ಆರ್ಯಾಪುನಲ್ಲಿ ರೂ.75 ಕೋಟಿ ವೆಚ್ಚದಲ್ಲಿ ಕಾರ್ಮಿಕರ ವಸತಿ ಶಾಲೆ-ಅಶೋಕ್ ರೈ
ಪುತ್ತೂರು: ಆರ್ಯಾಪು ಎಂಬಲ್ಲಿ ರೂ.75 ಕೋಟಿ ವೆಚ್ಚದಲ್ಲಿ ಶೀಘ್ರವೇ ಕಾರ್ಮಿಕರ ಆಂಗ್ಲ ಮಾಧ್ಯಮ ವಸತಿ ಶಾಲೆ ನಿರ್ಮಾಣವಾಗಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಜು.20 ರಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಜರಗಿದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಎಸ್.ಟಿ ಘಟಕದ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಯಾರು ಕಾರ್ಮಿಕರು ಕಾರ್ಡ್ ಹೊಂದಿದ್ದಾರೋ ಅವರಿಗೆ ಇಲ್ಲಿ ಕಲಿಯಲು ಅವಕಾಶ ದೊರಕುತ್ತದೆ. ಕಾರ್ಡ್ ಹೊಂದಿಲ್ಲದವರಿಗೆ ಈ ಅವಕಾಶ ದೊರಕದು. ಕಾಂಗ್ರೆಸ್ ಕಛೇರಿಯಲ್ಲಿ ಉಚಿತವಾಗಿ ಕಾರ್ಡ್ ಅನ್ನು ಮಾಡಿಕೊಡಲಾಗುತ್ತಿದ್ದು ಇದರ ಉಪಯೋಗ ಪಡೆಯಿರಿ ಎಂದ ಅವರು ಸರಕಾರದ ಯೋಜನೆಗಳನ್ನು ಎಸ್.ಟಿ ಘಟಕದ ಮೂಲಕ ಎಲ್ಲರಿಗೂ ತಲುಪಿಸಿ. ಪಕ್ಷ ನೋಡಬೇಡಿ, ಎಲ್ಲರಿಗೂ ಉಪಯೋಗ ಆಗುವಂತೆ ಮಾಡಿ, ಎಲ್ಲರಿಗೂ ಯೋಜನೆಗಳು ಸಿಗಲಿ. ಚುನಾವಣೆ ಬಂದಾಗ ಮಾತ್ರ ಜನರ ಬಳಿಗೆ ಹೋಗಿ ಮತ ಕೇಳುವುದಲ್ಲ. ಕಾಂಗ್ರೆಸ್ ಸರಕಾರದ ಅಭಿವೃದ್ಧಿ ಯೋಜನೆಗಳನ್ನು ಆವಾಗವಾಗಲೇ ಮುಟ್ಟಿಸುವಂತಾಗಬೇಕು ಎಂದು ಅವರು ಹೇಳಿದರು.

ಕಾಂಗ್ರೆಸ್ ಪಕ್ಷದಿಂದ ಬಡವರಿಗೆ ತೊಂದರೆಯಾಗಿಲ್ಲ-ನಾರಾಯಣ ನಾಯ್ಕ:
ದ.ಕ ಜಿಲ್ಲಾ ಕಾಂಗ್ರೆಸ್ ಎಸ್.ಟಿ ಘಟಕದ ಅಧ್ಯಕ್ಷ ನಾರಾಯಣ ನಾಯ್ಕರವರು ಮಾತನಾಡಿ, ರಾಜೀವ್ ಗಾಂಧಿ, ಇಂದಿರಾಗಾಂಧಿ ಕಾಲದಲ್ಲಿ ಎಸ್.ಟಿ ಜನಾಂಗದವರಿಗೆ ಉದ್ಯೋಗ, ಭೂ ಮಸೂದೆ ಮೂಲಕ ಭೂಮಿ ಸಿಕ್ಕಿದ್ದು ಎಸ್.ಟಿ ಜನಾಂಗಕ್ಕೆ ಕಾಂಗ್ರೆಸ್ ಪಕ್ಷದ ಋಣ ಇದೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಬಡವರಿಗೆ ಯಾವುದೇ ತೊಂದರೆ ಆಗಿಲ್ಲ. ಈಗ ಸರಕಾರವು ಪಂಚ ಗ್ಯಾರಂಟಿ ಕೊಡಿಸುವ ಮೂಲಕ ಬಡವರಿಗೆ ಮತ್ತಷ್ಟು ಸಹಾಯ ದೊರಕಿದೆ. ಆದರೆ ಈ ಪಂಚ ಗ್ಯಾರಂಟಿ ದೊರಕಿದಿದ್ದರೆ ಕಾಂಗ್ರೆಸ್ ನವರು ಏನೂ ಕೇಳುವುದಿಲ್ಲ, ಯಾಕೆ ಕೊಡಲಿಲ್ಲ ಎಂದು ಕೇಳುವವರು ಬಿಜೆಪಿ ಪಕ್ಷ ಆಗಿದೆ. ಆದ್ದರಿಂದ ನಾವು ಎಸ್.ಟಿ ಜನಾಂಗದವರು ಸಂಘಟನೆಗಾಗಿ ಹೋರಾಟ ಮಾಡಿ ಪಕ್ಷವನ್ನು ಬಲಪಡಿಸೋಣ ಎಂದರು.
