ಆಟಿ ತಿಂಗಳು ತುಂಬಾ ಕಷ್ಟದ ತಿಂಗಳು ಎಂದು ನಿಮಗೆ ತಿಳಿದ ವಿಚಾರ. ಹಾಗೆಯೇ ಈ ತಿಂಗಳಲ್ಲಿ ಯಾವುದೇ ಶುಭ ಕಾರ್ಯಕ್ರಮ ನಡೆಯುವುದಿಲ್ಲ. ತುಳುನಾಡಿನ ಜಾನಪದ ಸಾಂಸ್ಕೃತಿಕ ಆಚರಣೆಗಳಲ್ಲಿ ಆಟಿ (ಆಷಾಢ) ತಿಂಗಳು ವಿಶೇಷ ಮಾನ್ಯತೆ ಹೊಂದಿದೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆದು ಸಿಗುವ ತರಕಾರಿ, ಸೊಪ್ಪು ,ಹಣ್ಣುಗಳು ಇವುಗಳಿಂದ ವಿವಿಧ ತಿಂಡಿ ತಿನಿಸುಗಳು ತಯಾರಿಸುವರು ಇದರೊಂದಿಗೆ ಆಟಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವರು.
ಹಾಗೆಯೇ ಆಟಿ ಕಷಾಯಕ್ಕೂ ವಿಶೇಷವಾದ ಸ್ಥಾನ ಮಾನ ಇದೆ. ಕೃಷಿಯನ್ನು ಅವಲಂಭಿಸಿ ಜೀವನ ಸಾಗಿಸುವ ಪ್ರಾಚೀನ ತುಳುನಾಡಿನ ಆಟಿ ತಿಂಗಳಲ್ಲಿ ಅತಿಯಾದ ಮಳೆ ಇದ್ದು, ಯಾವುದೇ ಬೆಳೆಯ ಫಸಲು ಬರುವುದಿಲ್ಲ. ಈ ತಿಂಗಳಲ್ಲಿ ಬದಲಾದ ಭೂಮಿಯ ವಾತಾವರಣ ನಿರಂತರ ಸುರಿಯುವ ಮಳೆಯನ್ನು ಕಾಣಬಹುದು. ಈ ಕಾರಣದಿಂದಾಗಿ ಈ ಮಾಸದಲ್ಲಿ ಶರೀರದಲ್ಲಿ ಕಂಡು ಬರುವ ರೋಗಗಳು ಮನುಷ್ಯನನ್ನು ನಿಯಂತ್ರಣ ಮಾಡುತ್ತದೆ. ಆಟಿ ತಿಂಗಳಲ್ಲಿ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಆಟಿ ಅಮಾವಾಸ್ಯೆ ದಿನದಂದು ಸಾಮೂಹಿಕವಾಗಿ ಕಷಾಯ ಸೇವಿಸುವ ಪದ್ದತಿ ಬೆಳೆದು ಬಂದಿದೆ.
ಕರಾವಳಿ ಭಾಗದಲ್ಲಿ ಆಟಿ ಅಮಾವಾಸ್ಯೆ. ಹಾಗೂ ಘಟ್ಟದ ಮೇಲಿನ ಪ್ರದೇಶದಲ್ಲಿ ಭೀಮನ ಅಮಾವಾಸ್ಯೆ ಎಂದು ಕರೆಯುವರು. ಅಂದರೆ ಗಂಡನನ್ನು ಪೂಜಿಸುವ ಪದ್ಧತಿ ಆಗಿದೆ. ಕರಾವಳಿ ಪ್ರದೇಶದಲ್ಲಿ ಅಮಾವಾಸ್ಯೆ ದಿನದಂದು ಹಾಲೆ ಮರದ ಕೆತ್ತೆಯ ಕಷಾಯ ಕುಡಿಯುವುದು ವಾಡಿಕೆಯಾಗಿದೆ. ಅದು ಕಹಿಯಾದ ಕಷಾಯವಾಗಿರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಎಂಬ ನಂಬಿಕೆ ಇದೆ. ಈ ದಿನದಂದು ಮಾತ್ರ ವಿಶೇಷವಾಗಿ ಕುಡಿಯುತ್ತಾರೆ.ಹಾಲೆ ಮರದ ಕೆತ್ತೆಯ ತರಲು ಬೇಗನೆ ಎದ್ದು ಮುಂಜಾನೆಯ ಸಮಯದಲ್ಲಿ ತಂದು ಜಜ್ಜಿ ಕಷಾಯ ತಯಾರಿಸಲಾಗುತ್ತದೆ.

ಹಾಲೆ ಮರದ ಕೆತ್ತೆಯ ಕಷಾಯ ತಯಾರು ಮಾಡುವುದು ಹೇಗೆಂದರೆ ಕರಿಮೆಣಸು, ಬೆಳ್ಳುಳ್ಳಿ , ಓಮ ಸೇರಿಸಿ ಕಲ್ಲಿನಲ್ಲಿ ಗ್ರೈಂಡ್ ಮಾಡಿ ಬೊಲ್ಲು ಕಲ್ಲು ಬಿಸಿ ಮಾಡಿ ಕಷಾಯಕ್ಕೆ ಹಾಕಿದರೆ ಅದು ಕುದಿಯುತ್ತದೆ. ನಂತರ ಆಟಿ ತಿಂಗಳ ಅಮಾವಾಸ್ಯೆಯ ದಿನ ಖಾಲಿ ಹೊಟ್ಟೆಗೆ ಸೇವಿಸುವುದು ರೂಢಿ ಇದೆ.ಈ ಕಷಾಯದ ಔಷಧೀಯ ಉಪಯೋಗದಿಂದ ಇದು ಜನಪದ ಔಷಧೀಯ ಗುಣಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.
