ಸರ್ವೆ: ಕಾಡಬಾಗಿಲು ರಸ್ತೆ ಕಾಮಗಾರಿಗೆ ಸ್ಥಳೀಯರಿಂದ ತೀವ್ರ ವಿರೋಧ ; ರಸ್ತೆಯಲ್ಲೇ ಮಲಗಿ ಪ್ರತಿಭಟನೆ

0


ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಕಾಮಗಾರಿ ಪ್ರಾರಂಭ

ಪುತ್ತೂರು: ರಸ್ತೆ ಕಾಮಗಾರಿಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಪ್ರತಿಭಟಿಸಿದ ಮತ್ತು ಬಳಿಕದ ಬೆಳವಣಿಗೆಯಲ್ಲಿ ತಹಶೀಲ್ದಾರ್ ಅವರ ಸೂಚನೆಯ ಮೇರೆಗೆ ಪ್ರತಿಭಟನಾ ನಿರತ ಸ್ಥಳೀಯರನ್ನು ಪೊಲೀಸರು ವಶಕ್ಕೆ ಪಡೆದ ಬಳಿಕ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ರಸ್ತೆ ಕಾಮಗಾರಿ ಆರಂಭಗೊಂಡ ಘಟನೆ ಸರ್ವೆ ಗ್ರಾಮದ ಕಾಡಬಾಗಿಲು ಎಂಬಲ್ಲಿ ಎ.29ರಂದು ನಡೆದಿದೆ.


ಕಾಡಬಾಗಿಲು-ಬಾವ ಗ್ರಾ.ಪಂ ರಸ್ತೆ ಕಾಂಕ್ರಿಟೀಕರಣಕ್ಕೆ ಶಾಸಕರ ಅನುದಾನ ರೂ.10 ಲಕ್ಷ ಬಿಡುಗಡೆಗೊಂಡಿದ್ದು ಅದರ ಕಾಮಗಾರಿ ನಡೆಸಲು ಸಿದ್ದತೆ ನಡೆಸಲಾಗಿತ್ತು. ಜೆಸಿಬಿ ಕೂಡಾ ಸ್ಥಳಕ್ಕೆ ಬಂದಿತ್ತು. ಈ ವೇಳೆ ಸ್ಥಳೀಯ ಕೆಲವು ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಲ್ಲದೇ ರಸ್ತೆಯ ಮಧ್ಯೆ ಕುಳಿತು ಪ್ರತಿಭಟಿಸಿದರು. ಇದು ನಮ್ಮ ಖಾಸಗೀ ರಸ್ತೆಯಾಗಿದ್ದು ಇದಕ್ಕೆ ಕಾಂಕ್ರೀಟ್ ಮಾಡಬಾರದು, ಅದಕ್ಕೆ ನಾವು ಅವಕಾಶ ಮಾಡಿಕೊಡುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾ.ಪಂ ಅಧಿಕಾರಿಗಳು ಮತ್ತು ಪೊಲೀಸರು ಎಷ್ಟೇ ಮನವೊಲಿಕೆ ಮಾಡಿದರೂ ಒಪ್ಪದ ಪ್ರತಿಭಟನಾಕಾರರು ರಸ್ತೆಯಲ್ಲೇ ಕುಳಿತು ತಮ್ಮ ಧರಣಿ ಮುಂದುವರಿಸಿದರು. ಮಹಿಳೆಯರು, ಮಕ್ಕಳು ಕೂಡಾ ಇದರಲ್ಲಿದ್ದರು. ಸ್ಥಳಕ್ಕೆ ತಹಶೀಲ್ದಾರ್ ಪುರಂದರ ಹೆಗ್ಡೆ ಆಗಮಿಸಿ ರಸ್ತೆಯಲ್ಲಿ ಕುಳಿತಿದ್ದ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು. ಇದು ಸರಕಾರಿ ರಸ್ತೆಯಾಗಿದ್ದು ಇಲ್ಲಿ ಕಾನೂನು ಪ್ರಕಾರ ಕಾಮಗಾರಿ ನಡೆಸಲು ನೀವು ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು. ಇದಕ್ಕೆ ಒಪ್ಪದ ಸ್ಥಳೀಯರು ಇದು ನಮ್ಮ ರಸ್ತೆ, ಪಂಚಾಯತ್‌ನ ರಸ್ತೆ ಇದರ ಇನ್ನೊಂದು ಭಾಗದಲ್ಲಿದೆ, ನಮ್ಮ ರಸ್ತೆಯನ್ನು ಯಾವುದೇ ಕಾಮಗಾರಿಗೂ ನಾವು ಬಿಟ್ಟು ಕೊಡುವುದಿಲ್ಲ ಎಂದು ಹೇಳಿದರು. ಡಿಸಿ ಆರ್ಡರ್ ಇದೆ ಎಂದು ಇತರ ಅಧಿಕಾರಿಗಳೂ ಮನವೊಲಿಕೆ ಮಾಡಿದರು. ನೀವು ಏನೇ ಹೇಳಿದರೂ ಇಲ್ಲಿ ರಸ್ತೆ ಕಾಮಗಾರಿ ನಡೆಸಬಾರದು, ಇದು ನಮ್ಮ ಜಾಗ ಎಂದು ಪ್ರತಿಭಟನಾ ನಿರತರು ಪಟ್ಟು ಹಿಡಿದರು. ಈ ವೇಳೆ ಮತ್ತೊಮ್ಮೆ ಮನವಿ ಮಾಡಿದ ತಹಶೀಲ್ದಾರ್ ಅವರು ನೀವು ದೊಡ್ಡ ಮನಸ್ಸು ಮಾಡಿ ಕಾಮಗಾರಿ ನಡೆಸಲು ಅವಕಾಶ ಕೊಡಿ ಎಂದು ಹೇಳಿದರು. ನೀವು ಅವಕಾಶ ಕೊಟ್ಟರೆ ಸುಲಭವಾಗಿ ಕಾಮಗಾರಿ ನಡೆಯುತ್ತದೆ, ಇಲ್ಲದಿದ್ದರೆ ಕಾನೂನು ಪ್ರಕಾರ ನಾವು ಮುಂದುವರಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ವೇಳೆಯೂ ಪ್ರತಿಭಟನಾ ನಿರತರು ಸ್ಥಳದಿಂದ ಕದಲದೇ ಇದ್ದಾಗ ತಾಳ್ಮೆ ಕಳೆದುಕೊಂಡ ತಹಶೀಲ್ದಾರ್ ಅವರು ನೀವು ರಸ್ತೆಯಿಂದ ಏಳದಿದ್ದರೆ ನಾವೇ ಬಲವಂತವಾಗಿ ಎದ್ದೇಳಿಸಬೇಕಾಗುತ್ತದೆ ಎಂದು ಹೇಳಿ ರಸ್ತೆಯಲ್ಲಿ ಕುಳಿತವರನ್ನು ವಶಕ್ಕೆ ಪಡೆಯುವಂತೆ ಪೊಲಿಸರಿಗೆ ಸೂಚನೆ ನೀಡಿದರು.

