ಸಹನೆ, ಕರುಣೆಯನ್ನು ಮೈಗೂಡಿಸಿ ರೋಟರಿ ಯಶಸ್ವಿ-ಪ್ರೊ|ಕಿದಿಯೂರು
ಪುತ್ತೂರು:ಸಹನೆ ಹಾಗೂ ಕರುಣೆ ಎಂಬುದು ರೋಟರಿಯ ಧ್ಯೇಯವಾಗಿದ್ದು, ಇವುಗಳನ್ನು ಮೈಗೂಡಿಸಿಕೊಂಡಾಗ ಜೀವನಕ್ಕೆ ಬೆಲೆ ಬರುತ್ತದೆ. ರೋಟರಿ ಎಂಬುದು ಸರಕಾರಿ ಸಂಸ್ಥೆ ಅಲ್ಲ. ಅದು ಸರಕಾರೇತರ ಸಂಸ್ಥೆಯಾಗಿದ್ದು ಸಹನೆ ಹಾಗೂ ಕರುಣೆಯ ಮೂಲಕ ಮಾರಣಾಂತಿಕ ಪೋಲಿಯೊ ಅನ್ನು ವಿಶ್ವದಾದ್ಯಂತ ನಿರ್ಮೂಲನೆ ಮಾಡಿ ಪ್ರಶಂಸೆ ಗಿಟ್ಟಿಸಿರುವುದು ರೋಟರಿ ಹೆಗ್ಗಳಿಕೆಯಾಗಿದೆ ಎಂದು ಮುಖ್ಯ ಅತಿಥಿ ಹಾಗೂ ನೂತನ ಅಧ್ಯಕ್ಷ ಡಾ.ಶ್ರೀಪ್ರಕಾಶ್‌ರವರ ಗುರುಗಳಾಗಿರುವ ಧಾರವಾಡ ಎಸ್.ಡಿ.ಎಂ ಕಾಲೇಜು ಆಫ್ ಡೆಂಟಲ್ ಸೈನ್ಸ್‌ನ ನಿವೃತ್ತ ಪ್ರೊ|ಕೆ.ಎಚ್ ಕಿದಿಯೂರುರವರು ಹೇಳಿದರು.

ಜು.4 ರಂದು ಪುತ್ತೂರು ಹೊರ ವಲಯದ ಮರೀಲು ದಿ ಪುತ್ತೂರು ಕ್ಲಬ್ ಇಲ್ಲಿನ ದೀಪಂ ಸಭಾಂಗಣದಲ್ಲಿ ಸಂಜೆ ಜರಗಿದ ಜಿಲ್ಲೆಯ ಹಿರಿಯ ಕ್ಲಬ್ ಆಗಿರುವ ರೋಟರಿ ವಲಯ ಐದರ ರೋಟರಿ ಕ್ಲಬ್ ಪುತ್ತೂರು ಇದರ ೨೦೨೫-೨೬ನೇ ಸಾಲಿನ ನೂತನ ಪದಾಧಿಕಾರಿಗಳ ಪದ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ರೋಟರಿ ಆಚರಣೆ ನಿರಂತರತೆ, ಪುನರುಜ್ಜೀವನ-ವಿನೋದ್ ಆರಾನ್ಹ:
ರೋಟರಿ ಕ್ಲಬ್ ಪುತ್ತೂರು ಮಾತೃಸಂಸ್ಥೆ ರೋಟರಿ ಕ್ಲಬ್ ಮಂಗಳೂರು ಇದರ ಅಧ್ಯಕ್ಷ ವಿನೋದ್ ಆರಾನ್ಹಾರವರು ನೂತನ ಪದಾಧಿಕಾರಿಗಳಿಗೆ ಪದ ಪ್ರದಾನ ನೆರವೇರಿಸಿ ಮಾತನಾಡಿ, ರೋಟರಿಯು ಪದ ಪ್ರದಾನ ಆಚರಿಸುವುದು ಆಚರಣೆ ಅಲ್ಲ. ಅದು ನಿರಂತರತೆ ಹಾಗೂ ಪುನರುಜ್ಜೀವನವಾಗಿದೆ. ರೋಟರಿ ಪುತ್ತೂರುನಿಂದ ಸಮಾಜಕ್ಕೆ ಅನೇಕ ಶಾಶ್ವತ ಕೊಡುಗೆಗಳನ್ನು ಅರ್ಪಿಸಿ ಪ್ರಸ್ತುತ ಡೈಮಂಡ್ ವರ್ಷವನ್ನು ಆಚರಿಸುತ್ತಿರುವುದು ನಿಜಕ್ಕೂ ಮೈಲಿಗಲ್ಲು ಎನಿಸಿದೆ ಎಂದರು.
