ಕೋಡಿಂಬಾಳ: ಓಂತ್ರಡ್ಕ ಶಾಲಾ ಮಂತ್ರಿಮಂಡಲ ಚುನಾವಣೆಗೆ ಅಂಚೆ ಮತದಾನ ಮೂಲಕ ರಚನೆ

0

ಎರಡು ಪಕ್ಷಗಳು ಸಮಬಲ-ಸಮ್ಮಿಶ್ರ ಸರಕಾರ ರಚನೆ

ಕಡಬ: ಶಿಕ್ಷಣದ ಜೊತೆಗೆ ಮತದಾನದ ಅರಿವು ಮೂಡಿಸುವ ನಿಟ್ಟಿನಲ್ಲಿ ಕೊಡಿಂಬಾಳ ಗ್ರಾಮದ ಓಂತ್ರಡ್ಕ ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಂತ್ರಿ ಮಂಡಲ ರಚನೆಯನ್ನು ಅಂಚೆ ಮತದಾನದ ಮೂಲಕ ನಡೆಸಲಾಯಿತು.

ಹಲವು ವರ್ಷಗಳಿಂದ ಮತದಾನದ ವಿವಿಧ ವಿಧಾನಗಳನ್ನು ಮಕ್ಕಳಿಗೆ ಪರಿಚಯಿಸುತ್ತಾ ಶಿಕ್ಷಣ ಇಲಾಖೆಯಲ್ಲಿ ಮೆಚ್ಚುಗೆಗೆ ಪಾತ್ರವಾಗಿತ್ತು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಅಂಚೆ ಮತದಾನದ ಮೂಲಕ ಮಂತ್ರಿ ಮಂಡಲದ ಸದಸ್ಯರನ್ನು ಆಯ್ಕೆ ಮಾಡಲು ವ್ಯವಸ್ಥೆ ಮಾಡಲಾಯಿತು. ಶಾಲಾ ಜಿ.ಪಿ.ಟಿ ಶಿಕ್ಷಕ ದಿಲೀಪ್ ಕುಮಾರ್ ಸಂಪಡ್ಕರವರು ಈ ಹೊಸ ಪ್ರಯೋಗಕ್ಕೆ ಕೈ ಹಾಕಿ ಹೊಸ ಚಿಂತನೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.


