ಕರ್ನಾಟಕ ಪತ್ರಕರ್ತರ ಸಂಘದ ಪುತ್ತೂರು ತಾ|ಘಟಕದ ಪದಪ್ರದಾನ-ಪತ್ರಿಕಾ ದಿನಾಚರಣೆ:ಪತ್ರಿಕಾರಂಗದಲ್ಲಿ ಪ್ರಾಮಾಣಿಕವಾಗಿರುವುದೇ ಸವಾಲಾಗಿ ಪರಿಣಮಿಸಿದೆ- ರಾಕೇಶ್ ಕಮ್ಮಜೆ

0

ನೂತನ ಪದಾಧಿಕಾರಿಗಳ ಪದಪ್ರದಾನ
2025-26ನೇ ಸಾಲಿನ ಸಂಘದ ನೂತನ ಪದಾಧಿಕಾರಿಗಳ ಪದಪ್ರದಾನ ನಡೆಯಿತು. ಸಂಘದ ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್ ಪದಪ್ರದಾನ ನೆರವೇರಿಸಿದರು. ನೂತನ ಅಧ್ಯಕ್ಷ ಶ್ರಿಧರ್ ರೈ ಕೋಡಂಬು, ಪ್ರಧಾನ ಕಾರ್ಯದರ್ಶಿ ಆದಿತ್ಯ ಈಶ್ವರಮಂಗಲ, ಉಪಾಧ್ಯಕ್ಷ ಶಿವಕುಮಾರ್ ಈಶ್ವರಮಂಗಲ, ಕೋಶಾಧಿಕಾರಿ ಅಕ್ಷತಾ ಆರ್., ಜತೆ ಕಾರ್ಯದರ್ಶಿ ಲೋಕಯ್ಯ ಗೌಡ ಸಂಪ್ಯಾಡಿ, ಸಂಘಟನಾ ಕಾರ್ಯದರ್ಶಿ ಅಶ್ವತ್ ಶೆಟ್ಟಿರವರನ್ನು ಹೂಗುಚ್ಚ, ಶಾಲು ನೀಡಿ ಪದಪ್ರದಾನ ನಡೆಸಿದರು.

ಪುತ್ತೂರು: ಆಧುನಿಕತೆ, ತಾಂತ್ರಿಕತೆ ಎಷ್ಟೇ ಮುಂದುವರಿದರೂ ಕೂಡ ಇಂದು ಪತ್ರಕರ್ತರಿಗೆ ಹಲವು ಸವಾಲುಗಳಿವೆ. ಹಿಂದಿನ ಕಾಲದಲ್ಲಿ ಪತ್ರಿಕಾರಂಗ ಅತ್ಯುತ್ತಮ ಕಾಲಘಟ್ಟದಲ್ಲಿತ್ತು. ಆದರೆ ಇಂದು ಪತ್ರಕರ್ತರನ್ನು ಒಂದೇ ಕಡೆಗೆ ಬ್ರ‍್ಯಾಂಡ್ ಮಾಡಲಾಗುತ್ತಿದೆ. ಪ್ರಾಮಾಣಿಕವಾಗಿ ಪತ್ರಿಕಾರಂಗದಲ್ಲಿರುವುದೇ ಸವಾಲಾಗಿ ಪರಿಣಮಿಸಿದೆ.

ಇಂತಹ ಸವಾಲುಗಳನ್ನು ಎದುರಿಸುವುದೇ ಕಷ್ಟವಾಗಿದೆ. ಇದಕ್ಕಾಗಿ ಸಂಘದ ಅನಿವಾರ್ಯತೆ ಇದೆ ಎಂದು ಅಂಬಿಕಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ರಾಕೇಶ್ ಕುಮಾರ್ ಕಮ್ಮಜೆ ಹೇಳಿದರು.