ರೋಟರಿಯಲ್ಲಿ ಸೇವೆ ಎನ್ನುವುದು ಫ್ರಂಟ್ ಸೀಟ್ ಆಗಿದೆ-ಬಾಲಕೃಷ್ಣ ಪೈ:
ರೋಟರಿ ಅಸಿಸ್ಟೆಂಟ್ ಗವರ್ನರ್ ಬಾಲಕೃಷ್ಣ ಪೈರವರು ಕ್ಲಬ್ ವಾರ್ಷಿಕ ಚಟುವಟಿಕೆಗಳನ್ನೊಳಗೊಂಡ ವಾರ್ಷಿಕ ವರ್ಷಧಾರೆ ಪುಸ್ತಕವನ್ನು ಅನಾವರಣಗೊಳಿಸಿ ಮಾತನಾಡಿ, ನಾವು ಸಮಾಜದಲ್ಲಿ ಹೇಗೆ ಇರಬೇಕೆನ್ನುವುದು ಎಂಬುದು ಇಂದಿನ ಶಿಸ್ತಿನ, ಅಚ್ಚುಕಟ್ಟಾದ ಪದ ಪ್ರದಾನ ಕಾರ್ಯಕ್ರಮ ನೋಡಿದಾಗ ಗೊತ್ತಾಗುತ್ತದೆ. ಜಿಲ್ಲೆಯ ಹಿರಿಯ ಕ್ಲಬ್ ಆಗಿರುವ ಈ ಪುತ್ತೂರು ಕ್ಲಬ್‌ಗೆ ಗ್ಲೋಬಲ್ ಎಕ್ಸಲೆನ್ಸ್ ಪ್ರಶಸ್ತಿ ಸಿಕ್ಕಿರುವುದು ಅಂತರರಾಷ್ಟ್ರೀಯ ರೋಟರಿ ಧ್ಯೇಯವೆನಿಸಿದ ಎಲ್ಲರೊಡನೆ ಒಂದಾಗು ಎಂಬ ಸ್ಲೋಗನ್‌ಗೆ ಅರ್ಥ ಬರುತ್ತದೆ. ರೋಟರಿಯಲ್ಲಿ ಸೇವೆ ಎನ್ನುವುದು ಅದು ಫ್ರಂಟ್ ಸೀಟ್ ಆಗಿದೆ ಎಂದರು.
