ಪರಸ್ಪರರ ಕಷ್ಟದಲ್ಲಿ ಸ್ಪಂದಿಸುವವನಲ್ಲಿ ನಾಯಕತ್ವವಿದೆ-ಸತೀಶ್ ಭಟ್
ಪುತ್ತೂರು: ನೆಹರುನಗರದ ಸುದಾನ ಪದವಿ ಪೂರ್ವ ಕಾಲೇಜಿನ 2025-26ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವು ಜು.10ರಂದು ಕಾಲೇಜಿನ ಎಡ್ವರ್ಡ್ ಕಾನ್ಫರೆನ್ಸ್ ಹಾಲ್ನಲ್ಲಿ ನಡೆಯಿತು.

ಸಂಘದ ಉದ್ಘಾಟನೆಯನ್ನು ಶ್ರೀ ರಾಮಕುಂಜ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಸತೀಶ್ ಭಟ್ ಬಿಳಿನೆಲೆ ಅವರು ನೆರವೇರಿಸಿ ಮಾತನಾಡಿ, ನಾಯಕತ್ವದ ಗುಣ ಪ್ರತಿಯೊಬ್ಬರಲ್ಲೂ ತುಂಬಿಕೊಂಡಿರಬೇಕು. ಮೌಲ್ಯಗಳು ಯಾವತ್ತೂ ಚಿರಸ್ಥಾಯಿಯಾಗಿ ಉಳಿಯುತ್ತದೆ. ನಾವು ಯಾವುದರ ಕುರಿತು ಆಲೋಚಿಸುತ್ತೇವೆಯೋ ಅದನ್ನು ಮಾಡಿ ತೋರಿಸುವ ಗುಣ ನಮ್ಮಲ್ಲಿರಬೇಕು. ವ್ಯಕ್ತಿ ಹೇಗಿರುತ್ತಾನೆಯೋ ಹಾಗೆ ಆತನ ಜೀವನ ಅದೇ ರೀತಿ ಇರುತ್ತದೆ. ನಾಯಕತ್ವದಲ್ಲಿ ವಿವಿಧತೆ ಇದೆ. ಅದನ್ನು ಆಯಾಯ ಸಂದರ್ಭಗಳಲ್ಲಿ ಹೇಗೆ ಉಪಯೋಗಿಸಬೇಕು ಎನ್ನುವ ಚಾಕಚಾಕ್ಯತೆ ನಮ್ಮಲ್ಲಿ ಇರಬೇಕು. ಇತರರ ಕಷ್ಟಗಳನ್ನು ಅರ್ಥ ಮಾಡಿಕೊಂಡು ಸಹಾಯ ಮಾಡುವ ಗುಣವು ನಾಯಕತ್ವದ ಗುಣಗಳಲ್ಲಿ ವಿಶಿಷ್ಟವಾದದ್ದು ಎಂದು ಹೇಳಿದರು.
ಕಾಲೇಜಿನ ಸಂಚಾಲಕರಾದ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ವಿದ್ಯಾರ್ಥಿಯ ಬದುಕಿನಲ್ಲಿ ದೊರಕುವ ಅವಕಾಶಗಳನ್ನು ಬಳಸಿಕೊಂಡು ನಾಯಕತ್ವದ ಚುಕ್ಕಾಣಿಯನ್ನು ಹಿಡಿಯುವುದಕ್ಕೆ ಸಮರ್ಥರಾಗಿರಬೇಕು. ದೊರಕಿದ ಅವಕಾಶಗಳನ್ನು ಸಮರ್ಪಕವಾಗಿ ಬಳಸದಿದ್ದಲ್ಲಿ ಅವು ಮತ್ತೆ ದೊರಕುವುದು ಕಷ್ಟ. ಹಾಗಾಗಿ ಅವಕಾಶ ಸಿಕ್ಕಾಗ ಅದರ ಮೌಲ್ಯ ವನ್ನು ಅರಿತುಕೊಂಡು ಬಳಸಿಕೊಳ್ಳಬೇಕು. ಮನುಷ್ಯ ಜೀವನದ ಮೌಲ್ಯಗಳನ್ನು ಕುಟುಂಬದಿಂದ ಹೇಗೆ ಅರಿತುಕೊಳ್ಳುತ್ತಾನೋ ಅದನ್ನು ಸಮಾಜಕ್ಕೆ ಅದೇ ರೀತಿಯಲ್ಲಿ ಒಪ್ಪಿಸಬೇಕು ಇನ್ನೊಬ್ಬರ ಕಷ್ಟದ ಸಂದರ್ಭದಲ್ಲಿ ನಾವು ಸಹಾಯ ಮಾಡುವುದು ಕೂಡಾ ನಾಯಕತ್ವದ ಗುಣ. ಇದನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಬದುಕು ಸಾರ್ಥಕ. ನಾವು ಮಾಡುವ ಕಾರ್ಯವನ್ನು ಪ್ರೀತಿಯಿಟ್ಟು ಮಾಡಿದ್ದಲ್ಲಿ ಜೀವನ ಅತ್ಯಂತ ಸುಂದರವಾಗಿ ಸಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸುದಾನ ಸೆಂಟರ್ ಫಾರ್ ರೂರಲ್ ಡೆವಲಪ್ಮೆಂಟ್ ಆಂಡ್ ಎಜುಕೇಶನ್ನ ಅಧ್ಯಕ್ಷರಾದ ರೆ|ವಿಜಯ ಹಾರ್ವಿನ್ ಮಾತನಾಡಿ, ಪ್ರತಿಯೊಬ್ಬರಿಗೂ ನಾಯಕತ್ವದ ಗುಣ ಹುಟ್ಟಿನಿಂದಲೇ ಬಂದಿರುತ್ತದೆ. ಅದನ್ನು ಯಾವ ಸಂದರ್ಭದಲ್ಲಿ ಬಳಸಿಕೊಳ್ಳಬೇಕು ಎಂಬುದನ್ನು ಸಂದರ್ಭಕ್ಕೆ ತಕ್ಕ ಹಾಗೆ ಆಲೋಚನೆಯನ್ನು ಮಾಡಿಕೊಂಡು ಮುಂದುವರಿಯಬೇಕಾಗುತ್ತದೆ. ನಿಮಗೆ ದೊರಕಿದ ಜವಾಬ್ದಾರಿಯನ್ನು ನಿರ್ವಹಿಸುವ ಜವಾಬ್ದಾರಿ ನಿಮ್ಮಲ್ಲಿರಬೇಕು ಯಾವುದೇ ಕಾರ್ಯವನ್ನು ನಿಷ್ಠೆಯಿಂದ ಕೈಗೊಂಡಾಗ ಅದಕ್ಕೆ ವಿನಾಶ ಎಂಬುದು ಇಲ್ಲ ಎಂದರು. ಕಾಲೇಜಿನ ವಿದ್ಯಾರ್ಥಿ ಪರಿಷತ್ತ್ನ ಅಧ್ಯಕ್ಷರಾದ ತ್ರಿಶಾಲ್ ಕುಮಾರ್ ಸ್ವಾತಿಸಿ, ಕಾರ್ಯದರ್ಶಿ ಮೊಹಮ್ಮದ್ ಶಫೀರ್ ಅತಿಥಿ ಪರಿಚಯ ಮಾಡಿದರು. ಜೊತೆ ಕಾರ್ಯದರ್ಶಿ ಖದೀಜತ್ ರಿಹಾ ವಂದಿಸಿದರು. ಸುದಾನ ಸೆಂಟರ್ ಫಾರ್ ರೂರಲ್ ಡೆವಲಪ್ಮೆಂಟ್ ಆಂಡ್ ಎಜುಕೇಶನ್ನ ಖಜಾಂಚಿ ಆಸ್ಕರ್ ಆನಂದ್ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಸುಪ್ರೀತ್ ಕೆ.ಸಿ ಯವರು ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳಾದ ಆಕಾಂಕ್ಷಾ ಮತ್ತು ತಂಡದವರು ಪ್ರಾರ್ಥಿಸಿದರು. ಎಲ್ಲಾ ತರಗತಿ ಪ್ರತಿನಿಧಿಗಳು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಜಿಯಾ ಸ್ವಿಡಲ್ ಲಸ್ರಾಡೋ ಕಾರ್ಯಕ್ರಮ ನಿರೂಪಿಸಿದರು.