ನವೋದಯ ಸ್ವ ಸಹಾಯ ಗುಂಪುಗಳ ರಜತ ಸಂಭ್ರಮ ಸಮಾವೇಶ

0

ಮಂಗಳೂರು: ಸ್ವ ಸಹಾಯ ಸಂಘಗಳ ಮೂಲಕ ಮಹಿಳಾ ಸಶಕ್ತತೆಯೊಂದಿಗೆ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವಂತಾಗಲಿ ಎಂದು ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಅವರು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮೇ.10ರಂದು ಮಂಗಳೂರಿನ ಬಂಗ್ರ ಕೂಳೂರುನಲ್ಲಿರುವ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಆಯೋಜಿಸಲಾದ ’ನವೋದಯ ರಜತ ಸಂಭ್ರಮ’ ಸಮಾರಂಭದಲ್ಲಿ ಸಹಕಾರಿ ಲಾಂಛನ ಬಿಡುಗಡೆ ನೆರವೇರಿಸಿ ಮಾತನಾಡುತ್ತಿದ್ದರು. ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಸ್ಥಾಪನೆಯಾದ ನವೋದಯ ಸ್ವ ಸಹಾಯ ಗುಂಪುಗಳು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ಕಾರಣವಾಗಿದೆ. ದೇಶದ ಯೋಧರ ಕಲ್ಯಾಣ ನಿಧಿಗೆ ರಾಜೇಂದ್ರ ಕುಮಾರ್ ಅವರು 3 ಕೋಟಿ ರೂ.ದೇಣಿಗೆ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.


ನವೋದಯ ಸ್ವ ಸಹಾಯ ಸಂಘಗಳ ಮೂಲಕ ಲಕ್ಷಾಂತರ ಗ್ರಾಮೀಣ ಮಹಿಳೆಯರ ಬದುಕಿನಲ್ಲಿ ಆರ್ಥಿಕ ಬದಲಾವಣೆಯಾಗಿದೆ. ಇದು ಮಹಿಳೆಯರ ಸಾಮಾಜಿಕ ಅಭಿವೃದ್ಧಿಯಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದರು. ನವೋದಯ ಸ್ವ ಸಹಾಯ ಸಂಘಗಳ ಮೂಲಕ ನವಯುಗದ ಆರಂಭವಾಗಿದೆ. ದೇಶದ ಅಭಿವೃದ್ಧಿಯಲ್ಲಿ ಸಹಕಾರಿ ರಂಗ ಮಹತ್ವದ ಕೊಡುಗೆ ನೀಡುತ್ತಿದೆ. ಮಹಿಳೆಯರು ಸರಕಾರದ ದೀನ್ ದಯಾಳ್ ಯೋಜನೆ ಸೇರಿದಂತೆ ಸರಕಾರದ ಯೋಜನೆಯ ಪ್ರಯೋಜನ ಪಡೆದು ಆತ್ಮನಿರ್ಭರ ಭಾರತಕ್ಕೆ ಕೊಡುಗೆ ನೀಡುವಂತಾಗಬೇಕು ಎಂದರು.


