ವಿದ್ಯಾವಂತರಾದರೂ ಆಚಾರವಂತರಾಗುತ್ತಿಲ್ಲ: ಡಿ.ಹರ್ಷೇಂದ್ರ ಕುಮಾರ್
ನೆಲ್ಯಾಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ ಉಜಿರೆ ಇದರ ಆಡಳಿತಕ್ಕೊಳಪಟ್ಟ ಶ್ರೀ ಲಕ್ಷ್ಮೀ ನಾರಾಯಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಾಣಗೊಂಡ ನೂತನ ಕಟ್ಟಡದ ಉದ್ಘಾಟನೆ ಜು.14ರಂದು ಬೆಳಿಗ್ಗೆ ನಡೆಯಿತು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ರವರು ನಾಮಫಲಕ ಅನಾವರಣಗೊಳಿಸಿ ನೂತನ ಕಟ್ಟಡ ಉದ್ಘಾಟಿಸಿದರು. ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಹರ್ಷೇಂದ್ರ ಕುಮಾರ್ ಅವರು, ಕೀರ್ತಿಶೇಷ ವೆಂಕಟಸುಬ್ರಹ್ಮಣ್ಯಂ ಅಯ್ಯರ್ ಅವರು 71 ವರ್ಷದ ಹಿಂದೆ ಕಾಂಚನದಲ್ಲಿ ಸಂಗೀತ ಶಾಲೆ ಆರಂಭಿಸಿ, ಸಂಗೀತದ ಮೂಲಕ ಕಾಂಚನದ ಹೆಸರನ್ನು ದೇಶವ್ಯಾಪಿಗೊಳಿಸಿದ್ದಾರೆ. ಇದೀಗ ಅವರು ಆರಂಭಿಸಿದ ವಿದ್ಯಾಸಂಸ್ಥೆಯನ್ನು ಅವರ ಮನೆಯವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಆಡಳಿತಕ್ಕೆ ಒಪ್ಪಿಸಿದ್ದಾರೆ. ಶಾಲೆ, ದೇವಸ್ಥಾನ, ಆಸ್ಪತ್ರೆಗಳು ಊರಿಗೆ ಕಲಶವಿದ್ದಂತೆ ಹಾಗೂ ಊರಿಗೆ ಜೀವಕಲೆ ಇದ್ದಂತೆ. ವಿದ್ಯೆ ಇದ್ದರೆ ಎಲ್ಲಿಯೂ ಬದುಕಬಹುದು. ವಿದ್ಯೆಯಿಂದ ಎಲ್ಲರೂ ವಿಚಾರವಂತರಾಗುತ್ತಿದ್ದೇವೆ. ಆದರೆ ಆಚಾರವಂತರಾಗುತ್ತಿಲ್ಲ ಎಂಬುದು ವಿಷಾಧನೀಯ ಎಂದರು. ಈ ವಿದ್ಯಾಸಂಸ್ಥೆಯಲ್ಲಿದ್ದ ಕೊರತೆ ನೀಗಿಸಿದ್ದೇವೆ. ಊರಿನ ಜನರು ಶಾಲೆಯ ಬೆಳವಣಿಗೆಗೆ ಸಹಕಾರ ನೀಡಬೇಕು. ಸರಕಾರದ ದ್ವಿಭಾಷಾ ನೀತಿಗೆ ಪೂರಕವಾಗಿ ಶಿಕ್ಷಕರೇ ಮನ: ಪೂರ್ವಕವಾಗಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಇಲ್ಲಿ ಶಿಕ್ಷಣ ನೀಡುತ್ತಿದ್ದಾರೆ. ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದು ಡಿ.ಹರ್ಷೇಂದ್ರಕುಮಾರ್ ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಕಾಂಚನ ರೋಹಿಣಿ ಸುಬ್ಬರತ್ನಂ ಅವರು ಮಾತನಾಡಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತಕ್ಕೊಳಪಟ್ಟ ಬಳಿಕ ವಿದ್ಯಾಸಂಸ್ಥೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಕಟ್ಟಡ ನವೀಕರಣದ ವೇಳೆ ಶಾಲೆಯ ಹಳೆಯ ಕಟ್ಟಡ ಉಳಿಸಿಕೊಂಡಿರುವುದು ಸಂತಸ ತಂದಿದೆ. ಈ ಹಿಂದೆ ಇದೇ ಕಟ್ಟಡದಲ್ಲಿ ಕಾಂಚನೋತ್ಸವ ನಡೆಯುತ್ತಿದ್ದು ಹಿರಿಯ ವಿದ್ವಾಂಸರು ಆಗಮಿಸಿ ಸಂಗೀತ ಕಛೇರಿ ನೀಡಿದ್ದಾರೆ. ಇದರ ನೆನಪು ಉಳಿಯುವಂತಾಗಿದೆ ಎಂದರು.
