ಕಲೆಗೆ ಪ್ರೋತ್ಸಾಹ ನೀಡಿದಾಗ ಕಲೆ ಬೆಳೆಯಲು ಸಾಧ್ಯ : ವಿವೇಕ್ ಆಳ್ವ
ಕಡಬ: ಕಲೆಗೆ ಪ್ರೋತ್ಸಾಹ ನೀಡಿದಾಗ ಕಲಾವಿದ ಆ ಕ್ಷೇತ್ರದಲ್ಲಿ ಆಸಕ್ತಿಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ, ಈ ನಿಟ್ಟಿನಲ್ಲಿ ಕಲೆ ಬೆಳೆಯಲು ಸಾಧ್ಯವಾಗುತ್ತದೆ ಎಂದು ಮೂಡಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಅವರು ಹೇಳಿದರು.
ಅವರು ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಜರಗಿದ ಕಡಬದ ವಿದುಷಿ ಮಾನಸ ಪುನೀತ್ ರೈ ನೇತೃತ್ವದ ವಿಶ್ವ ಮೋಹನ ನೃತ್ಯ ಕಲಾ ಶಾಲೆಯ ದಶಮಾನೋತ್ಸವ ಸಂಭ್ರಮ ವಿಶ್ವ ಮೋಹನ ದಶಮಯಾನಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಡಬದ ಜನರು ದೊಡ್ಡ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ. ಕಲೆಯ ಉಳಿವು ಮತ್ತು ಬೆಳವಣಿಗೆಗೆ ಕೆಲಸ ಮಾಡುವವರ ಮುಂದಿರುವ ಸವಾಲುಗಳು ಹಲವಾರು. ಅವುಗಳನ್ನೆಲ್ಲಾ ಸಮರ್ಥವಾಗಿ ನಿಭಾಯಿಸಿಕೊಂಡು ಮುನ್ನಡೆಯುವುದು ಬಲು ಕಠಿಣವಾದ ಕಾರ್ಯ. ಆದುದರಿಂದ ಶಾಸ್ತ್ರೀಯ ನೆಲೆಯ ಕಲೆಗಳಿಗೆ ಜನರು ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಕಲಾವಿದರಿಗೆ ಈ ರೀತಿಯ ಬೆಂಬಲ ಸಿಕ್ಕಿದಾಗ ಮಾತ್ರ ಅವರು ಆ ಕ್ಷೇತ್ರದಲ್ಲಿ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ವಿದುಷಿ ಮಾನಸ ಅವರು ತಮ್ಮ ಶಿಷ್ಯವೃಂದವನ್ನು ಅತ್ಯಂತ ಸುಂದರವಾಗಿ ಸಜ್ಜು ಗೊಳಿಸಿ ಯಶಸ್ವೀ ಕಾರ್ಯಕ್ರಮ ನೀಡಿರುವುದನ್ನು ಕಂಡಾಗ ಅವರು ನಮ್ಮ ಆಳ್ವಾಸ್ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪುತ್ತೂರು ಪದಡ್ಕದ ವಿಶ್ವ ಕಲಾನಿಕೇತನ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್ ಆಂಡ್ ಕಲ್ಚರ್‌ನ ನಿರ್ದೇಶಕಿ ಕರ್ನಾಟಕ ಕಲಾಶ್ರೀ ವಿದುಷಿ ನಯನ ವಿ. ರೈ ಅವರು ನೃತ್ಯ ಕಲೆಯಲ್ಲಿ ಯಶಸ್ಸು ಸಾಧಿಸಬೇಕಾದರೆ ಶ್ರದ್ಧೆ, ನಿರಂತರ ಅಭ್ಯಾಸ ಮತ್ತು