ಡಾ.ರಾಜೇಂದ್ರಕುಮಾರ್ ಮಾಡಿದ ಯೋಜನೆ ಯಶಸ್ವಿಯಾಗಿದೆ; ಡಿಕೆಶಿ: ರಜತ ಸಂಭ್ರಮ ಸಮಾವೇಶವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಿ ಮಾತನಾಡಿ, 25 ವರ್ಷಗಳ ಹಿಂದೆ ನಾನು ಉದ್ಘಾಟಿಸಿರುವುದು ಸಂತೋಷ ತಂದಿದೆ. ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡಲು ರಾಜೇಂದ್ರ ಕುಮಾರ್ ಮಾಡಿದ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ. ಲಕ್ಷಾಂತರ ಮಹಿಳೆಯರು ಕುಟುಂಬದ ಶಕ್ತಿಯಾಗಿ ದೇಶದ ಅಭಿವೃದ್ಧಿಗಾಗಿ ಸ್ವ ಸಹಾಯ ಸಂಘಗಳ ಮೂಲಕ ಕೊಡುಗೆ ನೀಡುತ್ತಿದ್ದಾರೆ ಎಂದು ಹೇಳಿದರು. ನಾನು ಸಹಕಾರಿ ರಂಗದ ಮೂಲಕ ರಾಜಕೀಯ ಪ್ರವೇಶ ಮಾಡಿದ್ದೇನೆ. ಕರಾವಳಿ ಶಕ್ತಿಯ ಪವಿತ್ರ ತಾಣ. ಕರಾವಳಿ ಜಿಲ್ಲೆಗಳು ಬ್ಯಾಂಕ್ ಗಳಿಗೆ ಮಹತ್ವದ ಕೊಡುಗೆ ನೀಡಿವೆ. ಅತೀ ಹೆಚ್ಚು ಬ್ಯಾಂಕ್ ರಾಷ್ಟ್ರಕ್ಕೆ ನೀಡಿದ ಪ್ರದೇಶವಾಗಿದೆ. ಇಲ್ಲಿನ ವಿದ್ಯಾವಂತರು ಕರಾವಳಿಯ ಅಭಿವೃದ್ಧಿಗೆ ಇಲ್ಲೇ ನಿಂತು ಕೊಡುಗೆ ನೀಡಬೇಕು. ದೇವರೊಂದೇ ನಾಮ ಹಲವು ಎಂಬಂತೆ ನಾವು ಜೊತೆಯಾಗಿ ಸಾಗಬೇಕು ಎಂದು ಹೇಳಿದ ಡಿ.ಕೆ.ಶಿವಕುಮಾರ್ ಅವರು, ಸರಕಾರದ ಗ್ಯಾರಂಟಿ ಯೋಜನೆಗಳು ಸ್ವ ಸಹಾಯ ಸಂಘದ ಸದಸ್ಯರ ಅಭಿವೃದ್ಧಿಗೆ ಸಹಕಾರಿಯಾಗಿದೆ. ಸಹಕಾರಿ ತತ್ವದ ಜೊತೆ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದು ಹೇಳಿದರು.


ಮಹಿಳೆಯರ ಬೆಳವಣಿಗೆಗೆ ಅವಕಾಶ ನೀಡಿದಂತಾಗಿದೆ; ಡಾ| ಡಿ.ವೀರೇಂದ್ರ ಹೆಗ್ಗಡೆ: ರಜತ ಸಂಭ್ರಮದ ’ಸಂತೃಪ್ತಿ’ ಸ್ಮರಣ ಸಂಚಿಕೆಯನ್ನು ರಾಜ್ಯಸಭಾ ಸದಸ್ಯರೂ ಆದ, ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಬಿಡುಗಡೆಗೊಳಿಸಿ ಮಾತನಾಡಿ, ಸ್ವ ಸಹಾಯ ಸಂಘ ಮಹಿಳೆಯರ ಬೆಳವಣಿಗೆಗೆ ಒಂದು ಅವಕಾಶ ನೀಡಿದಂತಾಗಿದೆ. ಸಂಘಟನೆ ಉದ್ದೇಶ ಅರಿತು ಬೆಳೆಯಬೇಕು. ಈ ಸಂಘಟನೆ ಈ ರೀತಿ ಬೆಳೆಯಲು ಕಾರಣರಾದ ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಅಭಿನಂದಿಸುವುದಾಗಿ ಹೇಳಿದರು.

ಸಮಾಜವನ್ನು ಕಟ್ಟುವ, ಮಾತೆಯರನ್ನು ಬೆಳೆಸುವ ಕೆಲಸ: ಪೇಜಾವರಶ್ರೀ: ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ಆಶೀರ್ವಚನ ನೀಡಿ, ದಕ್ಷಿಣ ಕನ್ನಡ, ಉಡುಪಿ ಸಹಕಾರ ಕ್ಷೇತ್ರದ ವೈಭವ ಹೊಂದಿದ್ದು, ಇದರ ಇತಿಹಾಸವನ್ನು ಮುಂದುವರಿಸಿದೆ ಎಂಬುದಕ್ಕೆ ಈ ಸಮಾರಂಭವೇ ಸಾಕ್ಷಿಯಾಗಿದೆ. ಡಾ| ಎಂ.ಎನ್ ರಾಜೇಂದ್ರ ಕುಮಾರ್ ಅವರು ಸಮಾಜವನ್ನು ಕಟ್ಟುವ, ಮಾತೆಯರನ್ನು ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಇದರೊಂದಿಗೆ ಸಮಾಜಕ್ಕೆ ದೊಡ್ಡ ಮಾರ್ಗದರ್ಶನ ನೀಡಿದ್ದಾರೆ ಎಂದು ನುಡಿದರು.