ಹೇಗಿತ್ತು ಅಂಚೆ ಮತದಾನ ತಯಾರಿ:
ಆರಂಭದಲ್ಲಿ ನಾಮಪತ್ರ ಸಲ್ಲಿಕೆ, ಪರಿಶೀಲನೆ, ನಾಮಪತ್ರ ಹಿಂಪಡೆಯಲು ಅವಕಾಶ ಮತ್ತು ದಿನಾಂಕಗಳನ್ನು ಪ್ರಕಟಸಲಾಯಿತು. ಬಳಿಕ ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿ ಅವರಿಗೆ ನೀಡಿದ ಚಿಹ್ನೆಯನ್ನು ಹೊಂದಿರುವ ಮತಪತ್ರವನ್ನು ಮುದ್ರಿಸಿ ಮತಪತ್ರಗಳನ್ನು ವ್ಯವಸ್ಥಿತವಾಗಿ ಮಡಿಚಿ ಶಾಲೆಯ ಸ್ವ ವಿಳಾಸ ಹೊಂದಿದ ಅಂಚೆ ಲಕೋಟೆಯನ್ನು ಮಕ್ಕಳ ಮನೆಗೆ ಅಂಚೆ ಮೂಲಕ ಕಳುಹಿಸಲಾಯಿತು. ಇದರ ಜೊತೆಗೆ ಪೋಷಕರಿಗೆ ಘೋಷಣೆ ಪತ್ರವೊಂದನ್ನು ಜೊತೆಗಿರಿಸಲಾಯಿತು. ಅಂಚೆ ಮೂಲಕ ಮತಪತ್ರ ಮನೆಗೆ ತಲುಪಿದಾಗ ಮಕ್ಕಳೇ ಸ್ವತಃ ತೆರೆಯಬೇಕು. ಯಾವುದೇ ಕಾರಣಕ್ಕೂ ಮಕ್ಕಳ ಅನುಪಸ್ಥಿತಿಯಲ್ಲಿ ಮನೆಯವರು ತೆರೆಯದಂತೆ ಪೋಷಕರಿಗೆ ಸೂಚನೆ ನೀಡಲಾಗಿತ್ತು. ಘೋಷಣ ಪತ್ರಕ್ಕೆ ಪೋಷಕರು ಸಹಿ ಮಾಡುವುದು ಕಡ್ಡಾಯ ಮಾಡಲಾಗಿತ್ತು. ಈ ಘೋಷಣಾ ಪತ್ರದಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಗೌಪ್ಯವಾಗಿ ಮತದಾನ ಮಾಡಲು ವ್ಯವಸ್ಥೆ ಮಾಡುವ ಷರತ್ತನ್ನು ವಿಧಿಸಲಾಗಿತ್ತು. ಪ್ರಕ್ರಿಯೆಗಳು ನಡೆದ ಬಳಿಕ ಅಂಚೆ ಲಕೋಟೆಯಲ್ಲಿ ಭದ್ರವಾಗಿ ಅಂಚಿಸಿ ಮತ್ತೆ ಶಾಲೆಗೆ ಅಂಚೆ ಮೂಲಕ ತಲುಪಿಸಬೇಕಾಗಿತ್ತು. ಅಂಚೆ ಮೂಲಕ ಬಂದ ಮತಪತ್ರವನ್ನು ಶಾಲೆಯಲ್ಲಿ ಸ್ಥಾಪಿಸಿದ ಮತ ಪೆಟ್ಟಿಗೆಯಲ್ಲಿ ಸಂಗ್ರಹಿಸಲಾಯಿತು. ನಿಗಧಿತ ದಿನಾಂಕದ ಒಳಗೆ ಬಂದ ಮತಪತ್ರವನ್ನು ಮಾತ್ರ ಎಣಿಕೆಗೆ ಪರಿಗಣಿಸಲಾಯಿತು. ಶೇ.100 ಮತದಾನವಾಗಿತ್ತು. ಅಂಚೆ ರವಾಣೆ ವೆಚ್ಚವನ್ನು ಶಿಕ್ಷಕರು ಭರಿಸಿದ್ದರು. ಮಂತ್ರಿ ಮಂಡಲದ ಚುನಾವಣೆಗೆ ಓಂತ್ರಡ್ಕ ಮಕ್ಕಳ ಪಕ್ಷ’ ಮತ್ತು’ಪ್ರಜಾಪ್ರಭುತ್ವ ಮಕ್ಕಳ ಪಕ್ಷ’ ಎಂಬ ಎರಡು ಪಕ್ಷಗಳ ಅಡಿಯಲ್ಲಿ ಮಕ್ಕಳು ಚುನಾವಣೆಯಲ್ಲಿ ಭಾಗವಹಿಸಿದರು.


ಸಮಿಶ್ರ ಸರ್ಕಾರರಚನೆ:
ಈ ವರ್ಷದ ಚುನಾವಣೆಯಲ್ಲಿ ಎರಡು ಪಕ್ಷಗಳು ತಲಾ ಐದು ಸ್ಥಾನಗಳನ್ನು ಪಡೆದಿರುವುದರಿಂದ ಎರಡು ಪಕ್ಷಗಳು ಬಹುಮತ ಸಾಧಿಸಲು ವಿಫಲವಾಗಿರುವುದರಿಂದ ಎರಡು ಪಕ್ಷಗಳು ಸೇರಿ ಸಮಿಶ್ರ ಸರ್ಕಾರವನ್ನು ರಚಿಸಬೇಕಾಯಿತು.


