ಮಣ್ಣು ತುಂಬಿದ ಚರಂಡಿ: ರಸ್ತೆಯಲ್ಲೇ ಹರಿಯುತ್ತಿರುವ ನೀರು
ಉಪ್ಪಿನಂಗಡಿ: ಅಪೂರ್ಣ ಹಂತದ ಚತುಷ್ಫಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ, ಎಚ್ಚೆತ್ತುಕೊಳ್ಳದ ಇಲಾಖೆಗಳು ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳಿಂದಾಗಿ ಭಾನುವಾರ ಸುರಿದ ಭಾರೀ ಮಳೆಗೆ ಉಪ್ಪಿನಂಗಡಿ ಭಾಗವು ಅವ್ಯವಸ್ಥೆಯ ಆಗರವಾಗಿದ್ದು, ನಾಗರಿಕರು ಸಮಸ್ಯೆಗೆ ತುತ್ತಾಗುವಂತಾಗಿದೆ.
ಚತುಷ್ಫಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ಅಪೂರ್ಣ ಹಂತದಲ್ಲಿರುವುದರಿಂದ ಅಲ್ಲಲ್ಲಿ ಚರಂಡಿಗಳು ಮುಚ್ಚಿ ಹೋಗಿದ್ದು, ಕೆಲವು ಕಡೆ ಅರ್ಧಂಬರ್ಧ ಚರಂಡಿ ಕಾಮಗಾರಿ ಆಗಿರುವುದರಿಂದ ಮಳೆ ನೀರು ಹರಿದು ಹೋಗಲು ಸಾಧ್ಯವಾಗದೇ ತಗ್ಗು ಪ್ರದೇಶದಲ್ಲಿ ಹಾಗೂ ಹೆದ್ದಾರಿಯಲ್ಲಿ ಕೃತಕ ನೆರೆ ಕಾಣಿಸಿಕೊಂಡಿದೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಬದಿಯ ದೀಪಾ ಸೂಪರ್ ಮಾರ್ಕೆಟ್ ಬಳಿ ಹಾಗೂ ಅಮೂಲ್ಯ ಗ್ಯಾಸ್ ಸೆಂಟರ್ ಹತ್ತಿರ ತಗ್ಗು ಪ್ರದೇಶದಲ್ಲಿರುವ ಅಂಗಡಿ, ಮನೆಗಳಿಗೆ ನೀರು ನುಗ್ಗಿದೆ.
ಚರಂಡಿಯಲ್ಲಿ ಮಣ್ಣು: ರೋಡೇ ತೋಡು!: ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಸೇರಿದ ಹಳೆಗೇಟು – ಮರ್ಧಾಳ ರಾಜ್ಯ ಹೆದ್ದಾರಿ ಬದಿಯ ಅಲ್ಲಲ್ಲಿ ಚರಂಡಿಗಳು, ಮೋರಿಗಳು ಮಣ್ಣು ತುಂಬಿ ಬ್ಲಾಕ್ ಆಗಿದ್ದು, ಮಳೆ ನೀರು ಹರಿದು ಹೋಗಲು ಸಾಧ್ಯವಾಗದೇ ರಸ್ತೆಯಲ್ಲೇ ತೋಡಿನಂತೆ ನೀರು ಹರಿಯತೊಡಗಿವೆ. ಇಲ್ಲಿನ ಕಂಚಿಬೆಟ್ಟು, ಪುಳಿತ್ತಡಿ ಬಳಿಯ ನೆಡ್ಚಿಲಿನ ರಾಮಚಂದ್ರ ಮಣಿಯಾಣಿಯವರ ಮನೆಯ ಬಳಿ ಚರಂಡಿಯಲ್ಲಿ ನೀರು ಹರಿದು ಹೋಗಲು ಸಾಧ್ಯವಾಗದೇ ಉದ್ದಕ್ಕೆ ಹೆದ್ದಾರಿಯಲ್ಲೇ ನೀರು ಹರಿಯತೊಡಗಿತ್ತು. ಮೊದಲೇ ಹೊಂಡ- ಗುಂಡಿಗಳಿಂದ ಕೂಡಿರುವ ರಾಜ್ಯ ಹೆದ್ದಾರಿಯು ಮಳೆ ನೀರಿನಿಂದಾವೃತಗೊಂಡಿದ್ದರಿಂದ ವಾಹನ ಸವಾರರು ಹೆದ್ದಾರಿಯಲ್ಲಿ ಸಂಚರಿಸಲು ಸಂಕಷ್ಟ ಪಡುವ ಸ್ಥಿತಿ ನಿರ್ಮಾಣವಾಗಿತ್ತು. ಪೆರಿಯಡ್ಕ ಬಳಿಯ ಸುವರ್ಣ ಚಿಕನ್ ಸೆಂಟರ್ ಬಳಿ ಕೂಡಾ ಚರಂಡಿ ಬ್ಲಾಕ್ ಆಗಿದ್ದರಿಂದ ಹೆದ್ದಾರಿಯಲ್ಲಿ ಮೊಣಕಾಲ ತನಕ ಮಳೆ ನೀರು ನಿಂತಿತ್ತು. ಸ್ಥಳೀಯರು ಸೇರಿ ಚರಂಡಿ ಬಿಡಿಸಿಕೊಡುವ ಕೆಲಸ ಮಾಡಿದ ಬಳಿಕ ಇಲ್ಲಿ ಸಮಸ್ಯೆಗೆ ಸ್ವಲ್ಪ ಪ್ರಮಾಣದ ಮುಕ್ತಿ ಸಿಕ್ಕಿತ್ತು. ಮಳೆಗಾಲದ ಅರಿವಿದ್ದರೂ, ಲೋಕೋಪಯೋಗಿ ಇಲಾಖೆಯು ರಾಜ್ಯ ಹೆದ್ದಾರಿ ಬದಿಗಳ ಚರಂಡಿಯನ್ನು ಬಿಡಿಸದೇ ಇರುವುದರಿಂದ ಮೊದಲ ಮಳೆಗೆ ಸಮಸ್ಯೆ ಕಾಣಿಸಿಕೊಂಡಿದೆ.

ಜೆಜೆಎಂನಿಂದಲೂ ಸಂಕಷ್ಟ!: ಜಲ ಜೀವನ್ ಮೆಷಿನ್ ಯೋಜನೆಯಡಿ ರಸ್ತೆ ಬದಿಗಳಲ್ಲಿ ಕುಡಿಯುವ ನೀರಿನ ಪೈಪ್ಲೈನ್ಗಳನ್ನು ಅಳವಡಿಸಲಾಗಿದ್ದು, ಹಳೆಗೇಟು- ಮರ್ಧಾಳ ರಾಜ್ಯ ಹೆದ್ದಾರಿಯ ಪೆರಿಯಡ್ಕ- ಪುಳಿತ್ತಡಿ ಪರಿಸರದಲ್ಲಿ ಈ ಪೈಪ್ಲೈನ್ ಅಳವಡಿಸಿದ ಜಾಗ ಕುಸಿತಕ್ಕೊಳಗಾಗಿದ್ದು, ಸ್ವಲ್ಪ ಎಚ್ಚರ ತಪ್ಪಿ ವಾಹನಗಳನ್ನು ರಸ್ತೆ ಬದಿ ಇಳಿಸಿದರೂ ವಾಹನಗಳ ಟಯರುಗಳು ಇಲ್ಲಿ ಹೂತು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಗ್ರಾಮಾಂತರ ಭಾಗಗಳಲ್ಲಿ ಜೆಜೆಎಂನ ಪೈಪ್ಲೈನ್ಗಳನ್ನು ಗ್ರಾಮ ಪಂಚಾಯತ್ ರಸ್ತೆ ಬದಿಯ ಚರಂಡಿಯಲ್ಲಿ ಮೇಲ್ಮಟ್ಟದಲ್ಲೇ ಅಳವಡಿಸಿದ್ದು, ಇಲ್ಲಿ ಚರಂಡಿಯ ಹೂಳೆತ್ತಲೂ ಅಸಾಧ್ಯವಾಗುವಂತಹ ಸ್ಥಿತಿ ನಿರ್ಮಾಣವಾಗಿದೆ.
