ನಿಡ್ಪಳ್ಳಿ ಬಿಜೆಪಿ ಸುಳ್ಳುಗಳಿಗೆ ಕಾಂಗ್ರೆಸ್ ಉತ್ತರ ಜನ ಜಾಗೃತಿ

0

ಮೋದಿಗಾಗಿ ವೋಟು ಕೊಡಿ ಎಂದು ಹೇಳಿದವರು ಮೋದಿ ಏನು ಮಾಡಿದ್ದಾರೆ ಎಂಬುದನ್ನು ಜನತೆಗೆ ತಿಳಿಸಬೇಕುಲಾರೆನ್ಸ್

ಪುತ್ತೂರು: ಕಳೆದ ಹತ್ತು ವರ್ಷಗಳಿಂದ ಇಲ್ಲಿನ ಬಿಜೆಪಿಯವರು ಮೋದಿಗಾಗಿ ವೋಟು ಕೊಡಿ ಎಂದು ಪ್ರತೀ ಚುನಾವಣೆಯಲ್ಲಿ ಕೇಳುತ್ತಿದ್ದಾರೆ, ವೋಟು ಕೊಡಿ ಎಂದು ಕೇಳಿದವರು ಮೋದಿ ಏನು ಮಾಡಿದೆ ಎಂಬುದನ್ನು ಜನತೆಗೆ ತಿಳಿಸಬೇಕು ಎಂದು ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಲಾರೆನ್ಸ್ ಪ್ರಶ್ನಿಸಿದರು.


ಅವರು ನಿಡ್ಪಳ್ಳಿ ಗ್ರಾಪಂ ಕಚೇರಿ ಮುಂಭಾಗದಲ್ಲಿ ನಡೆದ ಬಿಜೆಪಿ ಸುಳ್ಳುಗಳಿಗೆ ಕಾಂಗ್ರೆಸ್ ಉತ್ತರ ಜನ ಜಾಗೃತಿ ಸಭೆಯಲ್ಲಿ ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದಾಗ ದೇಶದಲ್ಲಿ ಬಡತನ ಇತ್ತು, ಯಾವುದೇ ಮೂಲ ಭೂತ ಸೌಕರ್ಯ ಇರಲಿಲ್ಲ. ಸ್ವಾತಂತ್ರ್ಯದ ಬಳಿಕ ದೇಶದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ದೇಶವನ್ನು ಅಭಿವೃದ್ದಿಯತ್ತ ಕೊಂಡೊಯ್ದಿದೆ. ಇಲ್ಲಿ ಗ್ರಾಮ ಮಟ್ಟದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲೆ, ಅಂಗನವಾಡಿ, ರೇಶನ್ ವ್ಯವಸ್ಥೆ ಸೇರಿದಂತೆ ಎಲ್ಲವನ್ನೂ ಮಾಡಿದ್ದು ಕಾಂಗ್ರೆಸ್ ಆದರೆ ಕಳೆದ ಹತ್ತು ವರ್ಷದಲ್ಲಿ ಮೋದಿ‌ ಸರಕಾರ ಏನು ದೇಶಕ್ಕೆ ಕೊಡುಗೆ ನೀಡಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಸವಾಲು ಹಾಕಿದರು.

ಬಿಜೆಪಿ ಬಡವರ ವಿರೋಧಿಯಾಗಿದೆ
ಬಿಜೆಪಿ ಬಡವರ ವಿರೋಧಿಯಾಗಿದೆ. ಕಾಂಗ್ರೆಸ್ ನ ಪಂಚ ಗ್ಯಾರಂಟಿ ಬಡವರಿಗೆ ನೀಡಬಾರದು ಎಂದು ಬಿಜೆಪಿ ಪ್ರತಿಭಟನೆ ಮಾಡುತ್ತಿದೆ. ಉಚಿತ ಅಕ್ಕಿ ಕೊಡಬಾರದು, ಕರೆಂಟ್ ಕೊಡಬಾರದು, ಬಸ್ ಫ್ರೀ ಮಾಡಬಾರದು ಎಂಬುದೇ ಬಿಜೆಪಿ ನಿಲುವಾಗಿದೆ. ಆದರೆ ಕಾಂಗ್ರೆಸ್ ಪಕ್ಷ ಬಿಜೆಪಿ ವಿರೋಧದ ನಡುವೆ ಅದನ್ನು ಜಾರಿ ಮಾಡಿ ಬಡವರಿಗೆ ನೆರವಾಗಿದೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆಯನ್ನು ಬಿಟ್ಟುಬಿಡಿ
ಬಿಜೆಪಿಯವರು ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿಯನ್ನು ದೂರುವುದಾದರೆ ಅದನ್ನು ಪಡೆದುಕೊಳ್ಳುವುದು ಬೇಡ. ಸರಕಾರದ ಯೋಜನೆಯ ಲಾಭ ಪಡೆದು ಬಳಿಕ ಅದನ್ನೇ ದೂರುವವರು ದಯಮಾಡಿ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಡಿ ಎಂದು ಹೇಳಿದರು. ಸರಕಾರವನ್ನು ನಿಂದಿಸುವ ಬಿಜೆಪಿಯವರು ಪಂಚ ಗ್ಯಾರಂಟಿ ಲಾಭವನ್ನು ಪಡೆಯುತ್ತಿರುವುದು ದೇವರು‌ ಮೆಚ್ಚುವ ಕೆಲಸವಲ್ಲ ಎಂದು ಹೇಳಿದರು.

