ಕಾರ್ಯಕರ್ತರ ತುರ್ತು ಸಭೆ-188 ಬೂತ್ ಅಧ್ಯಕ್ಷರ ಆಯ್ಕೆಗೆ ವಿರೋಧ
ಪ.ಜಾತಿಗೆ ನೀಡಲು ಆಗ್ರಹ
ಪುತ್ತೂರು: ಕೆದಂಬಾಡಿ ಗ್ರಾಮದ ಕಾಂಗ್ರೆಸ್‌ನ ನಾಲ್ಕು ಬೂತ್ ಸಮಿತಿಗೆ ಇತ್ತೀಚೆಗೆ ಅಧ್ಯಕ್ಷರುಗಳನ್ನು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ನೇಮಕ ಮಾಡಿ ಆದೇಶಿಸಿದ್ದರು. ಆ ಪೈಕಿ ಕೆದಂಬಾಡಿ ಬೂತ್ 188ರ ಅಧ್ಯಕ್ಷರ ಆಯ್ಕೆಗೆ 188 ಬೂತ್‌ನಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ಈಗ ಆಯ್ಕೆಗೊಂಡಿರುವ ಅಧ್ಯಕ್ಷರನ್ನು ಕೂಡಲೇ ಬದಲಾವಣೆಗೊಳಿಸಬೇಕೆಂದು ಆಗ್ರಹಿಸಿ ಅಸಮಾಧಾನಿತ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಸಭೆ ಸೇರಿ ತಮ್ಮ ಅಸಾಮಾಧಾನ ತೋಡಿಕೊಂಡಿದ್ದಾರೆ.
188 ಬೂತ್ ಸಮಿತಿ ಅಧ್ಯಕ್ಷರಾಗಿ ಹಬೀಬ್ ಕಣ್ಣೂರು ಕಾರ್ಯನಿರ್ವಹಿಸುತ್ತಿದ್ದು ಇದೀಗ ಅವರು ಮತ್ತೊಮ್ಮೆ ಅಧ್ಯಕ್ಷರಾಗಿ ಹಬೀಬ್ ಕಣ್ಣೂರು ಆಯ್ಕೆಗೊಂಡಿದ್ದರು. ಈ ಆಯ್ಕೆಯ ವಿರುದ್ಧ 188 ಬೂತ್ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿ ಅಧ್ಯಕ್ಷರ ಬದಲಾವಣೆಗೆ ಆಗ್ರಹಿಸಿ ಸಭೆ ನಡೆಸಿದ್ದಾರೆ.
ಮೇ.27ರಂದು ಸಂಜೆ ಶಾಫಿ ಬೇರಿಕೆ ಅವರ ಮನೆಯಲ್ಲಿ ಸಭೆ ಸೇರಿದ ಅಸಮಾಧಾನಿತ ಕಾಂಗ್ರೆಸ್ ಕಾರ್ಯಕರ್ತರು ಕೆದಂಬಾಡಿ ಬೂತ್ 188ರ ಅಧ್ಯಕ್ಷರನ್ನು ಕೂಡಲೇ ಬದಲಾವಣೆ ಮಾಡಿ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯನ್ನು ನೇಮಕ ಮಾಡಬೇಕೆಂದು ಆಗ್ರಹಿಸಿದರು.
ಕೆದಂಬಾಡಿ ಗ್ರಾ.ಪಂ ಸದಸ್ಯ ಮೆಲ್ವಿನ್ ಮೊಂತೆರೋ ಮಾತನಾಡಿ 188 ಬೂತ್ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಧ್ಯಕ್ಷರನ್ನು ಆಯ್ಕೆ ಮಾಡಬೇಕಿತ್ತು. ಎಲ್ಲ ಸಮುದಾಯಗಳಿಗೆ ಆದ್ಯತೆ ನೀಡಿ ಅಧ್ಯಕ್ಷರ ಆಯ್ಕೆ ಮಾಡಿದರೆ ಉತ್ತಮ ಎನ್ನುವುದು ನಮ್ಮ ಅಭಿಪ್ರಾಯವಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಸೋಮಯ್ಯ ತಿಂಗಳಾಡಿ ಮಾತನಾಡಿ ಕೆದಂಬಾಡಿ ಬೂತ್ 188ಕ್ಕೆ ಅಧ್ಯಕ್ಷರನ್ನು ಆಯ್ಕೆ ಮಾಡುವಾಗ ಬೂತ್ ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ಕೊಟ್ಟು ಆಯ್ಕೆ ಮಾಡದ ಕಾರಣ ಗೊಂದಲ ಸೃಷ್ಟಿಯಾಗಿದೆ, ಇತರ ಮೂರು ಬೂತ್‌ಗಳಲ್ಲಿ ಬೇರೆ ಬೇರೆ ಸಮುದಾಯಗಳಿಗೆ ಆದ್ಯತೆ ನೀಡಿ ಆಯ್ಕೆ ನಡೆದಿದ್ದು 188 ಬೂತ್‌ನಲ್ಲಿ ಆದ್ಯತೆಯ ಅನುಸಾರವಾಗಿ ಪರಿಶಿಷ್ಟ ಜಾತಿಯ ವ್ಯಕ್ತಿಗೆ ನೀಡಬೇಕಿತ್ತು ಎಂದು ಹೇಳಿದರು. ಬೂತ್ 188ರಲ್ಲಿ ಪರಿಶಿಷ್ಟ ಜಾತಿಯ ಸುಮಾರು 200ಕ್ಕಿಂತಲೂ ಅಧಿಕ ಮತದಾರರಿದ್ದು ಅದನ್ನು ಪರಿಗಣಿಸಿ ಪರಿಶಿಷ್ಟ ಜಾತಿ ಸಮುದಾಯಕ್ಕೆ ನೀಡಬೇಕೆನ್ನುವುದು ನಮ್ಮ ಆಗ್ರಹವಾಗಿದೆ ಎಂದು ಹೇಳಿದರು.
