ಜನಪರ ಕಾರ್ಯಕ್ರಮಗಳಲ್ಲಿ ವರ್ತಕರ ಸಂಘ ಮುಂಚೂಣಿಯಲ್ಲಿದೆ: ಪ್ರಕಾಶ್ಚಂದ್ರ ರೈ ಕೈಕಾರ
ಪುತ್ತೂರು: ಕುಂಬ್ರದ ವರ್ತಕರ ಸಂಘಕ್ಕೆ ತನ್ನದೇ ವಿಶೇಷತೆ ಇದೆ. ಇದು ಎಲ್ಲಾ ಸಂಘಗಳಂತೆ ಅಲ್ಲ ಸದಾ ಜನಪರ ಕಾರ್ಯಕ್ರಮಗಳು ಮೂಲಕ ಎಲ್ಲಡೆ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಸಂಘವು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿರುವುದು ಖುಷಿ ತಂದಿದೆ ಎಂದು ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಹೇಳಿದರು.
ಅವರು ಮೇ.11 ರಂದು ಕುಂಬ್ರ ನವೋದಯ ರೈತ ಸಭಾಭವನದಲ್ಲಿ ವರ್ತಕರ ಸಂಘ ಕುಂಬ್ರ ಇದರ ಆಶ್ರಯದಲ್ಲಿ ಕೆ.ವಿ.ಜಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸುಳ್ಯ, ಕೆ.ವಿ.ಜಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸುಳ್ಯ ಹಾಗೂ ಜಿಲ್ಲಾ ಅಂಧತ್ವ ನಿಯಂತ್ರಣ ಸೊಸೈಟಿ ಮಂಗಳೂರು ಇವರುಗಳ ಸಹಯೋಗದೊಂದಿಗೆ ನಡೆದ ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣಾ ಶಿಬಿರ ಹಾಗೂ ಕಣ್ಣಿನ ಉಚಿತ ತಪಾಸಣೆ, ಕಣ್ಣಿನ ಪೊರೆ ಶಸ್ತ್ರಚಿಕಿತ್ಸಾ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ವ್ಯಾಪಾರದೊಂದಿಗೆ ಜನರ ಆರೋಗ್ಯದ ಬಗ್ಗೆಯೂ ಕಾಳಜಿಯನ್ನು ಹೊಂದಿರುವ ಇಲ್ಲಿನ ವರ್ತಕರ ಸಂಘದ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಆರೋಗ್ಯ ಶಿಬಿರ ನಡೆದಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಇಂತಹ ಶಿಬಿರಗಳು ಅತ್ಯಂತ ಅಗತ್ಯವಾಗಿದೆ ಎಂದ ಪ್ರಕಾಶ್ಚಂದ್ರ ರೈ ಕೈಕಾರರವರು ಸಂಘದಿಂದ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳು ಮೂಡಿಬರಲಿ ಎಂದು ಹೇಳಿ ಶುಭ ಹಾರೈಸಿದರು.
ಸಭಾಧ್ಯಕ್ಷತೆ ವಹಿಸಿದ್ದ ವರ್ತಕರ ಸಂಘದ ಅಧ್ಯಕ್ಷ ಪಿ.ಕೆ ಮಹಮ್ಮದ್ ಕೂಡುರಸ್ತೆಯವರು ಮಾತನಾಡಿ, ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಬೇರೊಂದಿಲ್ಲ ಆದ್ದರಿಂದ ಎಲ್ಲರ ಸಹಕಾರದಿಂದ ಇದು ಸಾಧ್ಯವಾಗಿದೆ. ಇಂತಹ ಆರೋಗ್ಯ ಶಿಬಿರವನ್ನು ಆಯೋಜಿಸುವಲ್ಲಿ ಪ್ರತಿಯೊಬ್ಬರು ಸಹಕಾರ ನೀಡಿದ್ದಾರೆ.ಮುಂದೆಯೂ ತಮ್ಮೆಲ್ಲರ ಸಹಕಾರ ಸಂಘದ ಮೇಲಿರಲಿ ಎಂದು ಹೇಳಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಮುಖ್ಯ ಅತಿಥಿಗಳಾಗಿದ್ದ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಪುರಂದರ ಶೆಟ್ಟಿ ಮುಡಾಲ, ಕುಂಬ್ರ ಮಾತೃಶ್ರೀ ಆರ್ಥ್‌ಮೂವರ‍್ಸ್ ಮಾಲಕ, ಉದ್ಯಮಿ, ಕೊಡುಗೈ ದಾನಿ ಮೋಹನದಾಸ ರೈ ಕುಂಬ್ರ, ಸರಕಾರಿ ಆಸ್ಪತ್ರೆಯ ಆಪ್ತ ಸಮಾಲೋಚಕ ತಾರಾನಾಥ ರೈ, ಕೆವಿಜಿಯ ಪ್ರೋಫೆಸರ್‌ಗಳಾದ ಡಾ.ಅನಿರುದ್ಧ್, ಡಾ.ವೇಣುಗೋಪಾಲ್, ವರ್ತಕರ ಸಂಘದ ಗೌರವ ಸಲಹೆಗಾರರುಗಳಾದ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಕುಂಬ್ರ ದುರ್ಗಾಪ್ರಸಾದ್ ರೈರವರುಗಳು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.

ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮಸುಂದರ ರೈ ಕೊಪ್ಪಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪದ್ಮನಾಭ ಆಚಾರ್ಯ ಪ್ರಾರ್ಥಿಸಿದರು. ಸುಂದರ ರೈ ಮಂದಾರ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಭವ್ಯ ರೈ ವಂದಿಸಿದರು. ಶಿಕ್ಷಕ ವಿಶ್ವನಾಥ ಗೌಡ ಬೊಳ್ಳಾಡಿ ಕಾರ್ಯಕ್ರಮ ನಿರೂಪಿಸಿದರು. ವರ್ತಕರ ಸಂಘದ ಸಂಶುದ್ದೀನ್ ಎ.ಆರ್, ನಾರಾಯಣ ಪೂಜಾರಿ ಕುರಿಕ್ಕಾರ, ಎಸ್.ಮಾಧವ ರೈ ಕುಂಬ್ರ, ರಾಜೇಶ್ ರೈ ಪರ್ಪುಂಜ, ಶರತ್ ರೈ ದೇರ್ಲ,ದಿವಾಕರ ಶೆಟ್ಟಿ, ಉಪಾಧ್ಯಕ್ಷ ಸದಾಶಿವ ಕುಂಬ್ರ, ಉದಯ ಆಚಾರ್ಯ ಕೃಷ್ಣನಗರ ಸೇರಿದಂತೆ ಸದಸ್ಯರುಗಳು ವಿವಿಧ ರೀತಿಯಲ್ಲಿ ಸಹಕರಿಸಿದ್ದರು.
ರ‍್ಯಾಂಕ್ ವಿಜೇತ ವಿದ್ಯಾರ್ಥಿನಿಗೆ ಸನ್ಮಾನ
ರಾಜೀವ್ ಗಾಂಧಿ ಅರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕರ್ನಾಟಕ ಬೆಂಗಳೂರು ಇವರು ನಡೆಸಿದ ಅಂತಿಮ ವರ್ಷದ ಎಂ.ಡಿ ಆಯುರ್ವೇದ ಪರೀಕ್ಷೆಯಲ್ಲಿ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಅಂತಿಮ ಸ್ನಾತಕೋತ್ತರ ವಿಭಾಗದಲ್ಲಿ ೩ ನೇ ರ‍್ಯಾಂಕ್ ಪಡೆದ ಧನ್ಯಶ್ರೀ ಬೈಲಾಡಿಯವರಿಗೆ ಈ ಸಂದರ್ಭದಲ್ಲಿ ವರ್ತಕರ ಸಂಘದಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.
ಏನೆಲ್ಲಾ ತಪಾಸಣೆ ನಡೆಸಲಾಯಿತು ಗೊತ್ತಾ…?
ಶಿಬಿರದಲ್ಲಿ ನುರಿತ ವೈದ್ಯರುಗಳಿಂದ ಶೀತ, ಜ್ವರ, ಕೆಮ್ಮು, ಬಿಪಿ.ಶುಗರ್, ರಕ್ತಹೀನತೆ, ಉಸಿರಾಟದ ತೊಂದರೆ, ಹರ್ನಿಯಾ, ಆಪೆಂಡಿಕ್ಸ್, ಪಿತ್ತಕೋಶದ ತೊಂದರೆ, ಕಿಡ್ನಿ ಸ್ಟೋನ್, ಅಪೌಷ್ಟಿಕತೆ, ಥೈರಾಯ್ಡ್, ಕಿವಿ ಸೋರುವಿಕೆ, ಕಣ್ಣಿನ ಪೊರೆ, ದೃಷ್ಟಿ ಸಂಬಂಧಿತ ಖಾಯಿಲೆಗಳು, ಕಜ್ಜಿ, ತುರಿಕೆ, ಅಲರ್ಜಿ, ಲೈಂಗಿಕ ರೋಗಳು, ಗರ್ಭಕೋಶಕ್ಕೆ ಸಂಬಂಧಪಟ್ಟ ಖಾಯಿಲೆ, ಗರ್ಭಿಣಿ ಚಿಕಿತ್ಸೆ, ಮುಟ್ಟಿಗೆ ಸಂಬಂಧಪಟ್ಟ ತೊಂದರೆಗಳು, ಬಂಜೆತನ, ಎಲುಬು, ಕೀಲು ಸಂಬಂಧಿಸಿದ ಖಾಯಿಲೆಗಳು, ಬಾಯಿಯ ತಪಾಸಣೆ ಹಾಗೇ ಆಯುರ್ವೇದದಲ್ಲಿ ಪಂಚಕರ್ಮ, ಕಾಯ ಚಿಕಿತ್ಸಾ, ಪ್ರಸೂತಿತಂತ್ರ, ಶಲ್ಯತಂತ್ರ, ಕೌಮಾರಭೃತ್ಯ, ಶಾಲಾಕ್ಯತಂತ್ರ ಇತ್ಯಾದಿ ತಪಾಸಣೆಗಳು ಸೇರಿದಂತೆ ಕಣ್ಣಿನ ತಪಾಸಣೆ ಅಗತ್ಯವಿದ್ದಲ್ಲಿ ಕನ್ನಡಕವನ್ನು ವಿತರಿಸಲಾಯಿತು.
1850 ಕ್ಕೂ ಅಧಿಕ ಮಂದಿಯ ತಪಾಸಣೆ
ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ನಡೆದ ಆರೋಗ್ಯ ತಪಾಸಣಾ ಶಿಬಿರದಲ್ಲಿ 150 ಕ್ಕೂ ಅಧಿಕ ಮಂದಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಅಗತ್ಯವಿದ್ದವರಿಗೆ ಸ್ಥಳದಲ್ಲೇ ಉಚಿತವಾಗಿ ಔಷಧಿಯನ್ನು ವಿತರಿಸಲಾಯಿತು. ಇದಲ್ಲದೆ ಕಣ್ಣಿನ ತಪಾಸಣೆಯೊಂದಿಗೆ ಕನ್ನಡಕ ವಿತರಣೆ ಮಾಡಲಾಯಿತು.