ಮುರಿದು ಬಿದ್ದ ವಿದ್ಯುತ್ ಕಂಬಗಳು: ಮೆಸ್ಕಾಂ ಹರಸಾಹಸ: ಕೆಲವು ಕಡೆ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದರಿಂದ ನಿನ್ನೆ ಮಧ್ಯರಾತ್ರಿಯಿಂದಲೇ ಈ ಭಾಗದಲ್ಲಿ ವಿದ್ಯುತ್ ಸಮಸ್ಯೆ ತಲೆದೋರಿದ್ದು, ಒಂದು ಕಡೆ ಸರಿ ಮಾಡಿ ಲೈನ್ ಚಾರ್ಜ್ ಮಾಡಿದ 15 ನಿಮಿಷದಲ್ಲೇ ಮತ್ತೆ ಮತ್ತೊಂದು ಕಡೆ ಸಮಸ್ಯೆ ತಲೆದೋರಿ ವಿದ್ಯುತ್ ಕಡಿತಗೊಳ್ಳುತ್ತಿದ್ದು, ಭಾರೀ ಮಳೆಗೂ ಮೆಸ್ಕಾಂ ಸಿಬ್ಬಂದಿಗಳು ಸಮಸ್ಯೆ ಸರಿಪಡಿಸಲು ಹರಸಾಹಸ ಪಡುತ್ತಿದ್ದಾರೆ.
ಉಭಯ ನದಿಗಳಲ್ಲಿ ನೀರಿನ ಏರಿಕೆ: ಮಳೆ ಪ್ರಾರಂಭವಾದ ಬಳಿಕ ಬಿಳಿಯೂರು ಬಳಿ ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಅಣೆಕಟ್ಟಿನ ಗೇಟುಗಳನ್ನು ತೆರವುಗೊಳಿಸಿ ನದಿ ನೀರನ್ನು ಹರಿಯ ಬಿಡಲಾಗಿದ್ದು, ನದಿಯ ಒಡಲನ್ನು ಬರಿದಾಗಿಸಿಕೊಂಡು ಹರಿಯುತ್ತಿದ್ದ ನೇತ್ರಾವತಿ ಹಾಗೂ ಕುಮಾರಧಾರ ನದಿಯು ಎರಡೇ ದಿನದಲ್ಲಿ ನೀರಿನ ಹರಿಯುವಿಕೆಯನ್ನು ಹೆಚ್ಚಿಸಿಕೊಂಡಿದ್ದು, ನದಿಯ ಒಡಲು ಕಾಣದಂತೆ ನೀರನ್ನು ಹೆಚ್ಚಿಸಿಕೊಂಡು ಹರಿಯುತ್ತಿದೆ. ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ಸನ್ನಿಧಿಯಲ್ಲಿ ನೇತ್ರಾವತಿ ನದಿಗಳಿಯುವ ೩೯ ಮೆಟ್ಟಿಲುಗಳಲ್ಲಿ ಇಂದು ರಾತ್ರಿಯಾಗುವಾಗ 13 ಮೆಟ್ಟಿಲು ಮಾತ್ರ ಕಾಣಿಸಿಕೊಳ್ಳುತ್ತಿದ್ದು, ಉಳಿದೆಲ್ಲಾ ಮೆಟ್ಟಿಲುಗಳು ಮುಳುಗಿವೆ.
