ನೆಲ್ಯಾಡಿ: ಶ್ರೀರಾಮ ವಿದ್ಯಾಲಯ ಸೂರ್ಯನಗರ ನೆಲ್ಯಾಡಿ ಇಲ್ಲಿ ಆಂಗ್ಲ ಮಾಧ್ಯಮ ಶಾಲೆಯ ನೂತನ ಕೊಠಡಿಗಳ ಉದ್ಘಾಟನೆ ಮತ್ತು ಆಂಗ್ಲಮಾಧ್ಯಮ ವಿಭಾಗದ ಆಗತ-ಸ್ವಾಗತ ಕಾರ್ಯಕ್ರಮ ಜು.15ರಂದು ನಡೆಯಿತು.
ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಉದ್ಘಾಟಿಸಿದರು. ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದಿನ ತಾಂತ್ರಿಕ ಯುಗದಲ್ಲಿ ವಿದ್ಯಾರ್ಥಿಗಳು ಪಾಠದ ಜೊತೆಗೆ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಬೆಳೆಯಬೇಕು. ಆಧ್ಯಾತ್ಮಿಕ ಶಿಕ್ಷಣ ನೀಡುವ ವಿದ್ಯಾಸಂಸ್ಥೆಯಲ್ಲಿ ಮಕ್ಕಳು ಕಲಿಯುವುದರಿಂದ ಮುಂದೆ ಅವರು ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳುತ್ತಾರೆ. ಆಂಗ್ಲ ಭಾಷೆಯ ಕಲಿಕೆಯ ಜೊತೆಗೆ ನಮ್ಮ ಪರಂಪರೆ, ಧರ್ಮ, ಸಂಸ್ಕೃತಿಯನ್ನು ಮರೆಯಬಾರದು ಎಂದರು. ಅಧ್ಯಕ್ಷತೆ ವಹಿಸಿದ್ದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಮಾತನಾಡಿ, ಮಕ್ಕಳಿಗೆ ಕೇವಲ ಪಠ್ಯ ಪುಸ್ತಕದ ಜ್ಞಾನವಲ್ಲ, ನಾಡು-ನುಡಿ, ನಂಬಿಕೆ ಹಾಗೂ ನಡತೆ ತಿಳಿಯುವಂತಹ ವಿದ್ಯೆ ನೀಡುವುದು. ಸಂಪ್ರದಾಯ, ಆಚಾರ, ಸನಾತನ ಮೌಲ್ಯಗಳು ಪ್ರಾರಂಭದಿಂದಲೇ ಅವರ ಬದುಕಿನಲ್ಲಿ ಬೆಳೆಸಬೇಕು ಎಂಬುದು ನಮ್ಮ ಆಶಯ ಆಗಿದೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿವೃತ್ತ ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಮಾತನಾಡಿದರು. ಶಾಲಾ ಮುಖ್ಯಶಿಕ್ಷಕ ಗಣೇಶ್ ವಾಗ್ಲೆ ಉಪಸ್ಥಿತರಿದ್ದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ಮುರಳೀಧರ ಸ್ವಾಗತಿಸಿದರು. ಕಾರ್ಯದರ್ಶಿ ಮೂಲಚಂದ್ರ ಕಾಂಚನ ವಂದಿಸಿದರು. ಮಾತಾಜಿ ಶುಭರಾಣಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಗೌರವಾಧ್ಯಕ್ಷರಾದ ಶ್ರೀಧರ ಗೋರೆ, ಡಿಸಿಸಿ ಬ್ಯಾಂಕ್ನ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು, ಉಪಾಧ್ಯಕ್ಷ ರವಿಚಂದ್ರ ಹೊಸವಕ್ಲು, ಸುಬ್ರಾಯ ಪುಣಚ, ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷೆ ಸುಪ್ರೀತಾ ರವಿಚಂದ್ರ ಹೊಸವಕ್ಲು, ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ತಿಲಕವಿಟ್ಟು ಸ್ವಾಗತ:
ನೂತನವಾಗಿ ಸೇರ್ಪಡೆಗೊಂಡ ಮಕ್ಕಳಿಗೆ ಶಾಲಾ ಮಾತಾಜಿಯವರು ಆರತಿ ಬೆಳಗಿ, ತಿಲಕ ವಿಟ್ಟು ಸ್ವಾಗತಿಸಿದರು. ಪೋಷಕರೊಂದಿಗೆ ವಿದ್ಯಾರ್ಥಿಗಳು ಹಿರಿಯರಿಂದ ಆಶೀರ್ವಾದ ಪಡೆದುಕೊಂಡರು.