ಗ್ರಾಮ ಗ್ರಾಮದಲ್ಲಿ ಎಸ್.ಟಿ ಸಂಘಟನೆಯ ಬಲವರ್ಧನೆಯಾಗಲಿ-ಕೃಷ್ಣಪ್ರಸಾದ್ ಆಳ್ವ:
ಅಧ್ಯಕ್ಷತೆ ವಹಿಸಿದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಮಾತನಾಡಿ, ಗ್ರಾಮ ಗ್ರಾಮಗಳಲ್ಲಿ ಜಾತಿ ಸಂಘಟನೆಯನ್ನು ಒಗ್ಗೂಡಿಸಿ ಎಸ್.ಟಿ ಸಮುದಾಯವನ್ನು ಬಲವರ್ಧನೆಗೊಳಿಸಬೇಕು. ಸಮುದಾಯ ಬಲವರ್ಧನೆಯಾದಾಗ ಪ್ರತಿ ಗ್ರಾಮವಾರು ಸಮಸ್ಯೆಗಳಿಗೆ ಸ್ಪಂದನೆ ದೊರಕುತ್ತದೆ ಮಾತ್ರವಲ್ಲ ಸಮಸ್ಯೆಗಳಿಗೆ ಸ್ಪಂದಿಸಿ ಮತಗಳ ಪರಿವರ್ತನೆಗೊಳಿಸಿ. ಕಾಂಗ್ರೆಸ್ ಪಕ್ಷ ಎಸ್.ಟಿ ಸಮುದಾಯಕ್ಕೆ ಸದಾ ಬೆಂಬಲ ನೀಡುತ್ತದೆ ಹಾಗೂ ಎಸ್.ಟಿ ಸಮುದಾಯಕ್ಕೆ ಸಿಗುವ ಅನುದಾನ ವಿನಿಯೋಗವಾಗಲಿ ಎಂದರು.
ಕಾನೂನಿನ ಅರಿವಿದ್ದಾಗ ಸಮಾಜದ ಅಡಿಪಾಯ ಗಟ್ಟಿಗೊಳ್ಳುತ್ತದೆ-ಮಹಾಲಿಂಗ ನಾಯ್ಕ:
ವಿಟ್ಲ ಬ್ಲಾಕ್ ಕಾಂಗ್ರೆಸ್ ಎಸ್.ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ ಪುಣಚ ಮಾತನಾಡಿ, ಪಕ್ಷ ಯಾವುದೇ ಇರಲಿ, ಮೂಲಭೂತ ಸೌಕರ್ಯಗಳಿಗೆ ಹೋರಾಡಬೇಕು. ಮತ ನೀಡಿದ ಮೇಲೆ ಸುಮ್ಮನಿದ್ದರೆ ಸಾಕೇ, ನಾವು ಭಯದ ವಾತಾವರಣದಿಂದ ಹೊರ ಬರಬೇಕಾಗಿದೆ. ಎಸ್.ಟಿ ಜನಾಂಗದವರು ತಮ್ಮ ಮಕ್ಕಳನ್ನು ಸಂಘಟನೆಯ ಕಾರ್ಯಗಳಿಗೆ ಕರೆದುಕೊಂಡು ಹೋಗಿ, ಅಲ್ಲಿನ ಆಗುಹೋಗುಗಳ ಬಗ್ಗೆ ಅರಿಯುವವರಾಗಬೇಕು. ನಾವು ಕಾನೂನಿನ ಬಗ್ಗೆ ಅರಿವು ಹೊಂದಿದಾಗ ನಮ್ಮ ಸಮಾಜದ ಅಡಿಪಾಯ ಗಟ್ಟಿಗೊಳ್ಳುತ್ತದೆ. ಕಾಂಗ್ರೆಸ್ ಸರಕಾರದಿಂದ ನಮ್ಮ ಅಡಿಪಾಯ ಗಟ್ಟಿಯಾಗಿಯೇ ಇದೆ ಎಂದರು.
