ಉಪ್ಪಿನಂಗಡಿ: ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿಯ ಕೆಲಸ ಆಗುತ್ತಿಲ್ಲ ಎಂದು ಮಾಜಿ ಶಾಸಕರು ಆರೋಪ ಮಾಡಿದ್ದಾರೆ. ಈಗಿನ ಶಾಸಕರು ಏನು ಮಾಡಿದ್ದಾರೆ ಎಂದು ಲೆಕ್ಕ ಹಾಕುವ ಮೊದಲು ತಾನು ಶಾಸಕನಾಗಿದ್ದಾಗ ಏನು ಮಾಡಿದ್ದಾರೆ ಎಂಬುದನ್ನು ಅರಿತುಕೊಂಡು ಮಾತನಾಡಲಿ ಎಂದು ಶಾಸಕ ಅಶೋಕ್ ಕುಮಾರ್ ರೈ ಅವರು ಮಾಜಿ ಶಾಸಕ ಸಂಜೀವ ಮಠಂದೂರು ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
34 ನೆಕ್ಕಿಲಾಡಿಯ ಶ್ರೀ ಗುರು ರಾಘವೇಂದ್ರ ಮಠದ ಸಭಾಂಗಣದಲ್ಲಿ ಮೇ.20ರಂದು ನಡೆದ ಅಕ್ರಮ ಸಕ್ರಮ ಬೈಠಕ್ ಉದ್ಘಾಟಿಸಿ ಮಾತನಾಡಿದ ಅವರು, ತನ್ನ ನೆರೆಮನೆಯ ವ್ಯಕ್ತಿಯ ಅಕ್ರಮ ಸಕ್ರಮ ಕಡತವನ್ನು ವಿಲೇವಾರಿ ಮಾಡಿಕೊಡಲಾಗದ ಇವರು ಉಳಿದವರ ಬಗ್ಗೆ ಏನು ಮಾತನಾಡುತ್ತಾರೆ. ಮೆಡಿಕಲ್ ಕಾಲೇಜು ಬಜೆಟ್ನಲ್ಲಿ ಘೋಷಣೆಯಾದಾಗ ಅಪಸ್ವರ ಎತ್ತಿದ್ದ ಇವರಿಗೆ ತನ್ನ ಶಾಸಕತ್ವದ ಅವಧಿಯಲ್ಲಿ ಮೆಡಿಕಲ್ ಕಾಲೇಜಿನ ಕಡತ ಸರಕಾರಕ್ಕೆ ತಲುಪಿಸಲು ಸಾಧ್ಯವಾಗಿಲ್ಲ. ಉಪ್ಪಿನಂಗಡಿಗೆ ಮಾಜಿ ಶಾಸಕರು ಏನಾದರೂ ಕೊಡುಗಡೆ ನೀಡಿದ್ದಾರ? ತನ್ನ ಗ್ರಾಮದವರಿಗೆ ? ನೆರವು ನೀಡಲೂ ಯೋಗ್ಯತೆ ಇಲ್ಲದ ಮಾಜಿ ಶಾಸಕರು ಅವರ ಅವಧಿಯ 5 ವರ್ಷದಲ್ಲಿ ಮಾಡಿದ್ದು ಏನು ಎಂಬುದು ಜನತೆಗೆ ಗೊತ್ತಿದೆ ಎಂದು ಹೇಳಿದರು.