ಸ್ವಸಹಾಯ ಸಂಘಗಳ ಮೂಲಕ ಸ್ವಾಭಿಮಾನದ ಬದುಕು; ಯು.ಟಿ.ಖಾದರ್:
ರಜತ ಸಂಭ್ರಮ ಆಚರಣೆಯ ಸಹಕಾರಿ ಧ್ವಜಾರೋಹಣವನ್ನು ರಾಜ್ಯ ವಿಧಾನಸಭೆ ಸ್ಪೀಕರ್ ಹಾಗೂ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ. ಖಾದರ್ -ರೀದ್ ನೆರವೇರಿಸಿ ಮಾತನಾಡಿ, ದ್ವೇಷ ಮತ್ತು ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕೆ ದೊಡ್ಡ ಕೊಡುಗೆ ನೀಡಬೇಕಾಗಿದೆ. ಕರಾವಳಿಯ ಮಹಿಳೆಯರು ಬೀಡಿ ಉದ್ಯಮ, ಹಂಚಿನ ಕಾರ್ಖಾನೆಯ ಜೊತೆ ಸ್ವ ಸಹಾಯ ಸಂಘಗಳ ಮೂಲಕ ಸ್ವಾಭಿಮಾನದ ಬದುಕು ಕಟ್ಟಿದವರು. ಸ್ವ ಸಹಾಯ ಸಂಘಗಳ ಮೂಲಕ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜಕ್ಕೆ ಕೊಡುಗೆ ನೀಡುವಂತಾಗಲಿ ಎಂದು ಹೇಳಿದರು.

ಜಾತಿ, ಪಕ್ಷದ ಆಧಾರದಿಂದ ಸಹಕಾರಿ ರಂಗ ಮುಕ್ತವಾಗಬೇಕು; ಕೆ.ಎನ್.ರಾಜಣ್ಣ: ಅತಿಥಿಯಾಗಿದ್ದ ಕರ್ನಾಟಕ ಸರಕಾರದ ಸಹಕಾರ ಸಚಿವರಾದ ಕೆ.ಎನ್. ರಾಜಣ್ಣ ಮಾತನಾಡಿ, ಸಮಾಜದಲ್ಲಿ ಆರ್ಥಿಕ ಚಟುವಟಿಕೆ ನಡೆಯಬೇಕು. ಧ್ವನಿ ಇಲ್ಲದ ಜನರಿಗೆ ದುರ್ಬಲರಿಗೆ ಧ್ವನಿ ನೀಡುವಂತಾಗಬೇಕು. ಗ್ರಾಮೀಣ ಜನರ ಜೀವನ ಮಟ್ಟ ಸುಧಾರಿಸಲು ಸಹಕಾರಿ ಆಂದೋಲನ ಜನರ ಆಂದೋಲನವಾಗಬೇಕು. ಜಾತಿ, ಪಕ್ಷದ ಆಧಾರದಲ್ಲಿ ಸಹಕಾರಿ ರಂಗ ಮುಕ್ತವಾಗಬೇಕು ಎಂದರು.

ದೇಶದ ಶಕ್ತಿಯಾಗಿ ಬೆಳೆಯಬೇಕಾಗಿದೆ: ದಿನೇಶ್ ಗುಂಡೂರಾವ್: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಮಾತನಾಡಿ, ನಾವು ದೇಶದ ಶಕ್ತಿಯಾಗಿ ಬೆಳೆಯಬೇಕಾಗಿದೆ. ಪಕ್ಷಾತೀತ, ಜಾತ್ಯಾತೀತವಾಗಿ ಸಾಮಾಜಿಕ ನ್ಯಾಯ ಉಳಿಸಿ ಸಾಮರಸ್ಯದಿಂದ ವಿಶ್ವದ ಸೂಪರ್ ಪವರ್ ಆಗಬಹುದು. ಇಂತಹ ಸ್ವ ಸಹಾಯ ಸಂಘಗಳ ಸ್ಥಾಪಿಸಿರುವುದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಮಹಿಳೆಯರ ಅಭಿವೃದ್ಧಿಯಾದರೆ ಆ ಊರು ಬೆಳೆಯುತ್ತದೆ -ಲಕ್ಷ್ಮೀ ಹೆಬ್ಬಾಳ್ಕರ್: ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ರಾಜೇಂದ್ರ ಕುಮಾರ್ ಸಹಕಾರಿ ರಂಗದ ಭೀಷ್ಮ, ಮಹಿಳೆಯರ ಅಭಿವೃದ್ಧಿಯಾದರೆ ಆ ಊರು ಬೆಳೆಯುತ್ತದೆ. ಇಲ್ಲಿನ ಸಹಕಾರಿ ಬ್ಯಾಂಕ್ ಹೆಮ್ಮರವಾಗಿ ಬೆಳೆದಿದೆ. ಮಹಿಳಾ ಆರ್ಥಿಕ ಸಬಲೀಕರಣ ಮಾಡಲು ನವೋದಯ ಸ್ವ ಸಹಾಯ ಸಂಘಗಳ ಮೂಲಕ ಶ್ರಮಿಸುತ್ತಿರುವುದು ಮಾದರಿಯಾಗಿದೆ. ಮಹಿಳೆಯರು ಆರ್ಥಿಕ ಶಕ್ತಿಯಾದಾಗ ಕುಟುಂಬಕ್ಕೆ ಸಮಾಜದ ಅಭಿವೃದ್ಧಿಗೆ ಕಾರಣವಾಗುತ್ತದೆ. ಸರಕಾರ ರೂ.28,೦೦೦ ಕೋಟಿ ಹಣವನ್ನು ಗೃಹ ಲಕ್ಷ್ಮಿ ಯೋಜನೆಯ ಮೂಲಕ ನೀಡಿ ಸೀ ಯರ ಸಶಕ್ತೀಕರಣದ ಗುರಿ ಹೊಂದಿದೆ ಎಂದರು.

