ಸೌತಡ್ಕ : 3ನೇ ಬಾರಿಗೆ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಶಬರಾಯ

0

ಪುತ್ತೂರು: ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಹೊಸ ವ್ಯವಸ್ಥಾಪನಾ ಸಮಿತಿಯನ್ನು ರಚನೆ ಮಾಡಿ ರಾಜ್ಯ ಸರ್ಕಾರದ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿದ್ದು, ನಿರೀಕ್ಷೆಯಂತೆ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಅವರು ಮತ್ತೊಮ್ಮೆ ಸಮಿತಿ ಅಧ್ಯಕ್ಷರಾಗಿದ್ದಾರೆ.

ಸೌತಡ್ಕ ದೇವಸ್ಥಾನದಲ್ಲಿ ದೇಗುಲದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆವಿ ಶ್ರೀನಿವಾಸ್ ಅವರ ಸಮ್ಮುಖದಲ್ಲಿ ಗುರುವಾರ ಅಧಿಕಾರ ಸ್ವೀಕಾರ ಮಾಡಿದರು. ಸಮಿತಿಯ ಇತರೆ ಸದಸ್ಯರು ಈ ವೇಳೆ ಉಪಸ್ಥಿತರಿದ್ದರು.

ವ್ಯವಸ್ಥಾಪನಾ ಸಮಿತಿಗೆ ನೇಮಕಗೊಂಡ ಸದಸ್ಯರಲ್ಲಿ ಪರಿಶಿಷ್ಠ ಜಾತಿ ಸ್ಥಾನದಿಂದ ಹರಿಶ್ಚಂದ್ರ ಉಪ್ಪಾರಪಳಿಕೆ ಕೊಕ್ಕಡ, ಮಹಿಳಾ ಸ್ಥಾನದಿಂದ ಸಿನಿ ಗುರುದೇವನ್, ಲೋಕೇಶ್ವರಿ ವಿನಯಚಂದ್ರ ವಳಂಬ್ರ ಕಡಿರುದ್ಯಾವರ, ಸಾಮಾನ್ಯ ಸ್ಥಾನದಿಂದ ಗಣೇಶ್ ಕಾಶಿ, ಕಾಶಿಹೌಸ್ ಕೊಕ್ಕಡ, ಸುಬ್ರಹ್ಮಣ್ಯ ಶಬರಾಯ ವಿಶ್ವಂಬರ ಮನೆ ಕೊಕ್ಕಡ, ವಿಶ್ವನಾಥ ಕೆ. ಕೊಲ್ಲಾಜೆ ಕೊಕ್ಕಡ, ಪ್ರಮೋದ್ ಕುಮಾರ್ ಶೆಟ್ಟಿ ರೆಖ್ಯ, ಪ್ರಶಾಂತ್ ಕುಮಾರ್ ಕೊಕ್ರಾಡಿ ಹಾಗೂ ಪ್ರಧಾನ ಅರ್ಚಕ ಸತ್ಯಪ್ರಿಯ ಸೇರಿ ಒಟ್ಟು 9 ಮಂದಿ ನೇಮಕವಾಗಿದ್ದಾರೆ.



