ಹಿರಿಯ ಯಕ್ಷಗಾನ ಕಲಾವಿದ ಪಾತಾಳ ವೆಂಕಟರಮಣ ಭಟ್ ನಿಧನ

0

ಉಪ್ಪಿನಂಗಡಿ: ಹಿರಿಯ ಯಕ್ಷಗಾನ ಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಾತಾಳ ವೆಂಕಟರಮಣ ಭಟ್ (92ವ) ಉಪ್ಪಿನಂಗಡಿಯ ತಮ್ಮ ಸ್ವ ಗೃಹದಲ್ಲಿ ಶನಿವಾರ (ಜು.19) ಹೃದಯಾಘಾತದಿಂದ ನಿಧನ ಹೊಂದಿದರು.

ತೆಂಕು ಮತ್ತು ಬಡಗು ಎರಡೂ ತಿಟ್ಟುಗಳಲ್ಲಿ ವೇಷಗಳನ್ನು ಮಾಡಿ ಭಾವಾಭಿನಯ ಮತ್ತು ನೃತ್ಯ ಲಾಲಿತ್ಯಗಳಿಂದ ವೈವಿಧ್ಯಮಯ ವೇಷಗಳಲ್ಲಿ ಮೆರೆದ ಹಿರಿಯ ಕಲಾವಿದ ಪಾತಾಳ ವೆಂಕಟರಮಣ ಭಟ್ಟರು. ಮೂರನೇ ತರಗತಿ ಪೂರೈಸಿ 1951ರಲ್ಲಿ ಜೀವನೋಪಾಯಕ್ಕಾಗಿ ಕಾಂಚನ ನಾಟಕ ಕಂಪೆನಿಯಲ್ಲಿ ಅಡುಗೆಯವರಾಗಿ ಸೇರಿ ಸಹಜ ಪ್ರತಿಭೆಯಿಂದ ಪ್ರಧಾನ ಸ್ತ್ರೀ ವೇಷ ಪಾತ್ರಧಾರಿಯಾಗಿ ಅವಕಾಶ ಪಡೆದರು. 1953ರಲ್ಲಿ ವೃತ್ತಿ ಮೇಳಕ್ಕೆ ಸೇರಿ 1981ರಲ್ಲಿ ಯಕ್ಷ ರಂಗದಿಂದ ನಿವೃತ್ತಿ ಗೊಳ್ಳುವ ತನಕ ತೆಂಕು – ಬಡಗುತಿಟ್ಟುಗಳೆರಡರಲ್ಲೂ ಸೈ ಎನಿಸಿಕೊಂಡರು. ಸೌಕೂರು, ಮೂಲ್ಕಿ, ಸುರತ್ಕಲ್, ಧರ್ಮಸ್ಥಳ (1964-81) ಹೀಗೆ ಹಲವು ಮೇಳಗಳಲ್ಲಿ ಯಶಸ್ವಿ ತಿರುಗಾಟ ಅವರದು. ರಂಭೆ, ಊರ್ವಶಿ, ಮೇನಕೆ, ಸತ್ಯಭಾಮೆ, ಸುಭದ್ರೆ, ದೌಪದಿ, ಮೀನಾಕ್ಷಿ, ಸ್ವಯಂಪ್ರಭೆಯಂತಹ ಪಾತ್ರಗಳಿಗೆ ತನ್ನದೇ ಆದ ಮೆರುಗು ನೀಡಿದ್ದ ಪಾತಾಳರು ಬೇಲೂರಿನ ಶಿಲಾ ಬಾಲಿಕೆಯರ ಅಂಗಭಂಗಿಗಳನ್ನು ಬೇಲೂರಿಗೆ ಹೋಗಿ ಸ್ವತಃ ಅಭ್ಯಸಿಸಿ ಯಕ್ಷಗಾನದಲ್ಲಿ ಅಳವಡಿಸಿದವರು.

ಪಾತಾಳ ವೆಂಕಟರಮಣ ಭಟ್ಟರಿಗೆ ಚೆನ್ನೈನ ಹಿಂದೂಧರ್ಮ ಸಂಘವು ಮಣಿವಿಳಾ ಬಿರುದು ನೀಡಿ ಗೌರವಿಸಿದೆ. ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಯಕ್ಷಗಾನ ಕಲಾರಂಗ ಪ್ರಶಸ್ತಿ, ವಿಟ್ಲ ಗೋಪಾಲಕೃಷ್ಣ ಭಟ್ ಪ್ರತಿಷ್ಟಾನ ಪ್ರಶಸ್ತಿ, ವಿದ್ಯಾಮಾನ್ಯ ಪ್ರಶಸ್ತಿ, ಯಕ್ಷ ಕಲಾನಿಧಿ ಪ್ರಶಸ್ತಿ, ಅಗರಿ ಪ್ರಶಸ್ತಿ, ಕರಾವಳಿ ಯಕ್ಷಗಾನ ಮಂಡಳಿ, ಬಿ.ಬಿ.ಶೆಟ್ಟಿ ಪ್ರಶಸ್ತಿ, ಪಟ್ಟಾಜೆ ಪ್ರಶಸ್ತಿ, ದೇರಾಜೆ ಪ್ರಶಸ್ತಿ, ಕಲ್ಕೂರ ಪ್ರಶಸ್ತಿ ಸೇರಿ ಹಲವು ಗೌರವಗಳು ಸಂದಿವೆ.

ಹಿರಿಯ ಪುತ್ರ, ಯಕ್ಷಗಾನ ಕಲಾವಿದ ಅಂಬಾಪ್ರಸಾದ್ ಪಾತಾಳ, ಕಿರಿಯ ಪುತ್ರ ಉಪ್ಪಿನಂಗಡಿ ಸಿ.ಎ. ಬ್ಯಾಂಕ್ ನಿರ್ದೇಶಕ ಶ್ರೀರಾಮ ಭಟ್ ಪಾತಾಳ ಸಹಿತ ನಾಲ್ವರು ಪುತ್ರಿಯರ ಹಾಗೂ ಮೊಮ್ಮಕ್ಕಳು, ಅಪಾರ ಬಂಧುಗಳನ್ನು,ಅಭಿಮಾನಿಗಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here