ಸನ್ನದ್ಧಗೊಳ್ಳದ ಪ್ರವಾಹ ರಕ್ಷಣಾ ತಂಡ: ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ಗೃಹರಕ್ಷಕದಳವರನ್ನೊಳಗೊಂಡ ಪ್ರವಾಹ ರಕ್ಷಣಾ ತಂಡವನ್ನು ಜಿಲ್ಲಾಡಳಿತ ಉಪ್ಪಿನಂಗಡಿಯಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇರಿಸುತ್ತಿತ್ತು. ಈ ತಂಡದಲ್ಲಿ ದೋಣಿ, ಈಜುಗಾರರು, ಎಲೆಕ್ಟ್ರಿಷಿಯನ್, ಮರ ತುಂಡರಿಸುವವರು ಇರುತ್ತಿದ್ದರಲ್ಲದೆ, ಅದಕ್ಕೆ ಬೇಕಾದ ಎಲ್ಲಾ ಮೆಷಿನರಿಗಳೂ ಇವರಲ್ಲಿರುತ್ತಿತ್ತು. ಇವರು ಮಳೆಗಾಲ ಮುಗಿಯುವವರೆಗೆ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿ ಮೊಕ್ಕಾಂ ಹೂಡಿ ದಿನದ 24 ಗಂಟೆಯೂ ಸನ್ನದ್ಧ ಸ್ಥಿತಿಯಲ್ಲಿರುತ್ತಿದ್ದರಲ್ಲದೆ, ರಸ್ತೆಗೆ ಮರ ಬಿದ್ದಾಗ, ನೆರೆ ಬಂದಾಗ ಈ ತಂಡ ತಕ್ಷಣ ಅಲ್ಲಿಗೆ ತೆರಳಿ ಕಾರ್ಯಾಚರಣೆ ನಡೆಸುತ್ತಿತ್ತು. ಆದರೆ ಈ ಬಾರಿ ಈ ತಂಡವನ್ನು ನಿಯೋಜಿಸುವ ಕಾರ್ಯವೂ ಆಗಿಲ್ಲ. ಜಿಲ್ಲಾಡಳಿತವು ಡಿಜಿಪಿಯವರನ್ನು ಸಂಪರ್ಕಿಸಿದ ಬಳಿಕ ಅವರಿಂದ ಲಿಖಿತ ಆದೇಶ ಬಂದ ಬಳಿಕವಷ್ಟೇ ಈ ತಂಡದ ನಿಯೋಜನೆ ಆಗಬೇಕಷ್ಟೇ. ಈ ಕೆಲಸ ಇನ್ನೂ ಆಗದ್ದರಿಂದ ಇಲ್ಲಿ ಪ್ರವಾಹ ರಕ್ಷಣಾ ತಂಡದ ನಿಯೋಜನೆ ಇನ್ನೂ ಆಗಿಲ್ಲ.
ನಡೆಯದ ಪ್ರಾಕೃತಿಕ ವಿಕೋಪ ಸಭೆ: ಮಳೆಗಾಲದಲ್ಲಿ ನೆರೆ ಪೀಡಿತ ಪ್ರದೇಶವಾದ ಉಪ್ಪಿನಂಗಡಿಯಲ್ಲಿ ಮಳೆಗಾಲಕ್ಕೆ ಪೂರ್ವಭಾವಿಯಾಗಿ ಪ್ರತಿ ಬಾರಿಯೂ ತಾಲೂಕು ಮಟ್ಟದ ಪ್ರಾಕೃತಿಕ ವಿಕೋಪ ತಂಡದ ಸಭೆ ನಡೆಯುತ್ತಿತ್ತು. ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಭೆಯಲ್ಲಿ ಉಪವಿಭಾಗಾಧಿಕಾರಿ, ತಹಶೀಲ್ದಾರ್ ಸೇರಿದಂತೆ ತಾಲೂಕು ಮಟ್ಟದ ಇಲಾಖಾಧಿಕಾರಿಗಳು ಭಾಗವಹಿಸುತ್ತಿದ್ದರು. ಆಗ ಸಾರ್ವಜನಿಕರ ಅಹವಾಲು, ಸಮಸ್ಯೆಗಳನ್ನು ಆಲಿಸಿಕೊಂಡು ಅದಕ್ಕೆ ಬೇಕಾದ ಪರಿಹಾರ ಕಲ್ಪಿಸಲು ಸಂಕಲ್ಪ ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಈ ಬಾರಿ ಈ ಸಭೆಯೂ ಇಲ್ಲಿ ನಡೆದಿಲ್ಲ. ಒಟ್ಟಿನಲ್ಲಿ ಎರಡು ದಿನದ ಮಳೆಗೆ ಉಪ್ಪಿನಂಗಡಿ ಭಾಗದಲ್ಲಿ ಹಲವು ಸಮಸ್ಯೆಗಳು ಕಾಣಿಸಿಕೊಂಡಿದ್ದು, ಇದಕ್ಕೆ ಪರಿಹಾರ ಕಲ್ಪಿಸದಿದ್ದರೆ ಮಳೆಗಾಲದಲ್ಲಿ ಈ ಸಮಸ್ಯೆಗಳು ಇನ್ನೂ ಗಂಭೀರತೆಯನ್ನು ಪಡೆಯಬಹುದಾಗಿದೆ.