ಪುತ್ತೂರು ಕೋರ್ಟು ರಸ್ತೆಯ ಜೆಸಿ ಮುಳಿಯ ಹಾಲ್‌ನಲ್ಲಿ ನಡೆದ ಕರ್ನಾಟಕ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ ಪದಪ್ರದಾನ ಸಮಾರಂಭ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಪತ್ರಿಕೋದ್ಯಮದಲ್ಲಿ ತುಂಬಾ ಬದಲಾವಣೆ ಆಗಿದೆ. ಎಲ್ಲವನ್ನೂ ಲೈಪ್ ಆಗಿ ನೋಡುವಂತಾಗಿದೆ ದುರಂತವೆನ್ನುವಂತೆ ಆಧುನಿಕ ವ್ಯವಸ್ಥೆ ಬಂದಿದೆ. ಆತ್ಮಹತ್ಯೆ, ಕೊಲೆ ಮಾಡುವುದನ್ನು ಕೂಡ ಲೈವ್ ಆಗಿ ಕಾಣುವ ಸಂದರ್ಭದಲ್ಲಿದ್ದೇವೆ ಎಂದ ಅವರು, ಇಂದು ಪತ್ರಕರ್ತರನ್ನು ಭ್ರಷ್ಟರನ್ನಾಗಿಸುವ ಕೆಲಸ ನಡೆಯುತ್ತಿದೆ. ಕೊಂಡುಕೊಳ್ಳುವ ವ್ಯವಸ್ಥೆಗಳಾಗುತ್ತಿದೆ. ಆಮಿಷವೊಡ್ಡಿ ಪತ್ರಕರ್ತರ ನೈಜ ಜವಾಬ್ದಾರಿಯನ್ನು ತಡೆಹಿಡಿಯಲಾಗುತ್ತದೆ. ಈ ರೀತಿಯ ಸವಾಲುಗಳನ್ನು ಪತ್ರಕರ್ತರು ಎದುರಿಸಬೇಕಾಗಿದೆ.

ಸ್ವಭಾವ ವೈರಾಗ್ಯ ಹೆಚ್ಚಾಗುತ್ತಾ ಹೋದರೆ ಭ್ರಷ್ಟಾಚಾರಕ್ಕೆ ಒಳಗಾಗುವುದನ್ನು ತಪ್ಪಿಸಬಹುದು ಎಂದರು. ನೈತಿಕತೆ ಹಿರಿಯರಿಂದ ಕಿರಿಯರಿಗೆ ಬರುತ್ತದೆ. ಆಗ ಸದೃಢವಾದ ನೈತಿಕ ವ್ಯವಸ್ಥೆ ಬರುತ್ತದೆ. ಆಗ ಪತ್ರಿಕೋದ್ಯಮ ತುಂಬಾ ಸಶಕ್ತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಹುದ್ದೆಯ ಕಾರಣದಿಂದ ಯಾರೂ ದೊಡ್ಡ ಜನ ಆಗುವುದಿಲ್ಲ ತನ್ನ ವ್ಯಕ್ತಿತ್ವದ ಕಾರಣದಿಂದ ದೊಡ್ಡ ಜನ ಆಗುಬೇಕು. ಹುದ್ದೆ ಹೋದಾಗಲೂ ವ್ಯಕ್ತಿತ್ವ ಉಳಿಯುತ್ತದೆ. ಇಂತಹ ವ್ಯಕ್ತಿತ್ವದವರನ್ನು ಪತ್ರಿಕಾ ದಿನದಂದು ಸನ್ಮಾನಿಸಿರುವುದು ಕೂಡ ಅಭಿನಂದನೀಯ. ಈ ದಿಶೆಯಲ್ಲಿ ಕರ್ನಾಟಕ ಪತ್ರಕರ್ತರ ಸಂಘ ಪತ್ರಿಕಾ ದಿನಾಚರಣೆ ಮಾಡುತ್ತಿರುವುದು ಹೆಚ್ಚು ಅರ್ಥಪೂರ್ಣವಾಗಿದೆ ಎಂದರು.

ಮೊಬೈಲ್ ಬರುವ ಸಮಯದಲ್ಲಿ ಪತ್ರಿಕೆಗೆ ಭವಿಷ್ಯ ಇದೆಯೇ ಎಂಬ ಜಿಜ್ಞಾಸೆ ಉಂಟಾಗಿತ್ತು. ಆದರೆ ಇಂದು ಪತ್ರಿಕೆ ನಮ್ಮ ಬದುಕಿನ ಭಾಗವಾಗಿ ನಿಂತಿದೆ. ಪತ್ರಿಕೆ ಇಲ್ಲದೆ ನಮ್ಮ ಬದುಕನ್ನು ಉಳಿಸಲು ಸಾಧ್ಯವಿಲ್ಲ ಎಂಬಲ್ಲಿವರೆಗೆ ಪತ್ರಿಕೋದ್ಯಮ ಬೆಳೆದಿದೆ. ಪತ್ರಿಕೋದ್ಯಮ ಕೋಟ್ಯಾಂತರ ಮಂದಿಗೆ ಆಶ್ರಯದಾತವಾಗಿ ಬೆಳೆದಿದೆ. ಈ ನೆಲೆಯಲ್ಲಿ ಪತ್ರಿಕೋದ್ಯಮವನ್ನು ಗುರುತಿಸಬೇಕು.