ಅಮಾವಾಸ್ಯೆಯ ದಿನದಂದು ತೀರ್ಥ ಸ್ನಾನ ಪುರಾಣ ಪ್ರಸಿದ್ಧ ನರಹರಿ ಪರ್ವತ ಶ್ರೀ ಸದಾಶಿವ ದೇವಾಲಯದಲ್ಲಿ ಆಟಿ ಅಮಾವಾಸ್ಯೆ ವಿಶೇಷ ತೀರ್ಥ ಸ್ನಾನ ನಡೆಯುತ್ತದೆ.ಮುಂಜಾನೆಯೇ ಆರಂಭವಾದ ಜನ ಸಮೂಹ ಅಪರಾಹ್ನ ದ ಹೊತ್ತಿನ ತನಕ ಆಗಮಿಸುತ್ತಲೇ ಇರುತ್ತಾರೆ.ನೂತನ ವಧುವರರೂ , ಮಕ್ಕಳು , ಮಹಿಳೆಯರು ಸೇರಿದಂತೆ ಸಹಸ್ರಾರು ಮಂದಿ ಶಿವಭಕ್ತರು ಬೆಟ್ಟವನ್ನೇರಿ ಬಂದು ತೀರ್ಥ ಕೊಳಕ್ಕೆ ವೀಳ್ಯದೆಲೆ, ಹಣ್ಣು – ಅಡಿಕೆ ಸಲ್ಲಿಸುವರು.
ಕ್ಷೇತ್ರದಲ್ಲಿ ಶ್ರೀ ವಿನಾಯಕ ನರಹರಿ ಸದಾಶಿವ ನಾಗರಾಜನಿಗೆ ಪೂಜೆ ಸಲ್ಲಿಸುವ ಮೂಲಕ ಆಟಿ ಅಮಾವಾಸ್ಯೆಯ ವಿಶೇಷ ತೀರ್ಥ ಸ್ನಾನ ಮಾಡುವರು.ಆಟಿ ಅಮಾವಾಸ್ಯೆಯಂದು ಇಲ್ಲಿ ತೀರ್ಥಸ್ನಾನ ಮಾಡುವುದರಿಂದ ವೈವಾಹಿಕ ಜೀವನದಲ್ಲಿ ನೆಮ್ಮದಿ ಯೋಗ್ಯ ,ಸಂತಾನ ಪ್ರಾಪ್ತಿ ಸಂಕಷ್ಟ ನಿವಾರಣೆಗಾಗಿ ಇಷ್ಟಾರ್ಥ ಸಿದ್ದಿಸುವುದು ಎಂಬ ನಂಬಿಕೆ ಇದ್ದು ಅದರಂತೆ ಭಕ್ತರು ತಮ್ಮ ಹರಕೆಯನ್ನು ಸಲ್ಲಿಸುವರು.
ಬೆಟ್ಟವನ್ನೇರಿ ಬರುವುದರಿಂದ ಉಬ್ಬಸ ವ್ಯಾದಿ ದೂರವಾಗುತ್ತದೆ. ಎಂಬ ಪ್ರತೀತಿ ಇದ್ದು ಹುರಿ ಹಗ್ಗದ ಹರಕೆ ಇಲ್ಲಿ ವೈಶಿಷ್ಟ್ಯವಾಗಿದೆ.ದೇವರಿಗೆ ಸಲ್ಲಿಸುವ ತೊಟ್ಟಿಲು ಮಗು ಸೇವೆಯಿಂದ ಮಹಿಳೆಯರ ಬಂಜೆತನ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಬೆಳೆದು ಬಂದಿದೆ. ಪ್ರವಾಸಿ ತಾಣವಾಗಿದೆ. ತಂಪಾದ ಗಾಳಿ ಬೀಸುವ ಹಚ್ಚ ಹಸುರಿನ ಪ್ರದೇಶ.
ಕಾರಿಂಜ ಏಕಶಿಲಾ ಬೆಟ್ಟದ ಮೇಲಿರುವ ಕಾರಿಂಜೇಶ್ವರನ ಸನ್ನಿಧಿಯಲ್ಲಿಯೂ ತೀರ್ಥ ಸ್ನಾನ ನಡೆಯುತ್ತದೆ.ಈ ಎರಡು ದೇವಾಲಯಗಳು ಇತಿಹಾಸ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಗದಾ ತೀರ್ಥ , ಜಾನು ತೀರ್ಥ ಹಾಗೂ ಉಂಗುಷ್ಟ ತೀರ್ಥ ಗಳಲ್ಲಿ ಮಿಂದು ತಮ್ಮ ಇಷ್ಟಾರ್ಥ ಸಿದ್ಧಿಯಾಗುವಂತೆ ಬೇಡುವರು.
ನೀವೂ ಆಚರಣೆಯಲ್ಲಿ ಭಾಗಿಯಾಗಿ ಶ್ರೀ ದೇವರ ಕೃಪೆಗೆ ಪಾತ್ರರಾಗಿ . ಎರಡು ಕಣ್ಣು ಸಾಲದು ಇಂತಹ ದೇವಾಲಯದ ಪರಿಸರ ವೀಕ್ಷಿಸಲು ನೋಡ ಬನ್ನಿ.