3 ಕಂದಾಯ ಜಿಲ್ಲೆಗಳಲ್ಲಿ ಕ್ಲಬ್ ಹೆಚ್ಚಿನ ಸದಸ್ಯರನ್ನು ಹೊಂದಿದೆ-ಉಮಾನಾಥ್ ಪಿ.ಬಿ:
ರೋಟರಿ ಪುತ್ತೂರು ಮಾಜಿ ಅಧ್ಯಕ್ಷ ಪ್ರಸ್ತುತ ವಲಯ ಸೇನಾನಿ ಆಗಿರುವ ಉಮಾನಾಥ್ ಪಿ.ಬಿರವರು ಕ್ಲಬ್ ಬುಲೆಟಿನ್ ಬಿಡುಗಡೆಗೊಳಿಸಿ ಮಾತನಾಡಿ, ರೋಟರಿಯ ಮೂರು ಕಂದಾಯ ಜಿಲ್ಲೆಗಳಲ್ಲಿನ ಕ್ಲಬ್‌ಗಳಲ್ಲಿ ರೋಟರಿ ಪುತ್ತೂರು ಹೆಚ್ಚಿನ ಸದಸ್ಯರನ್ನು ಹೊಂದಿದೆ. ಕಳೆದ ಸಾಲಿನಲ್ಲಿ ನಗು ನಗುತ್ತಾ ಸೇವೆ ನೀಡುತ್ತಾ ಕ್ಲಬ್ ಮುನ್ನೆಡೆಸಿದವರು ಡಾ.ಶ್ರೀಪತಿ ರಾವ್‌ರವರು. ನಾನು ಅಧ್ಯಕ್ಷನಾಗಿದ್ದಾಗ ನನಗೆ ಕಾರ್ಯದರ್ಶಿ ಆಗಿದ್ದ ಡಾ.ಶ್ರೀಪ್ರಕಾಶ್‌ರವರು ಪ್ರಸ್ತುತ ವರ್ಷ ಅಧ್ಯಕ್ಷರಾಗಿ ಕ್ಲಬ್ ಮುನ್ನೆಡೆಸಲು ಅಣಿಯಾಗಿದ್ದು ಅವರಿಗೆ ಶುಭಾಶಯಗಳು ಎಂದರು.
ಕನಸಿನ ಪ್ರಾಜೆಕ್ಟ್ ಮೆಮೋಗ್ರಾಫಿ ಸೆಂಟರ್ ಶೀಘ್ರ ಲೋಕಾರ್ಪಣೆ-ಡಾ.ಶ್ರೀಪತಿ ರಾವ್:
ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪತಿ ರಾವ್ ಯು.ಮಾತನಾಡಿ, ನನ್ನ ಅಧ್ಯಕ್ಷೀಯ ಅವಧಿಯ ವರ್ಷ ಕ್ಲಬ್ ಸದಸ್ಯರ ಪ್ರೀತಿ, ವಿಶ್ವಾಸವನ್ನು ಗಳಿಸಿಕೊಂಡು ಕ್ಲಬ್‌ಗೆ ರಾಜ್ಯೋತ್ಸವ ಪ್ರಶಸ್ತಿ, ಗ್ಲೋಬಲ್ ಎಕ್ಸಲೆನ್ಸ್ ಪ್ರಶಸ್ತಿಗೆ ಭಾಜನರಾಗಲು ಸಾಧ್ಯವಾಗಿದ್ದು ಮಾತ್ರವಲ್ಲ ನನ್ನ ಕನಸಿನ ಪ್ರಾಜೆಕ್ಟ್ ಮೆಮೋಗ್ರಾಫಿ ಸೆಂಟರ್ ಶೀಘ್ರ ಲೋಕಾರ್ಪಣೆಗೊಳ್ಳಲಿದೆ. ಪ್ರಸ್ತುತ ದಿನಗಳಲ್ಲಿ ಮನುಷ್ಯ ತನ್ನ ಆರೋಗ್ಯದ ಮೇಲೆ ನಿಗಾ ವಹಿಸದೆ ನಾನಾ ಅನಾರೋಗ್ಯಗಳಿಗೆ ತುತ್ತಾಗುತ್ತಿದ್ದಾರೆ. ಆದ್ದರಿಂದ ಪ್ರತಿಯೋರ್ವರು ತಮ್ಮ ಆರೋಗ್ಯದ ಕಡೆ ಗಮನ ಹರಿಸಿ ಎಂದು ಹೇಳಿ ತನ್ನೊಂದಿಗೆ ಸಹಕರಿಸಿದ ಕಾರ್ಯದರ್ಶಿ ದಾಮೋದರ್ ಕೆ.ಎ.ರವರನ್ನು ವೈಯಕ್ತಿಕ ನೆಲೆಯಲ್ಲಿ ಶಾಲು ಹೊದಿಸಿ ಗೌರವಿಸಿದರು.
