ನೆಲ್ಯಾಡಿಯ ಕ್ವಿಂಟಾಲ್ ಶೆಟ್ರು ಇನ್ನಿಲ್ಲ

0

ನೆಲ್ಯಾಡಿ: ನೆಲ್ಯಾಡಿ ಪರಿಸರದಲ್ಲಿ ಕ್ವಿಂಟಾಲ್ ಶೆಟ್ರು ಎಂದೇ ಚಿರಪರಿಚಿತರಾಗಿದ್ದ ಪುಣಚ ಗ್ರಾಮದ ಕೋಡಂದೂರು ನಿವಾಸಿ ವೆಂಕಪ್ಪ ಶೆಟ್ಟಿ(80ವ.)ಯವರು ಮೇ.6ರಂದು ವಯೋಸಹಜ ಅನಾರೋಗ್ಯದಿಂದ ಕೋಡಂದೂರು ನಿವಾಸದಲ್ಲಿ ನಿಧನರಾಗಿದ್ದಾರೆ.


ಮೂಲತ: ನೆಲ್ಯಾಡಿ ಗ್ರಾಮದ ಪಟ್ಟೆ ನಿವಾಸಿಯಾಗಿದ್ದ ವೆಂಕಪ್ಪ ಶೆಟ್ಟಿ ಅವರು ವಿವಾಹವಾದ ಬಳಿಕ ಪತ್ನಿಯ ಮನೆ ಪುಣಚದ ಕೋಡಂದೂರಿನಲ್ಲಿ ವಾಸ್ತವ್ಯವಿದ್ದರು. ವೆಂಕಪ್ಪ ಶೆಟ್ಟಿ ಅವರು ಸುಮಾರು 50 ವರ್ಷದ ಹಿಂದೆ ನೆಲ್ಯಾಡಿ ಭಾಗದಲ್ಲಿ ಎಲ್ಲಿಗೆ ಬೇಕಾದರೂ 1 ಕ್ವಿಂಟಾಲ್ ಭಾರದ ವಸ್ತುಗಳನ್ನು ತಲೆಯಲ್ಲಿ ಹೊತ್ತುಕೊಂಡು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಾಟ ಮಾಡುತ್ತಿದ್ದರು. ಗೂಡ್ಸ್ ವಾಹನಗಳಿಲ್ಲದ ಅಂದಿನ ಕಾಲದಲ್ಲಿ ಅಂಗಡಿಯಿಂದ ಮನೆಗೆ ಹಾಗೂ ಮನೆಗಳಿಂದ ಅಂಗಡಿಗೆ ಸಾಮಾನು ಸರಂಜಾಮುಗಳ ಸಾಗಾಟಕ್ಕೆ ವೆಂಕಪ್ಪ ಶೆಟ್ಟಿಯವರೇ ಎಲ್ಲರಿಗೂ ಬೇಕಾಗಿದ್ದರು. 1 ಕ್ವಿಂಟಾಲ್‌ಗೂ ಹೆಚ್ಚಿನ ಭಾರದ ವಸ್ತುಗಳನ್ನು ತಲೆಯಲ್ಲಿ ಹೊತ್ತುಕೊಂಡೇ ಎಷ್ಟು ದೂರಬೇಕಾದರೂ ಸಾಗಾಟ ಮಾಡುತ್ತಿದ್ದರು. ಮೂತ್ರ ವಿಸರ್ಜನೆ, ನೀರು ಕುಡಿಯಬೇಕಾದರೂ ಮೂಟೆ ಅವರ ತಲೆಯಲ್ಲಿಯೇ ಇರುತಿತ್ತು ಎಂದು ಇಲ್ಲಿನ ಜನ ನೆನಪಿಸುತ್ತಿದ್ದಾರೆ. ಇದರಿಂದಾಗಿಯೇ ವೆಂಕಪ್ಪ ಶೆಟ್ಟಿಯವರನ್ನು ನೆಲ್ಯಾಡಿ ಭಾಗದ ಜನ ಪ್ರೀತಿಯಿಂದ ’ಕ್ವಿಂಟಾಲ್ ಶೆಟ್ರು’ ಎಂದೇ ಕರೆಯುತ್ತಿದ್ದರು.

ಪರಿಸರದ ಬಗ್ಗೆಯೂ ಕಾಳಜಿ:
ಮದುವೆಯಾದ ಬಳಿಕ ವೆಂಕಪ್ಪ ಶೆಟ್ಟಿ ಅವರ ವಾಸ್ತವ್ಯ ಪುಣಚಕ್ಕೆ ಶಿಫ್ಟ್ ಆದರೂ ಇತ್ತೀಚಿನ ತನಕವೂ ನೆಲ್ಯಾಡಿಗೆ ಬಂದು ಹೋಗುತ್ತಿದ್ದರು. ನೆಲ್ಯಾಡಿ ಪೇಟೆಯಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಅವರು ಪೇಟೆಯಲ್ಲಿನ ಸ್ವಚ್ಛತೆ ಬಗ್ಗೆಯೂ ಕಾಳಜಿ ವಹಿಸಿದ್ದರು. ಕಸ, ಕಡ್ಡಿ ಎಲ್ಲಿ ಕಂಡು ಬಂದರೂ ಅವೆಲ್ಲವುಗಳನ್ನೂ ಒಂದೇ ಕಡೆ ತಂದು ರಾಶಿ ಹಾಕುತ್ತಿದ್ದರು. ಅವರ ಈ ಸೇವಾ ಕಾರ್ಯಕ್ಕೂ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಮೃತರು ಪುತ್ರಿಯರಾದ ಭವಾನಿ, ಪುಷ್ಪಾ, ಇಬ್ಬರು ಸಹೋದರರು, ಮೂವರು ಸಹೋದರಿಯರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here