*ಹಂತ ಹಂತವಾಗಿ ಜೀರ್ಣೋದ್ಧಾರ ಕೆಲಸ -ಅಶೋಕ್ ಕುಮಾರ್ ರೈ
*ಏನಿದ್ದರೂ ದೇವಸ್ಥಾನದ ಅಭಿವೃದ್ಧಿಯೇ ನಮ್ಮ ಗುರಿ-ಈಶ್ವರ ಭಟ್ ಪಂಜಿಗುಡ್ಡೆ
ಪುತ್ತೂರು:ಪ್ರತಿನಿತ್ಯ ಸಾವಿರಾರು ಮಂದಿ ಭಕ್ತರಿಗೆ ಅನ್ನಪ್ರಸಾದ ನೀಡುವ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಹಿಮೆ ಅಪಾರ.ಎಲ್ಲಾ ದಾನಕ್ಕಿಂತಲೂ ಶ್ರೇಷ್ಠವಾದದ್ದು ಅನ್ನದಾನ.ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಿತ್ಯ ಸಾವಿರಾರು ಮಂದಿ ಭಕ್ತರು ಅನ್ನಪ್ರಸಾದ ಸ್ವೀಕರಿಸುತ್ತಾರೆ.ಇದೀಗ ದೇವಳದಲ್ಲಿ ಭಕ್ತಾದಿಗಳಿಗೆ ಅನ್ನಪ್ರಸಾದ ವಿತರಣೆಗೆ ತಕ್ಷಣದ ಅಡುಗೆ ತಯಾರಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಸದಾಗಿ ಸ್ಟೀಮ್ ಬಾಯ್ಲರ್ ಅಳವಡಿಸಲಾಗಿದ್ದು,ಅದರ ಉದ್ಘಾಟನೆ ಮೇ.6ರಂದು ನಡೆಯಿತು.
ಕೆನರಾ ಬ್ಯಾಂಕ್ನಿಂದ ನೀಡಲಾದ ರೂ.10 ಲಕ್ಷ, ಕರ್ಣಾಟಕ ಬ್ಯಾಂಕ್ನಿಂದ ರೂ.5 ಲಕ್ಷ ಹಾಗು ಪುತ್ತೂರಿನಲ್ಲಿ ಈ ಹಿಂದೆ ನ್ಯಾಯಾಧಿಶರಾಗಿದ್ದು ಪ್ರಸ್ತುತ ಮಡಿಕೇರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧಿಶರಾಗಿರುವ ಸಿ.ಕೆ.ಬಸವರಾಜ್ ಅವರ ದೇಣಿಗೆಯ ಆರ್ಥಿಕ ಸಹಕಾರದಲ್ಲಿ ಅಳವಡಿಸಿರುವ ಅನ್ನದಾಸೋಹದ ಸ್ಟೀಮ್ ಬಾಯ್ಲರ್ ಅನ್ನು ಶಾಸಕ ಅಶೋಕ್ ಕುಮಾರ್ ರೈ ಅವರು ತೆಂಗಿನ ಕಾಯಿ ಒಡೆಯುವ ಮೂಲಕ ಉದ್ಘಾಟಿಸಿದರು.ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರೂ ಆಗಿರುವ ಪ್ರಧಾನ ಅರ್ಚಕ ವೇ.ಮೂ.ವಸಂತ ಕೆದಿಲಾಯ ಅವರು ವೈದಿಕ ಕಾರ್ಯಕ್ರಮ ನಿರ್ವಹಿಸಿದರು.ಸ್ಟೀಮ್ ಬಾಯ್ಲರ್ ಅಳವಡಿಕೆಗೆ ಆರ್ಥಿಕ ನೆರವು ನೀಡಿದ್ದಕ್ಕಾಗಿ ಆರಂಭದಲ್ಲಿ, ಕೆನರಾ ಬ್ಯಾಂಕ್ನ ರೀಜನಲ್ ಮ್ಯಾನೇಜರ್ ರಂಜನ್ ಮತ್ತು ಪುತ್ತೂರು ಶಾಖೆಯ ಮ್ಯಾನೇಜರ್ ಎಂ.ಸುರೇಶ್, ಕರ್ಣಾಟಕ ಬ್ಯಾಂಕ್ನ ಪ್ರಧಾನ ವ್ಯವಸ್ಥಾಪಕ ಶ್ರೀಹರಿ, ಅಸಿಸ್ಟೆಂಟ್ ಮ್ಯಾನೇಜರ್ ಅಶೋಕ್ ಮೂಲ್ಯ ಅವರನ್ನು ದೇವಳದ ಸತ್ಯಧರ್ಮ ನಡೆಯಲ್ಲಿ ಪ್ರಸಾದ ನೀಡಿ ದೇವಳದ ಕಡೆಯಿಂದ ಶಲ್ಯ ಹೊದಿಸಿ ಗೌರವಿಸಲಾಯಿತು.