ಹೊಸ ಸದಸ್ಯರ ಸೇರ್ಪಡೆ:
ಕ್ಲಬ್ ಸರ್ವಿಸ್‌ನಡಿಯಲ್ಲಿ ದರ್ಬೆ ಸಂತೃಪ್ತಿ ಹೋಟೆಲ್ ಬಳಿ ಎಕ್ಸೈಡ್ ಬ್ಯಾಟರಿ ಶೋರೂಂ ಸೇಲ್ಸ್ ಮತ್ತು ಸರ್ವಿಸ್ ಮಾಲಕ, ನರಿಮೊಗರು ನಿವಾಸಿ ವಿಶ್ವನಾಥ ಗೌಡ ಕೆ.ರವರನ್ನು ಪದ ಪ್ರದಾನ ಅಧಿಕಾರಿ ವಿನೋದ್ ಆರಾನ್ಹಾರವರು ರೋಟರಿ ಪಿನ್ ತೊಡಿಸಿ ಕ್ಲಬ್‌ಗೆ ಅಧಿಕೃತವಾಗಿ ಸೇರ್ಪಡೆಗೊಳಿಸಿದರು.
ಜಿಲ್ಲಾ ಪ್ರತಿನಿಧಿಗಳಿಗೆ ಗೌರವ:
ಕ್ಲಬ್ ಸದಸ್ಯರಾಗಿದ್ದು, ರೋಟರಿ ಜಿಲ್ಲೆಯಲ್ಲಿ ವಿವಿಧ ಸೇವೆಗಳನ್ನು ನಿರ್ವಹಿಸಲಿರುವ ಉಮಾನಾಥ್ ಪಿ.ಬಿ, ಪ್ರೊ|ಝೇವಿಯರ್ ಡಿ’ಸೋಜ, ವಾಮನ್ ಪೈ, ರಾಮಕೃಷ್ಣ ಕೆ, ಡಾ.ನಝೀರ್ ಅಹಮದ್, ಭುಜಂಗ ಆಚಾರ್ಯರವರುಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಟಿ.ಆರ್.ಎಫ್ ದೇಣಿಗೆ:
ಅಂತರರಾಷ್ಟ್ರೀಯ ಸರ್ವಿಸ್‌ನಡಿಯಲ್ಲಿ ಕಳೆದ ಸಾಲಿನ ವರ್ಷದಲ್ಲಿ ಅಂತರರಾಷ್ಟ್ರೀಯ ರೋಟರಿ ಫೌಂಡೇಶನ್‌ಗೆ ಶೇ.ನೂರು ಟಿ.ಆರ್.ಎಫ್ ದೇಣಿಗೆಯನ್ನು ಕ್ಲಬ್ ಸದಸ್ಯರು ನೀಡಿದ್ದು, ಪ್ರಸ್ತುತ ವರ್ಷದಲ್ಲಿ ಟಿ.ಆರ್.ಎಫ್ ದೇಣಿಗೆಯನ್ನು ನೀಡಿ ಪಿ.ಎಚ್.ಎಫ್ ಪದವಿ ಪಡೆದ ಕೃಷ್ಣಕುಮಾರ್ ರೈ ಪಿ.ಡಿ, ಯದುಕುಮಾರ್ ಕೆ.ರವರನ್ನು ಗೌರವಿಸಲಾಯಿತು.
