ಪುತ್ತೂರು: ಬೆಂಗಳೂರಿನ ಖ್ಯಾತ ವಿಮಾನಯಾನ ಸಂಸ್ಥೆ ಸ್ಕೈ ಬರ್ಡ್ ಏವಿಯೇಶನ್ ಇದರ ಅಧಿಕೃತ ಪ್ರಾಂಚೈಸಿ ಸಂಸ್ಥೆಯಾಗಿರುವ ಶ್ರೀ ಪ್ರಗತಿ ವಿಸ್ತಾರ ಕಾಲೇಜ್ ಫಾರ್ ಏವಿಯೇಶನ್ ಮ್ಯಾನೇಜ್ ಮೆಂಟ್ ನ ವಿದ್ಯಾರ್ಥಿಗಳಿಗೆ ವಿಮಾನ ನಿಲ್ದಾಣ ಭೇಟಿ ಮತ್ತು ಇನ್ ಪ್ಲೈಟ್ ತರಬೇತಿಯನ್ನು ಇತ್ತೀಚೆಗೆ ಯಶಸ್ವಿಯಾಗಿ ಆಯೋಜಿಸಲಾಗಿತ್ತು.
ವಿಮಾನಯಾನ ಕ್ಷೇತ್ರದಲ್ಲಿ 18 ವರ್ಷದ ಅನುಭವವನ್ನು ಹೊಂದಿರುವ ಸ್ಕೈ ಬರ್ಡ್ ಸಂಸ್ಥೆ ತನ್ನ 9ನೇ ಪ್ರಾಂಚೈಸಿ ಶಾಖೆಯನ್ನು ಪುತ್ತೂರಿನಲ್ಲಿ ಶ್ರೀ ಪ್ರಗತಿ ವಿಸ್ತಾರ ಕಾಲೇಗ್ ಫಾರ್ ಏವಿಯೇಶನ್ ಮ್ಯಾನೇಜ್ ಮೆಂಟ್ ಹೆಸರಿನಲ್ಲಿ ಹೊಂದಿದ್ದು, ಜಾಗತಿಕ ಮಟ್ಟದ ಶಿಕ್ಷಣವನ್ನು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ನೀಡುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ.

ಪಠ್ಯಕ್ರಮದ ಭಾಗವಾಗಿ ವಿದ್ಯಾರ್ಥಿಗಳಿಗೆ ಔದ್ಯಮಿಕ ಕೇಂದ್ರಗಳ ಭೇಟಿಯ ಜೊತೆಗೆ ವಿಮಾನ ನಿಲ್ದಾಣ ಮತ್ತು ವಿಮಾನಯಾನ ಸಂಸ್ಥೆಗಳ ಕಾರ್ಯ ವಿಧಾನವನ್ನು ನೇರವಾಗಿ ಕಂಡು ಕಲಿಯುವ ಅವಕಾಶವನ್ನು ನೀಡಿದೆ. ಈ ಶೈಕ್ಷಣಿಕ ಪ್ರವಾಸವೂ ವಾಸ್ತವಿಕ ಹಾಗೂ ಪ್ರಾಯೋಗಿಕ ವಿಮಾನಯಾನ ಜಗತ್ತಿನ ನಡುವಿನ ಅಂತರವನ್ನು ನೀಗಿಸಿದೆ ಮಾತ್ರವಲ್ಲ ವಿದ್ಯಾರ್ಥಿಗಳಿಗೆ ವೈಮಾನಿಕ ಕ್ಷೇತ್ರದ ನೈಜ ಅನುಭವವನ್ನು ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದೆ.