ಹಂತ ಹಂತವಾಗಿ ಜೀರ್ಣೋದ್ಧಾರ ಕೆಲಸಕ್ಕೆ ಚಾಲನೆ:
ಉದ್ಘಾಟನೆಯ ಬಳಿಕ ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ, ದೇವಳಕ್ಕೆ ಪ್ರತಿ ದಿನ ಸುಮಾರು 5 ಸಾವಿರದಷ್ಟು ಭಕ್ತರು ಅನ್ನಪ್ರಸಾದ ಸ್ವೀಕರಿಸಲು ಬರುತ್ತಾರೆ.ಅದಕ್ಕಾಗಿ ಅನ್ನದಾಸೋಹವು ವ್ಯವಸ್ಥಿತ ರೂಪದಲ್ಲಿ ಇರಬೇಕೆಂದು ಸ್ಟೀಮ್ ಬಾಯ್ಲರ್ ಮೂಲಕ ಅನ್ನ ಮಾಡಲು ಚಾಲನೆ ನೀಡಲಾಗಿದೆ.ಇದಕ್ಕೆ ಸುಮಾರು ರೂ.16.75 ಲಕ್ಷ ಖರ್ಚು ತಗುಲಿದೆ.ಕೆನರಾ ಬ್ಯಾಂಕ್, ಕರ್ಣಾಟಕ ಬ್ಯಾಂಕ್ ಮತ್ತು ಈ ಭಾಗದ ಪ್ರಮುಖರ ದೇಣಿಗೆಯಿಂದ ಸ್ಟೀಮ್ ಬಾಯ್ಲರ್ ಅಳವಡಿಸಲಾಗಿದೆ.ಇದೆಲ್ಲ ದೇವಳದ ಜೀರ್ಣೋದ್ಧಾರಕ್ಕೆ ಹಂತ ಹಂತವಾಗಿ ಚಾಲನೆ ನೀಡಿದಂತೆ.ಮುಂದಿನ ಶುಕ್ರವಾರ ಬೆಂಗಳೂರಿನಲ್ಲಿ ಮಾಸ್ಟರ್ ಪ್ಲ್ಯಾನ್ ಅಪ್ರೂವಲ್ ಕುರಿತು ರಾಜ್ಯಮಟ್ಟದಲ್ಲಿ ಸಭೆ ಕರೆದಿದ್ದಾರೆ.ಈ ಸಭೆಯಲ್ಲಿ ಎಲ್ಲಾ ಅಧಿಕಾರಿಗಳು, ನಮ್ಮೆಲ್ಲ ಸಮಿತಿಯವರು, ತಾಂತ್ರಿಕ ವರ್ಗದವರು ಅದರಲ್ಲಿ ಭಾಗವಹಿಸಲಿದ್ದೇವೆ.ಇಲ್ಲಿ ಮಾಸ್ಟರ್ ಪ್ಲ್ಯಾನ್ಗೆ ಅಪ್ರೂವಲ್ ಆದ ಬಳಿಕ ಮುಂದಿನ ದಿನ ದೇವಸ್ಥಾನದ ಪೂರ್ಣ ಜೀರ್ಣೋದ್ಧಾರಕ್ಕೆ ಏನೆಲ್ಲ ತಯಾರಿ ಮಾಡಬೇಕೋ ಅದನ್ನು ಮಾಡಲಿದ್ದೇವೆ.ಇದಕ್ಕಾಗಿ ಈಗಾಗಲೇ 20 ಮಂದಿ ಇರುವ ಜೀರ್ಣೋದ್ದಾರ ಸಮಿತಿ ಮಾಡಿ ಅದನ್ನೂ ಸರಕಾರಕ್ಕೆ ಅಪ್ರೂವಲ್ಗೆ ಕಳುಹಿಸಿದ್ದೇವೆ.ಅದಾದ ಬಳಿಕ ರೂ. 