ರೋಟರಿ ಸಮಾಜ ಸೇವಕರಿಗೆ ಅಭಿನಂದನೆ:
ರೋಟರಿ ಸದಸ್ಯರಾಗಿದ್ದು, ತಮ್ಮ ಸಮಾಜ ಸೇವೆಯ ಮೂಲಕ ರೋಟರಿ ಸಂಸ್ಥೆಗೆ ಹೆಸರು ತರುತ್ತಿರುವ ಮಹಾವೀರ ಮೆಡಿಕಲ್ ಸೆಂಟರ್‌ನಲ್ಲಿ ಪುತ್ತೂರು ರೋಟರಿ ಡಯಾಲಿಸಿಸ್ ಸೆಂಟರ್‌ಗೆ ಸ್ಥಳಾವಕಾಶ ನೀಡಿ ನೂರಾರು ಬಡ ರೋಗಿಗಳಿಗೆ ಪ್ರಯೋಜನಕಾರಿಯಾಗಿದ್ದು ಮಾತ್ರವಲ್ಲ ಇದೀಗ ತನ್ನ ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ದಂತ ಚಿಕಿತ್ಸಾ ಸೌಲಭ್ಯವನ್ನು ರೋಟರಿ ಕ್ಲಬ್ ಪುತ್ತೂರು ಹಾಗೂ ಕೆವಿಜಿ ಡೆಂಟಲ್ ಕಾಲೇಜು ಸಹಯೋಗದಲ್ಲಿ ನಡೆಸುತ್ತಿರುವ ಡಾ.ಅಶೋಕ್ ಪಡಿವಾಳ್, ಸವಣೂರು ಗ್ರಾಮದ ಮೆಸ್ಕಾಂ ಸಬ್‌ಸ್ಟೇಷನ್ ಲೈನ್ ಮ್ಯಾನ್‌ಗಳಿಗೆ ಕೈ ಗವಸುಗಳನ್ನು ಉಚಿತವಾಗಿ ನೀಡುವ ಮೂಲಕ ತೆರೆಮರೆಯಲ್ಲಿ ಸಮಾಜ ಸೇವೆ ನೀಡುತ್ತಾ ಬಂದಿದ್ದು ಅಂತರರಾಷ್ಟ್ರೀಯ ರೋಟರಿ ಜಿಲ್ಲೆ ೩೧೮೧ನಿಂದ ಅನ್ಸಂಗ್ ಹೀರೊ ಎನಿಸಿಕೊಂಡಿರುವ ಕೃಷ್ಣಕುಮಾರ್ ರೈ ಪಿ.ಡಿರವರನ್ನು ಅಭಿನಂದಿಸಲಾಯಿತು.
ಪದ ಪ್ರದಾನ:
ನೂತನ ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ, ಕಾರ್ಯದರ್ಶಿ ಪ್ರೊ|ಸುಬ್ಬಪ್ಪ ಕೈಕಂಬ, ಕೋಶಾಧಿಕಾರಿ ಕೆ.ಬಾಲಕೃಷ್ಣ ಆಚಾರ್ಯ, ಉಪಾಧ್ಯಕ್ಷ ಹಾಗೂ ನಿಯೋಜಿತ ಅಧ್ಯಕ್ಷ ಪ್ರೊ|ದತ್ತಾತ್ರೇಯ ರಾವ್, ನಿಕಟಪೂರ್ವ ಅಧ್ಯಕ್ಷ ಡಾ.ಶ್ರೀಪತಿ ರಾವ್, ಜೊತೆ ಕಾರ್ಯದರ್ಶಿ ಲೋವಲ್ ಮೇವಡ, ಬುಲೆಟಿನ್ ಎಡಿಟರ್ ವಿ.