ಅಡಿಕೆ ಅಂಗಡಿಯಿಂದ 5ಲಕ್ಷ ರೂ ಕಳವು ಪ್ರಕರಣ : ಆರೋಪಿಗಳು ಉಪ್ಪಿನಂಗಡಿ ಪೊಲೀಸ್ ವಶಕ್ಕೆ

0

ಉಪ್ಪಿನಂಗಡಿ: ಇಲ್ಲಿನ ಗಾಂಧಿಪಾರ್ಕ್ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿರುವ ಅಡಿಕೆ ಮತ್ತು ಕಾಡುತ್ಪತ್ತಿ ಖರೀದಿ ಕೇಂದ್ರದೊಳಗೆ ಹಾಡಹಗಲೇ ನುಗ್ಗಿ ಡ್ರಾಯರ್‌ನಲ್ಲಿದ್ದ 5 ಲಕ್ಷ ರೂಪಾಯಿ ಹಾಗೂ ದಾಖಲೆ ಪತ್ರ, ಚೆಕ್‌ಗಳಿದ್ದ ಬ್ಯಾಗ್ ಅನ್ನು ದೋಚಿದ ಪ್ರಕರಣದ ಆರೋಪಿಗಳನ್ನು ಇಂತಹದ್ದೇ ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ಪೊಲೀಸರು ಬಂಧಿಸಿದ್ದು, ಈ ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಕಸ್ಟಡಿಗೆ ತೆಗೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.


ಮೂಡಿಗೆರೆ ನಿವಾಸಿಗಳಾದ ಮಹಮ್ಮದ್ ಶಹಬಾದ್ (26), ಜಂಶೀದ್ (25) ಎಂಬವರು ಬಂಧಿತ ಆರೋಪಿಗಳು. ಎನ್.ಆರ್. ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಂಗಡಿಯೊಂದರಿಂದ
ಡ್ರಾಯರಿನಲ್ಲಿದ್ದ ಹಣವನ್ನು ದೋಚಿರುವ ಪ್ರಕರಣಕ್ಕೆ ಸಂಬಂಧಿಸಿ ಈ ಇಬ್ಬರು ಆರೋಪಿಗಳು ಬಂಧಿತರಾಗಿದ್ದರು. ಅಲ್ಲಿ ಪೊಲೀಸರು ನಡೆಸಿದ ವಿಚಾರಣೆ ವೇಳೆ ಉಪ್ಪಿನಂಗಡಿಯಲ್ಲಿ ನಡೆಸಿರುವ ಕಳ್ಳತನದ ಬಗ್ಗೆಯೂ ಬಾಯಿಬಿಟ್ಟಿದ್ದು, ಅದರಂತೆ ಈ ಇಬ್ಬರು ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದುಕೊಂಡು ಸ್ಥಳ ಮಹಜರು ನಡೆಸಿದರು.


ಕಳೆದ ಅ. 27ರಂದು ಇಲ್ಲಿನ ಗಾಂಧಿಪಾರ್ಕ್ ಬಳಿಯ ಶ್ರೀ ರಾಮಗೋಪಾಲ್ ಕಾಮತ್ ವಾಣಿಜ್ಯ ಸಂಕೀರ್ಣದಲ್ಲಿರುವ ವಸಂತ ಗುಂಡಿಜೆ ಎಂಬವರಿಗೆ ಸೇರಿದ ಅಡಿಕೆ ಮತ್ತು ಕಾಡುತ್ಪತ್ತಿ ವ್ಯಾಪಾರ ಕೇಂದ್ರವಾದ ‘ಗುಂಡಿಜೆ ಟ್ರೇಡರ‍್ಸ್’ನಲ್ಲಿ ಕಳವು ನಡೆಸಲಾಗಿತ್ತು. ಅಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಅಂಗಡಿಯ ಮಾಲಕ ಶೆಟರ್‌ನ್ನು
ಓಪನ್ ಆಗಿ ಇಟ್ಟು ಕ್ಯಾಷ್ ಡ್ರಾವರ್‌ಗೆ ಬೀಗ ಹಾಕಿ ತನ್ನ ಅಂಗಡಿ ಹಿಂಭಾಗದಲ್ಲಿರುವ ಶೌಚಾಲಯಕ್ಕೆ ಹೋಗಿದ್ದರು. ಮರಳಿ ಬರುವಷ್ಟರಲ್ಲಿ ಕ್ಯಾಷ್ ಡ್ರಾವರ್ ಮುರಿದು ಹಾಕಲಾಗಿದ್ದು, ಇದರೊಳಗೆ ಇದ್ದ 5 ಲಕ್ಷ ರೂಪಾಯಿ ಕಳವುಗೈಯಲಾಗಿತ್ತು. 5 ನಿಮಿಷದಲ್ಲಿ ಕಳ್ಳರು ಇಲ್ಲಿ ಕೃತ್ಯ ಮುಗಿಸಿದ್ದು, ಇವರ ಅಂಗಡಿಯ ಎದುರು ಭಾಗದಲ್ಲಿ ಹಾಗೂ ಪಕ್ಕದಲ್ಲಿ ಎಲ್ಲಾ ಅಂಗಡಿಗಳಿದ್ದರೂ ಕಳ್ಳರು ಮಾತ್ರ ನಿರ್ಭೀತಿಯಿಂದ ಕೃತ್ಯ ನಡೆಸಿ ಸ್ಥಳದಿಂದ ಪರಾರಿಯಾಗಿದ್ದರು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಸ್ಥಳ ಮಹಜರು: ಎನ್.ಆರ್. ಪುರ ಪೊಲೀಸರಿಂದ ಇಲ್ಲಿನ ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ನಾಗರಾಜು ನೇತೃತ್ವದ ಪೊಲೀಸ್ ತಂಡ ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದುಕೊಂಡು ಉಪ್ಪಿನಂಗಡಿ ಠಾಣೆಗೆ ಕರೆತಂದು ಘಟನಾ ಸ್ಥಳದಲ್ಲಿ ಮಹಜರು ನಡೆಸಿ, ಪ್ರಕರಣ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here