ಪುತ್ತೂರು: ವಿವೇಕಾನಂದ ಕಲಾ, ವಿಜ್ಞಾನ ಮತ್ತು ಮಹಾವಿದ್ಯಾಲಯ(ಸ್ವಾಯತ್ತ) ಪುತ್ತೂರು ಮತ್ತು ವಿವೇಕಾನಂದ ಸಂಶೋಧನಾ ಕೇಂದ್ರ ಡಾ. ಕೆ.ಶಿವರಾಮ ಕಾರಂತ ಅಧ್ಯಯನ ಕೇಂದ್ರ ಕನ್ನಡ ವಿಭಾಗ ಮತ್ತು ಐಕ್ಯೂಎಸಿ ಇದರ ಸಹಯೋಗದಲ್ಲಿ ಕಾಲೇಜಿನ ಏ.29ರಂದು ಬೆಳಿಗ್ಗೆ ಗಂಟೆ 10.30ಕ್ಕೆ ಡಾ. ಶಿವರಾಮ ಕಾರಂತರ ಕುರಿತು ವಿಚಾರಗೋಷ್ಠಿ ಮತ್ತು ಪಡೀಲು ಶಂಕರಭಟ್ಟ ಸಂಸ್ಮರಣಾ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಗಂಟೆ 3ಕ್ಕೆ ನಿರಂಜನ ಮತ್ತು ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಕಾಲೇಜಿನ ಸಂಚಾಲಕ ಮುರಳಿಕೃಷ್ಣ ಕೆ ಎನ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಬೆಳಿಗ್ಗೆ ನಡೆಯುವ ವಿಚಾರಗೋಷ್ಠಿಯಲ್ಲಿ ಮುಂಬೈ ವಿಶ್ವವಿದ್ಯಾಲಯ ವಿಶ್ರಾಂತ ಪ್ರಾಧ್ಯಾಪಕ ಡಾ. ತಾಳ್ತಜೆ ವಸಂತಕುಮಾರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ವಹಿಸಲಿದ್ದಾರೆ. ಇದೇ ಸಂದರ್ಭ ಡಾ. ಕೆ.ಶಿವರಾಮ ಕಾರಂತರ ಚೋಮನ ದುಡಿ ಚಲನಚಿತ್ರದಲ್ಲಿ ನಟರಾಗಿ ಭಾಗವಹಿಸಿದ ಕಲಾವಿದರುಗಳ ಜೊತೆ ಸಂವಾದ ಮತ್ತು ಸಾಕ್ಷ್ಯ ಚಿತ್ರ ಪ್ರದರ್ಶನ ನಡೆಯಲಿದೆ ಎಂದವರು ಹೇಳಿದರು.
ಮಧ್ಯಾಹ್ನ ನಿರಂಜನ, ಶಂಕರ ಸಾಹಿತ್ಯ ಪ್ರಶಸ್ತಿ:
ಅಪರಾಹ್ನ 3.೦೦ ರಿಂದ ’ನಿರಂಜನ’ ಹಾಗೂ ’ಶಂಕರ ಸಾಹಿತ್ಯ’ ಪ್ರಶಸ್ತಿ ಪ್ರದಾನ ನಡೆಯಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ವಹಿಸಲಿದ್ದಾರೆ. ಅಭಿನಂದನಾ ಭಾಷಣವನ್ನು ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ನೆರವೇರಿಸಲಿದ್ದು ಮುಖ್ಯ ಅತಿಥಿಗಳಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಪುತ್ತೂರು ಇದರ ಕಾವ್ಯದರ್ಶಿ ಡಾ. ಕೆ. ಎಂ ಕೃಷ್ಣ ಭಟ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಅವರು ಭಾಗವಹಿಸಲಿದ್ದಾರೆ ಎಂದು ಮುರಳಿಕೃಷ್ಣ ಕೆ.ಎನ್ ತಿಳಿಸಿದರು.
