ಕೊಯಿಲ: ಟ್ಯಾಂಕ್ ಕುಸಿತವಾಗುವ ಭೀತಿ – ಮನೆ ಖಾಲಿ ಮಾಡುವಂತೆ ಗ್ರಾ.ಪಂ.ನೋಟಿಸ್

0

ರಾಮಕುಂಜ: ಕೊಯಿಲ ಜನತಾ ಕಾಲೋನಿಯಲ್ಲಿ ಕೊಯಿಲ ಗ್ರಾ.ಪಂ.ಅಧೀನದಲ್ಲಿರುವ ಕುಡಿಯುವ ನೀರು ಸರಬರಾಜು ಯೋಜನೆಯ ಬೃಹತ್ ಟ್ಯಾಂಕ್ ಕುಸಿತವಾಗುವ ಸಂಭವದ ಹಿನ್ನೆಲೆಯಲ್ಲಿ ಟ್ಯಾಂಕ್ ಸಮೀಪದಲ್ಲಿರುವ 6 ಮನೆಯವರಿಗೆ ಮನೆ ಖಾಲಿ ಮಾಡುವಂತೆ ಕೊಯಿಲ ಗ್ರಾ.ಪಂ.ನೋಟಿಸ್ ನೀಡಿದೆ.


1996ರಲ್ಲಿ ವಿಶ್ವ ಬ್ಯಾಂಕ್ ಕುಡಿಯುವ ನೀರು ಯೋಜನೆಯಡಿ ಈ ಟ್ಯಾಂಕ್ ನಿರ್ಮಾಣವಾಗಿದೆ. 50 ಸಾವಿರ ಲೀಟರ್ ಸಾಮರ್ಥ್ಯವನ್ನು ಈ ಟ್ಯಾಂಕ್ ಹೊಂದಿದೆ. ಟ್ಯಾಂಕ್‌ನ ಬುಡದಿಂದಲೇ 15 ಅಡಿ ಎತ್ತರದಲ್ಲಿ ಧರೆ ಇದ್ದು, ಭಾರೀ ಮಳೆಗೆ ಈಗಾಗಲೇ 8 ಅಡಿ ತನಕ ಧರೆ ಕುಸಿದು ಬಿದ್ದಿದೆ. ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಇಲ್ಲಿ ಅಪಾಯ ಎದುರಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಗ್ರಾ.ಪಂ.ಈ ಕ್ರಮ ಕೈಗೊಂಡಿದ್ದು ಮನೆ ಖಾಲಿ ಮಾಡಿ ಕಾಳಜಿ ಕೇಂದ್ರಕ್ಕೆ ಹೋಗುವಂತೆ ಸೂಚನೆ ನೀಡಿದೆ.

ಮನೆಯವರ ಅಸಹಾಯಕತೆ:
ಗ್ರಾ.ಪಂ.ನೋಟಿಸ್ ನೀಡಿರುವುದಕ್ಕೆ ಸ್ಥಳೀಯರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿ ಹಾಲು ಕರೆಯುವ ದನ-ಕರು ಇದೆ. ಶಾಲೆಗೆ ಹೋಗುವ ಮಕ್ಕಳಿದ್ದಾರೆ. ಅವರನ್ನು ಕರೆದುಕೊಂಡು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸುತ್ತಿದ್ದಾರೆ. ಟ್ಯಾಂಕ್ ನೆಲಸಮ ಮಾಡಿ, ಆ ವೇಳೆ ನಾವು 2 ಅಥವಾ 3 ದಿನ ನೆಂಟರ ಮನೆಗೆ ಹೋಗಿಯಾದರೂ ಉಳಿದುಕೊಂಡು ಬರುತ್ತೇವೆ. ಆದರೆ ಪೂರ್ಣ ಪ್ರಮಾಣದಲ್ಲಿ ಮನೆ ಖಾಲಿ ಮಾಡಿ ಹೋಗುವುದಕ್ಕೆ ನಮ್ಮಿಂದ ಸಾಧ್ಯವಿಲ್ಲ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುಂದೆ ಸ್ಥಳೀಯರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿ ಸಂಯೋಜಕರ ಭೇಟಿ:
ಜೂ.18ರಂದು ಸ್ಥಳಕ್ಕೆ ಕೆಪಿಸಿಸಿ ಸಂಯೋಜಕ ಕೃಷ್ಣಪ್ಪ ರಾಮಕುಂಜ ಭೇಟಿ ನೀಡಿ ಪರಿಶೀಲನೆ ನಡೆಸಿ, ಹಿರಿಯ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸಮಸ್ಯೆಯ ಗಂಭೀರತೆಯನ್ನು ತಿಳಿಸಿದರು. ಸ್ಥಳೀಯ ನಿವಾಸಿಗಳಾದ ಆಮಿನಮ್ಮ, ಮಹಮ್ಮದ್ ರಫೀಕ್, ಮೈಮುನಾ ಅಬ್ಬಾಸ್, ಅಬೂಬಕ್ಕರ್ ಸಿದ್ದಿಕ್, ಅಶ್ರಫ್‌ರವರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಕೃಷ್ಣಪ್ಪ ಅವರಿಗೆ ಅಹವಾಲು ಸಲ್ಲಿಸಿದರು. ಕಡಬ ತಾಲೂಕು ಅಕ್ರಮ-ಸಕ್ರಮ ಸಮಿತಿ ಸದಸ್ಯ ಹೆಚ್. ಆದಂ, ಸಾಮಾಜಿಕ ಕಾರ‍್ಯಕರ್ತೆ ಸಲೀಕ ಕೆಮ್ಮಾರ, ಪಂಚಾಯಿತಿ ಸದಸ್ಯರಾದ ನಝೀರ್ ಪೂರಿಂಗ, ಸಜ್ಜದ್, ಸಫೀಯ, ಪಂಚಾಯಿತಿ ಕಾರ‍್ಯದರ್ಶಿ ಪಮ್ಮ, ಪುನರ್ವಸತಿ ಕಾರ‍್ಯಕರ್ತೆ ಆತಿಕಮ್ಮ ಮೊದಲಾದರವರು ಈ ವೇಳೆ ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿಗೆ ಮನವಿ: ಕೃಷ್ಣಪ್ಪ
ಟ್ಯಾಂಕ್ ಅಪಾಯ ಸ್ಥಿಯಲ್ಲಿದೆ. ಅದರ ಪರಿಸರದಲ್ಲಿರುವವರಿಗೆ ಪಂಚಾಯಿತಿ ತೋರಿಸಿರುವ ದೂರದಲ್ಲಿರುವ ಕಾಳಜಿ ಕೇಂದ್ರಕ್ಕೆ ಹೋಗುವುದಕ್ಕೂ ಸಮಸ್ಯೆ ಇದೆ. ಈ ಬಗ್ಗೆ ಜಿಲ್ಲಾಧಿಕಾರಿಯವರೊಂದಿಗೆ ಮಾತನಾಡಿದ್ದು, ಶೀಘ್ರವಾಗಿ ಟ್ಯಾಂಕ್ ನೆಲಸಮಗೊಳಿಸುವ ಬಗ್ಗೆ ಅಗತ್ಯ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಕೃಷ್ಣಪ್ಪ ರಾಮಕುಂಜ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here