ್ತೂರು:ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಆಶಾಜ್ಯೋತಿ ಪುತ್ತೂರಾಯ ಅವರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಬಂಧಿಸದೇ ಬಿಟ್ಟಿದ್ದಾರೆ ಎಂದು ಆರೋಪಿಸಿ ಪುತ್ತೂರಿನ ಕೆಲವು ವೈದ್ಯರು, ಭಾರತೀಯ ವೈದ್ಯಕೀಯ ಸಂಘ ಪುತ್ತೂರು ಶಾಖೆ ಪದಾಧಿಕಾರಿಗಳು ಹಾಗೂ ಅರುಣ್ ಕುಮಾರ್ ಪುತ್ತಿಲ ಸಹಿತ ನೂರಾರು ಮಂದಿ ರಾತ್ರಿ ವೇಳೆಯೇ ಠಾಣೆಯ ಮುಂದೆ ಜಮಾಯಿಸಿ ಪೊಲೀಸರ ನಡೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.ಆರೋಪಿಯನ್ನು ಏ.೨೬ರ ಬೆಳಿಗ್ಗೆ ೮ ಗಂಟೆಯ ಒಳಗೆ ಬಂಧಿಸದಿದ್ದರೆ ಪುತ್ತೂರಿನಲ್ಲಿ ಎಲ್ಲಾ ವೈದ್ಯಕೀಯ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುವುದಾಗಿ ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ಎಚ್ಚರಿಕೆ ನೀಡಿದರು.ಪ್ರತಿಭಟನೆ,ರಸ್ತೆ ರೋಕೋ ನಡೆಸುವುದಾಗಿ ಅರುಣ್ ಕುಮಾರ್ ಪುತ್ತಿಲ ಎಚ್ಚರಿಕೆ ನೀಡಿದ್ದಾರೆ.

ಮಾತಿನ ಚಕಮಕಿ: ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಆಶಾಜ್ಯೋತಿ ಅವರೊಂದಿಗೆ ಅನುಚಿತವಾಗಿ ವರ್ತಿಸಿ,ಹಲ್ಲೆಗೆ ಯತ್ನಿಸಿದ್ದ ಕುರಿತು ಪೊಲೀಸರು ಸುಳ್ಯಪದವಿನ ಜೊಹರಾ ಮತ್ತವರ ಮಗನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡರೂ ಬಂಧಿಸದೇ ಬಿಟ್ಟಿದ್ದಾರೆ ಎಂದು ಆರೋಪಿಸಿ ಭಾರತೀಯ ವೈದ್ಯಕೀಯ ಸಂಘದ ಪುತ್ತೂರು ಶಾಖೆಯ ಪದಾಧಿಕಾರಿಗಳು, ವೈದ್ಯರು ಹಾಗೂ ಅರುಣ್ ಕುಮಾರ್ ಪುತ್ತಿಲ ನೇತೃತ್ವದಲ್ಲಿ ನೂರಾರು ಮಂದಿ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದರು.ಆರೋಪಿಯನ್ನು ಬಿಟ್ಟಿರುವ ವಿಚಾರದಲ್ಲಿ ಪೊಲೀಸರು ಹಾಗೂ ಅಲ್ಲಿ ನೆರದವರ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು.ಪ್ರತಿಭಟನಾಕಾರರ ಬೇಡಿಕೆ ಬಗ್ಗೆ ಪೊಲೀಸರಿಂದ ಪೂರಕ ಸ್ಪಂದನೆ ದೊರೆಯದಿದ್ದಾಗ,ನಾವು ಇಲ್ಲೇ ಕುಳಿತುಕೊಳ್ಳುತ್ತೇವೆ ಎಂದು ಹೇಳಿ ಠಾಣೆಯೆದುರು ಕುಳಿತು ಪೊಲೀಸರ ನಡೆಯ ಬಗ್ಗೆ ಆಕ್ರೋಶ ವ್ಯಕಪಡಿಸಿದ ಪ್ರತಿಭಟನಾಕಾರರು ಪೊಲೀಸರ ವಿರುದ್ಧ ದಿಕ್ಕಾರ ಕೂಗಿದರು.ಆರೋಪಿಯನ್ನು ವಶಕ್ಕೆ ಪಡೆದರೂ ಬಂಧಿಸದೇ ಬಿಟ್ಟಿರುವುದು ತಪ್ಪು ಎಂದು ಪ್ರತಿಭಟನಾಕಾರರು ತಿಳಿಸಿದರು.ನಾವೇ ತೆರಳಿ ಆರೋಪಿಯನ್ನು ಬಂಧಿಸುವುದಾಗಿ ಎಸ್‌ಐ ಆಂಜನೇಯ ರೆಡ್ಡಿ ತಿಳಿಸಿದಾಗ, ನೀವು ಪೊಲೀಸ್ ಬಂದೋಬಸ್ತಿನಲ್ಲಿ ಆರೋಪಿಯನ್ನು ಕರೆ ತನ್ನಿ, ಅಲ್ಲಿಯ ತನಕ ನಾವು ಇಲ್ಲೇ ಕುಳಿತುಕೊಳ್ಳುವುದಾಗಿ ಪ್ರತಿಭಟನಾಕಾರರು ತಿಳಿಸಿದರು.
