ದುಶ್ಚಟಕ್ಕೆ ದಾಸರಾಗದೇ ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕು- ಸುರೇಶ್ ರೈ ಸುಡಿಮುಳ್ಳು
ದುಶ್ಚಟ ಮುಕ್ತ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು- ಮಹೇಶ್ ಕೆ ಸವಣೂರು
ಕಾಣಿಯೂರು: ದುಶ್ಚಟ ಮುಕ್ತ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು. ತಂದೆ ತಾಯಿಯವರು ಕಂಡಿರುವ ಕನಸನ್ನು ನನಸು ಮಾಡಲು ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಕೇವಲ ವಿದ್ಯೆಯಲ್ಲಿ ರ‍್ಯಾಂಕ್ ಪಡೆದರೆ ಸಾಕಾಗುವುದಿಲ್ಲ, ಜೀವನದಲ್ಲಿಯೂ ರ‍್ಯಾಂಕ್ ಪಡೆದಾಗ ಮಾತ್ರ ಸಮಾಜದಲ್ಲಿ ಸತ್ಪ್ರಜೆಯಾಗಿ ಬಾಳಬಹುದು ಎಂದು ಕಡಬ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ನ ಅಧ್ಯಕ್ಷರು, ನ್ಯಾಯವಾದಿ ಆಗಿರುವ ಮಹೇಶ್ ಕೆ ಸವಣೂರು ಹೇಳಿದರು.
ಅವರು ಜೂ 28ರಂದು ಬೊಬ್ಬೆಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿಶ್ವ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಪ್ರಯುಕ್ತ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ದುಶ್ಚಟಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾ ಬೀರುತ್ತದೆ. ದುಶ್ಚಟ ಒಮ್ಮೆ ಆರಂಭವಾದರೆ ಬದುಕು ವಿನಾಶದ ಹಾದಿಯಲ್ಲಿ ಸಾಗುತ್ತದೆ ಇದರಿಂದ ವೈಯಕ್ತಿಕ ಜೀವನದ ಜೊತೆ ಜೊತೆಗೆ ಸಮಾಜದ ಸ್ವಾಸ್ಥ್ಯ ಸಹ ಹಾಳಾಗುತ್ತದೆ. ಹಾಗಾಗಿ ವಿದ್ಯಾರ್ಥಿ ಜೀವನದ ದೆಸೆಯಿಂದಲೇ ಉತ್ತಮ ಕ್ರಿಯಾಶೀಲ ಹವ್ಯಾಸಗಳನ್ನು ರೂಢಿಸಿಕೊಂಡು ಉತ್ತಮ ಸಮಾಜ ಕಟ್ಟುವ ಕಾರ್ಯಕ್ರಮಕ್ಕೆ ದೃಢ ಸಂಕಲ್ಪ ಕೈಗೊಳ್ಳಬೇಕು ಎಂದವರು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ದ. ಕ ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸುಡಿಮುಳ್ಳು ಮಾತನಾಡಿ, ದುಶ್ಚಟದ ದಾಸರಾಗದೇ ಜೀವನದಲ್ಲಿ ಉನ್ನತ ಸಾಧನೆ ಮಾಡಿ ಸಮಾಜಕ್ಕೆ ಕೀರ್ತಿ ತರುವಂತಹ ವಿದ್ಯಾರ್ಥಿಗಳು ನೀವಾಗಬೇಕು ಎಂದರು.
ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ಸುನೀತಾ ಗಣೇಶ್ ಅಧ್ಯಕ್ಷತೆ ವಹಿಸಿದ್ದರು. ಕಾಣಿಯೂರು ಕ್ಲಸ್ಟರ್ ಸಿ ಆರ್ ಪಿ ಯಶೋದರವರು ಶುಭಹಾರೈಸಿದರು. ಬೊಬ್ಬೆಕೇರಿ ಸ. ಹಿ. ಪ್ರಾ. ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಪೈಕ, ಎಸ್ ಡಿ ಎಂ ಸಿ ಉಪಾಧ್ಯಕ್ಷ ರಮೇಶ್ ಉಪ್ಪಡ್ಕ, ಹಿರಿಯ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಸುಕುಮಾರ್ ಕಲ್ಪಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಸ್ ಡಿ ಎಂ ಸಿ ಸದಸ್ಯ ಸುಧಾಕರ್ ಕಾಣಿಯೂರು, ಶಿಕ್ಷಕಿಯರಾದ ಗೀತಾ ಕುಮಾರಿ, ಶೋಭಿತಾ, ಸುರೇಖಾ, ಶೃತಿ, ದಿವ್ಯಾ, ಜಯಲತಾ, ಸುಶ್ಮಿತಾ ಅತಿಥಿಗಳನ್ನು ಗೌರವಿಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಾಲಾ ಮುಖ್ಯಗುರು ಶಶಿಕಲಾರವರು ಸ್ವಾಗತಿಸಿ, ಶಿಕ್ಷಕ ಜನಾರ್ದನ ಹೇಮಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.