ಎಸ್.ಟಿ ಘಟಕಕ್ಕೆ ಸೂಕ್ತ ವ್ಯಕ್ತಿ ಆಯ್ಕೆ-ಶ್ರೀಪ್ರಸಾದ್ ಪಾಣಾಜೆ:
ಯೂತ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಶ್ರೀಪ್ರಸಾದ್ ಪಾಣಾಜೆ ಮಾತನಾಡಿ, ಕಾಂಗ್ರೆಸ್ ನಿಂದ ಶ್ರೀಮಂತ ವರ್ಗಕ್ಕೆ ಅನ್ಯಾಯವಾಗಿದೆಯೇ ವಿನಹ ದುರ್ಬಲ, ಹಿಂದುಳಿದ ವರ್ಗದ ಸಮುದಾಯಕ್ಕೆ ಅನ್ಯಾಯ ಆಗಿಲ್ಲ. ಕಾಂಗ್ರೆಸ್ ಪಕ್ಷದ ಮುಂಚೂಣಿ ಘಟಕಗಳಿಗೆ ಶಕ್ತಿ ಕೊಡುವ ಕೆಲಸ ಶಾಸಕರಿಂದ ಹಾಗೂ ಬ್ಲಾಕ್ ಕಾಂಗ್ರೆಸ್ ನಿಂದ ಆಗಿದ್ದು, ಎಸ್.ಟಿ ಘಟಕದ ಅಧ್ಯಕ್ಷರಾಗಿ ಮತ್ತೊಮ್ಮೆ ಸರಕಾರಿ ಇಲಾಖೆಯ ನಿವೃತ್ತ ಅಧಿಕಾರಿಯಾಗಿರುವ ಮಹಾಲಿಂಗ ನಾಯ್ಕರವರು ಆಯ್ಕೆಯಾಗಿದ್ದು ಈ ಘಟಕಕ್ಕೆ ಸೂಕ್ತ ವ್ಯಕ್ತಿಯನ್ನೇ ಆರಿಸಿದ್ದಾರೆ ಎಂದರು.
ಸಭೆಯಲ್ಲಿ ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ವಿಶ್ವಜಿತ್ ಅಮ್ಮುಂಜ, ಪುತ್ತೂರು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ಅಝಾದ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶರೂನ್ ಸಿಕ್ವೇರಾ, ಉಪಾಧ್ಯಕ್ಷ ವಿಜಯ್ ನಾಯ್ಕ, ಕಛೇರಿ ಕಾರ್ಯದರ್ಶಿ ಜೋನ್ ಸಿರಿಲ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಪೂರ್ಣಿಮಾ ಪ್ರಾರ್ಥಿಸಿದರು. ಕಾಂಗ್ರೆಸ್ ಎಸ್.ಟಿ ಘಟಕದ ನೂತನ ಅಧ್ಯಕ್ಷ ಮಹಾಲಿಂಗ ನಾಯ್ಕ ಸ್ವಾಗತಿಸಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಈಶ್ವರ್ ಬೆಡೇಕರ್ ವಂದಿಸಿದರು. ವಿಮಲ ದೈತೋಟ ಕಾರ್ಯಕ್ರಮ ನಿರೂಪಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷ ಸೇರ್ಪಡೆಗೆ ಗ್ರಾಮ ಗ್ರಾಮದಲ್ಲಿ ಸಭೆ…
ಪುತ್ತೂರು ಬ್ಲಾಕ್ ಕಾಂಗ್ರೆಸ್ ಎಸ್ ಟಿ ಘಟಕದ ಅಧ್ಯಕ್ಷರಾಗಿ ದ್ವಿತೀಯ ಬಾರಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಮಹಾಲಿಂಗ ನಾಯ್ಕರು, ಮುಂದಿನ ದಿನಗಳಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಎಸ್ ಟಿ ಘಟಕದೊಂದಿಗೆ ಯುವ ಎಸ್.ಟಿ ಸಮಾಜವನ್ನು ಸೇರಿಸಿ ಬಲಿಷ್ಟ ಎಸ್ ಟಿ ಘಟಕ ಕಟ್ಟಿ ಮುಂದೆ ಬರಲಿರುವ ಗ್ರಾಮ ಪಂಚಾಯತ್. ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲು ಶ್ರಮ ವಹಿಸುವುದಾಗಿ ಜೊತೆಗೆ ಶಾಸಕರ ಅಭಿವೃದ್ಧಿ ಕಾರ್ಯಗಳಿಗೂ ಸಾಕ್ಷಿ ಆಗಲಿದೆ. ಎಸ್ ಟಿ ಘಟಕದ ಬೇಡಿಕೆಯಂತೆ ಎಸ್ ಟಿ ಕಾಲನಿಗಳಿಗೆ ರಸ್ತೆ ನೀರು ವಿದ್ಯುತ್, ಆದ್ಯತೆ ಮೇರೆಗೆ ಒದಗಿಸಿಕೊಡಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು. ಗರಿಷ್ಟ ಸಂಖ್ಯೆಯಲ್ಲಿ ಭಾಗವಹಿಸಿದ ಕಾಂಗ್ರೆಸ್ ಎಸ್ ಟಿ ಕಾರ್ಯಕರ್ತರನ್ನು ಅಭಿನಂದಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷ ಸೇರ್ಪಡೆಗೆ ಗ್ರಾಮ ಗ್ರಾಮದಲ್ಲಿ ಸಭೆ ನಡೆಸಲಾಗುವುದೆಂದು ಎಂದರು.
ಸೇರ್ಪಡೆ..
ಈ ಸಂದರ್ಭದಲ್ಲಿ ಆರ್ಯಾಪು ಗ್ರಾಮದ ರಮೇಶ್ ಕೊಟ್ಲಾರು ಅವರು ಕಾಂಗ್ರೆಸ್ ಪಕ್ಷಕೆ ಸೇರ್ಪಡೆಯಾದರು. ಶಾಸಕ ಅಶೋಕ್ ಕುಮಾರ್ ರೈ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವರವರು ಪಕ್ಷದ ಭಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.