ಪಿಯುಸಿ ಮರು ಮೌಲ್ಯಮಾಪನದಲ್ಲಿ ಮಚ್ಚಿಮಲೆಯ ಸುಧೀಕ್ಷಾ ಮೈಸೂರು ಜಿಲ್ಲೆಯಲ್ಲಿ ಪ್ರಥಮ

0

ಪುತ್ತೂರು: 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಮಚ್ಚಿಮಲೆ ಮೂಲದ ಸುಧೀಕ್ಷಾ ಎಂ.ರವರು 593 ಅಂಕ ಪಡೆದು ರಾಜ್ಯದಲ್ಲಿ ಏಳನೇ ಸ್ಥಾನ ಹಾಗೂ ಮೈಸೂರು ಜಿಲ್ಲೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದರು. ಸುಧೀಕ್ಷಾರವರು ರಸಾಯನಶಾಸ್ತ್ರ ವಿಷಯದಲ್ಲಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರಿಂದ ರಸಾಯನಶಾಸ್ತ್ರ ವಿಷಯದಲ್ಲಿ ಒಂದಂಕ ಹೆಚ್ಚುವರಿಯಾಗಿ ಸಿಕ್ಕಿದ್ದು ಇದೀಗ ಸುಧೀಕ್ಷಾರವರು ಮೈಸೂರು ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ ಆರನೇ ಸ್ಥಾನವನ್ನು ಪಡೆದಿರುತ್ತಾರೆ.


ಮೈಸೂರಿನ ಸದ್ವಿದ್ಯಾ ಸೆಮಿ ರೆಸಿಡೆನ್ಸಿಯಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಸುಧೀಕ್ಷಾರವರಿಗೆ ಇತ್ತೀಚೆಗೆ ಪ್ರಕಟವಾಗಿದ್ದ ಫಲಿತಾಂಶದಲ್ಲಿ 600 ಅಂಕಕ್ಕೆ 593 ಅಂಕ ಲಭಿಸಿತ್ತು. ರಸಾಯನಶಾಸ್ತ್ರದಲ್ಲಿ 96 ಅಂಕ ದೊರೆತಿತ್ತು. ರಸಾಯನಶಾಸ್ತ್ರ ವಿಷಯದಲ್ಲಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅಂಕಗಳಲ್ಲಿ ಬದಲಾವಣೆಯಾಗಿದ್ದು ಒಂದಂಕ ಹೆಚ್ಚುವರಿಯಾಗಿ ದೊರೆತಿದೆ. ಉಳಿದಂತೆ ಸಂಸ್ಕೃತ 99, ಇಂಗ್ಲೀಷ್ 98, ಭೌತಶಾಸ್ತ್ರ, ಗಣಿತ, ಜೀವಶಾಸ್ತ್ರದಲ್ಲಿ 100 ಅಂಕ ದೊರೆತಿತ್ತು. ಮರು ಮೌಲ್ಯಮಾಪನದಿಂದ 593 ರಿಂದ 594 ಅಂಕಕ್ಕೆ ಏರಿಕೆಯಾಗಿದೆ. ಮೈಸೂರಿನ ಸರಸ್ವತಿಪುರಂನ ವಿಜಯ ವಿಠಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದಿರುವ ಈಕೆ 2023ನೇ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ 616 ಅಂಕಗಳನ್ನು ಪಡೆದುಕೊಂಡಿದ್ದರು. ಇವರು ಆರ್ಯಾಪು ಗ್ರಾಮದ ಮಚ್ಚಿಮಲೆ ನಿವಾಸಿಯಾಗಿದ್ದು, ಫಿಲೋಮಿನಾ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಪ್ರಸ್ತುತ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಹಿರಿಯ ಶ್ರೇಣಿ ಪ್ರಾಧ್ಯಾಪಕರಾಗಿರುವ ಡಾ.ಚಂದ್ರಶೇಖರ ಮಚ್ಚಿಮಲೆ ಮತ್ತು ಜಾಹ್ನವಿ ಕೆ.ದಂಪತಿ ಪುತ್ರಿ. ಶೇಷಪ್ಪ ನಾಯ್ಕ್ ಮಚ್ಚಿಮಲೆ ಇವರ ಮೊಮ್ಮಗಳಾಗಿದ್ದಾರೆ.

LEAVE A REPLY

Please enter your comment!
Please enter your name here