ಪುತ್ತೂರು: ಕೆಂಪು ಕಲ್ಲು, ಮರಳು ಪೂರೈಕೆಯಾಗದೆ ಕೆಲಸಗಾರರಿಗೆ ಬಹಳಷ್ಟು ತೊಂದರೆಯಾಗಿದೆ.ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದು ಇದಲ್ಲದೆ ಲಾರಿ, ಪಿಕ್‌ಅಪ್ ಚಾಲಕರಿಗೆ, ವರ್ತಕರಿಗೆ ತೊಂದರೆಯಾಗುತ್ತಿದ್ದು ಆದ್ದರಿಂದ ಈ ಕೂಡಲೇ ಸಮಸ್ಯೆಯನ್ನು ಬಗೆಹರಿಸಿ ಕೊಡುವಂತೆ ಕುಂಬ್ರ ವರ್ತಕರ ಸಂಘದ ವತಿಯಿಂದ ಪುತ್ತೂರು ತಹಶೀಲ್ದಾರ್‌ರವರ ಮೂಲಕ ಸಹಾಯಕ ಕಮೀಷನ್‌ರವರಿಗೆ ಜು.11 ರಂದು ಮನವಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಪಿ.ಕೆ ಮಹಮ್ಮದ್ ಕೂಡುರಸ್ತೆಯವರ ನೇತೃತ್ವದಲ್ಲಿ ತೆರಳಿದ ನಿಯೋಗವು ಸಹಾಯಕ ಕಮೀಷನ್‌ರವರ ತುರ್ತು ಕೆಲಸದಲ್ಲಿ ಇದ್ದುದರಿಂದ ತಹಶೀಲ್ದಾರ್ ನಾಗಾರಾಜ್‌ರವರಲ್ಲಿ ಮನವಿ ಸಲ್ಲಿಸಿ ಮಾತುಕತೆ ನಡೆಸಿ, ಜಿಲ್ಲಾಡಳಿತ, ಪೊಲೀಸ್ ವರಿಷ್ಠಾಧಿಕಾರಿಗಳ ತೆಗೆದುಕೊಳ್ಳುತ್ತಿರುವ ತೀರ್ಮಾನಗಳಿಂದ ಕೆಂಪು ಕಲ್ಲು, ಮರಳು ಪೂರೈಕೆಯಲ್ಲಿ ತೊಂದರೆ ಉಂಟಾಗಿದೆ. ಇದರಿಂದಾಗಿ ಕಾರ್ಮಿಕರು ಕೆಲಸ ಇಲ್ಲದೆ ಬಳಲುವಂತಾಗಿದೆ. ಆದ್ದರಿಂದ ಈ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಿ ಕೊಡುವಂತೆ ಕೇಳಿಕೊಂಡರು.
ಈ ಸಂದರ್ಭದಲ್ಲಿ ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳ, ಅಧ್ಯಕ್ಷ ಪಿ.ಕೆ ಮಹಮ್ಮದ್ ಕೂಡುರಸ್ತೆ, ಕೋಶಾಧಿಕಾರಿ ರಮೇಶ್ ಆಳ್ವ ಕಲ್ಲಡ್ಕ,ಮಾಜಿ ಅಧ್ಯಕ್ಷರುಗಳು ನಾರಾಯಣ ಪೂಜಾರಿ ಕುರಿಕ್ಕಾರ, ಮೆಲ್ವಿನ್ ಮೊಂತೆರೋ, ಸದಸ್ಯರುಗಳಾದ ಸಂಶುದ್ದೀನ್ ಎ.ಆರ್, ರಾಜೇಶ್ ರೈ ಪರ್ಪುಂಜರವರುಗಳು ಉಪಸ್ಥಿತರಿದ್ದರು.
‘ ಕೆಂಪು ಕಲ್ಲು, ಮರಳು ಪೂರೈಕೆಯಲ್ಲಿ ತೊಂದರೆಯಾಗಿರುವುದರಿಂದ ಕಾರ್ಮಿಕರಿಗೆ ಸೇರಿದಂತೆ ವರ್ತಕರೂ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕಾರ್ಮಿಕರಿಗೆ ಕೆಲಸವಿಲ್ಲ ಕೈಯಲ್ಲಿ ಹಣವಿಲ್ಲ ಇದರಿಂದ ವ್ಯಾಪಾರ ಕೂಡ ಇಲ್ಲ. ಒಟ್ಟಿನಲ್ಲಿ ಎಲ್ಲರಿಗೂ ತೊಂದರೆಯಾಗಿದೆ. ಈ ಬಗ್ಗೆ ಸರಕಾರ ಕೂಡಲೇ ಗಮನ ಹರಿಸಬೇಕಾಗಿದೆ.’
ಪಿ.ಕೆ ಮಹಮ್ಮದ್ ಕೂಡುರಸ್ತೆ, ಅಧ್ಯಕ್ಷರು ವರ್ತಕರ ಸಂಘ ಕುಂಬ್ರ