ಇನ್ನೋರ್ವ ಅತಿಥಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್.ಮಾತನಾಡಿ, ವಿದ್ಯೆ ಶ್ರೇಷ್ಠ ದಾನ, ಶಿಕ್ಷಣ ಬದುಕಿನ ಕೊನೆಯ ತನಕವೂ ಇರುವಂತದ್ದು. ಮಾತೃಭಾಷೆಯಲ್ಲೇ ಶಿಕ್ಷಣ ಪಡೆಯುವುದರಿಂದ ಭವಿಷ್ಯದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಮಕ್ಕಳಲ್ಲಿ ಐಎಎಸ್, ಐಪಿಎಸ್ ಆಗಬೇಕೆಂಬ ಕನಸನ್ನು ಪೋಷಕರು ಬಾಲ್ಯದಲ್ಲೇ ಬಿತ್ತಬೇಕು. ಮೊಬೈಲ್ನಿಂದ ಮಕ್ಕಳು ದೂರವಿರಬೇಕೆಂದು ಹೇಳಿದರು.
ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಅವರು, 1954ರಲ್ಲಿ ವೆಂಕಟಸುಬ್ರಹ್ಮಣ್ಯ ಅಯ್ಯರ್ ಅವರು ಶ್ರೀ ಲಕ್ಷ್ಮೀನಾರಾಯಣ ಅನುದಾನಿತ ಹಿ.ಪ್ರಾ.ಶಾಲೆ ಸ್ಥಾಪಿಸಿದ್ದರು. 1982ರಲ್ಲಿ ಕಾಂಚನ ವಿ.ಸುಬ್ಬರತ್ನಂ ಅವರು ಕಾಂಚನ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆ ಆರಂಭಿಸಿದ್ದರು. 2007ರಲ್ಲಿ ಈ ಎರಡೂ ವಿದ್ಯಾಸಂಸ್ಥೆಗಳ ಆಡಳಿತವನ್ನು ಕಾಂಚನ ಮನೆತನದವರು ಶ್ರೀ ಧರ್ಮಸ್ಥಳ ಎಜುಕೇಶನಲ್ ಸೊಸೈಟಿಗೆ ಹಸ್ತಾಂತರ ಮಾಡಿದರು. ಆ ಬಳಿಕ ಇಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. 2019-20ನೇ ಸಾಲಿನಲ್ಲಿ 77 ವಿದ್ಯಾರ್ಥಿಗಳಿದ್ದ ಈ ವಿದ್ಯಾಸಂಸ್ಥೆಯಲ್ಲಿ ಈಗ ಮಕ್ಕಳ ಸಂಖ್ಯೆ 212ಕ್ಕೆ ಏರಿಕೆಯಾಗಿದೆ. ಕನ್ನಡ ಮಾಧ್ಯಮ ಶಾಲೆಯಾಗಿದ್ದರಿಂದ ಹಲವು ಸವಾಲು, ಸಮಸ್ಯೆಗಳನ್ನು ಮೆಟ್ಟಿನಿಂತು ವಿದ್ಯಾಸಂಸ್ಥೆ ಬೆಳೆದಿದೆ ಎಂದರು. ಇದೀಗ ರೂ.1 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಹಳೆಯ ಕಟ್ಟಡ ನವೀಕರಣ ಹಾಗೂ ವಿಸ್ತೃತ ಕಟ್ಟಡ ನಿರ್ಮಾಣಗೊಂಡಿದೆ. ಫರ್ನೀಚರ್ ಸೇರಿದಂತೆ ಎಲ್ಲಾ ಸೌಲಭ್ಯ ಒದಗಿಸಲಾಗಿದೆ. ನಗರದ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಅಭಿವೃದ್ಧಿಗೊಳಿಸಲಾಗಿದೆ ಎಂದು ಡಾ.ಸತೀಶ್ಚಂದ್ರ ಹೇಳಿದರು.
ಸುಪ್ರಿಯಾ ಹರ್ಷೇಂದ್ರಕುಮಾರ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಮಧುಶ್ರೀ ಯಾದವ ಗೌಡ, ಕಾಂಚನ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯ ಮುಖ್ಯಗುರು ರಮೇಶ್ ಮಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಂಚನ ಶ್ರೀ ಲಕ್ಷ್ಮೀನಾರಾಯಣ ಅನುದಾನಿತ ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕ ಎ.ಲಕ್ಷ್ಮಣ ಗೌಡ ವಂದಿಸಿದರು. ಸುಳ್ಯ ಅರಂತೋಡು ನೆಹರು ಸ್ಮಾರಕ ಪ.ಪೂ.ಕಾಲೇಜಿನ ಉಪನ್ಯಾಸಕ ಮೋಹನ್ಚಂದ್ರ ತೋಟದಮನೆ ಪದಕ ನಿರೂಪಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ಗೌರವಾರ್ಪಣೆ:
ಡಿ.ಹರ್ಷೇಂದ್ರಕುಮಾರ್ ಹಾಗೂ ಸುಪ್ರಿಯಾಹರ್ಷೇಂದ್ರ ದಂಪತಿಯನ್ನು ಕಾಂಚನ ವಿದ್ಯಾಸಂಸ್ಥೆ ಹಾಗೂ ಶ್ರೀ ಕ್ಷೇ.ಧ.ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಗೌರವಿಸಲಾಯಿತು. ರೋಹಿಣಿ ಸುಬ್ಬರತ್ನಂ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ಕಟ್ಟಡದ ಇಂಜಿನಿಯರ್ ಯಶೋಧರ, ಗುತ್ತಿಗೆದಾರ ಅಬ್ದುಲ್ಲಾ, ಮೇಲ್ವಿಚಾರಕ ಮೋಹನದಾಸ ಪ್ರಭು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.