ಉಪನಿರೀಕ್ಷಕರುಗಳ ವರ್ಗಾವರ್ಗಿ : ವಿಟ್ಲಕ್ಕೆ ರಾಮಕೃಷ್ಣ – ಬಂಟ್ವಾಳ ನಗರಕ್ಕೆ ಸಂದೀಪ್ ಕುಮಾರ್ ಶೆಟ್ಟಿ – ಪುಂಜಾಲಕಟ್ಟೆಗೆ ರಾಜೇಶ್ ಕೆ.ವಿ.

0

ವಿಟ್ಲ: ವಿಟ್ಲ ಪೊಲೀಸ್ ಠಾಣೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಉಪನಿರೀಕ್ಷಕರಾಗಿದ್ದ ವಿದ್ಯಾ ಕೆ.ಜೆ ರವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಬಂಟ್ವಾಳ ನಗರ ಪೊಲೀಸ್ ಠಾಣೆಯ ಎಸ್.ಐ.ಆಗಿದ್ದ ರಾಮಕೃಷ್ಣರವರನ್ನು ವರ್ಗಾವಣೆ ಮಾಡಲಾಗಿದ್ದು, ಅವರಿಂದ ತೆರವಾದ ಸ್ಥಾನಕ್ಕೆ , ಸ್ಥಳನಿರೀಕ್ಷಣೆಯಲ್ಲಿದ್ದ ಸಂದೀಪ್ ಕುಮಾರ್ ಶೆಟ್ಟಿಯವರನ್ನು ಹಾಗೂ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯ ಎಸ್.ಐ. ಆಗಿದ್ದ ರಾಜೇಶ್ ಕೆ.ವಿ.ರವರನ್ನು ಪುಂಜಾಲಕಟ್ಟೆ ಠಾಣೆಗೆ ವರ್ಗಾವಣೆ ಮಾಡಿ ಪಶ್ಚಿಮ ವಲಯ ಪೊಲೀಸ್ ಉಪ ಮಹಾನಿರೀಕ್ಷಕರು ಆದೇಶ ಹೊರಡಿಸಿದ್ದಾರೆ.


2018ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡ ರಾಮಕೃಷ್ಣರವರು ಆರಂಭದಲ್ಲಿ ಬಂಟ್ವಾಳ ನಗರ ಹಾಗೂ ಗ್ರಾಮಾಂತರ ಠಾಣೆಯಲ್ಲಿ ಪ್ರೊಬೆಷನರಿ ಎಸ್.ಐ. ಆಗಿ ಕರ್ತವ್ಯ ನಿರ್ವಹಿಸಿದ್ದರು. ಆ ಬಳಿಕ ಬೆಳ್ತಂಗಡಿ, ಪುತ್ತೂರು ಗ್ರಾಮಾಂತರ, ಬಂಟ್ವಾಳ ನಗರ ಠಾಣೆಯಲ್ಲಿ ಎಸ್.ಐ. ಆಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಅವರನ್ನು ವಿಟ್ಲ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಇವರು ಮೂಲತಃ ಬೆಂಗಳೂರು ದಕ್ಷಿಣದವರಾಗಿದ್ದಾರೆ.


2018ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡ ಸಂದೀಪ್ ಕುಮಾರ್ ಶೆಟ್ಟಿಯವರು ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರೊಬೆಷನರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಆ ಬಳಿಕ 2021ರಲ್ಲಿ ವಿಟ್ಲ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡ ಅವರು ಇಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಉಪನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಆ ಬಳಿಕ ಅವರನ್ನು ಕಾರ್ಕಳ ನಗರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು.
ಇದೀಗ ಅವರನ್ನು ಬಂಟ್ವಾಳ ನಗರ ಠಾಣಾ ಎಸ್.ಐ.ಆಗಿ ನೇಮಕ ಮಾಡಲಾಗಿದೆ. ಸಂದೀಪ್ ಕುಮಾರ್ ಶೆಟ್ಟಿಯವರು ಕುಂದಾಪುರ ಗುಲ್ಪಾಡಿ ನಿವಾಸಿಯಾಗಿದ್ದಾರೆ.
ಪುಂಜಾಲಕಟ್ಟೆ ಎಸ್. ಐ.ಆಗಿದ್ದ ನಂದಕುಮಾರ್ ಅವರು ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಭಡ್ತಿ ಹೊಂದಿ ವರ್ಗಾವಣೆ ಆದ ಹಿನ್ನೆಲೆಯಲ್ಲಿ ಖಾಲಿಯಾಗಿದ್ದ ಪುಂಜಾಲಕಟ್ಟೆ ಠಾಣೆಗೆ ಚಿಕ್ಕಮಗಳೂರಿನಿಂದ ರಾಜೇಶ್ ಕೆ.ವಿ ಅವರನ್ನು ವರ್ಗಾವಣೆ ಮಾಡಲಾಗಿದೆ.


2016ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡ ರಾಜೇಶ್ ಕೆ.ವಿ.ರವರು ಆರಂಭದಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರೊಬೆಷನರಿ ಎಸ್.ಐ. ಆಗಿ ಕರ್ತವ್ಯ ನಿರ್ವಹಿಸಿದ್ದರು. ಆ ಬಳಿಕ ಬಂಟ್ವಾಳ ಸಂಚಾರ, ಪುತ್ತೂರು ನಗರ , ಉಪ್ಪಿನಂಗಡಿ, ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಇದೀಗ ಅವರನ್ನು ಪುಂಜಾಲಕಟ್ಟೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ರಾಜೇಶ್ ಕೆ.ವಿ.ರವರು ಮೂಲತಃ ಮೈಸೂರಿನ ಕೆ.ಆರ್. ಪುರದವರಾಗಿದ್ದಾರೆ.

LEAVE A REPLY

Please enter your comment!
Please enter your name here