ತಹಶೀಲ್ದಾರ್ ಪುರಂದರ ಹೆಗ್ಡೆ ಅವರ ಸೂಚನೆಗೆ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ರಸ್ತೆಯಲ್ಲಿ ಕುಳಿತಿದ್ದ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲು ಮುಂದಾದರು. ಜೆಸಿಬಿ ಕೂಡಾ ಚಾಲನೆಗೊಂಡು ಕೆಲಸಕ್ಕೆ ಮುಂದಾದಾಗ ತೀವ್ರ ವಿರೋಧ ವ್ಯಕ್ತಪಡಿಸಿದ ಪ್ರತಿಭಟನಾ ನಿರತರು ಜೆಸಿಬಿ ಎದುರಲ್ಲಿ ರಸ್ತೆಯಲ್ಲೇ ಮಲಗಿ ತಮ್ಮ ತೀವ್ರ ವಿರೋಧ ವ್ಯಕ್ತಪಡಿಸಿದರು. ಮಹಿಳೆಯರು ಮಕ್ಕಳನ್ನು ಹಿಡಿದುಕೊಂಡೇ ರಸ್ತೆಯಲ್ಲಿ ಮಲಗಿದರು. ವೃದ್ದರು ಕೂಡಾ ರಸ್ತೆಯಲ್ಲಿ ಮಲಗಿ ತಮ್ಮ ಪ್ರತಿರೋಧ ವ್ಯಕ್ತಪಡಿಸಿದರು. ಪೊಲೀಸರು ಅವರನ್ನು ಅಲ್ಲಿಂದ ಎತ್ತಿಕೊಂಡು ಹೋಗಲು ಮುಂದಾದಾಗ ತೀವ್ರ ವಾಗ್ವಾದ, ನೂಕಾಟ, ತಳ್ಳಾಟವೂ ನಡೆಯಿತು. ಪುಟ್ಟ ಮಕ್ಕಳು ಜೋರಾಗಿ ಅಳುತ್ತಿದ್ದ ದೃಶ್ಯವೂ ಕಂಡು ಬಂತು. ಕೊನೆಗೆ ಕೆಲವರನ್ನು ಬಲವಂತವಾಗಿ ರಸ್ತೆಯಿಂದ ಎತ್ತಿಕೊಂಡು ಹೋದ ಪೊಲೀಸರು ತಮ್ಮ ಪೊಲೀಸ್ ವಾಹನದಲ್ಲಿ ಕುಳ್ಳಿರಿಸಿ ಪುತ್ತೂರು ಗ್ರಾಮಾಂತರ ಠಾಣೆಗೆ ಕರೆದೊಯ್ದರೆ ಮತ್ತೆ ಕೆಲವರು ಸ್ಥಳದಿಂದ ತೆರಳಿದರು. ಇನ್ನೂ ಕೆಲವರು ಅಲ್ಲೇ ಇದ್ದುಕೊಂಡು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದುದು ಕಂಡು ಬಂತು. ನಾವು ಹೇಳಿದ ಹಾಗೆ ಮೊದಲೇ ಕೇಳುತ್ತಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ, ನಾವು ಯಾರಿಗೂ ಅನ್ಯಾಯ ಮಾಡುವುದಿಲ್ಲ, ಕಾನೂನು ಪಾಲಿಸಬೇಕಾಗಿರುವುದು ನಮ್ಮ ಕರ್ತವ್ಯ ಎಂದು ಸ್ಥಳದಲ್ಲಿದ್ದ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ವಿಭಾಗದ ಎಸ್ಸೈ ಸುಶ್ಮಾ ಭಂಡಾರಿ ಹೇಳಿದರು.