ದೂರಿನಂತೆ ಕ್ರಮಕೈಗೊಳ್ಳುತ್ತೇವೆ ಇನ್ಸ್‌ಪೆಕ್ಟರ್ ಭರವಸೆ: ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಆದ ಹಲ್ಲೆಯ ಬಗ್ಗೆ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿzವೆ.ಅದರಂತೆ ಕ್ರಮಕೈಗೊಳ್ಳುತ್ತೇವೆ ಎಂದು ಇನ್ಸ್‌ಪೆಕ್ಟರ್ ಜಾನ್ಸನ್ ಡಿ ಸೋಜ ತಿಳಿಸಿದರು.ಇವತ್ತೇ ಬಂಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ನಾಳೆ ಬೆಳಿಗ್ಗೆ ೮ ಗಂಟೆಯ ತನಕ ಕಾಲಾವಕಾಶ ನೀಡುತ್ತೇವೆ.ಅಷ್ಟರ ಒಳಗಾಗಿ ಆರೋಪಿಯನ್ನು ಬಂದಿಸಬೇಕು.ಇಲ್ಲದಿದ್ದಲ್ಲಿ ನಾವು ಮತ್ತೆ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಸರಕಾರಿ ವೈದ್ಯಾಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ದು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.ಇದು ಖಂಡನೀಯ.ಆರೋಪಿಗಳು ಸಿಕ್ಕಿರುವಂತದ್ಧು ಮತ್ತು ಇಲಾಖೆ ಅವರನ್ನು ಬಿಟ್ಟಿರುವಂಥದ್ದು ದೊಡ್ಡ ತಪ್ಪು.ಇದನ್ನು ಎಲ್ಲಿಯೂ ಹೇಳಬಲ್ಲೆ.ನಾಳೆ ಬೆಳಿಗ್ಗೆವರೆಗೆ ನಿಮಗೆ ಅವಕಾಶ ಕೊಡ್ತೇವೆ.ಡಾಕ್ಟ್ರ ಕಂಪ್ಲೈಂಟ್ ಮೇರೆಗೆ ಯಾರು ಆರೋಪಿ ಇದ್ದಾರೆ ಅವರನ್ನು ಬಂಧನ ಮಾಡಿ ನೀವು ಠಾಣೆಗೆ ತರಬೇಕು.ಅಕಸ್ಮಾತ್ ನೀವು ಬಂಧನ ಮಾಡದೆ ಇದ್ದರೆ ನಮ್ಮದು ಪ್ರತಿಭಟನೆ ನಡೆಯುತ್ತೆ.ರಸ್ತೆ ರೋಖೋ ನಡೆಯುತ್ತದೆ.ಎಲ್ಲ ನಡೆಯುತ್ತದೆ ಎಂದು ಎಚ್ಚರಿಕೆ ನೀಡಿದರು.
ವೈದ್ಯಕೀಯ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ಎಚ್ಚರಿಕೆ: ಭಾರತೀಯ ವೈದ್ಯಕೀಯ ಸಂಘದ ಪುತ್ತೂರು ಶಾಖೆ ಕಾರ್ಯದರ್ಶಿ ಡಾ.ಗಣೇಶ್ ಪ್ರಸಾದ್ ಮುದ್ರಜೆ ಮಾತನಾಡಿ,ಸರಕಾರಿ ಆಸ್ಪತ್ರೆಯ ಕರ್ತವ್ಯ ನಿರತ ಮಹಿಳಾ ವೈದ್ಯಾಧಿಕಾರಿಗಳಿಗೆ ಹಲ್ಲೆ ನಡೆಸಿರುವುದು ಅಕ್ಷಮ್ಯ ಅಪರಾಧ.ಅದಕ್ಕೆ ಪುತ್ತೂರು ಪೊಲೀಸ್ ಇಲಾಖೆ ತಕ್ಕದಾಗಿ ಸ್ಪಂದಿಸಿಲ್ಲ ಎಂಬ ಭಾವನೆ ಎಲ್ಲ ಡಾಕ್ಟ್ರಲ್ಲೂ ಇದೆ.ಹಾಗಾಗಿ ನಾಳೆ ಬೆಳಿಗ್ಗೆ ೮ ಗಂಟೆಯೊಳಗೆ ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ಬಂಧಿಸದೇ ಇದ್ದಲ್ಲಿ ಪುತ್ತೂರಿನಲ್ಲಿ ಎಲ್ಲ ವೈದ್ಯಕೀಯ ಸೇವೆ ಸ್ಥಗಿತಗೊಳಿಸಲಿzವೆ ಎಂದು ಅತ್ಯಂತ ನೋವಿನಿಂದ, ಭಾರತೀಯ ವೈದ್ಯಕೀಯ ಸಂಘದ ಪರವಾಗಿ ಘೋಷಣೆ ಮಾಡುತ್ತಿzವೆ ಎಂದರು.
ಅನ್ಯಾಯ ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಕರ್ನಾಟಕ ವೈದ್ಯಕೀಯ ಅಧಿನಿಯಮದಲ್ಲಿ ಕಾಯಿದೆ ತಿದ್ದುಪಡಿ ಮಾಡಲಾಗಿದೆ.ಹಾಗಿದ್ದರೂ ಪೊಲೀಸರು ಆರೋಪಿಯನ್ನು ಬಂಧಿಸಿ ನಾಟಕ ರೀತಿಯಲ್ಲಿ ತನಿಖೆ ನಡೆಸಿ ಆತನನ್ನು ಬಿಟ್ಟಿದ್ದಾರೆ.ಪೊಲೀಸರು ಉಡಾಫೆ ಮಾತನಾಡಿದ್ದಾರೆ.ಇದರಿಂದ ನೊಂದಿzವೆ.ಹೀಗಾದರೆ ಮಹಿಳಾ ವೈದ್ಯರು ಹೇಗೆ ಕೆಲಸ ಮಾಡಬೇಕು.ಆರೋಪಿಯನ್ನು ಬಂಧಿಸಲು ಏ.೨೬ರ ಬೆಳಿಗ್ಗೆ ಎಂಟು ಗಂಟೆಯ ತನಕ ಪೊಲೀಸರಿಗೆ ಕಾಲಾವಕಾಶ ನೀಡುತ್ತೇವೆ.ಬೆಳಿಗ್ಗೆ ಎಂಟು ಗಂಟೆಯ ಒಳಗಾಗಿ ಹಲ್ಲೆ ನಡೆಸಿದ ಆರೋಪಿಯನ್ನು ಬಂಧಿಸದಿದ್ದರೆ ಪುತ್ತೂರುನ ಎಲ್ಲಾ ವೈದ್ಯರು ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಆರೋಪಿಯನ್ನು ಬಿಟ್ಟಿರುವುದು ಖಂಡನೀಯ-ಡಾ.ಸುರೇಶ್ ಪುತ್ತೂರಾಯ:
ಡಾಕ್ಟರ್‍ಸ್ ಫೋರಂ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಸರಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಪುತ್ತೂರಾಯರವರು ವಾರ್ಡ್‌ಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಮಕ್ಕಳಿಗೆ, ಗರ್ಭಿಣಿಯರಿಗೆ ತೊಂದರೆ ಅಗುತ್ತಿದೆ ಎಂದಾಗ ಅಲ್ಲಿದ್ದ ಮಹಿಳೆ ಹಾಗೂ ಅವರ ಮಗ ಏಕಾಏಕಿ ವೈದ್ಯೆ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.ಪೊಲೀಸರು ಆರೋಪಿಯನ್ನು ಠಾಣೆಗೆ ಕರೆತಂದು ನಂತರ ಬಿಟ್ಟಿದ್ದಾರೆ.ಇದಕ್ಕೆ, ಆರೋಪಿಯ ಜೊತೆ ಮಗು ಇದೆ ಕಾರಣ ನೀಡಿರುವುದು ಖಂಡನೀಯ.ಹಲ್ಲೆ ನಡೆಸಿದ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ,ನಗರಸಭೆ ಸದಸ್ಯೆ ವಿದ್ಯಾ ಆರ್ ಗೌರಿ, ನಗರ ಮಂಡಲ ಬಿಜೆಪಿ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ಮನೀಶ್, ಪ್ರವೀಣ್ ಶೆಟ್ಟಿ ತಿಂಗಳಾಡಿ, ಸೀತಾರಾಮ ರೈ ಕೆದಂಬಾಡಿ ಗುತ್ತು, ಜಯಲಕ್ಷ್ಮೀ ಶಗ್ರಿತ್ತಾಯ, ಹರಿಣಿ ಪುತ್ತೂರಾಯ, ವೈದ್ಯರಾದ ಡಾ. ಭಾಸ್ಕರ್, ಡಾ.ಅರ್ಚನ ಕರಿಕ್ಕಳ, ಡಾ.ರವಿಪ್ರಕಾಶ್ ಸೇರಿದಂತೆ ಹಲವು ಮಂದಿ ವೈದ್ಯರು ಹಾಗೂ ನೂರಾರು ಮಂದಿ ಠಾಣೆಯ ಮಂದೆ ಜಮಾಯಿಸಿದ್ದರು.