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಬೆಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ಅಧ್ಯಕ್ಷರು ಹಾಗೂ ನವೋದಯ ಗ್ರಾಮ ವಿಕಾಸ ಟ್ರಸ್ಟ್ ಮಂಗಳೂರು ಇದರ ಸಂಸ್ಥಾಪಕರಾದ ಡಾ| ಎಂ.ಎನ್. ರಾಜೇಂದ್ರ ಕುಮಾರ್‌ರವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ವಿಧಾನಪರಿಷತ್ ಸದಸ್ಯರಾದ ಐವನ್ ಡಿ’ಸೋಜ, ಡಾ.ಮಂಜುನಾಥ ಭಂಡಾರಿ, ಭೋಜೇ ಗೌಡ,ಶಾಸಕರಾದ ಡಾ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಅಶೋಕ್ ಕುಮಾರ್ ರೈ, ಉಮಾನಾಥ ಕೋಟ್ಯಾನ್, ಗುರ್ಮೆ ಸುರೇಶ್ ಶೆಟ್ಟಿ, ಯಶ್‌ಪಾಲ್ ಸುವರ್ಣ, ಕಿರಣ್ ಕೊಡ್ಗಿ, ಇಪ್ಕೊ ವ್ಯವಸ್ಥಾಪಕ ನಿರ್ದೇಶಕ ಉದಯ ಶಂಕರ್ ಅವಸ್ಥಿ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್, ಮಂಗಳೂರು ವಿ.ವಿ.ಯ ಕುಲಪತಿ ಪಿ.ಎಲ್.ಧರ್ಮ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಮಿಥುನ್ ರೈ, ಪದ್ಮರಾಜ್, ಇನಾಯತ್ ಅಲಿ, ಮುನಿಯಾಲು ಉದಯ ಕುಮಾರ್ ಶೆಟ್ಟಿ, ರಕ್ಷಿತ್ ಶಿವರಾಮ್, ಅಪೆಕ್ಸ್ ಬ್ಯಾಂಕ್ ಆಡಳಿತ ನಿರ್ದೇಶಕ ದೇವರಾಜ್, ಮಾಜಿ ಸಚಿವರಾದ ಬಿ.ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಕೋಟ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್, ಮಾಜಿ ಶಾಸಕ ಸಂಜೀವ ಮಠಂದೂರು ಮೊದಲಾದವರು ಉಪಸ್ಥಿತರಿದ್ದರು.

