ಪುತ್ತೂರು: ಇನ್ಸ್ಟಾಗ್ರಾಮ್ನಲ್ಲಿ ಪಾರ್ಟ್ ಟೈಮ್ ಜಾಬ್ ಬಗ್ಗೆ ಬಂದ ಲಿಂಕ್ ಕ್ಲಿಕ್ ಮಾಡಲು ಹೋಗಿ 1.23 ಲಕ್ಷ ರೂ. ವಂಚಿಸಲಾಗಿದೆ ಎಂದು ಆರೋಪಿಸಿ ಮರ್ದಾಳದ ಯುವಕನೋರ್ವ ನೀಡಿದ ದೂರಿನಂತೆ ಮಂಗಳೂರು ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಸಿಎ ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲಿದ್ದ ಬಂಟ್ರ ಗ್ರಾಮ ಮರ್ದಾಳದ ಯುವಕನಿಗೆ ಮೇ.4 ರಂದು ಇನ್ಸ್ಟಾಗ್ರಾಮ್ನಲ್ಲಿ ಪಾರ್ಟ್ ಟೈಮ್ ಜಾಬ್ ಬಗ್ಗೆ ಲಿಂಕ್ ಬಂದಿದ್ದು ಸದ್ರಿ ಲಿಂಕ್ ಕ್ಲಿಕ್ ಮಾಡಿದಾಗ ವಾಟ್ಸಪ್ ತೆರೆದಿದ್ದು, ಅದರಲ್ಲಿ ಮೀಶೋ ಕಂಪನಿಯಲ್ಲಿ ಪಾರ್ಟ್ ಟೈಮ್ ಜಾಬ್ ನೀಡುವುದಾಗಿ ರಿಜಿಸ್ಟಾರ್ ಆಗಲು ಯುಸರ್ ಐಡಿ ನೀಡಿದ್ದು ಅದರಂತೆ ಯುವಕ ಯುಸರ್ ಐಡಿ ಹಾಗೂ ಪಾಸ್ವರ್ಡ್ ಹಾಕಿದಾಗ ಮೀಶೋ ಎಂಬ ಹೆಸರಿನ ಲೋಗೋ ಇರುವ ಪೇಜ್ ತೆರೆದುಕೊಂಡಿದೆ. ನಂತರ ಟಾಸ್ಕ್ ಕಂಪ್ಲೀಟ್ ಮಾಡುವ ಬಗ್ಗೆ ಲಿಂಕ್ ಕಳುಹಿಸಿದ್ದು, ಸದ್ರಿ ಲಿಂಕನ್ನು ಕ್ಲಿಕ್ ಮಾಡಿದಾಗ ಇನ್ಸ್ಟಾಗ್ರಾಮ್ ಖಾತೆ ತೆರೆದಿರುತ್ತದೆ. ಸದ್ರಿ ಟೆಲಿಗ್ರಾಂ ಖಾತೆಯವರು ಮೀಶೋ ವೆಬ್ ಪೇಜ್ನಲ್ಲಿ ಆರ್ಡರ್ ಕಳುಹಿಸಿದ್ದಕ್ಕೆ ಹಣ ಹಾಕಿ ಕಳುಹಿಸಿ ಟಾಸ್ಕ್ ಕಂಪ್ಲೀಟ್ ಮಾಡಬೇಕು ಎಂಬುದರ ಬಗ್ಗೆ ಫೋಟೋ ಹಾಗೂ ಟಾಸ್ಕ್ ಕಂಪ್ಲೀಟ್ ಮಾಡಿದವರಿಗೆ ಹಣ ಸಿಕ್ಕಿದ ಬಗ್ಗೆ ಮಾಹಿತಿ ನೀಡಿದ್ದಾರೆ. ಅದರಂತೆ ಯುವಕ 100 ರೂ. ಅಪರಿಚಿತ ವ್ಯಕ್ತಿ ತಿಳಿಸಿದ ಯುಪಿಐ ಐಡಿಗೆ ಕಳುಹಿಸಿದ್ದು, ಇನ್ನು ಹೆಚ್ಚಿನ ಮೊತ್ತವನ್ನು ಹಾಕಿ ಟಾಸ್ಕ್ ಪೂರ್ಣ ಕಂಪ್ಲೀಟ್ ಮಾಡಿದ ನಂತರ ನೀವು ಹಾಕಿದ ಹಣ ಹಾಗೂ ಕಮೀಷನ್ ರೂಪದಲ್ಲಿ ಎಲ್ಲಾ ಹಣ ನಿಮ್ಮ ಬ್ಯಾಂಕ್ ಖಾತೆಗೆ ಕಳುಹಿಸುವುದಾಗಿ ತಿಳಿಸಿದ್ದಕ್ಕೆ ಯುವಕ ಅಪರಿಚಿತ ವ್ಯಕ್ತಿ ತಿಳಿಸಿದ ಯುಪಿಐ ಐಡಿಗೆ ಹಂತ ಹಂತವಾಗಿ 1.23 ಲಕ್ಷ ರೂ. ಕಳುಹಿಸಿದ್ದಾರೆ. ನಂತರ ಯುವಕ ವಿದ್ಡ್ರಾವಲ್ ಮಾಡಿದಾಗ ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ನಿಂದ ಪರ್ಸನಲ್ ಇನ್ಕಮ್ ಟ್ಯಾಕ್ಸ್ ಕಟ್ಟಬೇಕೆಂದು ಫೇಕ್ ಚಲನ್ ರಿಸಿಪ್ಟ್ ಕಳುಹಿಸಿದ್ದು ಈ ಬಗ್ಗೆ ಸಂಶಯಗೊಂಡು ವಿಚಾರಿಸಿದಾಗ ಮೋಸ ಹೋಗಿರುವುದು ತಿಳಿದುಬಂದಿದೆ ಎಂದು ಯುವಕ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಸಿಇಎನ್ ಅಪರಾಧ ಪೊಲೀಸು ಠಾಣೆ ಅ.ಕ್ರ:26/2025 ಕಲಂ :66(C), 66 ( D) IT ACT 318(4 ),319(2) BNS Act ಯಂತೆ ಪ್ರಕರಣ ದಾಖಲಾಗಿದೆ.