ಪತ್ರಿಕೋದ್ಯಮ ಇರುವ ಕಾರಣ ಸಾಮಾನ್ಯರು ಕೂಡ ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಹೇಳಿದ ಕಮ್ಮಜೆ, ಅವಕಾಶ ವಂಚಿತರಿಗೆ ಅವಕಾಶ ಕೊಡುವುದೇ ಪತ್ರಿಕೋದ್ಯಮದ ಮೂಲ ಆಶಯವಾಗಿದೆ. ಇದನ್ನು ಕರ್ನಾಟಕ ಪತ್ರಕರ್ತರ ಸಂಘ ಮಾಡುತ್ತಾ ಇದೆ. ಸಂಘದ ಹೊಸ ತಂಡ ಒಳ್ಳೆಯ ಕಾರ್ಯಗಳನ್ನು ಮಾಡಲಿ ಎಂದು ಹಾರೈಸಿದರು.

ಸಂಘದಿಂದ ಸೌಲಭ್ಯ, ಭದ್ರತೆ ಸಿಗಲಿ-ಸಿಂಚನಾ ಊರುಬೈಲು: ಮುಖ್ಯ ಅತಿಥಿ ಸುದ್ದಿ ಬಿಡುಗಡೆ ಬೆಳ್ತಂಗಡಿ ಪತ್ರಿಕೆಯ ಸಿಇಒ ಸಿಂಚನಾ ಊರುಬೈಲು ಮಾತನಾಡಿ ಪತ್ರಕರ್ತರ ಸಂಘಕ್ಕೆ ಸದಸ್ಯರಾಗಲು ಗರಿಷ್ಠ ಇಬ್ಬರಿಗೆ ಅವಕಾಶವಿರುತ್ತದೆ. ಪೇಪರ್ ಹಾಕುವವರು, ಪ್ರಸರಣ ವಿಭಾಗ, ಜಾಹೀರಾತು ವಿಭಾಗ ಸೇರಿದಂತೆ ಇತರ ಸಿಬಂದಿಗಳಿಗೆ ಒಂದು ಸಂಘಟನೆ ಇರುವುದಿಲ್ಲ. ಈ ಕಾರಣಕ್ಕೆ ಆರಂಭವಾದ ಸಂಘ ಕರ್ನಾಟಕ ಪತ್ರಕರ್ತರ ಸಂಘ.

ನಾನು ಸಂಘದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ನಾನು ಯಾವತ್ತೂ ನಿಮ್ಮ ಸಂಘದೊಂದಿಗೆ ಇದ್ದೇನೆ. ಸಂಘದಿಂದ ಸೂಕ್ತ ವ್ಯಕ್ತಿಗೆ ಸನ್ಮಾನ ಮಾಡಿದ್ದೀರಿ ಎಂದು ಹೇಳಿದರಲ್ಲದೆ ಸಂಘ ಇನ್ನಷ್ಟು ಕಾರ್ಯಕ್ರಮ ನಡೆಸಲಿ. ಸದಸ್ಯರಿಗೆ ಸೌಲಭ್ಯ, ಭದ್ರತೆ ಸಿಗಲಿ ಎಂದು ಹೇಳಿ ಹಾರೈಸಿದರು.


ಸದಸ್ಯರ, ಸಹಕಾರ ಬೆಂಬಲ ಸದಾ ಇರಲಿ- ಶ್ರೀಧರ್ ರೈ: ಸಂಘದ ನೂತನ ಅಧ್ಯಕ್ಷ ಶ್ರೀಧರ್ ರೈ ಕೋಡಂಬು ಮಾತನಾಡಿ ಸಂಘದ ವತಿಯಿಂದ ಮುಂದಿನ ದಿನಗಳಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ. ಎಲ್ಲಾ ಸದಸ್ಯರ, ಸಹಕಾರ ಬೆಂಬಲ ಸದಾ ಇರಲಿ ಎಂದು ಹೇಳಿ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದಕ್ಕೆ ಕೃತಜ್ಞತೆ ಸಲ್ಲಿಸಿದರು.

