ಪುತ್ತೂರು: ವಿಭಾಗ ಪತ್ರದಲ್ಲಿ ಬಂದಂತಹ ಜಮೀನಿನಲ್ಲಿ ರಸ್ತೆ ಹಕ್ಕನ್ನು ಊರ್ಜಿತ ಇರಿಸಿ ಆ ಬಗ್ಗೆ ಸರಿಯಾದ ವ್ಯವಸ್ಥೆ ಮಾಡದ ವಿನಃ ಜಮೀನನ್ನು ಮಾರಾಟ ಮಾಡಬಾರದು ಎಂಬುದಾಗಿ ಖಾಯಂ ಪ್ರತಿಬಂಧಕ ಆಜ್ಞೆಯನ್ನು ಪುತ್ತೂರಿನ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ನೀಡಿದ್ದಾರೆ.
ಪುತ್ತೂರಿನ ಪಡವನ್ನೂರು ಗ್ರಾಮದ ಮೀನಾವು ಮನೆಯ ಸಾಂತಪ್ಪ ರೈಯವರ ಮಕ್ಕಳಾದ ರವಿರಾಜ್ ರೈ ಮತ್ತು ರಾಜೇಶ್ ರೈ ಎಂಬವರು ಗಿರಿಜಾ ಯಾನೆ ಗೀತಾ ಮತ್ತು ಕಿಟ್ಟಣ್ಣರೈ ಎಂಬವರ ವಿರುದ್ಧ ಸಿವಿಲ್ ವ್ಯಾಜ್ಯವನ್ನು ಹೂಡಿ ವಿಭಾಗ ಪತ್ರದ ಶರ್ತ ಪ್ರಕಾರ ಊರ್ಜಿತ ಇರಿಸಬೇಕಾದ 12 ಅಡಿ ಅಗಲದ ರಸ್ತೆಯನ್ನು ಖಾಯಂ ಆಗಿ ಕಾಯ್ದಿರಿಸಿ ಆ ಬಗ್ಗೆ ಅಗತ್ಯ ವ್ಯವಸ್ಥೆಯನ್ನು ಮಾಡುವ ತನಕ ರಸ್ತೆ ಸಂಚರಿಸುವ ಜಮೀನನ್ನು ಇತರರಿಗೆ ಮಾರಾಟ ಮಾಡದಂತೆ ಖಾಯಂ ತಡೆ ಆಜ್ಞೆ ಕೋರಿದ್ದರು. ದಾವೆಯನ್ನು ನೋಂದಾಯಿಸಿಕೊಂಡ ನ್ಯಾಯಾಲಯ ವಾದಿ ಪ್ರತಿವಾದಿಗಳ ಸಾಕ್ಷಿ ತನಿಖೆ ಪೂರ್ಣಗೊಳಿಸಿ ಇಕ್ಕಡೆಯ ನ್ಯಾಯವಾದಿಗಳ ವಾದ ಪ್ರತಿವಾದಗಳನ್ನು ಆಲಿಸಿ ಅಂತಿಮ ತೀರ್ಮಾನವನ್ನು ಹೊರಡಿಸಿದೆ.
ವಾದಿ ರವಿರಾಜ್ ಮತ್ತು ರಾಜೇಶ್ ರೈ ಯವರು ಸಲ್ಲಿಸಿದ ದಾವೆಯನ್ನು ಎತ್ತಿ ಹಿಡಿದು ಪ್ರತಿವಾದಿಯ ವಿರುದ್ಧ ಈ ಮೇಲಿನಂತೆ ಖಾಯಂ ತಡೆಯಾಜ್ಞೆಯನ್ನು ನೀಡಿ ಆದೇಶಿಸಿರುವುದರ ಜೊತೆಗೆ ದಾವೆ ನ್ಯಾಯಾಲಯದಲ್ಲಿ ಬಾಕಿ ಇರುವ ಸಂದರ್ಭ ಎರಡನೇ ಪ್ರತಿವಾದಿ ಜಮೀನು ಮಾರಾಟ ಮಾಡಿರುವ ಬಗ್ಗೆ ‘ಲಿಸ್ ಪೆಂಡೆನ್ಸ್’ (Lis Pendense) ಕಾನೂನಿನ ತತ್ವದ ಅಡಿಯಲ್ಲಿ ಯುಕ್ತ ಕಾನೂನು ಕ್ರಮ ಕೈಗೊಳ್ಳಲು ವಾದಿಯವರು ಸ್ವತಂತ್ರರು ಎಂಬುದಾಗಿ ಆದೇಶಿಸುತ್ತಾ ಹೆಚ್ಚುವರಿಯಾಗಿ ವಾದಿಗೆ ದಾವೆಯ ಖರ್ಚನ್ನು ಪ್ರತಿವಾದಿಯವರು ಪಾವತಿಸುವಂತೆ ಆದೇಶ ನೀಡಿರುತ್ತದೆ.
ವಾದಿಯವರ ಪರವಾಗಿ ಯುವ ನ್ಯಾಯವಾದಿ ರಾಜನಾರಾಯಣ ಮಳಿ ವಾದಿಸಿರುತ್ತಾರೆ.