ಮೇ.18-21: ಹಿರೆಬಂಡಾಡಿ ನೆಹರುತೋಟ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಪ್ರತಿಷ್ಠಾ ಕಲಶಾಭಿಷೇಕ

0

ಹಿರೆಬಂಡಾಡಿ: ವಾಸ್ತು ಶಿಲ್ಪಿ ಪಿ.ಜಿ.ಜಗನ್ನಿವಾಸ ರಾವ್ ಅವರ ಮಾರ್ಗದರ್ಶನದಲ್ಲಿ ಅಂದಾಜು 35 ಲಕ್ಷ ರೂ.ವೆಚ್ಚದಲ್ಲಿ ಜೀರ್ಣೋದ್ದಾರಗೊಂಡ ಹಿರೆಬಂಡಾಡಿ ನೆಹರುತೋಟ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಪ್ರತಿಷ್ಠಾ ಕಲಶಾಭಿಷೇಕ ಮೇ.18ರಿಂದ 21ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ದೈವಜ್ಞ ಹರಿಪ್ರಸಾದ್ ವೈಲಾಯರ ನೇತೃತ್ವದಲ್ಲಿ ನಡೆಯಲಿದೆ ಎಂದು ಜೀರ್ಣೋದ್ದಾರ ಹಾಗೂ ಕಲಶೋತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.


ಮೇ 18ರಂದು ಬೆಳಿಗ್ಗೆ 9 ಗಂಟೆಗೆ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಿಂದ ಕುಣಿತ ಭಜನೆಯೊಂದಿಗೆ ಅಜ್ಜನ ಪ್ರತಿಮೆಯ ವೈಭವದ ಶೋಭಾಯಾತ್ರೆ ನಡೆಯಲಿದೆ. ಮೇ 20ರಂದು ಬೆಳಿಗ್ಗೆ 9 ಗಂಟೆಗೆ ಹೊರೆಕಾಣಿಕೆ ಮೆರವಣಿಗೆಯು ಮುರದಮೇಲು ಮಂಜುಶ್ರೀ ಭಜನಾ ಮಂದಿರದಿಂದ ಸ್ವಾಮಿ ಕೊರಗಜ್ಜ ಕ್ಷೇತ್ರಕ್ಕೆ ಆಗಮಿಸಲಿದೆ. ಸಂಜೆ ದೇವತಾ ಪ್ರಾರ್ಥನೆ, ಜೀರ್ಣೋದ್ದಾರ ಕಾರ್ಯದಲ್ಲಿ ಶ್ರಮಿಸಿದ ಆಚಾರಿ, ಶಿಲ್ಪಿ, ಮೇಸ್ತ್ರಿಯವರಿಗೆ ಗೌರವ ಸಮರ್ಪಣೆ ನಡೆಯಲಿದೆ. ನಂತರ ಸ್ವಸ್ತಿ ಪುಣ್ಯಾಹ, ಪ್ರಾಸಾದ ಶುದ್ಧಿ, ವಾಸ್ತು ಪೂಜೆ, ವಾಸ್ತು ಹೋಮ, ರಕ್ಷೋಘ್ನ ಹೋಮ, ಶಾಂತಿಹೋಮ, ಪ್ರಾಕಾರ ಬಲಿ, ಬಿಂಬಶುದ್ಧಿ, ಶಯ್ಯಧಿವಾಸ, ಪ್ರಸಾದ ವಿತರಣೆ ನಡೆಯಲಿದೆ. ಮೇ 21ರಂದು ಬೆಳಿಗ್ಗೆ ಸ್ವಸ್ತಿ ಪುಣ್ಯಾಹ, ಗಣಯಾಗ ಪ್ರತಿಷ್ಠೆ, ಪ್ರಧಾನ ಹೋಮ, ದೈವ ಪ್ರತಿಷ್ಠೆ, ಪಂಚವಿಂಶತಿ ಕಲಶಾಭಿಷೇಕ, ಮಹಾಪೂಜೆ ನಡೆಯಲಿದೆ.


ಧಾರ್ಮಿಕ ಸಭೆ:
ಮೇ 21ರಂದು ಬೆಳಿಗ್ಗೆ 11 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಮಾಜಿ ಶಾಸಕ ಸಂಜೀವ ಮಠಂದೂರು, ಹಿರೆಬಂಡಾಡಿ ಗ್ರಾ.ಪಂ.ಅಧ್ಯಕ್ಷ ಸದಾನಂದ ಶೆಟ್ಟಿ, ಉಪ್ಪಿನಂಗಡಿಯ ವೈದ್ಯ ಡಾ.ರಘು, ಉಪ್ಪಿನಂಗಡಿ ವ್ಯವಸಾಯಿಕ ಸಹಕಾರಿ ಸಂಘದ ಅಧ್ಯಕ್ಷ ಸುನಿಲ್ ದಡ್ಡು, ಹಿರೆಬಂಡಾಡಿ ಉಳತ್ತೋಡಿ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜನಾರ್ದನ ಗೌಡ ಶಾಂತಿತ್ತಡ್ಡ, ಕೊಯಿಲ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೀರಜ್‌ಕುಮಾರ್ ರೈ ಆರುವಾರ ಭಾಗವಹಿಸಲಿದ್ದಾರೆ. ಸ್ವಾಮಿ ಕೊರಗಜ್ಜ ಕ್ಷೇತ್ರದ ಆಡಳಿತ ಮತ್ತು ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಆದಿರಾಜ ಶಾಂತಿತ್ತಡ್ಡ, ಕಲಶೋತ್ಸವ ಸಮಿತಿ ಅಧ್ಯಕ್ಷ ಹೊನ್ನಪ್ಪ ಖಂಡಿಗ ಶಾಖೆಪುರ ಉಪಸ್ಥಿತರಿರಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6ಕ್ಕೆ ಕೊರಗಜ್ಜ ದೈವದ ಭಂಡಾರ ತೆಗೆಯುವುದು, ರಾತ್ರಿ ಅನ್ನಸಂತರ್ಪಣೆ, ನಂತರ ಕೊರಗಜ್ಜ ದೈವದ ಕೋಲ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಮೇ 21; ಪ್ರತಿಷ್ಠಾ ಕಲಶಾಭಿಷೇಕ

ಮೇ21ರಂದು ಬೆಳಿಗ್ಗೆ 8.52ರ ಮಿಥುನ ಲಗ್ನ ಶುಭ ಮುಹೂರ್ತದಲ್ಲಿ ದೈವಜ್ಞ ಹರಿಪ್ರಸಾದ್ ವೈಲಾಯರ ನೇತೃತ್ವದಲ್ಲಿ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ ನಡೆಯಲಿದೆ.

LEAVE A REPLY

Please enter your comment!
Please enter your name here