ಕ್ಷೇತ್ರದ 13 ಸರಕಾರಿ ಶಾಲೆಗಳಲ್ಲಿ ಆ.ಮಾ ತರಗತಿ ಆರಂಭಿಸಲು ಸರಕಾರದಿಂದ ಆದೇಶ

0

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 13 ವಿವಿಧ ಸರಕಾರಿ ಹಿ ಪ್ರಾ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ನಡೆಸಲು ಸರಕಾರದಿಂದ ಅನುಮತಿ ದೊರಕಿದ್ದು ಈ ಬಗ್ಗೆ ಆದೇಶ ಹೊರಡಿಸಲಾಗಿದೆ.


ಪುತ್ತೂರು ತಾಲೂಕಿನ ವಿವಿಧ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗಳಿಲ್ಲದ ಕಾರಣಕ್ಕೆ ಬಹು ಕಡೆಗಳಿಂದ ತರಗತಿ ಆರಂಭಕ್ಕೆ ಬೇಡಿಕೆ ಬಂದಿತ್ತು. ಪೋಷಕರಿಂದ ಬಂದ ಬೇಡಿಕೆಯನುಸಾರವಾಗಿ ಶಾಸಕ ಅಶೋಕ್ ರೈ ಅವರು ಆಂಗ್ಲ ಮಾಧ್ಯಮ ತರಗತಿಗೆ ಅನುಮತಿ ನೀಡುವಂತೆ ಶೈಕ್ಷಣಿಕ ವರ್ಷ ಆರಂಭಕ್ಕೆ ಮೊದಲು ಮನವಿ ಮಾಡಿ ಸರಕಾರಕ್ಕೆ ಆಗ್ರಹಿಸಿದ್ದರು.
ಅದರಂತೆ ಸರಕಾರಿ ಹಿ ಪ್ರಾ ಶಾಲೆ ಕೈಕಾರ, ನರಿಮೊಗರು, ಭಕ್ತಕೋಡಿ, ಕೆಮ್ಮಾಯಿ, ಪೆರ್ಲಂಪಾಡಿ, ನೆಟ್ಟಣಿಗೆ ಮುಡ್ನೂರು, ಪಾಪೆಮಜಲು, ಮುಂಡೂರು, ಪಾಣಾಜೆ, ವಿಟ್ಲ ಚಂದಳಿಕೆ, ಕೆದಿಲ, ಪಾಟ್ರಕೋಡಿ ಹಾಗೂ ಬೊಳಂತಿಮೊಗ್ರು ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗೆ ಅನುಮತಿ ನೀಡಿ ಸರಕಾರ ಆದೇಶವನ್ನು ಹೊರಡಿಸಿದೆ.

ಒಂದನೆ ತರಗತಿ ಆರಂಭ
ಸರಕಾರದ ಆದೇಶದಂತೆ 13 ಶಾಲೆಗಳಲ್ಲಿ ಈ ಬಾರಿಯ ಶೈಕ್ಷಣಿಕ ವರ್ಷದಿಂದಲೇ ಒಂದನೇ ತರಗತಿ ಆಂಗ್ಲ ಮಾಧ್ಯಮದಲ್ಲಿ ಪ್ರಾರಂಭವಾಗಲಿದೆ. ಈಗಾಗಲೇ ಈ ಶಾಲೆಗಳಲ್ಲಿ ಎಲ್‌ಕೆಜಿ ಯುಕೆಜಿ ತರಗತಿಗಳು ನಡೆಯುತ್ತಿದ್ದವು. ಯುಕೆಜಿ ಮುಗಿಸಿದ ವಿದ್ಯಾರ್ಥಿಗಳನ್ನು ಒಂದನೇ ತರಗತಿಗೆ ದಾಖಲಾತಿ ಮಾಡಿದ್ದರೂ ಸರಕಾರದಿಂದ ಆದೇಶ ಬಂದಿರಲಿಲ್ಲ ಮತ್ತು ಇಲಾಖೆಯಿಂದ ಅನುಮತಿಯೂ ದೊರೆತಿರಲಿಲ್ಲ. ಈ ಬಗ್ಗೆ ಪೋಷಕರು ಶಾಸಕ ಅಶೋಕ್ ರೈ ಅವರಲ್ಲಿ ಮನವಿ ಮಾಡಿಕೊಂಡಿದ್ದರು.

ಸರಕಾರಿ ಶಾಲೆಗಳಲ್ಲೂ ಆಂಗ್ಲ ಮಾಧ್ಯಮ ಪ್ರಾರಂಭಿಸುವುದು ಇಂದಿನ ಅನಿವಾರ್ಯತೆಯಾಗಿದೆ. ಕನ್ನಡದ ಜೊತೆಗೆ ಇಂಗ್ಲೀಷ್ ಕಲಿಯುವುದು ಇಂದಿನ ಕಾಲದ ಬೇಡಿಕೆಯಾಗಿದೆ. ಸರಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮೀಡಿಯಂ ಇಲ್ಲ ಎಂಬ ಕಾರಣಕ್ಕೆ ಅನೇಕ ಮಂದಿ ತಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ಕಳಿಹಿಸುವಂತಾಗಿತ್ತು. ನಮ್ಮ ಸರಕಾರಿ ಶಾಲೆಗಳಲ್ಲಿ ಈಗಾಗಲೇ ಎಲ್‌ಕೆಜಿ, ಯುಕೆಜಿ ತರಗತಿಗಳು ನಡೆಯುತ್ತಿದೆ. ಮೊದಲ ಹಂತದಲ್ಲಿ 13 ಶಾಲೆಗಳಿಗೆ ಅನುಮತಿ ಸಿಕ್ಕಿದೆ. ಶೀಘ್ರವೇ ಶಿಕ್ಷಕರ ನೇಮಕಾತಿಯೂ ನಡೆಯಲಿದೆ. ಬಡವರ ಮಕ್ಕಳೂ ಅದರಲ್ಲಿ ಸರಕಾರಿ ಶಾಲೆಯ ಮಕ್ಕಳು ಅಂಗ್ಲ ಮಾಧ್ಯಮದಿಂದ ವಂಚಿತರಾಗಬಾರದು. ಎಲ್ಲಾ ಮಕ್ಕಳೂ ಕನ್ನಡದ ಜೊತೆಗೆ ಇಂಗ್ಲೀಷ್ ಕಲಿಯಬೇಕು
ಅಶೋಕ್ ರೈ ಶಾಸಕರು, ಪುತ್ತೂರು

LEAVE A REPLY

Please enter your comment!
Please enter your name here