ರೋಟರಿ ಕ್ಲಬ್ ಪುತ್ತೂರು : ಅಧ್ಯಕ್ಷ: ಡಾ.ಶ್ರೀಪ್ರಕಾಶ್ ಬಿ,ಕಾರ್ಯದರ್ಶಿ:ಪ್ರೊ|ಸುಬ್ಬಪ್ಪ ಕೈಕಂಬ,ಕೋಶಾಧಿಕಾರಿ:ಬಾಲಕೃಷ್ಣ ಆಚಾರ್ಯ

0

ಪುತ್ತೂರು: ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ವ್ಯಾಪ್ತಿಯ ಜಿಲ್ಲೆಯ ಹಿರಿಯ ಕ್ಲಬ್ ಎನಿಸಿದ ಹಾಗೂ ಡೈಮಂಡ್ ಜ್ಯುಬಿಲಿ ವರ್ಷವನ್ನು ಆಚರಿಸುತ್ತಿರುವ ರೋಟರಿ ಕ್ಲಬ್ ಪುತ್ತೂರು ಇದರ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆದಿದೆ.


ಅಧ್ಯಕ್ಷರಾಗಿ ದರ್ಬೆ ಪ್ರಕಾಶ್ ಡೆಂಟಲ್ ಕ್ಲಿನಿಕ್‌ನ ವೈದ್ಯ ಡಾ.ಶ್ರೀಪ್ರಕಾಶ್ ಬಿ, ಕಾರ್ಯದರ್ಶಿಯಾಗಿ ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ|ಸುಬ್ಬಪ್ಪ ಕೈಕಂಬ, ಕೋಶಾಧಿಕಾರಿಯಾಗಿ ಕೆ.ಬಾಲಕೃಷ್ಣ ಆಚಾರ್ಯರವರು ಆಯ್ಕೆಯಾಗಿದ್ದಾರೆ. ಉಳಿದಂತೆ ಉಪಾಧ್ಯಕ್ಷ ಹಾಗೂ ನಿಯೋಜಿತ ಅಧ್ಯಕ್ಷರಾಗಿ ಪ್ರೊ|ದತ್ತಾತ್ರೇಯ ರಾವ್, ನಿಕಟಪೂರ್ವ ಅಧ್ಯಕ್ಷರಾಗಿ ಡಾ.ಶ್ರೀಪತಿ ರಾವ್, ಜೊತೆ ಕಾರ್ಯದರ್ಶಿ ಲೋವಲ್ ಮೇವಡ, ಬುಲೆಟಿನ್ ಎಡಿಟರ್ ವಿ.ಜೆ ಫೆರ್ನಾಂಡೀಸ್, ಸಾರ್ಜಂಟ್ ಎಟ್ ಆರ್ಮ್ಸ್ ಶ್ರೀಧರ್ ಆಚಾರ್ಯ, ಎಕ್ಸಿಕ್ಯೂಟಿವ್ ಕಾರ್ಯದರ್ಶಿ ಪ್ರೊ|ಝೇವಿಯರ್ ಡಿ’ಸೋಜ, ಕ್ಲಬ್ ಲರ್ನಿಂಗ್ ಫೆಸಿಲಿಟೇಟರ್ ರಾಮಕೃಷ್ಣ ಕೆ, ಕ್ಲಬ್ ಸರ್ವಿಸ್ ನಿರ್ದೇಶಕ ಹೆರಾಲ್ಡ್ ಮಾಡ್ತಾ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಗುರುರಾಜ್ ಕೊಳತ್ತಾಯ, ವೊಕೇಶನಲ್ ಸರ್ವಿಸ್ ನಿರ್ದೇಶಕ ಸತೀಶ್ ನಾಯಕ್, ಇಂಟರ್ನ್ಯಾಷನಲ್ ಸರ್ವಿಸ್ ನಿರ್ದೇಶಕ ಮನೋಜ್, ಯೂತ್ ಸರ್ವಿಸ್ ನಿರ್ದೇಶಕ ಸುಜಿತ್ ಡಿ.ರೈ, ಚೇರ್ಮನ್‌ಗಳಾಗಿ ಸುಧಾ ಎಸ್.ರಾವ್(ಪಲ್ಸ್ ಪೋಲಿಯೊ), ಪಿ.ಡಿ ಕೃಷ್ಣಕುಮಾರ್ ರೈ(ಟಿ.ಆರ್.ಎಫ್), ಪ್ರೊ|ಝೇವಿಯರ್ ಡಿ’ಸೋಜ(ಮೆಂಬರ್‌ಶಿಪ್ ಡೆವಲಪ್ಮೆಂಟ್), ಸತೀಶ್ ತುಂಬ್ಯ(ಪಬ್ಲಿಕ್ ಇಮೇಜ್), ಪ್ರೀತಾ ಎ(ಟೀಚ್), ಪ್ರೇಮಾನಂದ ಬಿ(ವಿನ್ಸ್), ಪ್ರಕಾಶ್ ಆಚಾರ್ಯ(ಐಟಿ, ವೆಬ್), ಡಾ.ಶ್ಯಾಮ್ ಬಿ(ಎಥಿಕ್ಸ್), ಡಾ.ಜೈದೀಪ್ ಎನ್.ಎ(ಜಿಲ್ಲಾ ಪ್ರಾಜೆಕ್ಟ್), ಉಮಾನಾಥ್ ಪಿ.ಬಿ(ಪ್ರೋಗ್ರಾಂ ಕಮಿಟಿ)ರವರು ಆಯ್ಕೆಯಾಗಿದ್ದಾರೆ.‌


