ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈಯವರ ವಿಶೇಷ ಮುತುವರ್ಜಿಯಿಂದ ಹಾಗೂ ತಾಲೂಕು ಬಂಟರ ಸಂಘದ ಅಧ್ಯಕ್ಷನಾದ ನಾನು, ಪ್ರಧಾನ ಕಾರ್‍ಯದರ್ಶಿ ನಿತ್ಯಾನಂದ ಶೆಟ್ಟಿಮನವಳಿಕೆ, ಕೋಶಾಧಿಕಾರಿ ಸಂತೋಷ್ ಕುಮಾರ್ ಶೆಟ್ಟಿ ಸಾಜ ಹಾಗೂ ಎಲ್ಲಾ ಪದಾಧಿಕಾರಿಗಳ ಸರ್ವ ಪ್ರಯತ್ನದ ಫಲವಾಗಿ ಪುತ್ತೂರು ತಾಲೂಕು ಬಂಟರ ಸಂಘಕ್ಕೆ ಸರಕಾರದಿಂದ ೩ ಎಕ್ರೆ ಜಮೀನು ಮಂಜೂರುಗೊಂಡಿದೆ. ಇದಕ್ಕಾಗಿ ಕರ್ನಾಟಕ ಸರಕಾರದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕಂದಾಯ ಸಚಿವ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರಿಗೆ ವಿಶೇಷವಾಗಿ ಅಭಿನಂದನೆ ಸಲ್ಲಿಸುವುದಾಗಿ ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಹೇಳಿದರು.
ಅವರು ಜು.19 ರಂದು ಪುತ್ತೂರು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರಭವನದಲ್ಲಿ ಸುದ್ದಿ ಬಿಡುಗಡೆ ದಿನಪತ್ರಿಕೆಯೊಂದಿಗೆ ಮಾತನಾಡಿ ತಾಲೂಕು ಬಂಟರ ಸಂಘಕ್ಕೆ ಸೂಕ್ತ ಜಮೀನಿನ ಅಗತ್ಯ ಇತ್ತು, ಬಹಳಷ್ಟು ವರ್ಷಗಳಿಂದ ಇದಕ್ಕೆ ಪ್ರಯತ್ನವನ್ನು ಪಡುತ್ತಿದ್ದೇವೆ. ಇಷ್ಟರ ತನಕ ನಮಗೆ ಯಾವುದೇ ಜಮೀನು ಖರೀದಿಯನ್ನು ಮಾಡಿಕೊಳ್ಳಲು ಅಗಲಿಲ್ಲ. ನಾನು 2024ರಲ್ಲಿ ತಾಲೂಕು ಬಂಟರ ಸಂಘದ ಅಧ್ಯಕ್ಷನಾದ ಬಳಿಕ ನೂತನ ಪದಾಧಿಕಾರಿಗಳ ಜೊತೆಯಾಗಿ ದೊಡ್ಡ ಮಟ್ಟದಲ್ಲಿ ಚರ್ಚೆಯನ್ನು ನಡೆಸಿ, ನಮ್ಮ ಪುತ್ತೂರು ತಾಲೂಕು ಬಂಟರ ಸಂಘಕ್ಕೆ ಜಾಗದ ಅವಶ್ಯಕತೆಯ ಬಗ್ಗೆ ಸರಕಾರಕ್ಕೆ ಶಾಸಕರ ಮೂಲಕ ಮನವರಿಕೆ ಮಾಡಿದ ಫಲವಾಗಿ ಇದೀಗ ಜಾಗ ಮಂಜೂರುಗೊಂಡಿದೆ. ನಮ್ಮ ಸಮಾಜ ಭಾಂದವರು ಪುತ್ತೂರಿನಲ್ಲಿ ೩೦ ಸಾವಿರಕ್ಕೂ ಹೆಚ್ಚು ಮಂದಿ ಜನಸಂಖ್ಯೆಯನ್ನು ಹೊಂದಿರುವ ಸಮಾಜವಾಗಿದ್ದು, ನಮ್ಮ ಬಂಟರ ಸಮಾಜಕ್ಕೆ ಶೈಕ್ಷಣಿಕ, ಸಾಂಸ್ಕೃತಿಕವಾಗಿ, ಸಾಮಾಜಿಕ ಚಟುವಟಿಕೆಗಳಿಗೆ ಜಾಗದ ಅವಶ್ಯಕತೆ ಇದೆ, ಈ ಜಾಗದಲ್ಲಿ ಶಿಕ್ಷಣ ಸಂಸ್ಥೆ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್‍ಯಕ್ರಮಗಳಿಗೆ ಈ ಜಾಗವನ್ನು ಬಳಕೆ ಮಾಡಲಾಗುವುದು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಅನುಗ್ರಹದಿಂದ ನಮಗೆ ಒಳ್ಳೆಯ ಜಾಗ ಸಿಕ್ಕಿರುವುದು ತುಂಬಾ ಸಂತೋಷವಾಗಿದೆ. ಕೆಮ್ಮಿಂಜೆ ಗ್ರಾಮದ ಸರ್ವೆ ನಂಬರ್ ೧೩೮-೪ ರಲ್ಲಿ ಮೂರು ಎಕ್ರೆ ಜಮೀನು ಮಂಜೂರುಗೊಂಡಿದ್ದು, ಮುಂದಿನ ದಿನಗಳಳ್ಲಿ ಶಾಸಕ ಅಶೋಕ್‌ಕುಮಾರ್ ರೈ ನೇತ್ರತೃದಲ್ಲಿ ಬಂಟ ಸಮಾಜ ಬಾಂದವರನ್ನು ಸೇರಿಸಿಕೊಂಡು, ಎಲ್ಲರ ವಿಶ್ವಾಸವನ್ನು ಪಡೆದುಕೊಂಡು, ಸಮಾಲೋಚನಾ ಸಭೆಯನ್ನು ನಡೆಸಿ, ಮುಂದಿನ ಹೆಜ್ಜೆಯನ್ನು ಇಡಲಿದ್ದೇವೆ, ಬಂಟ ಸಮಾಜ ದ,ಕ,ಜಿಲ್ಲೆಯಲ್ಲಿ ದೊಡ್ಡ ಸಮಾಜವಾಗಿದ್ದು, ನಾನು ಈಗಾಗಲೇ ಕಳೆದ ೧೨ ವರ್ಷಗಳೀಂದ ಬಂಟರ ಯಾನೆ ನಾಡವರ ಮಾತೃ ಸಂಘದಲ್ಲಿ ಜೊತೆ ಕಾರ್‍ಯದರ್ಶಿಯಾಗಿ, ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದೇನೆ, ಇದೀಗ ನನ್ನ ಊರು ಪುತ್ತೂರಿನಲ್ಲಿ ಬಂಟರ ಸಂಘಕ್ಕೆ ಜಮೀನು ಮಂಜೂರುಗೊಂಡಿರುವುದು ಖುಷಿಯ ವಿಚಾರವಾಗಿದೆ ಎಂದು ಕಾವು ಹೇಮನಾಥ ಶೆಟ್ಟಿ ಹೇಳಿದರು. ಬಂಟ ಸಮಾಜ ಸ್ವಾಭಿಮಾನದ ಸಮಾಜವಾಗಿದ್ದು, ಪುತ್ತೂರಿನಲ್ಲಿ ಬಂಟ ಸಂಘಟನೆಯನ್ನು ಬಲಿಷ್ಠವಾಗಿ ಕಟ್ಟುವ ಕಾರ್‍ಯವನ್ನು ಮಾಡಲಿದ್ದೇವೆ. ಬಂಟ ಸಮಾಜದಲ್ಲಿ ಅನೇಕ ಮಂದಿ ಬಡತನದಲ್ಲಿ ಇದ್ದವರು ಇದ್ದಾರೆ, ಅವರಿಗೆ ಸಹಕಾರವನ್ನು ನೀಡಲಿದ್ದೇವೆ.
ಪುತ್ತೂರು ಶಾಸಕರು ಬಂಟರ ಸಮಾಜಕ್ಕೆ ಮಾತ್ರ ಜಾಗ ಮಂಜೂರು ಮಾಡಿಲ್ಲ, ಜೊತೆಗೆ ಕುಂಬಾರ ಸಮಾಜದವರಿಗೂ ಜಮೀನು ಮಂಜೂರು ಮಾಡುವ ಮೂಲಕ, ಬಂಟ ಸಮಾಜದ ಶಾಸಕರು ಎಲ್ಲ ಸಮಾಜದವರ ವಿಶ್ವಾಸಕ್ಕೆ ಪಾತ್ರರಾಗಿರುವುದು ಹೆಮ್ಮೆಯ ವಿಚಾರವಾಗಿದೆ. ನಮ್ಮ ಬಂಟರ ಸಂಘದಲ್ಲಿ ಯಾವುದೇ ರಾಜಕೀಯ ಇಲ್ಲ, ನಾವು ಬಂಟ ಸಮಾಜ ಭಾಂದವರು ಎಲ್ಲರೂ ಸಮಾನರು ಎಂದು ಕಾವು ಹೇಮನಾಥ ಶೆಟ್ಟಿ ಹೇಳಿದರು. ಬಂಟರ ಸಂಘದ ಪ್ರಧಾನ ಕಾರ್‍ಯದರ್ಶಿ ನಿತ್ಯಾನಂದಶೆಟ್ಟಿ ಮನವಳಿಕೆ, ಕೋಶಾಧಿಕಾರಿ ಸಂತೋಷ್ ಕುಮಾರ್ ಶೆಟ್ಟಿ ಸಾಜ, ನಿರ್ದೇಶಕ ರವಿಪ್ರಸಾದ್ ಶೆಟ್ಟಿ ಬನ್ನೂರು, ಜಿ.ಪಂ, ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ರಂಜಿತ ಶೆಟ್ಟಿ ಕಾವು, ಬಂಟರ ಭವನದ ವ್ಯವಸ್ಥಾಪಕ ರವಿಚಂದ್ರ ರೈ ಕುಂಬ್ರ ಹಾಗೂ ಭಾಸ್ಕರ್ ರೈ ಉಪಸ್ಥಿತರಿದ್ದರು.