ಕಾರ್ಯಕರ್ತರ ಆಕ್ರೋಶ:
ಬೂತ್ 188ರ ಅಧ್ಯಕ್ಷರನ್ನು ಕಾರ್ಯಕರ್ತರ ಅಭಿಪ್ರಾಯಕ್ಕೆ ವಿರುದ್ದವಾಗಿ ಆಯ್ಕೆ ಮಾಡಲಾಗಿದ್ದು ಕೂಡಲೇ ಅದನ್ನು ಬದಲಾವಣೆಗೊಳಿಸಬೇಕೆಂದು ಸೇರಿದ್ದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಪಕ್ಷಕ್ಕಾಗಿ ನಾವು ರಾತ್ರಿ ಹಗಲು ದುಡಿಯುವಾಗ ನಮ್ಮ ಮಾತಿಗೆ ಬೆಲೆ ಕೊಟ್ಟು ನಮ್ಮ ಅಪೇಕ್ಷೆಯ ಅಧ್ಯಕ್ಷರನ್ನು ಆಯ್ಕೆ ಮಾಡಬೇಕಿತ್ತು, ಆದರೆ ಬೂತ್ 188ರ ಬಹುತೇಕ ಕಾಂಗ್ರೆಸ್ ಕಾರ್ಯಕರ್ತರ ವಿರೋಧ ಇದ್ದರೂ ನಮ್ಮ ಬೇಡಿಕೆಯನ್ನು ಕಡೆಗಣಿಸಿ ಅಧ್ಯಕ್ಷ ಆಯ್ಕೆ ನಡೆದಿರುವುದು ನಮಗೆ ತೀವ್ರ ಬೇಸರ ತಂದಿದೆ, ಕೂಡಲೇ ಬ್ಲಾಕ್ ಅಧ್ಯಕ್ಷರು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಈಗಿನ ಅಧ್ಯಕ್ಷರ ಬದಲಾವಣೆ ಮಾಡಬೇಕು ಎಂದು ಆಗ್ರಹಸಿದ ಕಾರ್ಯಕರ್ತರು ಒಂದು ವೇಳೆ ಬದಲಾವಣೆ ಮಾಡದೇ ಇದ್ದಲ್ಲಿ ನಾವು ಪಕ್ಷದ ಕಾರ್ಯಚಟುವಟಿಕೆಗಳಿಂದ ತಟಸ್ಥರಾಗುವುದಾಗಿಯೂ ಹೇಳಿದರು.
ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಾದ ನೌಶಾದ್ ತಿಂಗಳಾಡಿ, ಶಾಫಿ ಬೇರಿಕೆ, ವಸಂತ ತಿಂಗಳಾಡಿ, ಶಕೀಲ್ ಬೇರಿಕೆ, ಶರೀಫ್ ತಿಂಗಳಾಡಿ, ರಾಜೇಶ್ ಟಿ.ಸಿ, ನಾರಾಯಣ, ವಸಂತ, ರಾಜು, ಕೃಷ್ಣಪ್ಪ, ಬಾಲಕೃಷ್ಣ, ವಿಶ್ವ, ರಫೀಕ್ ತ್ಯಾಗರಾಜೆ, ಹಾರಿಸ್ ತೋಟ, ಹಮೀದ್ ಟಿ.ಎಸ್, ಆದಂ ಕುಂಞಿ ಬೇರಿಕೆ ಇಬ್ರಾಹಿಂ ತೋಟ, ಶರೀಫ್ ಬೇರಿಕೆ, ಅಬ್ದುಲ್ ಸಯೀದ್ ಉಪಸ್ಥಿತರಿದ್ದರು.