ಆಯ್ಕೆಯಾದವರು:
ಕಾರ್ತಿಕ್.ಕೆ (ಮುಖ್ಯ ಮಂತ್ರಿ) ,ಶ್ರವಣ್ ಕುಮಾರ್ (ಉಪ ಮುಖ್ಯಮಂತ್ರಿ ) ನಿಶಾಂತ್ (ಗೃಹ ಮಂತ್ರಿ) , ಲಕ್ಷ್ಮಣ (ಕೃಷಿ ಮಂತ್ರಿ), ಚೈತ್ರಾ (ವಾರ್ತಾ ಮಂತ್ರಿ), ಮೋಕ್ಷಿತ್.ಬಿ (ಕ್ರೀಡಾ ಮಂತ್ರಿ), ಪ್ರೇಮ್‌ಕಿರಣ್ (ಶಿಕ್ಷಣ ಮಂತ್ರಿ), ವೇಣುಗೋಪಾಲ (ನೀರಾವರಿ ಮಂತ್ರಿ), ಶ್ರಾವಣಿ.ಕೆ(ಆರೋಗ್ಯ ಮಂತ್ರಿ), ಸುವೀಕ್ಷಾ (ಸಾಂಸ್ಕೃತಿಕ ಮಂತ್ರಿ), ಫಾತಿಮತ್ ಸಫಾ (ಸಭಾಪತಿ), ಎಂ. ಪಲ್ಲವಿ (ವಿರೋಧಪಕ್ಷದ ನಾಯಕಿ), ವಿರೋದ ಪಕ್ಷದ ಸದಸ್ಯರಾಗಿ ಶ್ವೇತಾ, ಶ್ರಾವಂತ್.ಕೆ, ಆಯಿಷಾಯತ್ ಶಿಫಾ, ಸುಕನ್ಯ, ಹರ್ಷಿತಾ, ಮಹಮ್ಮದ್‌ರಾಝಿಮ್. ಚೃತ್ರಾ.ಎಲ್.ವಿ, ಮುಖ್ಯ ಶಿಕ್ಷಕ ನೀಲಯ್ಯ ನಾಯ್ಕ ಚುಣಾವಣಾಧಿಕಾರಿಯಾಗಿದ್ದರು.

ನೀಲಯ್ಯ ನಾಯ್ಕ ಮಖ್ಯ ಶಿಕ್ಷಕರು ಸ.ಹಿಪ್ರಾ.ಶಾಲೆ ಓಂತ್ರಡ್ಕ
ಸರ್ಕಾರಿ ನೌಕರರಿಗೆ ಇರುವಂತಹ ಅಂಚೆ ಮತದಾನದ ಪರಿಚಯವನ್ನು ಈ ಚಟುವಟಿಕೆಯ ಮೂಲಕ ನೀಡಲಾಗಿದೆ ವಿಬಿನ್ನ ರೀತೀಯ ಚುನಾವಣಾ ಪ್ರಕ್ರಿಯೆಗೆ ವಿದ್ಯಾರ್ಥಿಗಳಿಂದ , ಪೋಷಕರಿಂದ ಬೆಂಬಲ ವ್ಯಕ್ತವಾಗಿದೆ.

ದಿಲೀಪ್‌ಕುಮಾರ್ ಸಂಪಡ್ಕ ಜಿ.ಪಿ.ಟಿ ಶಿಕ್ಷಕ
ಕೆಲವು ವರ್ಷಗಳ ಹಿಂದೆ ಇವಿಎಂ ಆಫ್ ಮೂಲಕ ಮತದಾನ ಮಾಡಲಾಗಿತ್ತು. ಕಳೆದ ವರ್ಷ ಆನ್‌ಲೈನ್ ಮತದಾನ ಕಲ್ಪನೆಯನ್ನು ಮೂಡಿಸಲಾಗಿತ್ತು. ಈ ವರ್ಷ ಅಂಚೆ ಮತದಾನವನ್ನು ಪರಿಚರಿಯಲಾಗಿದೆ. ಎಲ್ಲಾ ಮಕ್ಕಳಿಗೆ ಎಲ್ಲಾ ವಿವಿಧ ಮತದಾನದ ಕಲ್ಪನೆಯನ್ನು ನೈಜವಾಗಿ ಅರ್ಥೈಯಿಸುವುದು ಉದ್ದೇಶವಾಗಿದೆ.

ಕಾರ್ತಿಕ್, ವಿದ್ಯಾರ್ಥಿ ಹಾಗೂ ಶಾಲಾ ಮಂತ್ರಿ ಮಂಡಲದ ಮುಖ್ಯಮಂತ್ರಿ
ನಮ್ಮ ಶಾಲೆಯಲ್ಲಿ ಪ್ರತಿ ಬಾರೀ ವಿವಿಧ ರೀತಿಯಲ್ಲಿ ಶಾಲಾ ಮಂತ್ರಿಮಂಡಲದ ಚುನಾವಣೆಯನ್ನು ನಡೆಸಲಾಗುತ್ತಿದೆ. ಈ ವರ್ಷವೂ ನಮ್ಮಲ್ಲಿ ಬಹಳ ಕತೂಹಲ ಇತ್ತು. ಅಂಚೆ ಮತದಾನದಿಂದ ಅದು ನಿಜವಾಗಿದೆ. ಹೊಸ ಜ್ಞಾನವನ್ನು ಪಡೆದಿದ್ದೇವೆ.

LEAVE A REPLY

Please enter your comment!
Please enter your name here