ಸೌತಡ್ಕ ದೇವಸ್ಥಾನದ ಹುಂಡಿ ಹಣ ಎಣಿಕೆ ವೇಳೆ ನಂಬಿಕೆ ದ್ರೋಹ ಆರೋಪ : ಕೆನರಾ ಬ್ಯಾಂಕ್ ಕೊಕ್ಕಡ ಶಾಖಾ ಸಿಬ್ಬಂದಿ ವಿರುದ್ಧ ಕೇಸು ದಾಖಲು

0

ನೆಲ್ಯಾಡಿ: ಕೊಕ್ಕಡ ಗ್ರಾಮದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಹುಂಡಿ ಹಣ ಎಣಿಕೆ ಸಂದರ್ಭದಲ್ಲಿ ಕೆನರಾ ಬ್ಯಾಂಕ್‌ನ ಕೊಕ್ಕಡ ಶಾಖಾ ಸಿಬ್ಬಂದಿ ಗಣೇಶ ನಾಯ್ಕ್ ಎಂಬವರು ನಂಬಿಕೆ ದ್ರೋಹ ಎಸಗಲು ಪ್ರಯತ್ನಿಸಿದ್ದಾರೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಅವರು ನೀಡಿದ ದೂರಿನಂತೆ ಅಪಾದಿತ ಗಣೇಶ ನಾಯ್ಕ್ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.


ಜೂ.20ರಂದು ಬೆಳಿಗ್ಗೆ ದೇವಸ್ಥಾನದ ಸಮಿತಿ ಸದಸ್ಯರ ಸಮಕ್ಷಮ ದೇವಳದ ಕಾರ್ಯನಿರ್ವಹಣಾಧಿಕಾರಿ, ಕೆನರಾ ಬ್ಯಾಂಕ್ ಕೊಕ್ಕಡ ಶಾಖೆಯ ಸಿಬ್ಬಂದಿಗಳಾದ ಮ್ಯಾಥ್ಯು, ಗಣೇಶ ನಾಯ್ಕ ಹಾಗೂ ಜಿಲ್ಲಾಧಿಕಾರಿಯವರ ಆದೇಶದನ್ವಯ ಹಿಂದೂ ಧಾರ್ಮಿಕ ದತ್ತಿ ಇಲಾಖಾ ವತಿಯಿಂದ ಜಿಲ್ಲಾಧಿಕಾರಿಯವರ ಕಚೇರಿಯಿಂದ ನಿಯೋಜಿತರಾದ ಸಿಬ್ಬಂದಿ ಮತ್ತು ದೇವಸ್ಥಾನದ ವತಿಯಿಂದ ಕರೆಸಲ್ಪಟ್ಟ ಸುಮಾರು 42 ಜನ ಸ್ವಯಂ ಸೇವಕರು ಹಾಗೂ ಶ್ರೀ ದೇವಾಲಯದ 20ಕ್ಕೂ ಹೆಚ್ಚಿನ ಸಿಬ್ಬಂದಿಗಳೊಂದಿಗೆ ಹುಂಡಿ ಎಣಿಕೆ ನಡೆದಿರುತ್ತದೆ. ಈ ಸಂದರ್ಭದಲ್ಲಿ ಅಲ್ಲಿ ಸೇರಿದ ಎಲ್ಲರೂ ರೂ.500, 200, 100, 50,20 ಮತ್ತು 10ರ ನೋಟುಗಳನ್ನು ವರ್ಗಾವಾರು ವಿಂಗಡಣೆ ಮಾಡಿ ಜೋಡಿಸಿ ಇಡುವ ಕೆಲಸ ಮಾಡಿದ್ದು, ಆ ಸಮಯ ಗಣೇಶ ನಾಯ್ಕ್ ಹುಂಡಿ ಕಾಣಿಕೆ ಹಣದ ಎಣಿಕೆಯ ಸಂದರ್ಭದಲ್ಲಿ ಕೆಲವೊಂದು ನೋಟುಗಳನ್ನು ಬಂಡಲ್‌ಗೆ ಹೆಚ್ಚು ಸೇರಿಸುತ್ತಿರುವ ಬಗ್ಗೆ ಸಂಶಯ ಬಂದ ಹಿನ್ನೆಲೆಯಲ್ಲಿ ಲೆಕ್ಕ ಮಾಡಿ ಪ್ಯಾಕ್ ಮಾಡಿಟ್ಟ ಹಣದ ಒಂದು ಬಂಡಲ್ ತೆಗೆದು ಎಣಿಸಿದಾಗ ಅದರಲ್ಲಿ ಹೆಚ್ಚುವರಿ ನೋಟುಗಳು ಇರುವುದು ಕಂಡುಬಂದಿತ್ತು. ಆ ಬಳಿಕ ಲೆಕ್ಕ ಮಾಡಿ ಇಟ್ಟ ಎಲ್ಲಾ ಹಣದ ಬಂಡಲ್‌ಗಳನ್ನು ತೆಗೆದು ಎಣಿಸಿದಾಗ ಒಟ್ಟು 40 ಸಾವಿರ ರೂ.ಹೆಚ್ಚುವರಿ ಹಣ ಇರುವುದು ಪತ್ತೆಯಾಗಿದೆ. ಅಪಾದಿತ ಗಣೇಶ್ ನಾಯ್ಕ್ ಈ ರೀತಿಯಾಗಿ ದೇವಳಕ್ಕೆ ವಂಚಿಸುವ ಮೂಲಕ ನಂಬಿಕೆ ದ್ರೋಹ ಎಸಗಲು ಪ್ರಯತ್ನಿಸಿರುವುದು ಕಂಡು ಬರುತ್ತದೆ ಎಂದು ಸುಬ್ರಹ್ಮಣ್ಯ ಶಬರಾಯ ಅವರು ದೂರು ನೀಡಿದ್ದರು. ಈ ದೂರಿನಂತೆ ಧರ್ಮಸ್ಥಳ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ದೇವಸ್ಥಾನದ ದೂರಿನ ಹಿನ್ನೆಲೆಯಲ್ಲಿ ಅಪಾದಿತ ಕೆನರಾ ಬ್ಯಾಂಕ್ ಕೊಕ್ಕಡ ಶಾಖಾ ಸಿಬ್ಬಂದಿ ಗಣೇಶ ನಾಯ್ಕ್ ಅವರನ್ನು ಈಗಾಗಲೇ ಸೇವೆಯಿಂದ ವಜಾಗೊಳಿಸಲಾಗಿದೆ.

LEAVE A REPLY

Please enter your comment!
Please enter your name here