ಸಮಸ್ಯೆ, ಸವಾಲು ಎದುರಿಸಲು ಸಂಘಟನೆಗಳು ಅನಿವಾರ್ಯ- ಉಮೇಶ್ ಮಿತ್ತಡ್ಕ: ಸಂಘದ ಸ್ಥಾಪಕಾಧ್ಯಕ್ಷ ಉಮೇಶ್ ಮಿತ್ತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ 2018ರಲ್ಲಿ ಕರ್ನಾಟಕ ಪತ್ರಕರ್ತರ ಸಂಘ ಕೆಲವೇ ಸದಸ್ಯರಿಂದ ಆರಂಭವಾಯಿತು. ಬಳಿಕ ಪ್ರತೀವರ್ಷ ಸದಸ್ಯರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಪುತ್ತೂರಿನಲ್ಲಿ ಈ ಸಂಘದ ಸ್ಥಾಪನೆ ಆಕಸ್ಮಿಕ ಹುಟ್ಟು ಆಯಿತು. ಸಾಮಾನ್ಯವಾಗಿ ಪತ್ರಕರ್ತರ ಸಂಘಕ್ಕೆ ಸೀಮಿತ ಪತ್ರಕರ್ತರಿಗೆ ಮಾತ್ರ ಅವಕಾಶವಿರುತ್ತದೆ.

ಪತ್ರಿಕಾ ರಂಗದಲ್ಲಿ ಪತ್ರಕರ್ತರಲ್ಲದೆ ಇತರ ವಿಭಾಗದಲ್ಲಿ ಕೆಲಸ ನಿರ್ವಹಿಸುವವರಿಗೂ ಸಂಘ ಬೇಕು ಎಂಬ ದಿಶೆಯಿಂದ ಈ ಸಂಘ ಆರಂಭಿಸಲಾಯಿತು. ಸಮಾಜದಲ್ಲಿ ನಮಗೆ ಎದುರಾದ ಸಂಕಷ್ಟ, ಸವಾಲುಗಳನ್ನು ಎದುರಿಸಲು ಸಂಘಟನೆಗಳು ಅನಿವಾರ್ಯವಾಗಿದೆ. ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದರ ಪ್ರೇರಣೆ, ಮಾರ್ಗದರ್ಶನ ಸಂಘದ ಸ್ಥಾಪನೆಗೆ ಮುನ್ನುಡಿಯಾಯಿತು. ಇಂದು 50ಕ್ಕಿಂತಲೂ ಹೆಚ್ಚು ಸದಸ್ಯರನ್ನು ಒಳಗೊಂಡು ಸಂಘ ಬೆಳೆಯುತ್ತಿದೆ ಎಂದರು. ನಮ್ಮದು ಯಾವುದೇ ಸಂಘಕ್ಕೂ ಪೈಪೋಟಿಯಲ್ಲ. ಪದಗ್ರಹಣ, ಪತ್ರಿಕಾ ದಿನಾಚರಣೆಯಲ್ಲದೆ ಇತರ ಸಮಾಜಮುಖಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಹೇಳಿ ಸಂಘ ಇನ್ನಷ್ಟು ಬೆಳೆಯಲಿ ಎಂದು ಹೇಳಿ ಹಾರೈಸಿದರು.

