ಸರಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಜೊತೆ ಅನುಚಿತ ವರ್ತನೆ, ಹಲ್ಲೆಗೆ ಯತ್ನ ಪ್ರಕರಣ : ಡಿವೈಎಸ್ಪಿ ಕಚೇರಿಯಲ್ಲಿ ಐಎಂಎ ಪದಾಧಿಕಾರಿಗಳೊಂದಿಗೆ ಎಸ್ಪಿ ಸಭೆ

0

ಎಸ್ಪಿ ಭರವಸೆ: ಪ್ರತಿಭಟನೆ ತಾತ್ಕಾಲಿಕ ಸ್ಥಗಿತಕ್ಕೆ ಐಎಂಎ ನಿರ್ಧಾರ

ಪುತ್ತೂರು: ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಆಶಾ ಪುತ್ತೂರಾಯರವರ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆಗೆ ಯತ್ನಿಸಿದ ಆರೋಪಿಯ ಬಂಧನಕ್ಕೆ ಆಗ್ರಹಿಸಿ ವೈದ್ಯರು ನಡೆಸುತ್ತಿದ್ದ ಪ್ರತಿಭಟನೆಯನ್ನು ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಅವರ ಭರವಸೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ.


ಏ.27ರಂದು ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಅವರು ಪುತ್ತೂರು ಡಿವೈಎಸ್ಪಿ ಕಚೇರಿಯಲ್ಲಿ ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳೊಂದಿಗೆ ತುರ್ತಾಗಿ ಮಾತುಕತೆ ನಡೆಸಿದರು. ಪುತ್ತೂರು ಡಿವೈಎಸ್ಪಿ ಅರುಣ್ ನಾಗೇಗೌಡ, ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ಡಾ. ಗಣೇಶ್ ಮುದ್ರಾಜೆ, ಡಾಕ್ಟರ್ ಪಾರ್ಮ್‌ನ ಅಧ್ಯಕ್ಷ ಡಾ. ಸುರೇಶ್ ಪುತ್ತೂರಾಯ ಅವರು ಸಭೆಯಲ್ಲಿ ಉಪಸ್ಥಿತರಿದ್ದರು. ಎಸ್‌ಪಿಯವರು ಕೆಲವೊಂದು ಭರವಸೆ ಮತ್ತು ಕೆಲವು ಗಂಭೀರ ಚಿಂತನೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಆಂದೋಲನವನ್ನು ತಾತ್ಕಾಲಿಕವಾಗಿ ಕೈ ಬಿಡಲಾಗಿದೆ ಎಂದು ಡಾ. ಗಣೇಶ್ ಪ್ರಸಾದ್ ಮುದ್ರಾಜೆ ತಿಳಿಸಿದ್ದಾರೆ.


ಸಭೆಯಲ್ಲಿ ಪ್ರಸ್ತಾಪವಾದ ವಿಚಾರ:
ಆರೋಪಿಯನ್ನು ಅತೀ ಶೀಘ್ರದಲ್ಲೇ ಕೋರ್ಟ್‌ಗೆ ಹಾಜರುಪಡಿಸಲಾಗುವುದು ಮತ್ತು ಎಫ್ಐಆರ್‌ನಲ್ಲಿ ದೂರಿಗೆ ಸಂಬಂಧಿಸಿದ ಗಂಭೀರ ಅಂಶಗಳನ್ನು ಸೇರಿಸಲಾಗಿದೆ ಆರೋಪಿಯ ಬಂಧನಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಿನ ಹಂತದಲ್ಲಿ ಆರೋಪಿಯನ್ನು ಕೂಡಲೇ ಬಂಧಿಸಲು ಒತ್ತಾಯಿಸಬಾರದು ಎಂದು ತಿಳಿಸಿದ ಎಸ್ಪಿ ಯವರು ಆರೋಪಿಯ ಶೋಧ ಕಾರ್ಯವು ತೀವ್ರವಾಗಿ ನಡೆಯುತ್ತಿದೆ ಎಂದು ಭರವಸೆ ನೀಡಿದರು. ಈ ಪ್ರತಿಭಟನೆ ಧಾರ್ಮಿಕ ರೂಪ ಪಡೆದುಕೊಳ್ಳುತ್ತಿದೆ ಎಂಬ ಆತಂಕವನ್ನು ವ್ಯಕ್ತಪಡಿಸಿದರು. ಐಎಂಎಯ ಪದಾಧಿಕಾರಿಗಳು ಮತ್ತು ಡಾ. ಆಶಾ ಪುತ್ತೂರಾಯರ ಮೇಲೆ ತಪ್ಪು ಆರೋಪವಿಲ್ಲವೆಂದು ತಿಳಿಸಿದ್ದಾರೆ. ನಾವು ಧಾರ್ಮಿಕ ಅಥವಾ ರಾಜಕೀಯ ಪ್ರಭಾವದಿಂದ ಮುಕ್ತವಾಗಿದ್ದು, ಕೇವಲ ನ್ಯಾಯಕ್ಕಾಗಿ ಶಾಂತಿಯುತವಾಗಿ ಹೋರಾಡುತ್ತಿರುವುದಾಗಿ ಎಸ್ಪಿಗೆ ತಿಳಿಸಿದ್ದೇವೆ ಎಂದು ಡಾ. ಗಣೇಶ್ ಮುದ್ರಾಜೆ ತಿಳಿಸಿದ್ದಾರೆ.