ರಸ್ತೆ ಕಾಮಗಾರಿ ಆರಂಭ:
ಸ್ಥಳದಲ್ಲಿ ಪ್ರತಿಭಟನಾ ನಿರತ ಕೆಲವರನ್ನು ಪೊಲಿಸರು ವಶಕ್ಕೆ ಪಡೆದರೆ, ಮತ್ತೆ ಕೆಲವರನ್ನು ಸ್ಥಳದಿಂದ ಚದುರಿಸಿದರು. ಬಳಿಕ ಪೊಲೀಸ್ ಬಿಗಿ ಭದ್ರತೆಯೊಂದಿಗೆ ರಸ್ತೆ ಕಾಮಗಾರಿ ಆರಂಭಗೊಂಡಿತು. ವಾಸ್ತವದಲ್ಲಿ ಇದು ಸರಕಾರಿ ಜಾಗವಾಗಿದ್ದು ರಸ್ತೆ ಕಾಮಗಾರಿಗೆ ಅನುದಾನವೂ ಬಿಡುಗಡೆಗೊಂಡಿದೆ, ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಲವು ಅಧಿಕಾರಿಗಳ ಉಪಸ್ಥಿತಿ:
ಸ್ಥಳದಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ವಿಭಾಗದ ಎಸ್ಸೈ ಸುಶ್ಮಾ ಭಂಡಾರಿ ಮತ್ತು ಸಿಬ್ಬಂದಿಗಳು, ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಮುಂಡೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮನ್ಮಥ ಅಜಿರಂಗಳ, ಕಾರ್ಯದರ್ಶಿ ಸೂರಪ್ಪ, ಗ್ರಾಮ ಆಡಳಿತಾಧಿಕಾರಿ ಉಮೇಶ್ ಕಾವಡಿ, ಮುಂಡೂರು ಗ್ರಾ.ಪಂ ಕಮಲೇಶ್ ಎಸ್.ವಿ, ಸಿಬ್ಬಂದಿಗಳಾದ ಶಶಿಧರ ಕೆ ಮಾವಿನಕಟ್ಟೆ ಹಾಗೂ ಸತೀಶ್ ಹಿಂದಾರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here