ನೂತನ ಅಧ್ಯಕ್ಷರ ಪರಿಚಯ:
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮೇಜರ್ ಡೋನರ್ ಡಾ.ಶ್ರೀಪ್ರಕಾಶ್ ಬಿ.ರವರು ಬಂಗಾರಡ್ಕ ನಿವಾಸಿಯಾಗಿದ್ದು, 1993-98ರ ವರೆಗೆ ದಂತ ವೈದ್ಯಕೀಯ ವಿಜ್ಞಾನ ಪದವಿ(ಡೆಂಟಲ್ ಸೈನ್ಸ್)ಯನ್ನು ಧಾರವಾಡ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ದಂತ ಮಹಾ ವಿದ್ಯಾಲಯದಲ್ಲಿ ಗಳಿಸಿರುತ್ತಾರೆ. 1998ರಲ್ಲಿ ಪುತ್ತೂರಿನ ಏಳ್ಮುಡಿಯಲ್ಲಿ ಪ್ರಕಾಶ್ ಡೆಂಟಲ್ ಕ್ಲಿನಿಕ್‌ನ್ನು ಸ್ಥಾಪಿಸಿ, ಐದು ವರ್ಷಗಳ ಬಳಿಕ ದರ್ಬೆಗೆ ಸ್ಥಳಾಂತರಗೊಂಡಿತು. ರೋಟರಿ ಪುತ್ತೂರುಗೆ 2002ರಲ್ಲಿ ಸೇರ್ಪಡೆಗೊಂಡು ಸತತ ಐದು ವರ್ಷ ಸಮುದಾಯ ಸೇವಾ ವಿಭಾಗದಲ್ಲಿ ನಿರ್ದೇಶಕರಾಗಿ, 2022-23ರಲ್ಲಿ ಕಾರ್ಯದರ್ಶಿಯಾಗಿ ಅದೇ ವರ್ಷ ಅಂತರರಾಷ್ಟ್ರೀಯ ರೋಟರಿಯ ಮೇಜರ್ ಡೋನರ್ ಬಿರುದು, 2023-24ರಲ್ಲಿ ಸಂಘ ಸೇವಾ ನಿರ್ದೇಶಕರಾಗಿ, 2024-25ರಲ್ಲಿ ಉಪಾಧ್ಯಕ್ಷರಾಗಿರುತ್ತಾರೆ.2015-16ರಲ್ಲಿ ಸುಮಾರು 70 ಉಚಿತ ದಂತ ಚಿಕಿತ್ಸಾ ಶಿಬಿರಗಳನ್ನು ಪುತ್ತೂರು ತಾಲೂಕಿನ ಆಯ್ದ 94 ಶಾಲೆಗಳ 14 ಸಾವಿರ ವಿದ್ಯಾರ್ಥಿಗಳಿಗೆ ಪರೀಕ್ಷೆ ಹಾಗೂ ಚಿಕಿತ್ಸೆ ನೀಡಿ ಐಡಿಎ ಕರ್ನಾಟಕ ರಾಜ್ಯದ ಡಾ.ವಿ.ಪಿ ಜಾಯಡೆ ರಾಜ್ಯ ಪುರಸ್ಕಾರ, ರಾಷ್ಟ್ರೀಯ ಪುರಸ್ಕಾರ ಪಡೆದಿರುತ್ತಾರೆ. ಏಳನೇ ವಯಸ್ಸಿನಲ್ಲಿ ಯಕ್ಷಗಾನದ ಚೆಂಡೆ ನುಡಿಸುವಿಕೆ ಆಭ್ಯಸಿಸಿ ಇಂದಿನವರೆಗೂ ಹವ್ಯಾಸಿ ಯಕ್ಷಗಾನ ಹಿಮ್ಮೇಳ ವಾದಕರಾಗಿದ್ದಾರೆ. ಪ್ರಥಮ ಪಿಯುಸಿ ಸಂದರ್ಭದಲ್ಲಿ ಎನ್.ಸಿ.ಸಿ ಕೆಡೆಟ್ ಆಗಿದ್ದು ಪುತ್ತೂರಿನಿಂದ ಪಣಜಿಯವರೆಗೆ ಸೈಕ್ಲಿಂಗ್ ಪ್ರವಾಸದಲ್ಲಿ ಭಾಗವಹಿಸಿರುತ್ತಾರೆ. ಐಡಿಎ ಪುತ್ತೂರು ಶಾಖೆಯ ಮಾಜಿ ಅಧ್ಯಕ್ಷರಾಗಿ, ಡಾಕ್ಟರ್ಸ್ ಫೋರಂ ಪುತ್ತೂರು ಕಾರ್ಯದರ್ಶಿಯಾಗಿ ಸತತ ನಾಲ್ಕು ವರ್ಷಗಳ ಸೇವೆ, 2023-24ರಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾಗಿ, 2025ರಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸೇವೆ ನೀಡುತ್ತಿದ್ದಾರೆ. ಸುಮಾರು 30 ಬಾರಿ ರಕ್ತದಾನ ಮಾಡಿದ್ದು ಹಾಗೆಯೇ ನೇತ್ರದಾನ, ಕಿಡ್ನಿದಾನ, ದೇಹದಾನವನ್ನು ತನ್ನ ಮರಣಾನಂತರ ನೀಡಲು ಕರಾರುಪತ್ರ ಮಾಡಿರುತ್ತಾರೆ. ಮಹಾಬಲ ಲಲಿತಾ ಕಲಾ ಸಭಾವನ್ನು 2016ರಲ್ಲಿ ಸ್ಥಾಪಿಸಿ ಹಲವಾರು ಶಾಸ್ತ್ರೀಯ ಕಲೆಗಳ ಕಾರ್ಯಕ್ರಮ ನಡೆಸಿದ್ದು ಇವರು ಮೂಲತಃ ಕೃಷಿಕರಾಗಿದ್ದು ಪ್ರವೃತ್ತಿಯಿಂದ ದಂತ ವೈದ್ಯರಾಗಿದ್ದಾರೆ.