60 ಕೋಟಿಯಲ್ಲಿ ವ್ಯವಸ್ಥಿತ ರೀತಿಯಲಿ ಮಹಾಲಿಂಗೇಶ್ವರ ದೇವಸ್ಥಾನವನ್ನು ರಾಜ್ಯಮಟ್ಟದಲ್ಲಿ ಗುರುತಿಸುವ ದೇವಸ್ಥಾನವನ್ನಾಗಿ ಮಾಡಲಿದ್ದೇವೆ.ಮುಂದಿನ ದಿನ ದೇಶಾದ್ಯಂತದಿಂದ ಭಕ್ತರನ್ನು ಆಕರ್ಷಿಸುವ ಕೆಲಸ ಮಾಡುತ್ತೇವೆ ಎಂದರು.
ಏನಿದ್ದರೂ ದೇವಸ್ಥಾನದ ಅಭಿವೃದ್ಧಿಯೇ ನಮ್ಮ ಗುರಿ:
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆರವರು ಮಾತನಾಡಿ, ನಾವೆಲ್ಲ ದೇವರ ಚಾಕ್ರಿ ಮಾಡುವವರು.ಮಹಾಲಿಂಗೇಶ್ವರ ದೇವರು ಹೇಳಿದಂತೆ ನಾವು ಕೆಲಸ ಮಾಡುವುದು.ಏನಿದ್ದರೂ ದೇವಸ್ಥಾನದ ಅಭಿವೃದ್ಧಿಯೇ ನಮ್ಮ ಗುರಿ.ಈಗಾಗಲೇ ನೂತನವಾಗಿ ಸ್ಟೀಮ್ ಬಾಯ್ಲರ್ ಅಳವಡಿಸಲಾಗಿದೆ.ಇನ್ನು ದೇವಳದ ಅಯ್ಯಪ್ಪ ಗುಡಿಯ ಮುಂದಿರುವ ಶೀಟ್ಗಳನ್ನು ಬದಲಾವಣೆ ಮಾಡಿ ಅಲ್ಲಿ ಅಭಿವೃದ್ದಿ ಕಾರ್ಯ ನಡೆಯಲಿದೆ.ಅದು 10 ದಿನದಲ್ಲಿ ಮುಗಿಯಲಿದೆ.ಅನ್ನಪ್ರಸಾದ ಸ್ವೀಕರಿಸುವ ಭಕ್ತರಿಗೆ ಬಿಸಿಲು ಮತ್ತು ಮಳೆಯಿಂದ ರಕ್ಷಣೆ ನೀಡಲು ಶೀಟ್ ಹಾಕುವ ಕೆಲಸ ಆಗಿದೆ.ಸರತಿ ಸಾಲಿನಲ್ಲಿ ಬರಲು ಅಲ್ಲಿಯೂ ಬೇಕಾದ ವ್ಯವಸ್ಥೆ ಮಾಡಲಾಗಿದೆ.ಮುಂದೆ ದೇವಳದ ಹೊರಾಂಗಣದಲ್ಲಿರುವ ನಾಲ್ಕು ಕಟ್ಟೆಗಳನ್ನು ಅಭಿವೃದ್ಧಿ ಪಡಿಸಲಿದ್ದೇವೆ.ಒಂದೊಂದು ಕಟ್ಟೆಗೆ ಸುಮಾರು ರೂ.15 ಲಕ್ಷ ತಗಲುತ್ತದೆ ಎಂದು ಇಂಜಿನಿಯರ್ ತಿಳಿಸಿದ್ದಾರೆ.ಅದರಂತೆ ಕಟ್ಟೆ ನಿರ್ಮಾಣಕ್ಕೆ ದಾನಿಗಳು ಮುಂದೆ ಬರಲಿದ್ದಾರೆ.