ಬಿಸಿಯೂಟದ ಬಗ್ಗೆ ಪರಿಶೀಲನೆ ಮಾಡುವುದು ನನ್ನ ಕರ್ತವ್ಯ ಎಂದ ಶಾಸಕರು
ಪುತ್ತೂರು: ಮಂಗಳವಾರ ಮಧ್ಯಾಹ್ನ ದಿಡೀರನೆ ಪುತ್ತೂರು ನಗರದ ಹೊರವಲಯದ ಪರ್ಲಡ್ಕ ಸರಕಾರಿ ಹಿ ಪ್ರಾ ಶಾಲೆಗೆ ತೆರಳಿದ ಶಾಸಕರು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಬಿಸಿಯೂಟವನ್ನು ಪರಿಶೀಲನೆ ನಡೆಸಿ ಮಕ್ಕಳ ಜೊತೆ ತಾನೂ ಬಿಸಿಯೂಟವನ್ನು ಸವಿದರು.

ಊಟದ ಬಗ್ಗೆ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದ ಶಾಸಕರು, ದಿನಾಲೂ ಊಟ ಚೆನ್ನಾಗಿರುತ್ತದಾ? ಸಮಯಕ್ಕೆ ಸರಿಯಾಗಿ ಊಟ ಕೊಡ್ತಾರ, ಮೊಟ್ಟೆ ಕೊಡ್ತಾರ ಎಂದು ಮಕ್ಕಳಲ್ಲಿ ಕೇಳಿ ಮಾಹಿತಿ ಪಡೆದುಕೊಂಡರು. ಪ್ರಶ್ನೆಗೆ ಉತ್ತರಿಸಿದ ವಿದ್ಯಾರ್ಥಿಗಳು ಊಟ ಚೆನ್ನಾಗಿರುತ್ತದೆ ಎಂದು ಹೇಳಿದರು.
ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಶಾಸಕರು, ಸರಕಾರ ಪ್ರತೀ ಶಾಲೆಯಲ್ಲೂ ಬಿಸಿಯೂಟದ ವ್ಯವಸ್ಥೆಯನ್ನು ಮಾಡಿದೆ. ಮಕ್ಕಳಿಗೆ ಸರಿಯಾದ ಪೌಷ್ಠಿಕಾಂಶಯುಕ್ತ ಆಹಾರವನ್ನು ಕೊಡಬೇಕು ಎಂಬ ಉದ್ದೇಶದಿಂದ ಸರಕಾರ ಮಕ್ಕಳ ಊಟದ ಜೊತೆ ಮೊಟ್ಟೆಯನ್ನು ನೀಡುತ್ತಿದೆ. ಸರಕಾರದಿಂದ ಸಿಗುವ ಈ ಸವಲತ್ತು ಪ್ರತೀ ಶಾಲೆಗೂ ತಲುಪುತ್ತದೆ ಆದರೆ ಶಾಲೆಯಲ್ಲಿ ಮಕ್ಕಳಿಗೆ ಸರಿಯಾದ ಬಿಸಿಯೂಟ ದೊರೆಯುತ್ತದಾ ಎಂಬುದನ್ನು ಪರಿಶೀಲನೆ ಮಾಡುವುದು ಓರ್ವ ಶಾಸಕನಾದ ನನ್ನ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ನಗರದ ಪರ್ಲಡ್ಕ ಸರಕಾರಿ ಶಾಲೆಗೆ ಬಂದು ಪರಿಶೀಲನೆ ನಡೆಸಿದ್ದೇನೆ. ಇಲ್ಲಿ ಊಟವನ್ನು ಮಾಡಿದ್ದೇನೆ ಚೆನ್ನಾಗಿದೆ. ಸಾಂಬಾರಿನಲ್ಲಿ ತುಂಡು ತರಕಾರಿಯೂ ಸಿಕ್ಕಿದೆ ಎಂದು ಹೇಳಿದರು.
ಮೆಣಸು ಕಡೆದು ಹಾಕಿ
ರೆಡಿಮೇಡ್ ಮೆಣಸಿನ ಹುಡಿ, ಸಾಂಬಾರ್ ಹುಡಿಯನ್ನು ಬಳಸದೆ ಅವೆಲ್ಲವನ್ನೂ ಕಡೆದು ಹಾಕುವಂತೆ ತಿಳಿಸಿದ್ದೇನೆ. ಪರ್ಲಡ್ಕ ಶಾಲೆಯಲ್ಲಿ ಇವೆಲ್ಲವನ್ನೂ ಕಡೆದೇ ಹಾಕಿದ್ದಾರೆ. ಸರಿಯಾದ ಸಮಯಕ್ಕೆ ಮಕ್ಕಳಿಗೆ ಊಟ ಹಾಕುವಂತೆಯೂ ಸೂಚನೆಯನ್ನು ನೀಡಿದ್ದೇನೆ ಎಂದು ಶಾಸಕರು ತಿಳಿಸಿದರು. ಮುಂದಿನ ದಿನಗಳಲ್ಲಿ ತಾಲೂಕಿನ ವಿವಿಧ ಶಾಲೆಗಳಿಗೆ, ಅಂಗನವಾಡಿಗಳಿಗೆ, ಹಾಸ್ಟೆಲ್‌ಗಳಿಗೆ ತೆರಳಿ ಅಲ್ಲಿ ಮಕ್ಕಳಿಗೆ ಕೊಡುತ್ತಿರುವ ಆಹಾರವನ್ನು ಪರಿಶೀಲನೆ ಮಾಡಲಿದ್ದೇನೆ ಎಂದರು.