ಜೆ ಫೆರ್ನಾಂಡೀಸ್, ಸಾರ್ಜಂಟ್ ಎಟ್ ಆಮ್ಸ್೯ ಶ್ರೀಧರ್ ಆಚಾರ್ಯ, ಎಕ್ಸಿಕ್ಯೂಟಿವ್ ಕಾರ್ಯದರ್ಶಿ ಪ್ರೊ|ಝೇವಿಯರ್ ಡಿ’ಸೋಜ, ಕ್ಲಬ್ ಲರ್ನಿಂಗ್ ಫೆಸಿಲಿಟೇಟರ್ ರಾಮಕೃಷ್ಣ ಕೆ, ಕ್ಲಬ್ ಸರ್ವಿಸ್ ನಿರ್ದೇಶಕ ಹೆರಾಲ್ಡ್ ಮಾಡ್ತಾ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಗುರುರಾಜ್ ಕೊಳತ್ತಾಯ, ವೊಕೇಶನಲ್ ಸರ್ವಿಸ್ ನಿರ್ದೇಶಕ ಸತೀಶ್ ನಾಯಕ್, ಇಂಟರ್ನ್ಯಾಷನಲ್ ಸರ್ವಿಸ್ ನಿರ್ದೇಶಕ ಮನೋಜ್, ಯೂತ್ ಸರ್ವಿಸ್ ನಿರ್ದೇಶಕ ಸುಜಿತ್ ಡಿ.ರೈ, ಚೇರ್ಮನ್‌ಗಳಾದ ಸುಧಾ ಎಸ್.ರಾವ್(ಪಲ್ಸ್ ಪೋಲಿಯೊ), ಪಿ.ಡಿ ಕೃಷ್ಣಕುಮಾರ್ ರೈ(ಟಿ.ಆರ್.ಎಫ್), ಪ್ರೊ|ಝೇವಿಯರ್ ಡಿ’ಸೋಜ(ಮೆಂಬರ್‌ಶಿಪ್ ಡೆವಲಪ್ಮೆಂಟ್), ಸತೀಶ್ ತುಂಬ್ಯ(ಪಬ್ಲಿಕ್ ಇಮೇಜ್), ಪ್ರೀತಾ ಎ(ಟೀಚ್), ಪ್ರೇಮಾನಂದ ಬಿ(ವಿನ್ಸ್), ಪ್ರಕಾಶ್ ಆಚಾರ್ಯ(ಐಟಿ, ವೆಬ್), ಡಾ.ಶ್ಯಾಮ್ ಬಿ(ಎಥಿಕ್ಸ್), ಡಾ.ಜೈದೀಪ್ ಎನ್.ಎ(ಜಿಲ್ಲಾ ಪ್ರಾಜೆಕ್ಟ್), ಉಮಾನಾಥ್ ಬಿ(ಪ್ರೋಗ್ರಾಂ ಕಮಿಟಿ)ರವರಿಗೆ ಪದ ಪ್ರದಾನ ಅಧಿಕಾರಿ ವಿನೋದ್ ಆರಾನ್ಹರವರು ಪದ ಪ್ರದಾನವನ್ನು ನೆರವೇರಿಸಿದರು.
ವೇದಿಕೆಯಲ್ಲಿ 2023-24ರ ಕ್ಲಬ್ ಅಧ್ಯಕ್ಷ ಜೈರಾಜ್ ಭಂಡಾರಿರವರು ಉಪಸ್ಥಿತರಿದ್ದರು. ಕು.ಪ್ರಾರ್ಥನಾ ಬಿ., ಕು.ಆರಾಧನಾ ಪ್ರಾರ್ಥಿಸಿದರು. ರೋಟರಿ ಪುತ್ತೂರು ಅಧ್ಯಕ್ಷ ಡಾ.ಶ್ರೀಪತಿ ರಾವ್ ಸ್ವಾಗತಿಸಿ, ನೂತನ ಕಾರ್ಯದರ್ಶಿ ಪ್ರೊ|ಸುಬ್ಬಪ್ಪ ಕೈಕಂಬ ವಂದಿಸಿದರು. ನಿರ್ಗಮಿತ ಕಾರ್ಯದರ್ಶಿ ದಾಮೋದರ್ ಕೆ.ಎ ವರದಿ ಮಂಡಿಸಿದರು. ಪಿಡಿಜಿ ಡಾ.ಭಾಸ್ಕರ್ ಎಸ್.ರವರು ನೂತನ ಪದಾಧಿಕಾರಿಗಳನ್ನು ಸಭೆಗೆ ಪರಿಚಯಿಸಿದರು. ಡಾ.