ನಾವು ಅಕ್ರಮ ಸಕ್ರಮಕ್ಕೆ ಲಂಚ ಪಡೆಯುತ್ತಿಲ್ಲ. ಈ ಹಿಂದೆ ದುಡ್ಡು ಕೊಟ್ಟವರ ಕಡತ ಮಾತ್ರ ವಿಲೇವಾರಿಯಾಗುತ್ತಿತ್ತು. ಇವರು ಬಡವರ ಕಡತವನ್ನು ಮುಟ್ಟುತ್ತಿರಲಿಲ್ಲ ಯಾಕೆ ಎಂದು ಪ್ರಶ್ನಿಸಿದ ಶಾಸಕರು, ಸಂಗಮ ಕ್ಷೇತ್ರವಾದ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ಚರ ದೇವಸ್ಥಾನವನ್ನು ಕೂಡಲ ಸಂಗಮದಂತೆ ಅಭಿವೃದ್ಧಿ ಪಡಿಸಲು 352 ಕೋಟಿ.ರೂ. ಅನುದಾನ ಮಂಜೂರಾಗಿದೆ. ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಯನ್ನೂ ಮಾಡುತ್ತಿದ್ದೇವೆ. ಮೆಡಿಕಲ್ ಕಾಲೇಜು ಬಂದಿದೆ. ತಾಲೂಕು ಕ್ರೀಡಾಂಗಣ, ಆರ್ಟಿಒ ಟ್ರ್ಯಾಕ್, ಕೊಯಿಲ ಪಶು ವೈದ್ಯಕೀಯ ಕಾಲೇಜಿನ ಕಾಮಗಾರಿಗಳು ಭರದಿಂದ ನಡೆಯುತ್ತಿವೆ ಮತ್ತು ಕೆಎಂಎಫ್ ಗೆ ಜಮೀನು ಮಂಜೂರಾಗಿದೆ. ಕಜೆಕ್ಕಾರ್ನಲ್ಲಿ ಕ್ರೀಡಾಂಗಣಕ್ಕೆ 5 ಎಕರೆ ಜಾಗ ಕಾಯ್ದಿರಿಸಲಾಗಿದೆ. ಇವೆಲ್ಲಾ ಯೋಜನೆಗಳು ಬಂದಾಗ ಅಭಿವೃದ್ಧಿಯೊಂದಿಗೆ ಸಾವಿರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಅವರು ಐದು ವರ್ಷದಲ್ಲಿ ತಂದ ಅನುದಾನವನ್ನು ಹಾಗೂ ನಾನು ಎರಡು ವರ್ಷದಲ್ಲಿ ತಂದ ಅನುದಾನವನ್ನು ಮಾಜಿ ಶಾಸಕರು ಮೊದಲು ಪರಿಶೀಲನೆ ಮಾಡಲಿ ಎಂದು ಹೇಳಿದರು.
ಹಿಂದುತ್ವದ ಬಗ್ಗೆ ಭಾಷಣಮಾಡ್ತಾರೆ… ದೇವಸ್ಥಾನದ ಮೇಲೆ ಕೇಸ್ ಹಾಕ್ತಾರೆ…..
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾಗದಲ್ಲಿ ಅಕ್ರಮವಾಗಿ ವಾಸಮಾಡಿಕೊಂಡಿದ್ದು ಮಾತ್ರವಲ್ಲದೆ ದೇವಸ್ಥಾನದ ಜಾಗದಿಂದ ಎಬ್ಬಿಸಿದ್ದಕ್ಕಾಗಿ ಶ್ರೀ ಮಹಾಲಿಂಗೇಶ್ವರ ದೇವರ ಮೇಲೆಯೇ ಕೇಸು ಹಾಕಿದ್ದಾರೆ. ಹೊರಗಡೆ ವೋಟಿಗಾಗಿ ಹಿಂದುತ್ವದ ಭಾಷಣ ಮಾಡುವುದು ಇವರೇ. ದೇವರ ಮೇಲೆ ಕೇಸು ಹಾಕುವುದೂ ಇವರೇ ಇವರದ್ದು ಎಂಥಾ ಹಿಂದುತ್ವ ಎಂದು ಲೇವಡಿ ಮಾಡಿದ ಶಾಸಕರು, ಹಿಂದುತ್ವದ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಂದ ಒತ್ತುವರಿಯಾಗಿರುವ, ದೇವಸ್ಥಾನಗಳ ಜಾಗವನ್ನು ಯಾಕೆ ಮರು ವಶಮಾಡಲು ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರಲ್ಲದೆ, ನಾನು ಒಬ್ಬ ಹಿಂದುವಾಗಿ ನನ್ನ ಧರ್ಮವನ್ನು ಅಪಾರ ಪ್ರೀತಿಸುತ್ತೇನೆ. ಹಾಗೆಯೇ ಇತರ ಧರ್ಮವನ್ನು ಗೌರವಿಸುತ್ತೇನೆ ಎಂದರು.