ಬನ್ನೂರು ಸಂತ ಅಂತೋನಿ ಚರ್ಚ್‌ನ ರಜತ ಸಂಭ್ರಮದ ಪ್ರಯುಕ್ತ ಪವಿತ್ರ ಪರಮಪ್ರಸಾದದ ದಿವ್ಯ ಬಲಿಪೂಜೆ

0

ದೇವರನ್ನು ಭಕ್ತಿಯಿಂದ ಪೂಜಿಸಿದಾಗ ಕುಟುಂಬ, ಸಮುದಾಯ ಜೀವಂತಿಕೆ ಹೊಂದುತ್ತದೆ-ವಂ|ಬೊನಿಪಾಸ್ ಪಿಂಟೊ

ಪುತ್ತೂರು: ನಾವೆಲ್ಲರೂ ದೇವರ ಮಕ್ಕಳು. ನಾವೆಲ್ಲರೂ ಒಗ್ಗಟ್ಟಿನಲ್ಲಿ ಜೀವಿಸಿದಾಗ ಮತ್ತು ದೇವರನ್ನು ನಮ್ಮ ಅಂತರಾಳದಲ್ಲಿಟ್ಟು ಭಕ್ತಿಯಿಂದ ಪೂಜಿಸಿದಾಗ ನಮ್ಮ ಕುಟುಂಬವಾಗಲಿ ಅಥವಾ ಸಮುದಾಯವಾಗಲಿ ಜೀವಂತಿಕೆಯನ್ನು ಹೊಂದುತ್ತದೆ ಎಂದು ಮೂಡುಬೆಳ್ಳೆ ರೀಜನಲ್ ಸೆಮಿನರಿಯ ನಿರ್ದೇಶಕ ವಂ|ಬೊನಿಪಾಸ್ ಪಿಂಟೊ(ಮೂಲತ ಉಪ್ಪಿನಂಗಡಿ ನಿವಾಸಿ)ರವರು ಹೇಳಿದರು.

ಅವರು ಬನ್ನೂರು ಸಂತ ಅಂತೋನಿ ಧರ್ಮಕ್ಷೇತ್ರದ ರಜತ ಸಂಭ್ರಮದ ಪ್ರಯುಕ್ತ ಚರ್ಚ್‌ನಲ್ಲಿ  ಎ.27 ರಂದು ಅಪರಾಹ್ನ ಪವಿತ್ರ ಪರಮಪ್ರಸಾದದ ಭ್ರಾತ್ವತ್ವ ಭಾನುವಾರ(ಕೊಂಪ್ರಿಚೊ ಆಯ್ತಾರ್)ದ ಪ್ರಧಾನ ದಿವ್ಯ ಬಲಿಪೂಜೆಯನ್ನು ನೆರವೇರಿಸಿ, ಬೈಬಲ್ ವಾಚಿಸಿ, ಪರಮ ಪ್ರಸಾದದ ಆರಾಧನೆ ನೆರವೇರಿಸಿ ಸಂದೇಶ ನೀಡಿದರು. ನಾವು ಮಾಡುವ ಆರಾಧನೆಯು ನಮ್ಮ ಮುಂದಿನ ಜೀವನಕ್ಕೆ ಪ್ರೇರಣೆಯಾಗಬೇಕು. ಇಲ್ಲದಿದ್ದರೆ ಅದು ವ್ಯರ್ಥವೆನಿಸುತ್ತದೆ. ಕ್ರೈಸ್ತ ಧರ್ಮದ ವಿಶ್ವಾಸಿ ಜನರಿಗೆ ಆರಂಭ ಮತ್ತು ಅಂತ್ಯಗಳೆರಡೂ ಪವಿತ್ರ ಪರಮಪ್ರಸಾದದ ಸೇವನೆ ಆಗಿರುತ್ತದೆ. ಪರಮ ಪ್ರಸಾದವನ್ನು ಸೇವಿಸುವುದರಿಂದ ಯೇಸುಕ್ರಿಸ್ತರು ನಮ್ಮ ಹೃದಯದಲ್ಲಿ ನೆಲೆಸುತ್ತಾರೆ ಎಂಬುದು ಕ್ರೈಸ್ತ ವಿಶ್ವಾಸಿ ಜನರ ನಂಬಿಕೆಯಾಗಿದೆ ಎಂದ ಅವರು ಮಾನವನ ಸ್ವಾರ್ಥಕ್ಕೆ ಒಗ್ಗಟ್ಟು, ಪ್ರೀತಿಯನ್ನು ಬಲಿ ಕೊಡುವಂತಾಗಬಾರದು. ಕ್ರೈಸ್ತ ಪವಿತ್ರಸಭೆಯಲ್ಲಿ ನಾವೆಲ್ಲರೂ ಪ್ರಭು ಯೇಸುಕ್ರಿಸ್ತರೊಂದಿಗೆ ಸಮುದಾಯ ಒಂದಾದಾಗ ನಮ್ಮಲ್ಲಿ ಬದಲಾವಣೆ ಸಾಧ್ಯವಾಗುತ್ತದೆ ಎಂದರು.