ನೂತನ ಕಾರ್ಯದರ್ಶಿ ಪರಿಚಯ:
ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಪ್ರೊ|ಸುಬ್ಬಪ್ಪ ಕೈಕಂಬರವರು ಮೂಲತಃ ಸುಬ್ರಹ್ಮಣ್ಯದ ಕೈಕಂಬದವರಾಗಿದ್ದು 30 ವರ್ಷಗಳಿಂದ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೋಧನಾ ಅನುಭವ, ಮಂಗಳೂರು, ಉಪ್ಪಿನಂಗಡಿ ಸರ್ಕಾರಿ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ, ಪ್ರಸ್ತುತ ಪುತ್ತೂರು ಜಿಡೆಕಲ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಂಗಳೂರು ವಿ.ವಿ ಸೆನೆಟ್ ಸದಸ್ಯರಾಗಿ ಆಗಿನ ರಾಜ್ಯಪಾಲ ಖುರ್ಷಿದ್ ಅಲಂ ಖಾನ್‌ರವರಿಂದ ನಾಮ ನಿರ್ದೇಶನಗೊಂಡು ಕರ್ತವ್ಯ ನಿರ್ವಹಿಸಿರುತ್ತಾರೆ. ಕರ್ನಾಟಕ ನಾಟಕ ಅಕಾಡೆಮಿಯ ನಾಮ ನಿರ್ದೇಶಕ ಸದಸ್ಯನಾಗಿ ಸೇವೆ ಸಲ್ಲಿಸಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದಾರೆ. ಜೆಸೀಸ್ ಅಧ್ಯಕ್ಷರಾಗಿ ಅನುಭವ, ಹಲವಾರು ಸಂಘಸಂಸ್ಥೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ನೂರಾರು ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಕೇಂದ್ರಿಯ ವಿದ್ಯಾಲಯ ಮಂಗಳೂರಿನ ಆಡಳಿತ ಮಂಡಳಿ ಸದಸ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನಗಳಲ್ಲಿ ಭಾಗವಹಿಸಿ ಪ್ರಬಂಧ ಮಂಡಿಸಿರುತ್ತಾರೆ. ರಂಗಭೂಮಿ, ಯಕ್ಷಗಾನ, ಸಾಹಿತ್ಯ, ಆಸಕ್ತಿಯ ಕ್ಷೇತ್ರಗಳಾಗಿದ್ದು ಕುವೆಂಪು ಭಾಷಾ ಪ್ರಾಧಿಕಾರದಿಂದ ಕನ್ನಡಕ್ಕೆ ಅನುವಾದಿತ ಕೃತಿ “ಅವಳಿ ವೀರರು” ಬಿಡುಗಡೆಗೊಂಡಿರುತ್ತದೆ. 1992ರಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಕಾರ್ಯಕ್ಕಾಗಿ “ಕರ್ನಾಟಕ ರಾಜ್ಯ ಪ್ರಶಸ್ತಿ” ಪಡೆದಿದ್ದು, ಪ್ರತಿಷ್ಠಿತ ರೋಟರಿ ಕ್ಲಬ್ ಪುತ್ತೂರು 2021ರಲ್ಲಿ ಸೇರ್ಪಡೆಗೊಂಡು, ಸಾಂಸ್ಕೃತಿಕ ಸಮಿತಿ, ಕಾರ್ಯಕ್ರಮ ಸಮಿತಿ ಸಭಾಪತಿಯಾಗಿ ಹಾಗೂ ಜತೆ ಕಾರ್ಯದರ್ಶಿಯಾಗಿ ಅನುಭವ ಹೊಂದಿದ್ದಾರೆ.