ಡಾ. ಬಾಬು ಕೃಷ್ಣಮೂರ್ತಿಯವರಿಗೆ ನಿರಂಜನ ಪ್ರಶಸ್ತಿ:

ಪುತ್ತೂರಿನ ಕನ್ನಡ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದ ಬೋಳಂತಕೋಡಿ ಈಶ್ವರ ಭಟ್ ಮತ್ತು ಇತರರ ಪ್ರೇರಣೆಯಿಂದ ಕಾಲೇಜಿನಲ್ಲಿ 1998ರಲ್ಲಿ ಡಾ. ಕೆ.ಶಿವರಾಮ ಕಾರಂತ ಅಧ್ಯಯನ ಕೇಂದ್ರವು ಪ್ರಾರಂಭ ಆಗಿತ್ತು. 2000ನೇ ಇಸವಿಯಿಂದ ಕನ್ನಡ ಪ್ರತಿಭಾವಂತ ಲೇಖಕ ನಿರಂಜನರ ಹೆಸರಿನಲ್ಲಿ ಕನ್ನಡ ಸೃಜನಶೀಲ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಸಮಗ್ರ ಕೊಡುಗೆಯನ್ನು ಪರಿಗಣಿಸಿ ನಿರಂಜನ ಪ್ರಶಸ್ತಿಯನ್ನು ನೀಡಲು ಆರಂಭಿಸಿತು. ಈ ನಿಟ್ಟಿನಲ್ಲಿ ಬಾಲಮಂಗಳ ಚಿತ್ರಕತಾ ಖ್ಯಾತಿಯ ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅತೀವ ಆಸಕ್ತಿ ಹೊಂದಿದ ಡಾ. ಬಾಬು ಕೃಷ್ಣಮೂರ್ತಿಯವರಿಗೆ ನಿರಂಜನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮುರಳಿಕೃಷ್ಣ ಕೆ.ಎನ್ ಹೇಳಿದರು.
ಡಾ.ಡಿ.ಸದಾಶಿವ ಭಟ್ ಅವರಿಗೆ ಶಂಕರ ಸಾಹಿತ್ಯ ಪ್ರಶಸ್ತಿ :
ಕಾಲೇಜಿನಿಂದ ಪ್ರತಿ ವರ್ಷ ವಿದ್ವತ್ ವಲಯದ ವಿದ್ವಾಂಸರನ್ನು ಗುರುತಿಸಿ ನೀಡಲಾಗುವ ಶಂಕರ ಸಾಹಿತ್ಯ ಪ್ರಶಸ್ತಿಯನ್ನು ಪ್ರಸ್ತುತ ಸಾಲಿನಲ್ಲಿ ಡಾ. ಡಿ. ಸದಾಶಿವ ಭಟ್ ಪಳ್ಳು ಅವರಿಗೆ ನೀಡಿ ಗೌರವಿಸಲಾಗುತ್ತದೆ. ಬೆಟ್ಟಂಪಾಡಿ ಗ್ರಾಮದ ನವೋದಯ ಪ್ರೌಢಶಾಲೆಯಲ್ಲಿ ಕನ್ನಡ ಪಂಡಿತರಾಗಿದ್ದ ಅವರು ಅಪಾರ ವಿದ್ವತ್ ಪಡೆದವರಾಗಿದ್ದಾರೆ. ಅವರಿಗೆ 2024-25ನೇ ಸಾಲಿನ ಶಂಕರ ಸಾಹಿತ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಮುರಳಿಕೃಷ್ಣ ಕೆ.ಎನ್ ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ವಿವೇಕಾನಂದ ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ. ವಿಜಯಸರಸ್ವತಿ, ಡಾ.ಕೆ. ಶಿವರಾಮ ಕಾರಂತ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಪ್ರಮೋದ್ ಎಂ.ಜಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮನಮೋಹನ ಎಂ, ಪತ್ರಿಕೋದ್ಯಮ ವಿಭಾಗದ ಹವ್ಯಶ್ರೀ ಉಪಸ್ಥಿತರಿದ್ದರು.