ಸುಧಾ ಎಸ್.ರಾವ್(ಪದ ಪ್ರದಾನ ಅಧಿಕಾರಿ), ಪ್ರೊ|ದತ್ತಾತ್ರೇಯ ರಾವ್(ಅಸಿಸ್ಟೆಂಟ್ ಗವರ್ನರ್), ಕೋಶಾಧಿಕಾರಿ ಬಾಲಕೃಷ್ಣ ಆಚಾರ್ಯ(ವಲಯ ಸೇನಾನಿ), ಪ್ರೊ|ಝೇವಿಯರ್ ಡಿ’ಸೋಜ(ಮುಖ್ಯ ಅತಿಥಿ)ಗಳ ಪರಿಚಯ ಮಾಡಿದರು. ಸಾರ್ಜಂಟ್ ಎಟ್ ಆಮ್ಸ್೯ ಶ್ರೀಧರ್ ಆಚಾರ್ಯ, ಕ್ಲಬ್ ಸರ್ವಿಸ್ ನಿರ್ದೇಶಕ ಹೆರಾಲ್ಡ್ ಮಾಡ್ತಾ, ವೊಕೇಶನಲ್ ಸರ್ವಿಸ್ ನಿರ್ದೇಶಕ ಸತೀಶ್ ನಾಯಕ್, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಗುರುರಾಜ್ ಕೊಳತ್ತಾಯ, ಯೂತ್ ಸರ್ವಿಸ್ ನಿರ್ದೇಶಕ ಸುಜಿತ್ ಡಿ.ರೈರವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಕಿಶನ್ ಬಿ.ವಿ, ಸತೀಶ್ ತುಂಬ್ಯ ಕಾರ್ಯಕ್ರಮ ನಿರೂಪಿಸಿದರು.
ಇಚ್ಚಾಶಕ್ತಿ/ಮನಸ್ಸು ಇದ್ದಾಗ ಯಶಸ್ಸು…
ಕ್ಯಾಲೆಂಡರ್ ಹಾಗೂ ಗಡಿಯಾರ ಬದಲಾಗದ ನಿರಂತರ ನಡೆಯುವ ಪ್ರಕ್ರಿಯೆಯಾಗಿದ್ದು ಬದಲಾವಣೆ ಆಗಬೇಕಿರುವುದು ನಮ್ಮಲ್ಲಿನ ’ಮನಸ್ಸು’ ಮಾತ್ರ. ಸಮಾಜದ ಬದಲಾವಣೆಗೆ ನಮ್ಮಲ್ಲಿ ಇಚ್ಚಾಶಕ್ತಿಯನ್ನು ಹೊಂದಿದಾಗ ಆವಾಗ ಆರೋಗ್ಯಪೂರ್ಣ ಸಮಾಜವಾಗಬಲ್ಲುದು. ಪ್ರಸ್ತುತ ರೋಟರಿ ವರ್ಷ ಸದಸ್ಯರ ಸಹಕಾರದೊಂದಿಗೆ ನಮ್ಮಲ್ಲಿನ ಬಾಂಧವ್ಯವನ್ನು ಇಮ್ಮಡಿಗೊಳಿಸೋಣ. ಏಕತೆ, ಸಮಗ್ರತೆ, ಮಿತ್ರತ್ವ, ಒಡನಾಟದೊಂದಿಗೆ ರೋಟರಿ ಐದು ವಲಯಗಳಲ್ಲಿನ ಯೋಜನೆಗಳ ಯಶಸ್ವಿಗಾಗಿ ರೋಟರಿ ಧ್ಯೇಯವಾಗಿರುವ ಒಳ್ಳೆಯದಕ್ಕಾಗಿ ಒಗ್ಗೂಡೋಣ. ಮಾತಿಗಿಂತ ಕೃತಿಯಲ್ಲಿ ನಮ್ಮ ಕೆಲಸ ಸಮಾಜಕ್ಕೆ ತೋರಿಸೋಣ.