ನೂತನ ಕೋಶಾಧಿಕಾರಿ ಪರಿಚಯ:
ನೂತನ ಕೋಶಾಧಿಕಾರಿಯಾಗಿ ಆಯ್ಕೆಯಾದ ಬಾಲಕೃಷ್ಣ ಆಚಾರ್ಯರವರು ನಿವೃತ್ತ ಬ್ಯಾಂಕ್ ಅಧಿಕಾರಿಯಾಗಿದ್ದು 2009ರಲ್ಲಿ ರೋಟರಿಗೆ ಸೇರ್ಪಡೆಯಾದರು. ಓದುವುದರಲ್ಲಿ ಉತ್ಸಾಹಿಯಾಗಿದ್ದು ಇಂಗ್ಲಿಷ್, ಹಿಂದಿ, ತೆಲುಗು ಚಲನಚಿತ್ರಗಳು, ಹಾಡುಗಳು, ಸಂಗೀತ, ಹಾಡುಗಾರಿಕೆ, ಕ್ರಿಕೆಟ್, ಟೆನಿಸ್‌ನಲ್ಲಿ ಒಲವು. ಅಂಚೆ ಚೀಟಿ ಸಂಗ್ರಹದ ಹವ್ಯಾಸಗಳಾಗಿವೆ.

ಜು.4: ಪದ ಪ್ರದಾನ..
ಕ್ಲಬ್ ನ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭವು ಪುತ್ತೂರು ಹೊರ ವಲಯದ ಮರೀಲು ದಿ ಪುತ್ತೂರು ಕ್ಲಬ್ ನಲ್ಲಿ ಜು.4 ರಂದು ಸಂಜೆ ಜರಗಲಿದೆ. ಕ್ಲಬ್ ಮಾತೃಸಂಸ್ಥೆ ರೋಟರಿ ಕ್ಲಬ್ ಮಂಗಳೂರು ಇದರ ಅಧ್ಯಕ್ಷ ವಿನೋದ್ ಆರಾನ್ಹಾರವರು ನೂತನ ಪದಾಧಿಕಾರಿಗಳಿಗೆ ಪದ ಪ್ರದಾನವನ್ನು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಧಾರವಾಡ ಎಸ್.ಡಿ.ಎಂ ಕಾಲೇಜು ಆಫ್ ಡೆಂಟಲ್ ಸೈನ್ಸ್ ನ ನಿವೃತ್ತ ಪ್ರೊ|ಕೆ.ಎಚ್ ಕಿದಿಯೂರು, ರೋಟರಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ಬಾಲಕೃಷ್ಣ ರೈ, ರೋಟರಿ ವಲಯ ಸೇನಾನಿ ಉಮಾನಾಥ್ ಪಿ.ಬಿ.ರವರು ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here