ನವೋದಯ ರಜತ ಸಂಭ್ರಮ ಸ್ವಾಗತ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಕಾರ್ಯಾಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು ವಂದಿಸಿದರು. ನಿತೀಶ್ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.
ನವೋದಯ ರಜತ ಸಂಭ್ರಮ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಎಸ್. ಕೋಟ್ಯಾನ್, ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ಎಸ್‌ಸಿಡಿಸಿಸಿ ಬ್ಯಾಂಕ್‌ನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಉದ್ಯಮಿ ಜಯವರ್ಮ ಬಲ್ಲಾಳ್, ಅದಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಕಿಶೋರ್ ಆಳ್ವ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್, ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಾಹಣಾಽಕಾರಿ ಗೋಪಾಲಕೃಷ್ಣ ಭಟ್ ಕೆ, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ನವೋದಯ ಚ್ಯಾರಿಟೇಬಲ್ ಟ್ರಸ್ಟ್ ನ ಮುಖ್ಯಕಾರ್ಯನಿರ್ವಹಣಾಽಕಾರಿ ಪೂರ್ಣಿಮಾ ಶೆಟ್ಟಿ, ನವೋದಯ ಟ್ರಸ್ಟಿಗಳಾದ ಮೇಘರಾಜ್ ಆರ್.ಜೈನ್, ಹೇಮಲತಾ ಹೆಗ್ಡೆ, ಸುನಿಲ್ ಕುಮಾರ್ ಬಜಗೋಳಿ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನೀಲಿ ಬಣ್ಣದ ಸೀರೆಯ ಮೆರುಗು
8 ಜಿಲ್ಲೆಗಳ ಒಂದೂವರೆ ಲಕ್ಷಕ್ಕೂ ಅಧಿಕ ಮಹಿಳೆಯರು ನೀಲಿ ಬಣ್ಣದ ಸಮವಸ್ತ್ರದಲ್ಲಿ ಭಾಗವಹಿಸಿದ್ದರು. ಸಮಾವೇಶದಲ್ಲಿ ನೀಲಿ ಬಣ್ಣದ ಸೀರೆ ಧರಿಸಿದ ನವೋದಯ ಸ್ವ ಸಹಾಯ ಗುಂಪುಗಳ ಸದಸ್ಯೆರು ಸಮಾವೇಶದ ಮೆರುಗು ಹೆಚ್ಚಿಸಿದರು. ದಕ್ಷಿಣ ಕನ್ನಡ ಪೊಲೀಸ್ ಬ್ಯಾಂಡ್‌ನವರು ರಾಜ್ಯಪಾಲರಿಗೆ ಗೌರವ ರಕ್ಷೆ ನೀಡಿದರು. ನವೋದಯ ಸ್ವ ಸಹಾಯ ಸಂಘದ ಸದಸ್ಯೆ ಪ್ರಭಾವತಿ ಮಜೂರು ತಮ್ಮ ಅನುಭವ ವ್ಯಕ್ತಪಡಿಸುತ್ತಾ, ನಾವು ನವೋದಯ ಸ್ವ ಸಹಾಯ ಸಂಘದ ಮೂಲಕ ಬೆಳೆದು ಬ್ಯಾಂಕ್ ವ್ಯವಹಾರ ತಿಳಿದು ಬೆಳೆಯಲು ಕಾರಣವಾಯಿತು ಎಂದರು.



ಸೈನಿಕರ ಕಲ್ಯಾಣ ನಿಧಿಗೆ ರೂ.3ಕೋಟಿ
ಭಾರತ ಪಾಕಿಸ್ಥಾನ ನಡುವೆ ಯುದ್ಧದ ಕಾರ್ಮೋಡ ಹೆಚ್ಚಾಗುತ್ತಿದ್ದು, ದೇಶದ ಸೈನಿಕರು ಹಗಲಿರುಳು ಸೇವೆ ಸಲ್ಲಿಸುತ್ತಿದ್ದಾರೆ. ವೀರ ಯೋಧರಿಗೆ ಗೌರವ ಸಲ್ಲಿಸಿ ಯೋಧರ ಕಲ್ಯಾಣ ನಿಧಿಗೆ 3 ಕೋಟಿ ರೂ.ದೇಣಿಗೆ ನೀಡುತ್ತೇವೆ. 25 ವರ್ಷದ ಹಿಂದೆ ಸ್ಥಾಪನೆಯಾದ ಸ್ವ ಸಹಾಯ ಗುಂಪುಗಳು ಈಗ ರಾಜ್ಯದ 9 ಜಿಲ್ಲೆಗಳಲ್ಲಿ ಬೆಳೆದಿದೆ. ಮುಂದೆ ಇತರ ಜಿಲ್ಲೆಗೂ ವಿಸ್ತರಿಸುವ ಗುರಿ ಇದೆ. ಸಮಾನತೆಗಾಗಿ ಎಲ್ಲರಿಗೂ ಸಮವಸ ವಿತರಿಸಲಾಗಿದೆ.

-ಡಾ| ಎಂ.ಎನ್.ರಾಜೇಂದ್ರಕುಮಾರ್
ಸಂಸ್ಥಾಪಕರು, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್

LEAVE A REPLY

Please enter your comment!
Please enter your name here