-ಡಾ.ಶ್ರೀಪ್ರಕಾಶ್ ಬಿ., ನೂತನ ಅಧ್ಯಕ್ಷರು, ರೋಟರಿ ಕ್ಲಬ್ ಪುತ್ತೂರು
ಸಾಧಕರಿಗೆ ಗೌರವ…
ಕಳೆದ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿದ ಕ್ಲಬ್ ಸದಸ್ಯರ ಮಕ್ಕಳಾದ ಪೂರ್ವಿಕಾ ಎನ್.ಜೆ(ಡಾ.ಜೈದೀಪ್ ಎನ್.ಎ), ಅನಘಾ ಬಿ.ಕೆ(ಕಿಶನ್ ಬಿ.ವಿ), ಪ್ರಾರ್ಥನಾ ಬಿ(ಡಾ.ಶ್ರೀಪ್ರಕಾಶ್ ಬಿ), ಬಿಕಾಂನಲ್ಲಿ ಸೌಜನ್ಯ ಎಸ್.ಕೆ(ಶ್ರೀಧರ್ ಆಚಾರ್ಯ), ಜಪಾನಿನ ಕಂಪೆನಿಯೊಂದರಲ್ಲಿ ಡಿಸೈನ್ ಇಂಜಿನಿಯರ್ ಆಗಿರುವ ಶ್ರೇಯಾ ಪಿ.ಯು(ಉಮಾನಾಥ್ ಪಿ.ಬಿ)ರವರುಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಸನ್ಮಾನ..
ಎಂಟು ದಶಕಗಳ ಹಿನ್ನೆಲೆಯೊಂದಿಗೆ ಐತಿಹಾಸಿಕ ಕುರುಹಾಗಿ ಉಳಿದುಕೊಂಡಿರುವ ಪುತ್ತೂರಿನ ಬೆರಳೆಣಿಕೆಯ ನೆನಪುಗಳಲ್ಲಿ ಒಂದಾದ ಬೊಳ್ವಾರಿನ ಗೋಪಿ ಭಟ್ರ ದಿನಸಿ ಅಂಗಡಿ. ತಂದೆಯ ಬಳುವಳಿಯಾಗಿ ಬಂದ ಉದ್ಯಮ ಕ್ಷೇತ್ರವನ್ನು ಮುಂದುವರೆಸಿಕೊಂಡು ಪುತ್ತೂರಿನಲ್ಲಿ ಐತಿಹಾಸಿಕ ನೆನಪೊಂದನ್ನು ಉಳಿಸಿಕೊಳ್ಳುತ್ತಾ ಸಾಮಾಜಿಕವಾಗಿ ಅನ್ಯೋನ್ಯತೆ, ಸಹೋದರತೆ, ಜನಾನುರಾಗಿ ಬದುಕು ಕಟ್ಟಿಕೊಂಡಿರುವ ಗೋಪಿ ಭಟ್ರರ ಪುತ್ರರಾದ ವರದರಾಜ್ ಪ್ರಭು, ವಿವೇಕಾನಂದ ಪ್ರಭು, ಪ್ರತಾಪ್ ಪ್ರಭುರವರನ್ನು ವೊಕೇಶನಲ್ ಸರ್ವಿಸ್ ನಡಿಯಲ್ಲಿ ಹಾಗೂ ಕಳೆದ ವರ್ಷ ಕ್ಲಬ್ ಅನ್ನು ಯಶಸ್ವಿಯಾಗಿ ಮುನ್ನಡೆಸಿದ ಕ್ಲಬ್ ಅಧ್ಯಕ್ಷ ಡಾ.ಶ್ರೀಪತಿ ರಾವ್, ಕಾರ್ಯದರ್ಶಿ ದಾಮೋದರ್ ಕೆ.ಎರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.