ಉಗ್ರರ ದಾಳಿಗೆ ಪ್ರತೀಕಾರ ನೀಡಿದ ಭಾರತೀಯ ಸೇನೆ – ಸೇನಾಪಡೆ, ಪ್ರಧಾನಿಯ ಯಶಸ್ಸಿಗಾಗಿ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿಯಿಂದ ದೇವಳದಲ್ಲಿ ಪ್ರಾರ್ಥನೆ

0

ಭಯೋತ್ಪಾದಕ ಸಂಘಟನೆಗೆ ಬೆಂಬಲ ಕೊಡುವವರನ್ನು ಹೊರದಬ್ಬಬೇಕು- ಬಾಲಚಂದ್ರ ಸೊರಕೆ
ರಾಷ್ಟ್ರದ ಏಕತೆಯನ್ನು ಭಾರತೀಯರು ಎತ್ತಿಹಿಡಿಯಬೇಕು – ಅರುಣ್ ಕುಮಾರ್ ಪುತ್ತಿಲ

ಪುತ್ತೂರು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಗೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಇನ್ನಷ್ಟು ಯಶಸ್ಸು ಸಿಗುವಂತೆ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿ ಪುತ್ತೂರು ಕ್ಷೇತ್ರದ ವತಿಯಿಂದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೇ.7ರಂದು ಮಧ್ಯಾಹ್ನ ಮಹಾಪೂಜೆಯ ಮೊದಲು ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು.


ಮಧ್ಯಾಹ್ನ ಮಹಾಪೂಜೆಯ ಮೊದಲು ಶ್ರೀ ದೇವರ ಸತ್ಯಧರ್ಮ ನಡೆಯಲ್ಲಿ ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರು ಪ್ರಾರ್ಥನೆ ಮಾಡಿದರು. ಈ ಸಂದರ್ಭ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿ ಪುತ್ತೂರು ಕ್ಷೇತ್ರ ಇದರ ಸಂಚಾಲಕ ಹರಿಪ್ರಸಾದ್ ನೆಲ್ಲಿಕಟ್ಟೆ, ಪ್ರಮುಖರಾದ ಬಾಲಚಂದ್ರ ಸೊರಕೆ, ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅದ್ಯಕ್ಷ ಮಹೇಂದ್ರ ವರ್ಮ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ನಿರ್ದೇಶಕ ರಾಜು ಶೆಟ್ಟಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.


ಭಯೋತ್ಪಾದಕ ಸಂಘಟನೆಗೆ ಬೆಂಬಲ ಕೊಡುವವರನ್ನು ಹೊರದಬ್ಬಬೇಕು:
ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿ ಪ್ರಮುಖರಾಗಿರುವ ಬಾಲಚಂದ್ರ ಸೊರಕೆಯವರು ಮಾತನಾಡಿ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಹಿಂದೂಗಳನ್ನೇ ಹತ್ಯೆ ಮಾಡಿರುವ ಅನಾಗರಿಕ ವರ್ತನೆ ಮತ್ತು ಮಹಿಳೆಯ ಸಿಂಧೂರ ಅಳಿಸುವ ಕೃತ್ಯ ಎಸಗಿದ ಪಾಕಿಸ್ತಾನದ ಉಗ್ರರಿಗೆ ತಕ್ಕ ಉತ್ತರವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಮ್ಮ ಸೈನಿಕರು ನೀಡಿದ್ದಾರೆ. ಇದು ಸಂತೋಷದ ವಿಚಾರ. ಈ ಕುರಿತು ಎಲ್ಲಾ ಮಠ, ಮಂದಿರ, ಚರ್ಚ್‌ಗಳು, ಗುರುದ್ವಾರಗಳು, ಜೈನ ಮಂದಿರಗಳು ಕೂಡಾ ಭಾರತೀಯ ಸೇನೆ ನೀಡಿದ ಉತ್ತರವನ್ನು ಪುರಸ್ಕರಿಸಿ ಸೇನೆಗೆ ಇನ್ನಷ್ಟು ಶಕ್ತಿ ನೀಡುವಂತೆ ದೇವರಲ್ಲಿ ಪ್ರಾರ್ಥನೆ ಮಾಡಬೇಕು. ದೇಶದಲ್ಲಿ ಭಯೋತ್ಪಾದಕ ಸಂಘಟನೆಗೆ ಬೆಂಬಲ ಕೊಡುವವರು ಇದ್ದಾರೆ. ಅಂತವರನ್ನು ದೇಶದಿಂದ ಹೊರದಬ್ಬುವ ಕೆಲಸವನ್ನು ನಮ್ಮ ಪ್ರಧಾನಿ ಮತ್ತು ಗೃಹಸಚಿವರು ಮಾಡಬೇಕು ನಾವು ಆಗ್ರಹಿಸುತ್ತೇವೆ ಎಂದರು.


ರಾಷ್ಟ್ರದ ಏಕತೆಯನ್ನು ಭಾರತೀಯರು ಎತ್ತಿಹಿಡಿಯಬೇಕು:
ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಮಾತನಾಡಿ ರಾಷ್ಟ್ರದ ಬಲ ಕುಗ್ಗಿಸಬೇಕೆಂದು ಅನೇಕ ವರ್ಷಗಳಿಂದ ಪಾಕ್ ಪ್ರೇರಿತ ಭಯೋತ್ಪಾದಕ ಸಂಘಟನೆ ದಾಳಿ ಮಾಡುತ್ತಾ ಇದೆ. ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಘಟನೆಗೆ ಪ್ರತಿಕಾರವಾಗಿ ಆಪರೇಷನ್ ಸಿಂಧೂರ ಯಶಸ್ವಿಯಾಗಿ ನಡೆಯುತ್ತಿದೆ. ಪಾಕ್ ಆಕ್ರಮಿತ ಕಾಶ್ಮೀರವನ್ನು ಪೂರ್ಣ ಪ್ರಮಾಣದಲ್ಲಿ ನಮ್ಮ ದೇಶಕ್ಕೆ ತೆಗೆದುಕೊಳ್ಳಬೇಕು. ಈ ರಾಷ್ಟ್ರದ ಗೌರವ ಉಳಿಯಬೇಕು. ಹಿಂದು ರಾಷ್ಟ್ರದ ಏಕತೆ, ಸಾರ್ವಭೌಮತೆಯನ್ನು ಎತ್ತಿ ಹಿಡಿಯುವ ಕೆಲಸ ಭಾರತೀಯರಿಂದ ಆಗಬೇಕು. ನಾವು ಪ್ರಧಾನಿ ಮತ್ತು ರಕ್ಷಣಾ ಇಲಾಖೆಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ಇಡಿ ಸಮಾಜ ಅವರಿಗೆ ಶಕ್ತಿ ತುಂಬುವ ಕೆಲಸ ಆಗಬೇಕೆಂದು ಮಹಾಲಿಂಗೇಶ್ವರ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇವೆ ಎಂದರು.

LEAVE A REPLY

Please enter your comment!
Please enter your name here