ಹೈಕೋರ್ಟ್ ಮುಂದೆ ಒಪ್ಪಿತ್ತು:
ಸಮಿತಿ ಕುರಿತ ಫೆ.18ರ ಮೊದಲ ಸರ್ಕಾರಿ ಆದೇಶದ ಕುರಿತು ಹೈಕೋರ್ಟ್‌ಗೆ ವಿವರಣೆ ನೀಡಿದ್ದ ಸರ್ಕಾರಿ ವಕೀಲರು, ಅದು ಕರಡು ಪ್ರತಿ ಮಾತ್ರ. ಅಧಿಕೃತ ಆದೇಶವಾಗಿರಲಿಲ್ಲ ಎಂದು ತಿಳಿಸಿದ್ದರು. ಇದನ್ನು ಪ್ರಶ್ನಿಸಿದ್ದ ನ್ಯಾ. ನಾಗಪ್ರಸನ್ನ, ಕೇವಲ ಕರಡು ಪ್ರತಿ ಎನ್ನುವುದಾದರೆ, ಅದು ಪ್ರಕಟವಾಗಿದ್ದು ಹೇಗೆ? ಪತ್ರಿಕೆಗಳಲ್ಲಿ ಬಂದಿದ್ದು ಹೇಗೆ ಎಂದು ಪ್ರಶ್ನಿಸಿದ್ದರು. ಈ ಸಂದರ್ಭದಲ್ಲಿ ಹೊಸದಾಗಿ ಸಮಿತಿ ಮಾಡಬೇಕು ನ್ಯಾಯಮೂರ್ತಿಗಳ ಸಲಹೆ ಒಪ್ಪಿಕೊಂಡಿದ್ದ ಪ್ರತಿವಾದಿ ಸರ್ಕಾರಿ ವಕೀಲರು, ಸದಸ್ಯತ್ವಕ್ಕೆ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಮರು ಪರಿಶೀಲಿಸಿ ಹೊಸ ವ್ಯವಸ್ಥಾಪನಾ ಸಮಿತಿ ರಚನೆ ಮಾಡುತ್ತೇವೆ ಎಂದು ತಿಳಿಸಿದ್ದರು.


3ನೇ ಬಾರಿಗೆ ಅವಕಾಶ:
ಸುಬ್ರಹ್ಮಣ್ಯ ಶಬರಾಯರಿಗೆ ಸೌತಡ್ಕ ವ್ಯವಸ್ಥಾಪನಾ ಸಮಿತಿಗೆ ಮೂರನೇ ಬಾರಿಗೆ ಅಧ್ಯಕ್ಷರಾಗುವ ಅವಕಾಶ ಒಲಿದು ಬಂದಿರುವುದು ಗಮನಾರ್ಹ. ಈ ಹಿಂದೆ 2017-20ರ ನಡುವಿನ ಅವಧಿಗೆ ಅವರು ಅಧ್ಯಕ್ಷರಾಗಿದ್ದರು. ನಂತರ, 2025ರ ಮಾರ್ಚ್ 3ರ ಆದೇಶದನ್ವಯ ಅಧಿಕಾರ ಸ್ವೀಕರಿಸಿ ಒಂದು ದಿನಕ್ಕೆ ಸಮಿತಿ ಅಧ್ಯಕ್ಷರಾಗಿದ್ದರು. ಆದರೆ, ಹೈಕೋರ್ಟ್ ಆದೇಶದಿಂದಾಗಿ ಅವರಿಗೆ ಕಾರ್ಯನಿರ್ವಹಿಸಲು ಸಾಧ್ಯವಾಗಿರಲಿಲ್ಲ. ಈಗ ಮೂರನೇ ಬಾರಿಗೆ ಅವರಿಗೆ ಅವಕಾಶ ಸಿಕ್ಕಿದೆ.

“ಎದುರಾಳಿಗಳು ನಮ್ಮ ಬಗ್ಗೆ ಎಷ್ಟೇ ಅಪಪ್ರಚಾರ ಮಾಡಿದರೂ, ರಾಜ್ಯ ಸರ್ಕಾರ ನಮ್ಮ ಮೇಲೆ ವಿಶ್ವಾಸ ಕಳೆದುಕೊಳ್ಳಲಿಲ್ಲ. ಸೌತಡ್ಕ ದೇಗುಲದಲ್ಲಿ ಕೆಲಸ ಮಾಡುವ ಮತ್ತೊಂದು ಅವಕಾಶ ಸಿಕ್ಕಿದೆ. ಇದಕ್ಕಾಗಿ ಸರ್ಕಾರದ ಎಲ್ಲರಿಗೂ ಧನ್ಯವಾದಗಳು”
-ಸುಬ್ರಹ್ಮಣ್ಯ ಶಬರಾಯ
ಮಾಜಿ ಅಧ್ಯಕ್ಷ, ಹೊಸ ಸಮಿತಿ ಸದಸ್ಯರು

LEAVE A REPLY

Please enter your comment!
Please enter your name here