ಉಪ್ಪಿನಂಗಡಿ: ಸಾರ್ವಜನಿಕ ಕೆರೆಯಲ್ಲಿ ಈಜಲು ಹೋಗಿದ್ದ ವ್ಯಕ್ತಿಯೋರ್ವರು ಈಜು ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಜೂ.15ರಂದು ಸಂಜೆ ಉಪ್ಪಿನಂಗಡಿ ಸಮೀಪ, ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಪೊಸತ್ತಕೆರೆ ಎಂಬಲ್ಲಿ ನಡೆದಿದೆ.
ಮೂಲತ: ಕೇರಳ ರಾಜ್ಯದ ಮಲಪುರಂ ಜಿಲ್ಲೆಯ ನಿಲಂಬೂರು ತಾಲೂಕಿನ ವಝಿಕ್ಕಡವು ನಿವಾಸಿ ಸುಧೀಂದ್ರನ್(38ವ.)ಮೃತಪಟ್ಟ ದುರ್ದೈವಿಯಾಗಿದ್ದಾರೆ. ಸುಧೀಂದ್ರನ್ ಅವರು 6 ತಿಂಗಳಿನಿಂದ ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಟಿಡಿಎಸ್ ಫರ್ನೀಚರ್ ಎಂಬ ಮರದ ಪೀಠೋಪಕರಣ ಮಾಡುವ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಜೂ.15ರಂದು ಕೆಲಸಕ್ಕೆ ರಜೆ ಇದ್ದ ಕಾರಣ ಸಂಜೆ 6.30ಕ್ಕೆ ಸುಧೀಂದ್ರನ್, ಅವರ ಸಂಬಂಧಿಕ ರತೀಶ್ ಟಿ. ಮತ್ತು ಇತರರು ಸೇರಿ ಸಮೀಪದ ಬಾರ್ಯ ಗ್ರಾಮದ ಪೊಸತ್ತಕೆರೆ ಎಂಬಲ್ಲಿರುವ ಸಾರ್ವಜನಿಕ ಕೆರೆಯಲ್ಲಿ ಈಜಲು ಹೋಗಿದ್ದು, ಆ ಸಮಯ ಸುಧೀಂದ್ರನ್ ಈಜು ಬಾರದೇ ನೀರಿನಲ್ಲಿ ಆಕಸ್ಮಿಕವಾಗಿ ಮುಳುಗಿದ್ದು, ಕೂಡಲೇ ಎಲ್ಲರೂ ಸೇರಿ ಆತನನ್ನು ನೀರಿನಿಂದ ಮೇಲಕ್ಕೆತ್ತಿ , ಚಿಕಿತ್ಸೆಯ ಬಗ್ಗೆ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆ ತಂದು, ಅಲ್ಲಿಂದ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಪುತ್ತೂರಿನ ತಾಲೂಕು ಸರಕಾರಿ ಆಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗಿದ್ದು ಅಲ್ಲಿಯ ವೈದ್ಯರು ಪರೀಕ್ಷಿಸಿ ಸುಧೀಂದ್ರನ್ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂದು ವರದಿಯಾಗಿದೆ. ಈ ಬಗ್ಗೆ ರತೀಶ್ ಟಿ.ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣಾ ಯುಡಿಆರ್ ನಂಬ್ರ: 33/2025 ಕಲಂ: 194 BNS ಯಂತೆ ಪ್ರಕರಣ ದಾಖಲಾಗಿರುತ್ತದೆ.