ಅತೀ ಶ್ರೀಘ್ರದಲ್ಲಿ ಭೂಮಿ ಪೂಜೆ- ಪುತ್ತೂರು ಪೇಟೆಯಿಂದ ಎರಡು ದಾರಿ
ಕೆಮ್ಮಿಂಜೆ ಗ್ರಾಮದಲ್ಲಿ ಮರೀಲ್ ನಲ್ಲಿ ಬಂಟರ ಸಂಘಕ್ಕೆ ಮಂಜೂರುಗೊಂಡಿರುವ ಜಾಗದಲ್ಲಿ ಶಾಸಕ ಅಶೋಕ್ ಕುಮಾರ್ ರೈಯವರ ನೇತೃತ್ರದಲ್ಲಿ ದಾನಿಗಳ ನೆರವು, ಬಂಟ ಸಮಾಜ ಭಾಂದವರ ಕೂಡುವಿಕೆಯಿಂದ ಅತೀ ಶ್ರೀಘ್ರ ಭೂಮಿ ಪೂಜೆ ಕಾರ್‍ಯ ನಡೆಯಲಿದೆ. ಬಹಳ ಸುಂದರವಾದ ಜಾಗವಾಗಿದ್ದು , ಪುತ್ತೂರು ಪೇಟಿಯಿಂದ ಎರಡು ರಸ್ತೆಗಳು ಇದೆ. ಎರಡು ಕಡೆಯಿಂದಲೂ ಈ ಜಾಗಕ್ಕೆ ಸಂಪರ್ಕ ರಸ್ತೆಯನ್ನು ಮಾಡಲಿದ್ದೇವೆ – ಕಾವು ಹೇಮನಾಥ ಶೆಟ್ಟಿ ಅಧ್ಯಕ್ಷರು ಬಂಟರ ಸಂಘ ಪುತ್ತೂರು
ಶಾಸಕರ ಸಾಧನೆಗೆ ಹೇಮನಾಥ ಶೆಟ್ಟಿ ಪ್ರಶಂಸೆ
ಶಾಸಕ ಅಶೋಕ್ ಕುಮಾರ್ ರೈಯವರು ಪುತ್ತೂರಿಗೆ ಮೆಡಿಕಲ್ ಕಾಲೇಜ್, ಪುತ್ತೂರಿಗೆ ಕುಡಿಯುವ ನೀರಿಗೆ ಒಂದು ಸಾವಿರ ಕೋಟಿ ರೂಪಾಯಿ ಅನುದಾನ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಅಭಿವೃದ್ಧಿ ಕಾರ್‍ಯಗಳಿಗೆ ಅಂದಾಜು ೬೦ ಕೋಟಿ ರೂ, ಹಾಗೂ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಾಲಯಕ್ಕೆ ೩೫೨ ಕೋಟಿ ರೂ, ಅನುದಾನದ ಮಾಸ್ಟರ್ ಪ್ಲಾನ್ ಸಿದ್ದಗೊಂಡಿರುವುದು ಶಾಸಕ ಅಶೋಕ್ ಕುಮಾರ್ ರೈಯವರ ದೂರದೃಷ್ಟಿಯ ಫಲವಾಗಿದೆ ಎಂದು ಹೇಳಿ, ಶಾಸಕರ ಸಾಧನೆಯ ಬಗ್ಗೆ ಕಾವು ಹೇಮನಾಥ ಶೆಟ್ಟಿಯವರು ಪ್ರಶಂಶಿಸಿದರು.