ಪುತ್ತೂರು: ಎಸ್.ಆರ್.ಕೆ. ಲ್ಯಾಡರ್‌ನ ಮಾಲಕ ಕೇಶವ ಅಮೈ ಅವರು ತಮ್ಮ ಸಂಸ್ಥೆಯ 51 ಕಾರ್ಮಿಕರನ್ನು ಬೆಂಗಳೂರಿಗೆ ವಿಮಾನದಲ್ಲಿ ಪ್ರವಾಸಕ್ಕೆ ಕರೆದೊಯ್ಯುವ ಮೂಲಕ ಕಾರ್ಮಿಕ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಕಾರ್ಮಿಕರಿಗೆ ಬಾನಂಗಳದಿಂದ ಜಗತ್ತನ್ನು ನೋಡುವ ಅವಕಾಶ ಕಲ್ಪಿಸುವ ಮೂಲಕ ಬೆಂಗಳೂರಿನಲ್ಲಿ ವಿಮಾನದಿಂದಿಳಿದು ಕಾರ್ಮಿಕರನ್ನು ಸನ್ಮಾನಿಸುವ ಮೂಲಕ ಕಾರ್ಮಿಕರ ದಿನಾಚರಣೆಯನ್ನು ಆಚರಿಸಿದ್ದಾರೆ.
ಮೇ.1ರಂದು ಬೆಳಗ್ಗೆ ಪುತ್ತೂರಿನಿಂದ ಮಂಗಳೂರಿಗೆ ಬಸ್‌ನಲ್ಲಿ 51 ಕಾರ್ಮಿಕರನ್ನು ಕರೆದೊಯ್ದ ಕೇಶವ ಅಮೈ ಅವರು ಮಂಗಳೂರಿನಿಂದ ತನ್ನೊಂದಿಗಿನ ಕಾರ್ಮಿಕರ ಜೊತೆಯಲ್ಲಿ ಬೆಂಗಳೂರಿಗೆ ವಿಮಾನಯಾನ ಕೈಗೊಂಡರು. ಎಸ್‌ಆರ್‌ಕೆ ಸಂಸ್ಥೆಗೆ ಕಚ್ಚಾವಸ್ತುಗಳ ಪೂರೈಕೆ ಮಾಡುತ್ತಿರುವ ಬೆಂಗಳೂರಿನ ಪ್ರಮುಖ ಕಂಪೆನಿಗಳಲ್ಲಿ ಸುತ್ತಾಡಿ ಬೆಂಗಳೂರಿನ ಕಡಬ ಕೆರೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು. ಎಸ್‌ಆರ್‌ಕೆ ಲ್ಯಾಡರ‍್ಸ್‌ನ ಮಾಲಕ ಕೇಶವ ಅಮೈ ಮತ್ತು ಬೆಂಗಳೂರಿನ ಮೈಕ್ರೋ ಟೆಕ್‌ನ ಮಾಲಕ ಅಂಬರಸನ್, ಮ್ಯಾಕ್ರೋ ಟೆಕ್ನೋಲಾಜಿಯ ಮಾಲಕ ಶ್ರೀರಾಮ್, ಮಲ್ಟಿ ಟೆಕ್ ಇಂಡಸ್ಟ್ರೀಸ್‌ನ ಮಾಲಕ ಬೂಬಾಲನ್, ಸೆಕ್ಷಮ್ ಇಂಜಿನಿಯರಿಂಗ್ ಪ್ರೈ ಲಿಮಿಟೆಡ್‌ನ ಮಾಲಕ ಸೂರ್ಯಪ್ರಸಾದ್ ಎಸ್ ರಾವ್, ಕ್ವಾಲಿಟಿ ಆಟೋಮೆನ್‌ನ ಮಾಲಕ ಚಂದ್ರಶೇಖರ ಸನ್ನಾರ ಅವರು ಕೆಂಪೆನಿಗಳ ಕಾರ್ಮಿಕರನ್ನು ಸನ್ಮಾನಿಸಿದರು. ಬಳಿಕ ಅವರಿಂದ ಕೇಕ್ ಕತ್ತರಿಸುವ ಮೂಲಕ ಕಾರ್ಮಿಕರನ್ನು ಅಭಿನಂದಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಸಂಗೀತ ರಸಸಂಜೆ, ಕ್ಯಾಂಪ್‌ಪಯರ್ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಹಿರಿಯ ಕಾರ್ಮಿಕ ದಿನೇಶ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಮೈಸೂರು ಪ್ರವಾಸ:
ಬೆಂಗಳೂರಿನಲ್ಲಿ ಕಾರ್ಮಿಕರ ದಿನಾಚರಣೆಯ ಬಳಿಕ ಮೇ.2ರಂದು ಬೆಳಗ್ಗೆ ಮೈಸೂರು ಪ್ರವಾಸ ಕೈಗೊಂಡ ಎಸ್‌ಆರ್‌ಕೆ ಟೀಮ್ ಚಾಮುಂಡಿ ಬೆಟ್ಟ, ವಾಟರ್‌ಪಾಲ್ಸ್, ಮಡಿಕೇರಿ, ಗೋಲ್ಡನ್ ಟೆಂಪಲ್, ಸಹಿತ ಹಲವಾರು ಪ್ರೇಕ್ಷಣೀಯ ಸ್ಥಳಗಳನ್ನು ಸುತ್ತಾಡಿ ರಾತ್ರಿ ಪುತ್ತೂರಿಗೆ ತಲುಪುವ ಮೂಲಕ 2 ದಿನದ ಕಾರ್ಮಿಕರ ಪ್ರವಾಸ ಪೂರ್ಣಗೊಂಡಿದೆ.

ಸದಾ ನೆನಪಿನಲ್ಲಿ ಇಡುವಂತಹ ಅನುಭವ
ನಮ್ಮಂತ ಸಿಬ್ಬಂದಿಗಳಿಗೆ ವಿಮಾನದಲ್ಲಿ ಪ್ರಯಾಣ ಮಾಡುವುದು ಒಂದು ಕನಸಾಗಿತ್ತು. ಆದರೆ ಅದು ನಮ್ಮ ಮಾಲಕರಿಂದ ನನಸಾಗಿದೆ. ಪ್ರವಾಸದ ಸಮಯದಲ್ಲಿ ಯಾರಿಗೂ ಕಿಂಚಿತ್ತೂ ಕೊರತೆ ಬಾರದ ಹಾಗೆ ಪ್ರವಾಸದ ಅದ್ಭುತ ಅನುಭವ ಉಂಟಾಗಿದೆ. ಇದು ಸದಾ ನೆನಪಿನಲ್ಲಿ ಇರುತ್ತದೆ.
ಸಿಬ್ಬಂದಿಗಳು
ಎಸ್.ಆರ್.ಕೆ. ಲ್ಯಾಡರ‍್ಸ್ ಪುತ್ತೂರು