ತೋಡು ಮುಚ್ಚಿದ ಖಾಸಗಿ ವ್ಯಕ್ತಿ ಕಡಿತಗೊಂಡ ರಸ್ತೆ ಸಂಪರ್ಕ
ಖಾಸಗಿ ವ್ಯಕ್ತಿಯೋರ್ವರು ಮೊದಲಿದ್ದ ತೋಡನ್ನು ಮುಚ್ಚಿ ತನ್ನ ಜಾಗವನ್ನು ಮಣ್ಣು ಹಾಕಿ ಎತ್ತರಿಸಿದರ ಪರಿಣಾಮವಾಗಿ ಉಪ್ಪಿನಂಗಡಿ ಗ್ರಾಮದ ಪೆರಿಯಡ್ಕದಿಂದ ಹಿರೇಬಂಡಾಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಸಂಪರ್ಕ ಕಡಿತಗೊಳ್ಳುವಂತಾಗಿದೆ. ತೋಡು ಮುಚ್ಚಿದ್ದರಿಂದ ನೀರೆಲ್ಲಾ ರಸ್ತೆಗೆ ನುಗ್ಗುತ್ತಿದ್ದು, ಪಕ್ಕದ ಮನೆಗೆ, ತೋಟಕ್ಕೆ ನೀರು ನುಗ್ಗಿದೆ. ರಸ್ತೆಯ ಎರಡೂ ಬದಿಯೂ ಎತ್ತರವಾಗಿರುವುದರಿಂದ ಇಲ್ಲಿ ಮಳೆ ನೀರು ಹೋಗಲು ಜಾಗವಿಲ್ಲದೆ ರಸ್ತೆಯಲ್ಲಿ ಸೊಂಟದಷ್ಟೆತ್ತರಕ್ಕೆ ನೀರು ನಿಲ್ಲುವಂತಾಗಿದೆ. ಇದರಿಂದ ಈ ಸಂಪರ್ಕ ರಸ್ತೆಯಲ್ಲಿ ಸಂಚಾರ ಕಡಿತಗೊಳ್ಳುವಂತಾಗಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು, ಇಲ್ಲಿ ಅನಾದಿಕಾಲದಿಂದಲೂ ಇದ್ದ ತೋಡನ್ನು ಖಾಸಗಿ ವ್ಯಕ್ತಿಯೋರ್ವರು ಮುಚ್ಚಿ ತನ್ನ ಜಾಗವನ್ನು ಮಣ್ಣು ಹಾಕಿ ಎತ್ತರಿಸಿದ್ದಾರೆ. ಹಾಗಾಗಿ ತೋಡು ಮುಚ್ಚಿದ್ದರಿಂದ ನೀರು ಹೋಗಲು ಜಾಗವಿಲ್ಲದೆ ರಸ್ತೆಗೆ ನೀರು ನುಗ್ಗುವಂತಾಗಿದೆ. ಕಳೆದ ಬಾರಿ ರಸ್ತೆಯ ಇನ್ನೊಂದು ಬದಿಗಿರುವ ತೋಟಗಳಿಗೆ ಮಳೆ ನೀರು ನುಗ್ಗಿ ಹಾನಿಯಾಗಿದ್ದರಿಂದ ಅವರು ಕೂಡಾ ಅನಿವಾರ್ಯವಾಗಿ ತಮ್ಮ ಜಾಗದ ಭಾಗವನ್ನು ಮಣ್ಣು ಹಾಕಿ ಎತ್ತರಿಸಿದ್ದಾರೆ. ಇಲ್ಲಿ ತೋಡು ಮುಚ್ಚಿದ್ದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ಗ್ರಾ.ಪಂ., ಕಂದಾಯ ಇಲಾಖೆಗೆ ಹಲವು ಬಾರಿ ಮಾಹಿತಿ ನೀಡಿದ್ದೇವೆ. ಆದರೆ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಸ್ಥಳೀಯರೆಲ್ಲಾ ಒಟ್ಟಾಗಿ ಮೊದಲಿದ್ದ ತೋಡನ್ನೇ ಬಿಡಿಸಿ ಕೊಡುವ ಕೆಲಸ ಮಾಡಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಗ್ರಾ.ಪಂ. ಸದಸ್ಯ ಸುರೇಶ್ ಅತ್ರೆಮಜಲು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.