ಹೀಗೆ ದೇವಳದ ಅಭಿವೃದ್ದಿಯ ವಿಚಾರ ಬಂದಾಗ ಕೇಸ್ನ ಬಗ್ಗೆ ತಲೆಕೆಡಿಸುವುದಿಲ್ಲ.ಮಹಾಲಿಂಗೇಶ್ವರ ದೇವರು ನಮಗೆ ಪ್ರೇರಣೆ ನೀಡಿದ್ದಾರೆ.ಅವರು ಹೇಳಿದ ಹಾಗೆ ನಾವು ಕೆಲಸ ಮಾಡುತ್ತಿದ್ದೇವೆ ಎಂದರು. ಕೆನರಾ ಬ್ಯಾಂಕ್ನ ಪುತ್ತೂರು ಪ್ರಧಾನ ಶಾಖೆಯ ಮ್ಯಾನೇಜರ್ ಎಂ.ಸುರೇಶ್ ಅವರು ಮಾತನಾಡಿ ದೇವಳದ ಕಡೆಯಿಂದ, ಸ್ಟೀಮ್ ಬಾಯ್ಲರ್ ಅಳವಡಿಕೆಗೆ ನೆರವು ಕೋರಿ ಮನವಿ ಬಂದಿತ್ತು. ಅದರಂತೆ ನಮ್ಮ ಜನರಲ್ ಮ್ಯಾನೇಜರ್ ಸುಧಾಕರ್ ಕೊಟ್ಟಾರಿ ಮತ್ತು ಮಂಗಳೂರು ವೃತ್ತಕಚೇರಿಯ ಜನರಲ್ ಮ್ಯಾನೇಜರ್ ಮಂಜುನಾಥ್ ಬಿ.ಸಿಂಗಾಯಿ ಮತ್ತು ಪುತ್ತೂರು ರೀಜನಲ್ ಜನರಲ್ ಮ್ಯಾನೇಜರ್ ರಂಜನ್ ಅವರ ಸಹಕಾರದಿಂದ ಶೀಘ್ರವಾಗಿ ರೂ.10 ಲಕ್ಷ ಬಿಡುಗಡೆಗೊಳಿಸಿದ್ದಾರೆ.ಹಾಗಾಗಿ ದೇವಸ್ಥಾನಕ್ಕೆ ಸ್ಟೀಮ್ ಬಾಯ್ಲರ್ ಅಳವಡಿಸಲು ಸಾಧ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಈಶ್ವರ ಬೆಡೇಕರ್, ಮಹಾಬಲ ರೈ ವಳತ್ತಡ್ಕ, ನಳಿನಿ ಪಿ ಶೆಟ್ಟಿ, ಕೃಷ್ಣವೇಣಿ, ಸುಭಾಶ್ ರೈ ಬೆಳ್ಳಿಪ್ಪಾಡಿ,ದಿನೇಶ್ ಪಿ.ವಿ,ವಿನಯ ಸುವರ್ಣ, ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯ್ಕ್,ಹಿರಿಯರಾದ ಕಿಟ್ಟಣ್ಣ ಗೌಡ, ಪುಡಾ ಸದಸ್ಯ ನಿಹಾಲ್ ಪಿ.ಶೆಟ್ಟಿ, ಲೋಕೇಶ್ ಪಡ್ಡಾಯೂರು, ಅಶೋಕ್ ಬಲ್ನಾಡು, ಸುದರ್ಶನ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