ಅಭಿವೃದ್ದಿ ಕೆಲಸ ಕಂಡು ಕಂಗಾಲಾಗಿದ್ದಾರೆ: ಕೆ ಪಿ ಆಳ್ವ
ಪುತ್ತೂರು ಶಾಸಕ ಅಶೋಕ್ ರೈ ಅವರು ಎರಡು ವರ್ಷದಲ್ಲಿ 2008 ಕೋಟಿ ರೂ. ಅನುದಾನವನ್ನು ತಂದಿದ್ದಾರೆ. ಮೆಡಿಕಲ್ ಕಾಲೇಜು ಮಂಜೂರಾಗಿದೆ. ಶ್ರೀ‌ ಮಹಾಲಿಂಗೇಶ್ವರ ದೇವಸ್ಥಾನ‌, ಉಪ್ಪಿನಂಗಡಿ ಪಂಚಲಿಂಗೇಶ್ವರ ದೇವಸ್ಥಾನ, ಗ್ರಾಮೀಣ ರಸ್ತೆಗಳು ಅಭಿವೃದ್ದಿಯಾಗುತ್ತಿದೆ. ಇದನ್ನು ಕಂಡು ಬೆಚ್ಚಿದ ಬಿಜೆಪಿ ಸುಳ್ಳು ಹೇಳುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಇವರ ಸುಳ್ಳು ಪುತ್ತೂರಿನಲ್ಲಿ ನಡೆಯುವುದಿಲ್ಲ, ಅದಕ್ಕೆ ತಕ್ಕ ಉತ್ತರವನ್ನು ನೀಡುತ್ತಿದ್ದೇವೆ. ಮುಂದೆ ಇದೇ ರೀತಿಯ ಸುಳ್ಳನ್ನು ಮುಂದುವರೆಸಿದ್ದಲ್ಲಿ ಬೂತ್ ಗಳಿಗೆ ತೆರಳಿ ಬಿಜೆಪಿ ಸುಳ್ಳು ಬಂಡವಾಳವನ್ನು ಬಯಲು ಮಾಡುತ್ತೇವೆ ಎಂದು ಎಚ್ಚರಿಸಿದರು.

ನಿಡ್ಪಳ್ಳಿ ವಲಯ ಕಾಂಗ್ರೆಸ್ ಉಸ್ತುವಾರಿ ಪಿ ಜಿ ಭಟ್ ಮಾತನಾಡಿ, ಕೇಂದ್ರದ ಸರಕಾರ ಮಲತಾಯಿ ಧೋರಣೆಯನ್ನು ಮಾಡುತ್ತಿದ್ದು, ಅದರ ವಿರುದ್ದ ಬಿಜೆಪಿ ಪ್ರತಿಭಟನೆ ಮಾಡಬೇಕು. ನಮ್ಮ‌ ಕರ್ನಾಟಕಕ್ಕೆ ಬರಬೇಕಾದ ನಮ್ಮ ಪಾಲಿನ ಹಣವನ್ನು ಕೇಂದ್ರದ ಬಿಜೆಪಿ ಸರಕಾರ ಕೊಡುತ್ತಿಲ್ಲ. ಇದು ಯಾವ ನ್ಯಾಯ, ಈ ಬಗ್ಗೆ ಬಿಜೆಪಿ ಯಾಕೆ ಮೌನವಾಗಿದೆ? ಇಲ್ಲಿನವರಿಗೆ ಸೇರಬೇಕಾದ ಎಲ್ಲಾ ಸವಲತ್ತುಗಳು ನಮಗೆ ಸಿಗುವಂತಾಗಬೇಕು. ಕಾಂಗ್ರೆಸ್ ಯಾವುದೇ ಮಲತಾಯಿ ಧೋರಣೆ ಮಾಡದೆ ಬಿಜೆಪಿಯವರಿಗೂ ಪಂಚ ಗ್ಯಾರಂಟಿ ಸ್ಕೀಂ ನೀಡುತ್ತಿದೆ. ಇದು ಕಾಂಗ್ರೆಸ್ ನ ಸಮಪಾಲು ಸಮಬಾಳು ನೀತಿಯಾಗಿದೆ. ಈ ನೀತಿಯನ್ನು ಬಿಜೆಪಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.


