ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ರೋಟರಿ ಕ್ಲಬ್ ಪುತ್ತೂರು ಸಿಟಿ ಪ್ರಾಯೋಜಕತ್ವದ ಇಂಟರ‍್ಯಾಕ್ಟ್ ಕ್ಲಬ್‌ನ ಪದಗ್ರಹಣ ಕಾರ್ಯಕ್ರಮವು ಆ.11ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ, ಜೀವನದಲ್ಲಿ ಸೇವೆ ಒಂದು ಅತ್ಯಂತ ಮಹತ್ವದ ವಿಷಯವಾಗಿದ್ದು, ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಜೀವನದ ಸಾರ್ಥಕ್ಯವನ್ನು ಪಡೆದುಕೊಳ್ಳಬಹುದು. ಇಂತಹ ಕೆಲಸಗಳಿಂದ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಿದ ತೃಪ್ತಿ ಸಿಗುವುದಷ್ಟೇ ಅಲ್ಲದೆ ಮಾನಸಿಕ ನೆಮ್ಮದಿಯೂ ದೊರೆಯುತ್ತದೆ ಎಂದು ಹೇಳಿದರು.

ಇನ್ನೋರ್ವ ಮುಖ್ಯ ಅತಿಥಿಗಳಾದ ಜೋನ್ 5ರ ಅಸಿಸ್ಟೆಂಟ್ ಗರ್ವನರ್ ರೊಟೇರಿಯನ್ ಪ್ರಮೀಳಾ ಪಿ. ರಾವ್ ಮಾತನಾಡಿ,ಪ್ರತಿಯೊಬ್ಬ ವಿದ್ಯಾರ್ಥಿಯೂ ಕೂಡ ಅಧ್ಯಯನದ ಕಡೆಗೆ ಹೆಚ್ಚಿನ ಗಮನವನ್ನು ನೀಡಬೇಕಾಗಿದ್ದು, ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಸಂಪಾದಿಸುವ ಮೂಲಕ ಹೆತ್ತವರ ಕನಸನ್ನು ನನಸು ಮಾಡಬೇಕೆಂದು ತಿಳಿಸಿದರು. ಶೈಕ್ಷಣಿಕ ಪ್ರಗತಿಗೆ ಅತಿಯಾದ ಮೊಬೈಲ್ ಉಪಯೋಗ ಅಡ್ಡಿಯಾಗಿದ್ದು, ಮೊಬೈಲ್ ಕಡೆಗಿನ ಗಮನವನ್ನು ವಿದ್ಯಾರ್ಥಿಗಳು ಕಡಿಮೆಗೊಳಿಸಬೇಕೆಂದು ತಿಳಿಸಿದರು. ರೋಟರಿ ಕ್ಲಬ್ ಕೂಡ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದು, ಬಡವರ ಹಾಗು ಶೋಷಿತರ ಸೇವೆಗೆ ಸದಾ ಕಟಿಬದ್ಧವಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಪುತ್ತೂರು ಇಂಟರ‍್ಯಾಕ್ಟ್ ಕ್ಲಬ್, ರೋಟರಿ ಕ್ಲಬ್ ಪುತ್ತೂರು ಸಿಟಿಯ ಚೇರ್ಮನ್ ರೊಟೇರಿಯನ್ ಲೀನಾ ಪಾಯ್ಸ್ ಉಪಸ್ಥಿತರಿದ್ದು, ಎಲ್ಲಾ ಇಂಟರಾಕ್ಟ್ ಸದಸ್ಯರಿಗೆ ಪ್ರಮಾಣ ವಚನವನ್ನು ಬೋಧಿಸಿದರು. ರೋಟರಿ ಕ್ಲಬ್ ಪುತ್ತೂರು ಸಿಟಿಯ ಪದಾಧಿಕಾರಿಗಳು, ಸರ್ವಸದಸ್ಯರು, ಕಾಲೇಜಿನ ಬೋಧಕ, ಬೋಧಕೇತರ ವರ್ಗ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇಂಟರ‍್ಯಾಕ್ಟ್ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಇಂಟರಾಕ್ಟರ್ ಅಶೆಲ್ ಜೇನ್ ಡಿಕುನ್ಹ, ಉಪಾಧ್ಯಕ್ಷರಾಗಿ ಇಂಟರಾಕ್ಟರ್ ಪನ್ನಗ ರೈ, ಕಾರ್ಯದರ್ಶಿಯಾಗಿ ಇಂಟರಾಕ್ಟರ್ ನಿಶ್ಚಿತ್, ಜತೆ ಕಾರ್ಯದರ್ಶಿಯಾಗಿ ಇಂಟರಾಕ್ಟರ್ ಭೂಮಿಕಾ, ಕೋಶಾಧಿಕಾರಿಯಾಗಿ ಇಂಟರಾಕ್ಟರ್ ಶ್ರೇಯಾ ಶ್ರೀ, ಸಾರ್ಜಂಟ್ ಆರ್ಮ್ ಇಂಟರಾಕ್ಟರ್ ಶೈಲೇಶ್, ಕ್ಲಬ್ ಸರ್ವೀಸ್ ನಿರ್ದೇಶಕರಾಗಿ ಇಂಟರಾಕ್ಟರ್ ಜೆಸ್ವಿನ್ ಎ. ಜೆ, ಇನ್‌ಸ್ಟಿಟ್ಯೂಷನಲ್ ಸರ್ವೀಸ್ ನಿರ್ದೇಶಕರಾಗಿ ಇಂಟರಾಕ್ಟರ್ ರೆನಿಶಾ, ಕಮ್ಯೂನಿಟಿ ಸರ್ವೀಸ್ ನಿರ್ದೇಶಕರಾಗಿ ಇಂಟರಾಕ್ಟರ್ ಸುಹಾನಿ, ಇಂಟರ್ ನ್ಯಾಷನಲ್ ಸರ್ವೀಸ್ ನಿರ್ದೇಶಕರಾಗಿ
ಇಂಟರಾಕ್ಟರ್ ಶಿಭಾ ರೈ, ಇಂಟರ‍್ಯಾಕ್ಟ್ ಚೇರ್ಮನ್ ಇಂಟರಾಕ್ಟರ್ ಲೀನಾ ಪಾಯ್ಸ್ ಅದಿಕಾರ ಸ್ವೀಕರಿಸಿದರು. ಇಂಟರ‍್ಯಾಕ್ಟ್ ಕ್ಲಬ್‌ನ ಸಂಯೋಜಕರಾದ ಉಪನ್ಯಾಸಕರಾದ ರಾಮ್ ನಾಯ್ಕ್ ಮತ್ತು ಸುಮಾ ಡಿ ಸಹಕರಿಸಿದರು.
ಪ್ರದರ್ಶನ ಕಲಾ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿ, ರೋಟರಿ ಕ್ಲಬ್ ಪುತ್ತೂರು ಸಿಟಿಯ ಅಧ್ಯಕ್ಷರಾದ ರೊಟೇರಿಯನ್ ಉಲ್ಲಾಸ ಪೈ ಸ್ವಾಗತಿಸಿ, ನೂತನ ಇಂಟರ‍್ಯಾಕ್ಟ್ ಕ್ಲಬ್ ಪದಾಧಿಕಾರಿಗಳಿಗೆ ಪ್ರಮಾಣವಚನವನ್ನು ಬೋಧಿಸಿದರು. ಜೆಸ್ವಿನ್ ಎ. ಜೆ ವಂದಿಸಿ, ವಿದ್ಯಾರ್ಥಿ ವೈಭವ್ ವಿ ಕೆ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.