ಸ್ಟೀಮ್ನಿಂದ ತಕ್ಷಣಕ್ಕೆ ಅನ್ನಪ್ರಸಾದ ವಿತರಣೆ ವ್ಯವಸ್ಥೆ
ಅತ್ಯಾಧುನಿಕ ಮಾದರಿಯ ಸ್ಟೀಮ್ನಲ್ಲಿ ತಕ್ಷಣಕ್ಕೆ ಕೇವಲ 20 ನಿಮಿಷದಲ್ಲಿ ಅನ್ನ ಬೇಯಿಸಲಾಗುತ್ತದೆ.ಹೀಗೆ ಒಟ್ಟು 8 ಸ್ಟೀಮ್ಗಳಿದ್ದು, ಒಂದು ಸ್ಟೀಮ್ ಬಾಯ್ಲರ್ನಲ್ಲಿ ಒಂದೂವರೆ ಕ್ವಿಂಟಾಲ್ ಅಕ್ಕಿಯನ್ನು ಬೇಯಿಸಲಾಗುವುದು.ಉಳಿದವುಗಳನ್ನು ಅಗತ್ಯವಿದ್ದಲ್ಲಿ ಪಾಯಸ, ಇತರ ಆಹಾರ ಪದಾರ್ಥ ತಯಾರಿಗೂ ಉಪಯೋಗಿಸಬಹುದು.ಪುತ್ತೂರು ಜಾತ್ರೆಯ ಸಂದರ್ಭ ದಿನವೊಂದಕ್ಕೆ ಸುಮಾರು 10 ಸಾವಿರಕ್ಕೂ ಮಿಕ್ಕಿ ಭಕ್ತರಿಗೆ ಅನ್ನಪ್ರಸಾದ ವಿತರಣೆ ಆಗಿದೆ.ಭಕ್ತರು ದಿನದಿಂದ ದಿನಕ್ಕೆ ಹೆಚ್ಚಾದಂತೆ ಸ್ಟೀಮ್ ಬಾಯ್ಲರ್ ಬಹಳ ಪ್ರಯೋಜನ ಆಗಲಿದೆ.ಈ ಕ್ಷೇತ್ರ ಶುಚಿ ರುಚಿಯಾದ ಅನ್ನ ಪ್ರಸಾದಕ್ಕೂ ಪ್ರಸಿದ್ಧಿ ಪಡೆದಿದೆ.ಇಲ್ಲಿನ ಅಡುಗೆಯ ಬಗ್ಗೆ ಗಮನಿಸಬೇಕಾದ ವಿಷಯ ಏನೆಂದರೆ, ಇಲ್ಲಿ ಮೊದಲು ಆದ್ಯತೆ ನೀಡುವುದೇ ಸ್ವಚ್ಛತೆಗೆ.ಮುಂದಿನ ದಿನ ಒಂದೊಂದಾಗಿ ಆಧುನಿಕ ತಂತ್ರಜ್ಞಾನ ಬಳಸಲಾಗುತ್ತದೆ.ಹಸಿದವರಿಗೆ ಅನ್ನ ನೀಡುವುದು ಪ್ರತಿಯೊಬ್ಬರೂ ಪಾಲಿಸಬೇಕಾದ ಧರ್ಮ.ಇಂತಹ ಧರ್ಮ ಪಾಲನೆ ಇಲ್ಲಿ ಮಾಡಲಾಗುತ್ತದೆ.ಇಲ್ಲಿ ನಡೆಯುವ ನಿತ್ಯ ದಾಸೋಹಕ್ಕೆ ಎಂದಿಗೂ ಅಡೆತಡೆಗಳು ಎದುರಾಗುವುದಿಲ್ಲ,ಇದಕ್ಕೆ ಕಾರಣ ಮಹಾಲಿಂಗೇಶ್ವರನ ಅನುಗ್ರಹ
-ಈಶ್ವರ ಭಟ್ ಪಂಜಿಗುಡ್ಡೆ,
ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು