ಅಂಬಿಕಾದಲ್ಲಿ ಡಾ.ಸಿ.ಎಸ್.ಶಾಸ್ತ್ರಿಯವರ ಚಿಂತನ – ಮಂಥನ ಕೃತಿ ಲೋಕಾರ್ಪಣೆ

0

ಜೀವನಾನುಭವ ಹಾಗೂ ಗಾಢ ಓದಿನ ಫಲಶೃತಿಯಾಗಿ ಕೃತಿ ರಚನೆ : ಡಾ.ತಾಳ್ತಜೆ

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಆವರಣದಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ವಿಶ್ರಾಂತ ಭೌತಶಾಸ್ತ್ರ ಪ್ರಾಧ್ಯಾಪಕ ಡಾ.ಸಿ.ಎಸ್.ಶಾಸ್ತ್ರಿಯವರು ರಚಿಸಿದ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಂಬಿಕಾ ಪ್ರಕಾಶನದ ಮೂಲಕ ಪ್ರಕಟಗೊಂಡ ಚಿಂತನ – ಮಂಥನ ಕೃತಿ ಲೋಕಾರ್ಪಣಾ ಸಮಾರಂಭ ಶುಕ್ರವಾರ ನಡೆಯಿತು.

ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಮುಂಬೈ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ತಾಳ್ತಜೆ ವಸಂತ ಕುಮಾರ ಅವರು ಮಾತನಾಡಿ ವಯಸ್ಸಾದಂತೆ ಜೀವನಾಸಕ್ತಿ ಕಳೆದುಕೊಳ್ಳುವ, ವಿಶ್ರಾಂತಿಯನ್ನೇ ಬಯಸುವ ಮನಃಸ್ಥಿತಿಗೆ ಒಳಗಾಗುವ ಮಂದಿಯ ಮಧ್ಯೆ ಡಾ.ಸಿ.ಎಸ್.ಶಾಸ್ತ್ರಿಯವರು ಅಪರಿಮಿತ ಜೀವನೋತ್ಸಾಹದ ಮಾದರಿಯಾಗಿ ಕಾಣಿಸಿಕೊಳ್ಳುತ್ತಾರೆ. ತನ್ನ ಪರಿಧಿಯೊಳಗೆ ಬಂದ ಎಲ್ಲರಿಂದಲೂ ಅಪಾರ ಗೌರವಕ್ಕೆ ಪಾತ್ರರಾದ ಹೆಚ್ಚುಗಾರಿಕೆ ಶಾಸ್ತ್ರಿಯವರದ್ದು ಎಂದು ಶ್ಲಾಘಿಸಿದರು.

ಡಾ.ಶಾಸ್ತ್ರಿಯವರು ಒಂದು ರೀತಿಯಲ್ಲಿ ಇಡಿಯ ಜೀವನ ದರ್ಶನವನ್ನು ತಮ್ಮ ಕೃತಿಯಲ್ಲಿ ದಾಖಲಿಸಿ ತೋರಿದ್ದಾರೆ. ಕತ್ತೆ, ನಾಯಿ, ಮಂಗಗಳಂತಹ ಪ್ರಾಣಿಗಳು ಹೇಗೆ ಬದುಕಿನ ಭಾಗವಾಗಿರುತ್ತವೆ ಎಂಬುದನ್ನೂ ತಮ್ಮ ಕೃತಿಯಲ್ಲಿ ಉಲ್ಲೇಖ ಮಾಡಿದ್ದಾರೆ. ಕೇವಲ ಜೀವನಾನುಭವ ಮಾತ್ರವಲ್ಲದೆ ಅಪಾರವಾದ ಓದಿನ ಹಿನ್ನೆಲೆಯೂ ಡಾ.ಶಾಸ್ತ್ರಿಗಳಿಗಿದೆ ಎಂಬುದು ಅವರ ಕೃತಿಯನ್ನು ಓದುವಾಗ ಅರ್ಥವಾಗುತ್ತಾ ಸಾಗುತ್ತದೆ. ಸಂತೋಷ ಆನಂದಗಳ ಬಗೆಗೆ ಡಾ.ಶಾಸ್ತ್ರಿಯವರ ವಿಶ್ಲೇಷಣೆ ಮನೋಜ್ಞವಾಗಿ ಎಂದರು.

ಕೃತಿ ಪರಿಚಯ ನಡೆಸಿಕೊಟ್ಟ ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯ ವಿಶ್ರಾಂತ ಮುಖ್ಯೋಪಾಧ್ಯಾಯ ಹಾಗೂ ವೈದಿಕ ವಿದ್ವಾಂಸ ವೇದಮೂರ್ತಿ ವೆಂಕಟ್ರಮಣ ಭಟ್ ಮಂಜುಳಗಿರಿ ಮಾತನಾಡಿ ಡಾ.ಸಿ.ಎಸ್.ಶಾಸ್ತ್ರಿಗಳ ಚಿಂತನ – ಮಂಥನ ಕೃತಿ ವಿಮರ್ಶೆಗೂ ಮೀರಿದ ಗ್ರಂಥ. ಲೌಕಿಕದಿಂದ ಅಲೌಕಿಕದೆಡೆಗಿನ ವಿಚಾರಗಳನ್ನು ಸ್ವಾನುಭವದಿಂದ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ವಾಸ್ತವ ಚಿತ್ರಣವನ್ನು ಚಿಂತನಪರ ಶೈಲಿಯೊಂದಿಗೆ ನಿರೂಪಿಸುವ ಕಲೆ ಲೇಖಕರಿಗೆ ಸಿದ್ಧಿಸಿದೆ. ಹಾಗಾಗಿಯೇ ಕೃತಿ ಓದುಗರಿಗೆ ಆಪ್ಯಾಯಮಾನ ಎನಿಸುತ್ತದೆ ಎಂದರು.

ಕೃತಿಕಾರ ಡಾ.ಸಿ.ಎಸ್.ಶಾಸ್ತ್ರಿ ಅವರು ಮಾತನಾಡಿ ಜೀವನ ಸಂಗ್ರಾಮದಲ್ಲಿ ಉತ್ಸಾಹ ತಣಿದು ತತ್ತ್ವಜ್ಞಾನದೆಡೆಗೆ ಆಸಕ್ತಿ ಬೆಳೆದು ಮೂಡಿದ ಕೃತಿ ’ಚಿಂತನ- ಮಂಥನ’. ಈ ಕೃತಿಯಲ್ಲಿ ಮನೋಬುದ್ಧಿಗಳು ಮಾಡಿದ ವಿವಿಧ ವಿಚಾರಗಳ ತುಲನೆಗಳು ಪ್ರಧಾನ ತಳಹದಿಯಾಗಿ ಮೂಡಿಬಂದಿವೆ. ಚಿಂತೆಗಿಂತ ಚಿಂತನೆಯೇ ಲೇಸು ಎಂಬ ಮಾತಿನಂತೆ ಮಿತಿಯೊಳಗೆ ಮಥಿಸಿದ ವಿಚಾರಧಾರೆಗಳು ಕೃತಿರೂಪವನ್ನು ಪಡೆದಿವೆ ಎಂದು ನುಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮೈಸೂರಿನ ಹಿರಿಯ ನ್ಯಾಯವಾದಿ ಒ.ಶ್ಯಾಮ ಭಟ್ ಮಾತನಾಡಿ ಡಾ.ಸಿ.ಎಸ್.ಶಾಸ್ತ್ರಿಯವರು ಭೌತಶಾಸ್ತ್ರದಲ್ಲಿ ಅತ್ಯುನ್ನತ ವಿಜ್ಞಾನಿಯಾಗಿ ಗುರುತಿಸಿಕೊಂಡವರು. ಶಿಲ್ಲಾಂಗ್‌ನ ಪಿಲಾನಿ ವಿಶ್ವವಿದ್ಯಾನಿಲಯದ ಡೀನ್ ಆಗಿ ಕರ್ತವ್ಯ ನಿರ್ವಹಿಸಿದವರು. ನ್ಯೂಕ್ಲಿಯರ್ ಸೈನ್ಸ್‌ನಲ್ಲಿ ಅತೀವ ಜ್ಞಾನವುಳ್ಳ ವ್ಯಕ್ತಿ ಎಂದು ನುಡಿದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ ಇತಿಹಾಸದ ಅರಿವಿಲ್ಲದವನು ಇತಿಹಾಸವನ್ನು ಸೃಷ್ಟಿಸಲಾರ. ಹನ್ನೆರಡನೇ ಶತಮಾನದಲ್ಲಿ ಭಕ್ತಿಯಾರ್ ಖಿಲ್ಜಿ ಎಂಬ ದಾಳಿಕೋರ ದೇಶದ ಮೇಲೆ ದಾಳಿ ಮಾಡಿದ. ಆತ ಭಾರತದ ಜ್ಞಾನ ಭಂಡಾರವಾಗಿದ್ದ ನಳಂದ ವಿಶ್ವವಿದ್ಯಾನಿಲಯಕ್ಕೆ ಬೆಂಕಿ ಹಾಕಿದ. ಸುಮಾರು ಮೂರು ತಿಂಗಳುಗಳಷ್ಟು ಕಾಲ ಅಲ್ಲಿದ್ದ ಪುಸ್ತಕಗಳು ಬೆಂಕಿಯಲ್ಲಿ ಉರಿದವೆಂದರೆ ಎಷ್ಟು ದೊಡ್ಡ ಪ್ರಮಾಣದಲ್ಲಿ ಅಲ್ಲಿ ಜ್ಞಾನ ಹುದುಗಿತ್ತೆಂಬುದು ಅರ್ಥವಾಗುತ್ತದೆ. ಅಂತಹ ಜ್ಞಾನದ ಪುನರ್ ನಿರ್ಮಾಣದ ಕಾರ್ಯ ಆಗಬೇಕು ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ, ವಿಶ್ರಾಂತ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್ ಮಾತನಾಡಿ ನಮ್ಮ ಹಿರಿಯರು ಒಂದಿಲ್ಲೊಂದು ರೀತಿ ನಮ್ಮ ಬದುಕುಗಳಿಗೆ ಮಾದರಿಯಾಗಿ ನಿಂತವರು. ಕೆಲವರು ಬದುಕು ಹೇಗಿರಬೇಕು ಎಂಬುದಕ್ಕೆ ನಿದರ್ಶನವಾದರೆ ಕೆಲವರು ಹೇಗೆ ಬದುಕಬಾರದೆಂಬುದಕ್ಕೆ ನಿದರ್ಶನರಾಗಿದ್ದಾರೆ. ಮಾಗಿದ ವ್ಯಕ್ತಿತ್ವದಿಂದಲಷ್ಟೇ ಉತ್ಕೃಷ್ಟ ಕೃತಿ ರೂಪುಗೊಳ್ಳುವುದಕ್ಕೆ ಸಾಧ್ಯ. ಡಾ.ಸಿ.ಎಸ್.ಶಾಸ್ತ್ರಿಯವರು ಅಂತಹ ಮಾದರಿ ಮತ್ತು ಮಾಗಿದ ವ್ಯಕ್ತಿ ಎಂದು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಡಾ.ಸಿ.ಎಸ್.ಶಾಸ್ತ್ರಿ ದಂಪತಿಗಳನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿನಿಯರಾದ ಧೃತಿ, ನಿಧಿ ಹಾಗೂ ಈಶೀತ ಪ್ರಾರ್ಥಿಸಿದರು. ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ್ ಕುಮಾರ್ ಕಮ್ಮಾಜೆ ಸ್ವಾಗತಿಸಿದರು. ಕೃತಿ ಪ್ರಕಟಣೆಯಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಮಣಿಲ ಸುಬ್ಬಣ್ಣ ಶಾಸ್ತ್ರಿ ವಂದಿಸಿದರು. ಅಂಬಿಕಾ ಮಹಾವಿದ್ಯಾಲಯದ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಚಂದ್ರಕಾಂತ ಗೋರೆ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಕಾಶ್ಮೀರ ದಾಳಿಯಲ್ಲಿ ಪ್ರಾಣಕಳೆದುಕೊಂಡವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಮೌನಪ್ರಾರ್ಥನೆ ನಡೆಸಲಾಯಿತು.

LEAVE A REPLY

Please enter your comment!
Please enter your name here