“ಕಲಿತವಿದ್ಯೆಯುಎಂದಿಗೂಕದಿಯಲಾಗದಶಾಶ್ವತ ಸಂಪತ್ತು ”-ಖ್ಯಾತ ಕಲಾವಿದರಾದ ಭೋಜರಾಜ್ ವಾಮಂಜೂರು
- ಪುತ್ತೂರು: ವಿದ್ಯಾರ್ಥಿಗಳು ಕಲೆ, ಸಾಹಿತ್ಯ,ವಿಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅಪಾರ ಆಸಕ್ತಿ ಹೊಂದಿರುತ್ತಾರೆ. ಇಂತಹ ಅಭಿರುಚಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮೊದಲಿಗೆ ಮನೆಯಿಂದ ಆಗಬೇಕು. ಯಾವಾಗ ತಂದೆ-ತಾಯಿ ತಮ್ಮ ಮಕ್ಕಳ ಆಸಕ್ತಿಗಳನ್ನು ಗುರುತಿಸಿ ಬೆಳೆಸುತ್ತಾರೋ, ಅಂತಹ ಮಗು ಯಶಸ್ಸನ್ನು ಕಾಣಲು ಸಾಧ್ಯವಾಗುತ್ತದೆ. ವಿವೇಕಾನಂದ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರತಿಭೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಸಮಾನ ಅವಕಾಶಗಳನ್ನು ನೀಡಿ, ವಿದ್ಯಾರ್ಜನೆಯ ಜೊತೆಗೆ ಪ್ರತಿಯೊಬ್ಬ ವಿದ್ಯಾರ್ಥಿಯು ಅಳವಡಿಸಿಕೊಳ್ಳಲೇಬೇಕಾದ ಸಂಸ್ಕಾರಗಳನ್ನು ಒಳಗೊಂಡ ಶಿಕ್ಷಣ ನೀಡುವಲ್ಲಿ ಸಫಲವಾಗಿದೆ. ತುಳುನಾಡಿನ ಸಂಸ್ಕಾರ, ಸಂಸ್ಕೃತಿ ಉಳಿಸುವಲ್ಲಿ ಶಿಸ್ತು ಬಹಳ ಪ್ರಾಮುಖ್ಯತೆ ವಹಿಸುತ್ತದೆಎಂದು ನುಡಿಯುತ್ತಾ, ಕಾಲೇಜಿನ ವಿದ್ಯಾರ್ಥಿಗಳ ಶಿಸ್ತಿಗೆ ತುಳು ಚಿತ್ರರಂಗದ ಖ್ಯಾತ ಕಲಾವಿದರಾದ ಭೋಜರಾಜ್ ವಾಮಂಜೂರು ಮೆಚ್ಚುಗೆ ವ್ಯಕ್ತಪಡಿಸಿದರು.
- ಅವರು ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಪ್ರತಿಭಾ ದಿನಾಚರಣೆ “ವಿವೇಕ ನಾವಿನ್ಯ -2025” ಇದನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಕೋಶಾಧಿಕಾರಿಗಳಾದ ಸಚಿನ್ ಶೆಣೈ ವಹಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ತಮ್ಮ ಪ್ರತಿಭೆಗೆ ಸಿಗುವ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಈ ಸಂಸ್ಥೆಯು ವಿದ್ಯಾರ್ಥಿಗಳ ಯಶಸ್ಸಿಗೆ ಸದಾ ಪ್ರೋತ್ಸಾಹವನ್ನು ನೀಡುತ್ತಿದೆ ಎಂದು ಹೇಳಿದರು.

ಸಭಾ ಕಾರ್ಯಕ್ರಮದಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಪ್ರಥಮ ಪಿ.ಯು.ಸಿ.ಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಹಾಗೂ ಹತ್ತನೇ ತರಗತಿಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಪಿ, ಸಂಚಾಲಕ ಎಂ.ಗೋಪಾಲಕೃಷ್ಣ ಭಟ್, ನಿರ್ದೇಶಕ ಡಾ. ಕೆ.ಎನ್ ಸುಬ್ರಹ್ಮಣ್ಯ, ಪ್ರಾಂಶುಪಾಲ ಎಂ. ದೇವಿಚರಣ್ ರೈ, ಚಲನಚಿತ್ರ ವಿತರಕರಾದ ಬಾಲಕೃಷ್ಣ ಶೆಟ್ಟಿ, ಉಪನ್ಯಾಸಕ, ಉಪನ್ಯಾಸಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾದರು.
ಈ ಸಂದರ್ಭದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಸ್ವಾಗತ ಗೀತೆಯ ಮೂಲಕ ವಿಶೇಷವಾಗಿ ಸ್ವಾಗತಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಗಣಿತ ಶಾಸ್ತ್ರ ವಿಭಾಗದ ಉಪನ್ಯಾಸಕಿ ಕವಿತಾ ನಿರೂಪಿಸಿದರು. ಪ್ರಾಂಶುಪಾಲರಾದ ಎಂ. ದೇವಿಚರಣ್ ರೈ ಸ್ವಾಗತಿಸಿ, ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ಅಕ್ಷತಾ ವಂದಿಸಿದರು. ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿ ಭಾಗ್ಯಶ್ರೀ ಪ್ರಾರ್ಥಿಸಿದರು.