ವಿಮಾನ ನಿಲ್ದಾಣ, ಹಾರಾಟದ ಪ್ರಕ್ರಿಯೆ, ಭದ್ರತಾ ತಪಾಸಣೆ, ಏರ್ ಟ್ರಾಫಿಕ್ ಕಂಟ್ರೋಲ್, ಗ್ರೌಂಡ್ ಹ್ಯಾಂಡ್ಲಿಂಗ್, ಕಸ್ಟಮ್ಸ್ ಮತ್ತು ಇಮಿಗ್ರೇಶನ್ ಪ್ರಕ್ರಿಯೆಗಳ ಕುರಿತು ವಿಮಾನ ನಿಲ್ದಾಣದ ಹಿರಿಯ ಅಧಿಕಾರಿಗಳು ಮನಮುಟ್ಟುವ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ವಿಮಾನ ನಿಲ್ದಾಣದಲ್ಲಿ ಎದುರಾಗುವ ಹಠಾತ್ ತುರ್ತು ಪರಿಸ್ಥಿತಿಗಳ ನಿರ್ವಹಣೆ, ತಾಂತ್ರಿಕ ಸಿಬ್ಬಂದಿಗಳ ಕಾರ್ಯಚಟುವಟಿಕೆ ಮತ್ತು ವಿಮಾನಗಳ ನಿರ್ವಹಣಾ ಕಾರ್ಯವನ್ನು ನೇರವಾಗಿ ಕಂಡು ಕಲಿಯುವ ಅವಕಾಶ ವಿದ್ಯಾರ್ಥಿಗಳ ಮುಂದಿನ ವೃತ್ತಿಪರ ಬದುಕಿಗೆ ವರದಾನವಾಗಲಿದೆ ಎಂಬ ಅಭಿಪ್ರಾಯದೊಂದಿಗೆ ವಿಮಾನ ನಿಲ್ದಾಣದ ಪರಿಸರ ಸ್ನೇಹಿ ಉಪಕ್ರಮಗಳಾದ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ, ಇಂಧನ ಬಳಕೆ, ನವೀಕರಿಸುವ ಶಕ್ತಿಯ ಮೂಲಗಳ ಉಪಯೋಗ ಮತ್ತು ತಾಂತ್ರಿಕತೆಯ ಬಗ್ಗೆ ಮಾಹಿತಿ ನೀಡಲಾಯಿತು.
ವಿದ್ಯಾರ್ಥಿಗಳು ವಿಮಾನ ನಿಲ್ದಾಣದ ಹಿರಿಯ ಉನ್ನತ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ ಭವಿಷ್ಯದ ಅವಕಾಶಗಳ ಬಗ್ಗೆ ಸ್ಪಷ್ಟ ಮಾಹಿತಿ ಪಡೆದರು.
ಈ ಅಧ್ಯಯನ ಪ್ರವಾಸ ವಿದ್ಯಾರ್ಥಿಗಳಿಗೆ ವೃತ್ತಿಪರ ಅನುಭವವನ್ನು ನೀಡುವಲ್ಲಿ ನೆರವಾಯಿತು. ವಿಮಾನ ನಿಲ್ದಾಣದ ನಿರ್ವಹಣೆ, ಗ್ರೌಂಡ್ ಹ್ಯಾಂಡ್ಲಿಂಗ್, ಕ್ಯಾಬಿನ್ ಕ್ರೂ ತರಬೇತಿ ಸೇರಿದಂತೆ ವಿಮಾನಯಾನದ ವಿವಿಧ ಮಜಲುಗಳ ಬಗ್ಗೆ ವಿದ್ಯಾರ್ಥಿಗಳು ಅಧಿಕಾರಿಗಳಿಂದ ಮಾಹಿತಿ ಪಡೆದು ಸಂತುಷ್ಟರಾದರು.
ಶ್ರೀ ಪ್ರಗತಿ ವಿಸ್ತಾರ ಏವಿಯೇಶನ್ ಸಂಸ್ಥೆಯ ಪ್ರದಾನ ಕಾರ್ಯದರ್ಶಿ ಪಿ ವಿ ಗೋಕುಲ್ನಾಥ್, ಕೋಶಾಧಿಕಾರಿ ಸುದರ್ಶನ್ ಮೂಡಬಿದ್ರಿ, ವಿದ್ಯಾರ್ಥಿಗಳ ಕಲಿಕೆಯನ್ನು ಗಮನದಲ್ಲಿರಿಸಿ ಈ ಪ್ರವಾಸವನ್ನು ಆಯೋಜಿಸಲಾಗಿತ್ತು. ಸಂಸ್ಥೆಯ ಆಡಳಿತಾಧಿಕಾರಿ ಸ್ನಿಗ್ದಾ ಆಳ್ವ, ತರಬೇತುದಾರರಾದ ಅರುಣ್ ಜೋಸ್ ಈ ಶೈಕ್ಷಣಿಕ ತರಬೇತಿ ಪ್ರವಾಸದಲ್ಲಿ ವಿದ್ಯಾರ್ಥಿಗಳ ಜತೆಗಿದ್ದರು. ಸಂಸ್ಥೆಯ ಸುಮಾರು 50ರಷ್ಟು ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿ ಆಕಾಶದೆತ್ತರದಲ್ಲಿ ಹಾರುವ ವಿಮಾನದೊಳಗೆ ಪ್ರಾಯೋಗಿಕ ತರಬೇತಿ ಅನುಭವವನ್ನು ಪಡೆದರು.