ಸರಕಾರದ ಆದೇಶ-ಬಳಕೆಗೆ ಮಾರ್ಗಸೂಚಿ
ಪುತ್ತೂರು: ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳಾದ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ಗಳು ಪ್ರತ್ಯೇಕ ಲಾಂಛನ ಬಳಸಿಕೊಂಡು ಉಪಯೋಗಿಸುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಆದೇಶದೊಂದಿಗೆ ಲಾಂಛನ ನಿಗದಿ ಹಾಗೂ ಬಳಕೆಯ ಬಗ್ಗೆ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಪಂಚಾಯತ್ ರಾಜ್ ಇಲಾಖೆಯ ಮೂರು ಹಂತದ ಸಂಸ್ಥೆಗಳು ತಮ್ಮ ಅಧಿಕೃತ ಸರಕಾರಿ ಮತ್ತು ಅರೆ ಸರಕಾರಿ ಪತ್ರಗಳಲ್ಲಿ ಬಳಸಲು ಅರ್ಥಪೂರ್ಣವಾದ ಪ್ರತ್ಯೇಕ ಲಾಂಛನವನ್ನು ಸೃಜಿಸಿ ನೀಡುವಂತೆ ಗ್ರಾಮ ಪಂಚಾಯತ್ ಸದಸ್ಯರ ಮಹಾ ಒಕ್ಕೂಟದವರು ಇಲಾಖೆಗೆ ಕೋರಿದ್ದರು. ಈ ಬಗ್ಗೆ 2024ರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿ ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಪ್ರತ್ಯೇಕ ಲಾಂಛನ ಸೃಜಿಸಲು ತೀರ್ಮಾನಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ಇರುವಂತೆ ಸ್ವತಂತ್ರ ಸ್ಥಳೀಯ ಸರಕಾರಗಳು ಎಂಬ ನೆಲೆಯಲ್ಲಿ ಪಂಚಾಯತ್ ವ್ಯವಸ್ಥೆಗಳಿಗೂ ಪ್ರತ್ಯೇಕ ಲಾಂಛನ ಬೇಕು ಎಂಬ ಬೇಡಿಕೆ ಕೊನೆಗೂ ಈಡೇರಿದೆ. ದೇಶದಲ್ಲಿಯೇ ಪಂಚಾಯತ್ಗಳಿಗೆ ಪ್ರತ್ಯೇಕ ಲಾಂಛನ ನಿಗದಿಪಡಿಸಿರುವುದು ಕರ್ನಾಟಕ ರಾಜ್ಯದಲ್ಲೇ ಪ್ರಥಮವಾಗಿದೆ.

ಮಾರ್ಗಸೂಚಿಗಳು:
ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಸ್ಥಳೀಯ ಪ್ರಾಧಿಕಾರವಾಗಿರುತ್ತದೆ. ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳು ಅಧಿಕೃತ ಮುದ್ರೆಯಲ್ಲಿ ಮತ್ತು ಸ್ಟೇಷನರಿ ಮತ್ತು ಅದರ ವಿನ್ಯಾಸದಲ್ಲಿ ಅರ್ಥಪೂರ್ಣವಾದ ಪ್ರತ್ಯೇಕ ಲಾಂಛನವನ್ನು ಸೃಜಿಸಿದ್ದು ಅದರ ಬಳಕೆಗೆ ಕೆಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಯಾವುದರಲ್ಲಿ ಲಾಂಛನದ ಬಳಕೆ
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993ರ ಅಡಿಯಲ್ಲಿ ಸ್ಥಾಪಿಸಲಾದ ಮೂರು ಸ್ಥಳೀಯ ಸಂಸ್ಥೆಗಳ ಅಧಿಕೃತ ಸರಕಾರಿ ಹಾಗೂ ಅರೆ ಸರಕಾರಿ ಪತ್ರಗಳಲ್ಲಿ ಲಾಂಛನದ ಬಳಕೆ ಮಾಡಬಹುದು. ಲಾಂಛನವು ಪತ್ರದ ಮೇಲ್ಭಾಗದಲ್ಲಿ ಮಧ್ಯದಲ್ಲಿ ಪ್ರಾಮುಖ್ಯವಾಗಿ ಕಾಣಿಸುವಂತಿರಬೇಕು. ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ತಮ್ಮ ಅಧಿಕೃತ ವಿಸಿಟಿಂಗ್ ಕಾರ್ಡ್ ಮೇಲೆ ತಮ್ಮ ಅಧಿಕಾರದ ಅವಧಿಯಲ್ಲಿ ಮಾತ್ರ ಈ ಲಾಂಛನವನ್ನು ಬಳಸಬಹುದು. ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ನ ಅಧಿಕೃತ ಕಟ್ಟಡಗಳ ಮೇಲೆ, ಅಧಿಕೃತ ಬ್ಯಾನರ್ ಹಾಗೂ ಜಾಹೀರಾತು ಫಲಕಗಳ ಮೇಲೆ ಬಳಸಬಹುದು.
ಯಾವುದರಲ್ಲಿ ಲಾಂಛನದ ನಿರ್ಬಂಧ
ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ನ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ರಾಜ್ಯ/ಕೇಂದ್ರ ಸರಕಾರದ ನಿವೃತ್ತ ಅಧಿಕಾರಿ/ನೌಕರರರು ಈ ಲಾಂಛನ ಬಳಸಿ ಅಥವಾ ಲಾಂಛನ ಹೋಲುವ ಅನುಕರಣೆ ಮಾಡುವ ಮೂಲಕ ಯಾವುದೇ ದಾಖಲಾತಿಗಳು, ಪಂಚಾಯತ್ ರಾಜ್ ಪ್ರಾಧಿಕಾರಗಳ ಅಧಿಕೃತ ದಾಖಲೆ ಅಥವಾ ಪ್ರಾಧಿಕಾರಗಳಿಗೆ ಸಂಬಂಧಿಸಿದ ದಾಖಲೆಯೆಂದು ಬಿಂಬಿಸುವ ಪ್ರಯತ್ನಗಳನ್ನು ನಿರ್ಬಂಧಿಸಲಾಗಿದೆ.
ಲಾಂಛನ ಮಾರ್ಪಡಿಸಿ, ತಿರುಚಿ ಉಪಯೋಗಿಸುವುದು, ಯಾವುದೇ ವ್ಯಾಪಾರ, ವ್ಯವಹಾರ, ವೃತ್ತಿಯ ಉದ್ಧೇಶ, ವಾಹನಗಳ ಮೇಲೆ ಬಳಕೆಗೆ ನಿರ್ಬಂಧಿಸಲಾಗಿದೆ.
ಯಾವುದೇ ಆಯೋಗ, ಕಮಿಟಿ, ಸಾರ್ವಜನಿಕ ಉದ್ಯಮ, ಬ್ಯಾಂಕ್, ಮುನ್ಸಿಪಲ್ ಕೌನ್ಸಿಲ್, ಪರಿಷತ್, ಸರಕಾರೇತರ ಸಂಸ್ಥೆ, ವಿಶ್ವವಿದ್ಯಾಲಯ, ಸಂಘ ಸಂಸ್ಥೆಗಳಲ್ಲಿ ಬಳಕೆಗೆ ನಿಷೇಧಿಸಲಾಗಿದೆ.ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಮಾಝಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ತಮ್ಮ ವಿಸಿಟಿಂಗ್ ಕಾರ್ಡ್ ಹಾಗೂ ಇತರ ಶುಭಾಶಯ ಪತ್ರದಲ್ಲಿ ಬಳಸಲು ನಿರ್ಬಂಧಿಸಲಾಗಿದೆ.