ಯೇಸುಕ್ರಿಸ್ತರು ಪ್ರತಿಯೋರ್ವರನ್ನೂ ಸಮಾನರಂತೆ ಕಂಡವರು. ಹಾಗೆಯೇ ನಾವೂ ಕೂಡ ಪರಸ್ಪರರನ್ನು ಗೌರವ ಹಾಗೂ ಪ್ರೀತಿಯಿಂದ ಕಾಣಬೇಕಾಗಿದೆ. ಸಮಾಜದಲ್ಲಿ ಜೀವಿಸುವ ನಾವು ಪರಸ್ಪರ ಗೌರವ, ಪ್ರೀತಿ, ಏಕತೆ ಮತ್ತು ಸೇವಾ ಮನೋಭಾವನೆಯನ್ನು ಮೈಗೂಡಿಸಿಕೊಂಡಲ್ಲಿ ನಮ್ಮ ಕುಟುಂಬ ಆದರ್ಶ ಕುಟುಂಬವಾಗುವುದರ ಜೊತೆಗೆ ನಾವು ಪ್ರತಿನಿಧಿಸುತ್ತಿರುವ ಧರ್ಮಕ್ಷೇತ್ರವೂ ಆದರ್ಶ ಧರ್ಮಕ್ಷೇತ್ರವೆನಿಸಬಲ್ಲುದು ಎಂದು ಅವರು ಕರೆ ನೀಡಿದರು.

ಬನ್ನೂರು ಸಂತ ಅಂತೋನಿ ಧರ್ಮಕ್ಷೇತ್ರದ ಪ್ರಧಾನ ಧರ್ಮಗುರು ವಂ|ಬಾಲ್ತಜಾರ್ ಪಿಂಟೊ, ಧರ್ಮಗುರುಗಳಾದ ಸೈಂಟ್ ವಿನ್ಸೆಂಟ್ ಪಾಲೋಟಿ ಕಾಲೇಜಿನ ನಿರ್ದೇಶಕ ಹಾಗೂ ಬನ್ನೂರು ಚರ್ಚ್ ನಿವಾಸಿ ವಂ|ಗಿಲ್ಬರ್ಟ್ ಮಸ್ಕರೇನ್ಹಸ್, ವಂ|ರೋಶನ್ ಲೋಬೊ ನಾಗ್ಪುರ, ದಿಯಾಕೊನ್ ಪ್ರದೀಪ್ ಆಂಟನಿ, ಧರ್ಮಭಗಿನಿಯರು, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ತೋಮಸ್ ಫೆರ್ನಾಂಡೀಸ್, ಕಾರ‍್ಯದರ್ಶಿ ಜೋಯ್ಸ್ ಡಿ’ಸೋಜ, 21 ಆಯೋಗಗಳ ಸಂಚಾಲಕ ಜೆರಿ ಪಾಯಿಸ್, ವೇದಿ ಸೇವಕರು, ಗಾಯನ ಮಂಡಳಿ, ಚರ್ಚ್ ಪಾಲನಾ ಸಮಿತಿ ಸದಸ್ಯರು, ವಾಳೆ ಗುರಿಕಾರರು, ವಿವಿಧ ಸಂಘ-ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ನೂರಾರು ಭಕ್ತಾದಿಗಳೊಂದಿಗೆ ಬಲಿಪೂಜೆಯನ್ನು ಅರ್ಪಿಸಲಾಯಿತು. 

ಸಂತ ಅಂತೋನಿ, ಮೇರಿ ಮಾತೆ ಗ್ರೊಟ್ಟೊ ಆಶೀರ್ವಚನ..