ಧರಣಿ ಮಾಡದಂತೆ ಮನವಿ:
ಪುತ್ತೂರು ಪಟ್ಟಣದ ಯಾವುದೇ ಸ್ಥಳದಲ್ಲಿ ಧರಣಿ ಮಾಡಬಾರದು ಎಂದು ಎಸ್ಪಿಯವರು ಮನವಿ ಮಾಡಿದರು. ಅದು ಸಾರ್ವಜನಿಕ ಭಾವನೆಗಳಿಗೆ ಹಾನಿಯುಂಟು ಮಾಡಬಹುದು ಎಂದು ತಿಳಿಸಿದರು. ಅದೇ ರೀತಿ ಭವಿಷ್ಯದಲ್ಲಿ ವೈದ್ಯಕೀಯ ವೃತ್ತಿಗೆ ವಿರುದ್ಧವಾದ ಯಾವುದೇ ಹಲ್ಲೆಯ ಮೇಲಿನ ದೂರುಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಭರವಸೆ ನೀಡಿದರು ಎಂದು ಡಾ. ಗಣೇಶ್ ಮುದ್ರಾಜೆ ತಿಳಿಸಿದ್ದಾರೆ.


ವಿಚಾರಣೆಗೆ ಸಂಬಂಧಿಸಿ ಪ್ರಾಥಮಿಕ ಹಂತದಲ್ಲಿ ತನಿಖಾ ಅಧಿಕಾರಿಯಿಂದ ಕೆಲವು ಲೋಪಗಳು ನಡೆದಿರುವುದು ನಿಜ ಎಂದ ಎಸ್ಪಿಯವರು , ಮುಂದಿನ ಕ್ರಮದಲ್ಲಿ ಯಾವುದೇ ಲೋಪಗಳು ನಡೆಯದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ವೈದ್ಯ ಸಮುದಾಯದ ಭಾವನೆಗಳ ಬಗ್ಗೆ ಅವರು ಸಹಾನೂಭೂತಿಯನ್ನು ವ್ಯಕ್ತಪಡಿಸಿದರು ಚಾರ್ಜ್ ಶೀಟ್ ಆಧರಿಸಿ ಕೋರ್ಟ್ ಆರೋಪಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ಎಸ್ಪಿ ಮತ್ತು ಡಿವೈಎಸ್ಪಿಯವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಡಾ. ಆಶಾ ಪುತ್ತೂರಾಯ ಅವರಿಗೆ ಸುರಕ್ಷತೆ ಒದಗಿಸುವಲ್ಲಿ ಸಹಾಯ ಮಾಡುವುದಾಗಿ ಎಸ್ಪಿಯವರು ಭರವಸೆ ನೀಡಿದ್ದಾರೆ ಎಂದು ಡಾ. ಗಣೇಶ್‌ಪ್ರಸಾದ್ ಮುದ್ರಾಜೆ ತಿಳಿಸಿದ್ದಾರೆ.


ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿಯವರ ಭರವಸೆಯನ್ನು ಗೌರವಿಸಿ, ಏಪ್ರಿಲ್ 28ರ ಬೆಳಗ್ಗೆ 8 ಗಂಟೆಯಿಂದ ನಮ್ಮ ಆಂದೋಲನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದ್ದೇವೆ.
ಡಾ. ಗಣೇಶ್‌ಪ್ರಸಾದ್ ಮುದ್ರಾಜೆ, ಕಾರ್ಯದರ್ಶಿ ಐಎಮ್‌ಎ

LEAVE A REPLY

Please enter your comment!
Please enter your name here