ಪತ್ರಕರ್ತರ ಸಾಮರ್ಥ್ಯ, ನಮ್ಮತನ ತೋರಿಸುವ ಅವಕಾಶವಾಗಿದೆ – ಸುದೇಶ್ ಕುಮಾರ್: ಸಭಾಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್ ಮಾತನಾಡಿ ಸಂಘದ 8ನೇ ವರ್ಷದ ಸಂಭ್ರಮದಲ್ಲಿದ್ದೇವೆ. ಪುತ್ತೂರಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಮಾಡಿ ಬೇರೆ ಸಂಘಕ್ಕಿಂತ ನಾವು ವಿಭಿನ್ನ ಎಂಬುದನ್ನು ಸಾಧಿಸಿದ್ದೇವೆ. ಪತ್ರಿಕೋದ್ಯಮ ಮಾತ್ರವಲ್ಲದೆ ಸಮಾಜಮುಖಿ ಕಾರ್ಯದೊಂದಿಗೆ ಇದ್ದೇವೆ ಎಂಬುದನ್ನು ಸಮಾಜಕ್ಕೆ ತೋರಿಸಿದ್ದೇವೆ. ಹೊಸ ಪದಾಧಿಕಾರಿಗಳ ತಂಡದೊಂದಿಗೆ ಹೊಸ ಕಾರ್ಯಕ್ರಮ, ವಿಚಾರಗಳನ್ನು ಪ್ರಸ್ತುತಪಡಿಸಲಿದ್ದೇವೆ ಎಂದರು. ಪತ್ರಿಕಾ ದಿನಾಚರಣೆ ಆಚರಿಸುವುದರೊಂದಿಗೆ ಪತ್ರಕರ್ತರ ಸಾಮರ್ಥ್ಯ, ಸೇವೆ, ನಮ್ಮತನವನ್ನು ತೋರಿಸುವ ಅವಕಾಶವಾಗಿದೆ ಎಂದು ಹೇಳಿ ಸದಸ್ಯರಿಗೆ ಸಂಘದಿಂದ ಸಿಗುವ ಸೌಲಭ್ಯಗಳನ್ನು ತಿಳಿಸಿದರು.

ಸಂಘದ ನೂತನ ಕಾನೂನು ಸಲಹೆಗಾರ ಕೃಷ್ಣಪ್ರಸಾದ್ ನಡ್ಸಾರು ಮಾತನಾಡಿ ಚಾಲೆಂಜ್ ಎಂಬುದು ಪತ್ರಿಕೆ ಮತ್ತು ಕಾನೂನಿನ ಎದುರು ಬಂದು ನಿಲ್ಲುತ್ತದೆ. ಸಂಘಟನೆ ಸಾಂಸ್ಥಿಕ ರೂಪದಲ್ಲಿ ಬರುವಾಗ ಕಾನೂನಿನ ಅವಶ್ಯಕತೆ ಇರುತ್ತದೆ. ಈ ಸಂಘಟನೆ ಏಳು ವರ್ಷದಲ್ಲಿ ತುಂಬಾ ಬೆಳೆದಿದೆ. ಮುಂದೆ ರಾಜ್ಯಮಟ್ಟದಲ್ಲಿ ಸಶಕ್ತವಾಗಿ ಬೆಳೆಯಲಿ. ಸಂಘದ ಯಾವುದೇ ಕಾನೂನು ಸಮಸ್ಯೆಗೆ ಸಂಘದೊಂದಿಗೆ ಸದಾ ನಾವು ಇದ್ದೇವೆ ಎಂದರು. ಸಂಘದ ಪ್ರಧಾನ ಕಾರ್ಯದರ್ಶಿ ಆದಿತ್ಯ ಈಶ್ವರಮಂಗಲ, ಉಪಾಧ್ಯಕ್ಷ ಶಿವಕುಮಾರ್ ಈಶ್ವರಮಂಗಲ, ಕೋಶಾಧಿಕಾರಿ ಅಕ್ಷತಾ ಆರ್., ಜತೆ ಕಾರ್ಯದರ್ಶಿ ಲೋಕಯ್ಯ ಗೌಡ ಸಂಪ್ಯಾಡಿ, ಸಂಘಟನಾ ಕಾರ್ಯದರ್ಶಿ ಅಶ್ವಥ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನೂತನ ಸದಸ್ಯರಿಗೆ ಸ್ವಾಗತ: 2025-26ನೇ ಸಾಲಿನಲ್ಲಿ ಸಂಘಕ್ಕೆ ನೂತನವಾಗಿ ಸೇರ್ಪಡೆಗೊಂಡ ಮಧುಪ್ರಪಂಚ ಪತ್ರಿಕೆಯ ಸಂಪಾದಕ ನಾರಾಯಣ ರೈ ಕುಕ್ಕುವಳ್ಳಿ ಸೇರಿದಂತೆ ನೂತನ ಸದಸ್ಯರನ್ನು ಅಧ್ಯಕ್ಷ ಶ್ರೀಧರ್ ರೈರವರು ಹೂಗುಚ್ಚ ನೀಡಿ ಸ್ವಾಗತಿಸಿದರು. ಸಂಘದ ನೂತನ ಕಾನೂನು ಸಲಹೆಗಾರ ಕೃಷ್ಣಪ್ರಸಾದ್ ನಡ್ಸಾರ್ ರವರನ್ನು ಹೂ, ಶಾಲು ಹಾಕಿ ಗೌರವಿಸಲಾಯಿತು. ಕೋಶಾಧಿಕಾರಿ ಅಕ್ಷತಾ ಆರ್. ಸ್ವಾಗತ ಕಾರ್ಯಕ್ರಮ ನಿರ್ವಹಿಸಿದರು.

