
ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರಿಂದ ಭಕ್ತರಿಗೆ ತಪ್ತ ಮುದ್ರಾಧಾರಣೆ ಜು.6ರಂದು ನಡೆಯಿತು.250ಕ್ಕೂ ಮಿಕ್ಕಿ ಭಕ್ತರು ಮುದ್ರಾಧಾರಣೆ ಹಾಕಿಸಿಕೊಂಡರು.
ವೃತ್ತಾಸುರನು ದೇವತೆಗಳನ್ನು ಸೋಲಿಸಿದಾಗ ದೇವತೆಗಳು ಒಂದಾಗಿ ಶ್ರೀ ಮಹಾವಿಷ್ಣುವಿಗೆ ಶರಣಾಗಿ ಅಸುರನ ಸಂಹಾರಕ್ಕೆ ಮೊರೆ ಹೋಗುತ್ತಾರೆ. ಆಗ ಶ್ರೀ ಮಹಾವಿಷ್ಣುವು ಶಂಖ, ಚಕ್ರ ಚಿಹ್ನೆಯನ್ನು ಧಾರಣೆ ಮಾಡಿ ಯುದ್ಧಕ್ಕೆ ಹೋಗಲು ದೇವತೆಗಳಿಗೆ ಆದೇಶಿಸುತ್ತಾನೆ. ವೈಷ್ಣವ ಚಿಹ್ನೆಯಾದ ಶಂಖ, ಚಕ್ರ ಚಿಹ್ನೆ ಧಾರಣೆ ಮಾಡಿ ದೇವತೆಗಳು ಯುದ್ಧದಲ್ಲಿ ವೃತ್ತಾಸುರನನ್ನು ಜಯಿಸಿದರು. ವೈಷ್ಣವ ಚಿಹ್ನೆ ಧಾರಣೆ ಶತ್ರು ಜಯಕ್ಕೆ ಸಂಕೇತ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳವರು ನುಡಿದರು.
ಈ ಸಂದರ್ಭದಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀಪತಿ ಬೈಪಡಿತ್ತಾಯ, ಶ್ರೀಧರ ಬೈಪಾಡಿತ್ತಾಯ, ಅರ್ಚಕರಾದ ಸದಾಶಿವ ಹೊಳ್ಳ, ಸಮಿತಿಯ ಪದಾಧಿಕಾರಿಗಳು, ಸದಸ್ಯರು, ವಿಷ್ಣುಮೂರ್ತಿ ಭಜನಾ ಮಂಡಳಿ ಸದಸ್ಯರು, ಊರಪರವೂರ ಭಕ್ತರೂ ಉಪಸ್ಥಿತರಿದ್ದರು.