ಕಠಿಣ ಪರಿಶ್ರಮ ಅಗತ್ಯ. ಅದೆಲ್ಲವೂ ವಿದುಷಿ ಮಾನಸ ರೈ ಅವರಲ್ಲಿರುವುದರಿಂದಲೇ ಅವರು ಇಂದು ಈ ರೀತಿಯ ಯಶಸ್ಸನ್ನು ಪಡೆಯಲು ಸಾಧ್ಯವಾಗಿದೆ. ಅದೇ ರೀತಿ ಅವರ ವಿದ್ಯಾರ್ಥಿಗಳೂ ಕೂಡ ನೃತ್ಯ ಪ್ರದರ್ಶನದಲ್ಲಿ ತಮ್ಮ ಆಂಗಿಕ ಅಭಿನಯ, ಮುಖಭಾವದಲ್ಲಿನ ಸಾತ್ವಿಕ ಕಳೆ ಮತ್ತು ಪರಿಣತಿಯನ್ನು ಪ್ರದರ್ಶಿಸಿರುವುದು ಖುಷಿ ತಂದಿದೆ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಸುರತ್ಕಲ್‌ನ ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿಯ ನಿರ್ದೇಶಕ ಕರ್ನಾಟಕ ಕಲಾಶ್ರೀ ವಿದ್ವಾನ್ ಚಂದ್ರಶೇಖರ ನಾವಡ, ಪುತ್ತೂರು ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನಿರ್ದೇಶಕ ವಿದ್ವಾನ್ ಬಿ.ದೀಪಕ್‌ಕುಮಾರ್, ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಕರ್ಕೇರ ಅವರು ಶುಭ ಹಾರೈಸಿದರು.
ಅಶ್ವಿನ್ ಬಾಬ್ಲುಬೆಟ್ಟು ಸ್ವಾಗತಿಸಿ, ವಿದುಷಿ ಮಾನಸ ಪುನೀತ್ ರೈ ಅವರು ವಿಶ್ವ ಮೋಹನ ಕಲಾ ಶಾಲೆ ಹತ್ತು ವರ್ಷಗಳಲ್ಲಿ ನಡೆದು ಬಂದ ರೀತಿಯನ್ನು ವಿವರಿಸಿ ಪ್ರಸ್ತಾವನೆಗೈದರು. ಶಿಕ್ಷಕಿ ಶ್ರೀಲತಾ ಪುತ್ರಬೈಲು ಹಾಗೂ ಉಷಾ ಎಂ.ಎಲ್. ನಿರೂಪಿಸಿದರು. ಗಿರೀಶ್ ಎ.ಪಿ. ವಂದಿಸಿದರು. ವಿಶ್ವ ಮೋಹನ ನೃತ್ಯ ಕಲಾಶಾಲೆಯ ವಿದ್ಯಾರ್ಥಿಗಳಿಂದ ಸಭಾ ಕಾರ್ಯಕ್ರಮಕ್ಕೆ ಮೊದಲು ನೃತ್ಯಾರ್ಪಣ ಹಾಗೂ ಸಭಾ ಕಾರ್ಯಕ್ರಮದ ಬಳಿಕ ‘ವಿಶ್ವ ವಿರಾಟ್ ಬಾಲಕೃಷ್ಣ ’ ನೃತ್ಯರೂಪಕ ಪ್ರದರ್ಶನಗೊಂಡಿತು.
ಸನ್ಮಾನ ಕಾರ್ಯಕ್ರಮ:
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಜಾನ್ ವೇಗಸ್ ಕೋಡಿಬೈಲು, ರಾಧಾಕೃಷ್ಣ ಪಿಳ್ಳೆ ನೆಟ್ಟಣ, ವಂ|ಸಖರಿಯಾಸ್ ನಂತಿಯಾಟ್, ಉಸ್ಮಾನ್ ಸಾಹೇಬ್, ಡಾ|ರಾಜೇಶ್ ಬೀರಂತಡ್ಕ, ಕಿಟ್ಟು ಅಜಲ ಕಲ್ಲುಗುಡ್ಡೆ, ದಿನೇಶ್ ರೈ ಕಡಬ, ಡಾ| ಮಂಜುನಾಥ್, ಅರುಣ್‌ಕುಮಾರ್ ಜೆಡೆಮನೆ, ದಯಾನಂದ ಆಚಾರ್ಯ ಹಾಗೂ ಶಶಿ ಗಿರಿವನ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.