ನೂತನ ವಧುವರರಾದ ಸಂಘದ ಸದಸ್ಯ ಪ್ರಶಾಂತ್ ಮಿತ್ತಡ್ಕ ಹಾಗೂ ದೀಪಿಕಾರವರನ್ನು ಅಭಿನಂದಿಸಿ ಶುಭಾಶಯ ಸಲ್ಲಿಸಲಾಯಿತು. ಸಂಘದ ಸದಸ್ಯರಾದ ತಿಲಕ್ ರೈ ಕುತ್ಯಾಡಿ, ನರೇಶ್ ಜೈನ್, ಶರತ್ ಕುಮಾರ್ ಪಾರ, ಕಾವ್ಯ ಬಪ್ಪಳಿಗೆ ಅತಿಥಿಗಳನ್ನು ಗೌರವಿಸಿದರು. ಕವಿತಾ, ರಕ್ಷಿತಾ, ಚಿತ್ರಾಂಗಿನಿ ಪ್ರಾರ್ಥಿಸಿದರು. ಸಂಘದ ನಿಕಟಪೂರ್ವ ಅಧ್ಯಕ್ಷೆ ಶೈಲಜಾ ಸುದೇಶ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಆದಿತ್ಯ ಈಶ್ವರಮಂಗಲ ವಂದಿಸಿದರು. ಮಾಜಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಕಾಂತ್ ರೈ ಅನಿಕೂಟೇಲು ಕಾರ್ಯಕ್ರಮ ನಿರೂಪಿಸಿದರು.

ಸನ್ಮಾರ್ಗ ಟಿವಿ ನಿರೂಪಕಿ ಪ್ರಿಯಾಸುದೇಶ್, ಸುದ್ದಿ ಸಮೂಹ ಸಂಸ್ಥೆಗಳ ನಿರ್ದೇಶಕಿ ಶೋಭಾ ಶಿವಾನಂದ, ಸಿಇಒ ಸೃಜನ್ ಊರುಬೈಲು, ಸುದ್ದಿ ಸೌಹಾರ್ದ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ನರೇಂದ್ರ ಎಂ. ಮತ್ತು ಸಿಬ್ಬಂದಿ ಕೆಸಿಡಿಸಿ ಅರಣ್ಯಾಧಿಕಾರಿ ರವಿಪ್ರಸಾದ್ ರಾಮಕುಂಜ, ಉದ್ಯಮಿ ಸತೀಶ್ ನಾಯಕ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರುಗಳಾದ ಶೇಷಪ್ಪ ಕಜೆಮಾರ್, ವಸಂತ್ ಸಾಮೆತ್ತಡ್ಕ, ಬಂಟ್ವಾಳ ತಾಲೂಕು ಪತ್ರಕರ್ತರ ಸಂಘದ ಸದಸ್ಯ ನಿಶಾಕಿರಣ್ ಬಾಳೆಪುಣಿ, ಶಕ್ತಿ ನ್ಯೂಸ್‌ನ ಗಣೇಶ್ ಕಲ್ಲರ್ಪೆ, ವಿದ್ಯಾಮಾನ ನ್ಯೂಸ್‌ನ ಫಾರೂಕ್ ಮುಕ್ವೆ, ಕರ್ನಾಟಕ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರುಗಳಾದ ಯೂಸುಫ್ ರೆಂಜಲಾಡಿ, ಸದಾಶಿವ ಶೆಟ್ಟಿ ಮಾರಂಗ, ತಿಲಕ್ ರೈ ಕುತ್ಯಾಡಿ, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ಸಹಭೋಜನ ಏರ್ಪಡಿಸಲಾಗಿತ್ತು.

LEAVE A REPLY

Please enter your comment!
Please enter your name here