ಚರ್ಚ್ ರಜತ ಸಂಭ್ರಮದ ಅಂಗವಾಗಿ ಚರ್ಚ್ ಅನ್ನು ನವೀಕರಣಗೊಳಿಸಲಾಗಿದ್ದು, ಚರ್ಚ್ ಮುಂಭಾಗದ ಇಬ್ಬದಿಯಲ್ಲಿ ನೂತನವಾಗಿ ನಿರ್ಮಿಸಿದ ಸಂತ ಅಂತೋನಿ ಹಾಗೂ ಮೇರಿ ಮಾತೆಯವರ ಗ್ರೊಟ್ಟೊ ಜೊತೆಗೆ ಚರ್ಚ್ ಮುಖಮಂಟಪ(ಪೊರ್ಟಿಕೊ), ಗ್ರಾನೈಟ್ ನೆಲಹಾಸು ಇತ್ಯಾದಿಗಳನ್ನು ಧರ್ಮಗುರುಗಳು ಪವಿತ್ರ ಜಲ ಸಿಂಪಡಿಸಿ ದಿವ್ಯ ಬಲಿಪೂಜೆ ಆರಂಭಕ್ಕೆ ಮುನ್ನ ಆಶೀರ್ವಚಿಸಿ ಚರ್ಚ್ ಪ್ರವೇಶಿಸಲಾಯಿತು.

ಪರಮ ಪ್ರಸಾದದ ಧಾರ್ಮಿಕ ಮೆರವಣಿಗೆ..

ದಿವ್ಯ ಬಲಿಪೂಜೆ ಬಳಿಕ ಅಲಂಕೃತಗೊಂಡಿರುವ ತೆರೆದ ವಾಹನದಲ್ಲಿ ಗಾಯನ ಮಂಡಳಿ ಸದಸ್ಯರಿಂದ ಯೇಸು ಸ್ವಾಮಿಯ ಭಕ್ತಿ ಗೀತೆಗಳನ್ನು ಹಾದಿಯುದ್ದಕ್ಕೂ ಭಕ್ತಿಯಿಂದ ಹಾಡುವ ಮೂಲಕ ಪರಮ ಪ್ರಸಾದದ ಧಾರ್ಮಿಕ ಮೆರವಣಿಗೆಯು ಚರ್ಚ್ ನಿಂದ  ಹೊರಟು ಕೇಪುಳು ತನಕ ಸಾಗಿ ಅಲ್ಲಿಂದ ಹಿಂದುರುಗಿ ಪುನಃ ಚರ್ಚ್ ಪ್ರವೇಶಿಸಲಾಯಿತು. ಈ ಸಂದರ್ಭ ಲಘುವಾದ ಮಳೆಯ ಸಿಂಚನದೊಂದಿಗೆ ವಾತಾವರಣವನ್ನು ತಂಪಾಗಿಸಿತ್ತು.

ಒಗ್ಗಟ್ಟು, ಸೇವಾ ಮನೋಭಾವ, ಕ್ಷಮಾಗುಣ, ಉದಾರತೆ  ಮೈಗೂಡಿಸಿಕೊಳ್ಳಿ..

ತಮ್ಮ ತಪ್ಪುಗಳನ್ನು ಪಾಪ ನಿವೇದನೆ ಮೂಲಕ ಮಾಡುವವರು ದೇವರಿಂದ ಪಾಪ ವಿಮೋಚನೆ ಹೊಂದಬಲ್ಲರು. ಕೇವಲ ಪ್ರಾರ್ಥನೆ ಸಲ್ಲಿಸಿದರೆ ಸಾಲದು. ನಮ್ಮಲ್ಲಿ ಕೋಪ, ದ್ವೇಷ, ಅಸೂಯೆ ಮೈಗೂಡಿಸಿಕೊಂಡಲ್ಲಿ ಅದು ಸಾರ್ಥಕತೆ ಪಡೆಯದು. ಒಗ್ಗಟ್ಟು, ಸೇವಾ ಮನೋಭಾವ, ಕ್ಷಮಾಪಣಾಗುಣ, ಉದಾರತೆಯನ್ನು  ಮೈಗೂಡಿಸಿಕೊಂಡಾಗ ನಿಜವಾಗಿ ದೇವರ ಅನುಯಾಯಿಗಳಾಗುತ್ತೇವೆ.

ವಂ|ಬೊನಿಪಾಸ್ ಪಿಂಟೊ, ನಿರ್ದೇಶಕರು, ರೀಜನಲ್ ಸೆಮಿನರಿ, ಮೂಡುಬೆಳ್ಳೆ

LEAVE A REPLY

Please enter your comment!
Please enter your name here