ಬಂಟ್ವಾಳ ತಾಲೂಕು ಮಟ್ಟದ ಪಂಚ ಗ್ಯಾರೆಂಟಿ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆ

0

ಫ್ಲೈಓವರ್ ನಿರ್ಮಾಣದ ಬಳಿಕ ಮಾಣಿ ಜಂಕ್ಷನ್ ಗೆ ಬಾರದ ಉಪ್ಪಿನಂಗಡಿಯಿಂದ ಬರುವ ಬಸ್ಸು – ಅಧಿಕಾರಿಗಳಿಗೆ ಪತ್ರ ಬರೆಯಲು ನಿರ್ಣಯ

ವಿಟ್ಲ: ಬಂಟ್ವಾಳ ತಾಲೂಕು ಮಟ್ಟದ ಪಂಚ ಗ್ಯಾರೆಂಟಿ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯು ಜು.7ರಂದು ತಾಲೂಕು ಪಂಚಾಯತ್ ನ 2ನೇ ಮಹಡಿಯಲ್ಲಿರುವ ಸಮಿತಿಯ ಕಚೇರಿಯಲ್ಲಿ ಪಂಚ ಗ್ಯಾರೆಂಟಿ ತಾಲೂಕು ಮಟ್ಟದ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಜಯಂತಿ ವಿ. ಪೂಜಾರಿರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಫ್ಲೈಓವರ್ ನಿರ್ಮಾಣದ ಬಳಿಕ ಉಪ್ಪಿನಂಗಡಿಯಿಂದ ಬರುವ ಬಸ್ಸುಗಳು ಮಾಣಿ ಜಂಕ್ಷನ್‌ಗೆ ಬರುತ್ತಿಲ್ಲ. ಇದರಿಂದ ಮಾಣಿ ಗ್ರಾಮದ ಜನಸಾಮಾನ್ಯರಿಗೆ ಸಮಸ್ಯೆಯಾಗುತ್ತಿದ್ದು, ಈ ಬಗ್ಗೆ ಕೆ.ಎಸ್.ಆರ್.ಟಿ.ಸಿ. ಡಿಪೋ ಮಂಗಳೂರು/ ಪುತ್ತೂರು ನಿಯಂತ್ರಣಾಧಿಕಾರಿ ಇವರಿಗೆ ಪತ್ರ ಬರೆಯಲು ನಿರ್ಣಯಿಸಲಾಯಿತು.


ಅನಂತಾಡಿ ಗ್ರಾಮದ ಬಂಟ್ರಿಂಜ – ವಿಟ್ಲ ಬಸ್ ಸಂಚಾರಕ್ಕೆ ಕ್ರಮಕೈಗೊಳ್ಳುವಂತೆ ಗ್ಯಾರೆಂಟಿ ಸಮಿತಿ ಅಧ್ಯಕ್ಷರ ಮನವಿಗೆ ಸ್ಪಂದಿಸಿ ಅನಂತಾಡಿ ಗ್ರಾಮಕ್ಕೆ ಬಸ್ ಸಂಚಾರದ ವ್ಯವಸ್ಥೆಯನ್ನು ಮಾಡಿರುವ ಕೆಎಸ್ಆರ್ಟಿಸಿ ಡಿಪೋ ಮಂಗಳೂರು ಇಲ್ಲಿನ ನಿಯಂತ್ರಣಾಧಿಕಾರಿ ಅವರಿಗೆ ಸಭೆಯಲ್ಲಿ ಕೃತಜ್ಞತೆ ಸಲ್ಲಿಸಲಾಯಿತು.


ಬಿ.ಸಿ.ರೋಡು- ಕಲ್ಲಡ್ಕ – ಕರಿಂಗಾಣ ಬಸ್ ಸಂಚಾರವನ್ನು ಕೊರೋನ ಸಮಯದಲ್ಲಿ ಸ್ಥಗಿತಗೊಳಿಸಲಾಗಿತ್ತು, ಈ ಬಗ್ಗೆ ಸಮಿತಿಯ ಮನವವಿಗೆ ಸ್ಪಂದಿಸಿ ಪುನಃ ಬಸ್ಸು ಸಂಚಾರವನ್ನು ಪ್ರಾರಂಭಿಸಲಾಗಿದೆ. ಹೊಸ ಪಡಿತರ ಚೀಟಿಯನ್ನು ವಿತರಣೆಗೆ ಕ್ರಮಕೈಗೊಳ್ಳುವಂತೆ ಮತ್ತು ವೈದ್ಯಕೀಯ ಕಾರಣಕ್ಕಾಗಿ ವಿತರಿಸುತ್ತಿದ್ದ ಪಡಿತರ ಚೀಟಿಯನ್ನು ಸ್ಥಗಿತಗೊಳಿಸಿರುವುದರಿಂದ ಜನ ಸಾಮಾನ್ಯರಿಗೆ ತೊಂದರೆಯಾಗಿರುವ ಬಗ್ಗೆ ಸರಕಾರಕ್ಕೆ ಪತ್ರ ಬರೆಯಲು ಸಭೆಯಲ್ಲಿ ನಿರ್ಣಯಿಸಲಾಯಿತು.


ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಾಲೂಕು ಪಂಚ ಗ್ಯಾರೆಂಟಿ ಅನುಷ್ಠಾನ ಸಮಿತಿಯ ಕಾರ್ಯದರ್ಶಿಗಳಾದ ಸಚಿನ್ ಕುಮಾರ್, ಪಂಚ ಗ್ಯಾರೆಂಟಿ ಅನುಷ್ಠಾನಕ್ಕೆ ಸಂಬಂಧಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಮಿತಿಯ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

ಜು.13ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ
ಜು.13ರಂದಿ ಬೆಳಗ್ಗೆ 9ರಿಂದ ಮಧ್ಯಾಹ್ನ 1ಗಂಟೆಯವರೆಗೆ ಸಮಿತಿ ವತಿಯಿಂದ ಉಚಿತ ದಂತ ಮತ್ತು ಆರೋಗ್ಯ ತಪಾಸಣಾ ಶಿಬಿರವನ್ನು ಬಿಸಿರೋಡ್ ನ ಡಾ| ಬಿ.ಆರ್. ಅಂಬೆಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆಯುವಂತೆ ಪಂಚ ಗ್ಯಾರೆಂಟಿ ತಾಲೂಕು ಮಟ್ಟದ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಜಯಂತಿ ವಿ. ಪೂಜಾರಿ ತಿಳಿಸಿದರು.

LEAVE A REPLY

Please enter your comment!
Please enter your name here