ನಕಲಿ ಸಹಿ ಮಾಡಿ ಒಪ್ಪಿಗೆ ಪತ್ರ ನೀಡಿ ಕಾರು ಖರೀದಿ : ಪರಿಚಯಸ್ಥನಿಂದಲೇ ವಂಚನೆ-ಐವರ ವಿರುದ್ಧ ಪ್ರಕರಣ

0

ಪುತ್ತೂರು: ಕಾರು ಖರೀದಿಸಲೆಂದು ಪರಿಚಯಸ್ಥನೊಂದಿಗೆ ಬಂದು ಮುಂಗಡ ಹಣ ನೀಡಿದ್ದ ತಿಂಗಳ ಬಳಿಕ, ಕಾರು ಬುಕ್ಕಿಂಗ್ ಮಾಡಿದ್ದ ಮಹಿಳೆಯ ಸಹಿ ನಕಲು ಮಾಡಿ ಒಪ್ಪಿಗೆ ಪತ್ರವನ್ನು ಶೋ ರೂಮ್‌ ಗೆ ನೀಡಿ ಕಾರು ಖರೀದಿಸಿ ವಂಚನೆ ಮಾಡಿರುವ ಪ್ರಕರಣವೊಂದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ವಂಚನೆ ಮಾಡಿದ ಆರೋಪಿ ಮತ್ತು ಶೋರೂಮ್ ನ ಮ್ಯಾನೇಜರ್, ಸಂಸ್ಥೆಯ ಅಕೌಂಟೆಂಟ್, ಸೇಲ್ಸ್ ಎಕ್ಸಿಕ್ಯೂಟಿವ್ ಮತ್ತು ಆರೋಪಿಯಿಂದ ಕಾರು ಪಡೆದುಕೊಂಡ ಮಹಿಳೆಯ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಪ್ರಕರಣದ ವಿವರ:

ಅಮರಮುಡ್ನೂರು ಗ್ರಾಮದ ಚೊಕ್ಕಾಡಿ ನಿವಾಸಿ ಕಾವ್ಯ ಎಂ. ಎಂಬವರು ತನ್ನ ತಮ್ಮ ಲಿಖಿತ್, ತಂಗಿ ಪೂರ್ಣಿಮಾ ಮತ್ತು ಪರಿಚಯಸ್ಥನಾಗಿರುವ ಬೆಂಗಳೂರು ನಿವಾಸಿ ಅನಿಲ್ ಕುಮಾರ್ ಎಂಬಾತನ ಜೊತೆ 2024ರ ಫೆ.29ರಂದು ಪುತ್ತೂರುನ ಕಾರ್ ಶೋ ರೂಮ್‌ ಗೆ ಬಂದು ಬ್ರೆಝಾ ಕಾರು ಬುಕ್ ಮಾಡಿ ಮುಂಗಡ ಹಣವಾಗಿ ರೂ.1.50 ಲಕ್ಷವನ್ನು ಶೋರೂಮ್‌ನ ಸೇಲ್ಸ್ ಎಕ್ಸಿಕ್ಯೂಟಿವ್ ಪೃಥ್ವಿ ಅವರಿಗೆ ನೀಡಿದ್ದರು.

ಕಾರಿನ ಮುಂಗಡ ಹಣದ ಪೈಕಿ ಬಾಕಿ ಉಳಿದಿದ್ದ 40 ಸಾವಿರ ರೂ.ಗಳನ್ನು 2024ರ ಮಾ.5ಕ್ಕೆ ಯುಪಿಐ ಮೂಲಕ ಪಾವತಿಸಿದ್ದರು. ನಂತರ ಕಾವ್ಯ ಅವರಿಗೆ ಕಾರು ಖರೀದಿಸಲು ಅನಾನುಕೂಲ ಆಗಿದ್ದರಿಂದ, ಕಾರು ಖರೀದಿಸಲು ಸ್ವಲ್ಪ ಕಾಲಾವಕಾಶ ಕೋರಿದ್ದರಲ್ಲದೆ ಮುಂಗಡ ಹಣ ನಿಮ್ಮಲ್ಲೇ ಇರಲಿ ಎಂದು ಪೃಥ್ವಿಯವರಿಗೆ ತಿಳಿಸಿದ್ದರು. ಬಳಿಕ ಅಗಸ್ಟ್ ತಿಂಗಳಲ್ಲಿ ಪೃಥ್ವಿ ಅವರಿಗೆ ಕರೆ ಮಾಡಿ ತಾನು ಕಾರು ಖರೀದಿಸುವುದಾಗಿ ಹೇಳಿದಾಗ, ಅನಿಲ್ ಎಂಬವರು ನಿಮ್ಮ ಸಹಿ ಇರುವ ಒಪ್ಪಿಗೆ ಪತ್ರವನ್ನು ಕೊಟ್ಟು ಕಾರನ್ನು ಖರೀದಿಸಿದ್ದಾರೆ ಎಂದು ಪೃಥ್ವಿ ತಿಳಿಸಿದ್ದರು. ಬಳಿಕ ಈ ಕುರಿತು ಶೋರೂಮ್ ನಲ್ಲಿ ವಿಚಾರಿಸಿದಾಗ, ಕಾವ್ಯ ಅವರು ನೀಡಿದ್ದ ಮುಂಗಡ ಹಣವನ್ನು ಹೊಂದಾಣಿಕೆ ಮಾಡಿ ಅನಿಲ್ ಖರೀದಿಸಿದ ಕಾರನ್ನು ಹೇಮ ಎಂಬವರಿಗೆ ನೀಡಿರುವ ಮಾಹಿತಿ ಲಭ್ಯವಾಗಿತ್ತು. ಈ ರೀತಿ ಮೋಸ ಮಾಡುವ ಉದ್ದೇಶದಿಂದ ತನ್ನ ನಕಲಿ ಸಹಿ ಮಾಡಿ ಒಪ್ಪಿಗೆ ಪತ್ರವನ್ನು ಶೋರೂಮ್ ಗೆ ನೀಡಿ ಕಾರನ್ನು ಖರೀದಿಸಿದ್ದ ಅನಿಲ್ ಕುಮಾರ್ ಹಾಗು ಕಾರು ಖರೀದಿ ಮಾಡಿದ್ದ ಬಗ್ಗೆ ಯಾವುದೇ ಮಾಹಿತಿ ನೀಡದೆ ಕಾರನ್ನು ನೀಡಿದ ಶೋರೂಮ್ ಮ್ಯಾನೇಜರ್, ಅಕೌಂಟೆಂಟ್, ಸೇಲ್ಸ್ ಎಕ್ಸಿಕ್ಯೂಟಿವ್‌ ಪೃಥ್ವಿ ಹಾಗು ಕಾರು ಖರೀದಿ ಮಾಡಿದ್ದ ಹೇಮ ಎಂಬವರ ವಿರುದ್ಧ ಕಾವ್ಯ ಅವರು ನೀಡಿದ್ದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಜು.10ರಂದು ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here