ಗ್ಯಾರಂಟಿ ಯೋಜನೆ ವಿರುದ್ದ ಬಿಜೆಪಿ ಪ್ರತಿಭಟನೆ ಮಾಡಿತ್ತು: ಶ್ರೀಪ್ರಸಾದ್
ಪಂಚ ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡದಂತೆ ಬಿಜೆಪಿ ಪ್ರತಿಭಟನೆ ಮಾಡಿತ್ತು. ರಾಜ್ಯ ಸರಕಾರ ದಿವಾಳಿಯಾಗಿದೆ ಎಂದು ಹೇಳುವ ಬಿಜೆಪಿಯವರು ಗ್ಯಾರಂಟಿಯನ್ನು ಪಡೆದುಕೊಳ್ಳದೆ ಸರಕಾರಕ್ಕೆ ನೆರವಾಗಬೇಕು ಎಂದು ಹೇಳಿದರು. ಬಿಜೆಪಿಯವರು ಎಲ್ಲಿ ಯಾವುದೇ ಸಭೆ ನಡೆದರೂ ಅಲ್ಲಿ ಧರ್ಮ ದ್ವೇಷದ ಮಾತುಗಳೇ ವಿನಾ ಅಭಿವೃದ್ದಿ ವಿಚಾರಗಳೇ ಇಲ್ಲ ಎಂದು ರಾಜ್ಯ ಯುವ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಶ್ರೀ ಪ್ರಸಾದ್ ಪಾಣಾಜೆ ಹೇಳಿದರು.

ಮೋದಿ ಕೆಲಸ ಮಾಡದಿದ್ದರೆ ನೆಹರೂ ಮೇಲೆ ಗೂಬೆ ಕೂರಿಸ್ತಾರೆ:
ಪ್ರಧಾನಿ ನರೇಂದ್ರ ಮೋದಿಯವರು ಯಾವುದೇ ಅಭಿವೃದ್ದಿ ಕೆಲಸ ಮಾಡಿಲ್ಲ, ಈ ಬಗ್ಗೆ ಜನ ಪ್ರಶ್ನಿಸಿದರೆ ನೆಹರೂ ಮೇಲೆ ಗೂಬೆ ಕೂರಿಸುವ ಮೋದಿ ಭಕ್ತರೇ ಪ್ರಧಾನಿ ಮೋದಿ ಮಾಡಿದ ಸಾಧನೆ ಅಥವಾ ಜನ ಸಾಮಾನ್ಯರಿಗೆ ಮಾಡಿದ ಒಂದಾದರೂ ಯೋಜನೆಯನ್ನು ಜನರ ಮುಂದೆ ತಿಳಿಸಿ ಎಂದು ಗ್ಯಾರಂಟಿ ಸಮಿತಿ ಸದಸ್ಯ ಸಂತೋಷ್ ಭಂಡಾರಿ‌ ಚಿಲ್ಮೆತ್ತಾರು ವಿನಂತಿಸಿದರು.


ರೈಲು ಬಿಡುವುದೇ ಬಿಜೆಪಿ ಜಾಯಮಾನವಾಗಿದೆ. ದೇವಸ್ಥಾನದ ಜಾಗವನ್ನು ಒಳಹಾಕಿದ್ದ ಬಿಜೆಪಿಯವರು ಅವರ ವಶದಲ್ಲಿದ್ದ ದೇವರ ಜಾಗವನ್ನು ನಾವೇ ವಶಕ್ಕೆ ಪಡೆದಿದ್ದೇವೆ. ದೇವರ ಜಾಗವನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ವೇದಿಕೆಯಲ್ಲಿ ಯುವ ಕಾಂಗ್ರೆಸ್ ರಾಜ್ಯ ಪ್ರ.ಕಾರ್ಯದರ್ಶಿ ಶ್ರೀ ಪ್ರಸಾದ್ ಪಾಣಾಜೆ, ವಲಯ ಅಧ್ಯಕ್ಣ ಹರೀಶ್ ಕೋಟ್ಯಾನ್, ಗ್ಯಾರಂಟಿ‌ ಸಮಿತಿಯ ವಿಶ್ವಜಿತ್ ಅಮ್ಮುಂಜೆ, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಬ್ಲಾಕ್ ಕಾರ್ಯದರ್ಶಿ ಶರೂನ್ ಸಿಕ್ವೆರಾ, ಮುಂಡೂರು ವಲಯ ಅಧ್ಯಕ್ಷ ಪ್ರವೀಣ್ ಆಚಾರ್ಯ, ಆರ್ಯಾಪು ವಲಯ ಅಧ್ಯಕ್ಷ ಗಿರೀಶ್ ರೈ, ಎಸ್ ಟಿ ಘಟಕದ ಮಾಜಿ ಅಧ್ಯಕ್ಷ ಮಹಾಲಿಂಗ ನಾಯ್ಕ, ಸತೀಶ್ ರೈ ನಿಡ್ಪಳ್ಳಿ, ಗ್ರಾ ಪಂ ಸದಸ್ಯ ಸತೀಶ್ ರೈ ನೆಲ್ಲಿಕಟ್ಟೆ, ಅವಿನಾಶ್, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here