ಪಂಚಾಯತ್, ಆಡಳಿತ ನಿಮಗೆ ಹೆಮ್ಮೆಯೇ? ಅಧಿಕಾರಿಗಳು ಹೇಗಿದ್ದಾರೆ

0

ದೇಶದ ಉದ್ಧಾರ, ರಕ್ಷಣೆಯೇ ನಮ್ಮ ಜೀವನದ ಗುರಿ ಎಂದು ಹೇಳುವವರು, ಕೆಲಸ ಮಾಡುವವರು ಇದ್ದಾರೆ. ದೇಶದ ಬಗ್ಗೆ ಸಂಸದರು, ರಾಜ್ಯದ ಬಗ್ಗೆ ಶಾಸಕರು ಏನು ಮಾಡುತ್ತಾರೆ ಎಂದು ಕೇಳುವ, ತಿಳಿಯುವ ಶಕ್ತಿ ಹೆಚ್ಚಿನವರಲ್ಲಿ ಇರುವುದಿಲ್ಲ. ಆದರೆ ಮಹಾತ್ಮಗಾಂಧಿ ಹೇಳಿದ -ದೇಶದ ಉದ್ಧಾರ, ಗ್ರಾಮದಿಂದ (ಹಳ್ಳಿಯಿಂದ) ಎಂಬ ಮಾತನ್ನು ಎಲ್ಲರೂ ಆಚರಣೆಗೆ ತರಬಹುದು ಯಾಕೆಂದರೆ ಪ್ರಜಾಪ್ರಭುತ್ವದ ಮೂಲವಾದ ಪಂಚಾಯತ್‌ಗಳಲ್ಲಿ ನಮ್ಮದೇ ಆಡಳಿತವಿದೆ. ನಮ್ಮವರೇ ಆಡಳಿತ ನಡೆಸುತ್ತಾರೆ. ಅದನ್ನು ಕೇಳುವ, ಗುರುತಿಸುವ ಶಕ್ತಿ ಎಲ್ಲರಲ್ಲಿ ಇದೆ.


ಈ ವರ್ಷದ ಅಂತ್ಯಕ್ಕೆ ಪಂಚಾಯತ್‌ನ 5 ವರ್ಷದ ಅವಧಿ ಮುಗಿದು ಚುನಾವಣೆ ಬರಲಿದೆ. ಅವರ ಅವಽಯ ಕೆಲಸಗಳ ಅವಲೋಕನ ಮಾಡುವ ಸಮಯ ಬಂದಿದೆ. ಅವರು ಮಾಡಿರುವ ಉತ್ತಮ ಕೆಲಸಗಳನ್ನು ಗುರುತಿಸುವುದು, ಸನ್ಮಾನಿಸುವುದು ಜನರ ಕರ್ತವ್ಯ. ಹಾಗೆಯೇ ಕೆಲಸ ಕಳಪೆಯಾಗಿದ್ದಲ್ಲಿ, ಬೇಜವಾಬ್ದಾರಿ, ಪಕ್ಷಪಾತ, ಭ್ರಷ್ಟಾಚಾರ ಇದ್ದಲ್ಲಿ ಅದನ್ನು ಪ್ರಶ್ನಿಸುವುದು ಅದಕ್ಕೆ ಸೂಕ್ತಕ್ರಮ ಕೈಗೊಳ್ಳುವುದು ಪ್ರಜಾಪ್ರಭುತ್ವದಲ್ಲಿ ರಾಜರುಗಳಾದ ಜನರ ಕರ್ತವ್ಯ ಮತ್ತು ಜವಾಬ್ದಾರಿ ಹೌದು. ಮಹಾತ್ಮಗಾಂಧಿ ಬಯಸಿದ ಗ್ರಾಮ ಸ್ವರಾಜ್ಯ ಬರಬೇಕಾದರೆ ಗ್ರಾಮದ ಜನರು, ರಾಜಕೀಯ ಜಾತಿ, ಧರ್ಮ ನೋಡದೆ ಅಭಿವೃದ್ಧಿಯತ್ತ ಚಿಂತಿಸಬೇಕು. ಸಕ್ರಿಯವಾಗಿ ಭಾಗವಹಿಸಬೇಕು. ನಮ್ಮೂರು ನಮ್ಮ ಹೆಮ್ಮೆಯಾಗುವಂತೆ ಮಾಡಬೇಕು. ಅದಕ್ಕಾಗಿ ಸುದ್ದಿ ಬಿಡುಗಡೆ ಬೆಳ್ತಂಗಡಿ, ಸುಳ್ಯ, ಪುತ್ತೂರುಗಳಲ್ಲಿ ಪಂಚಾಯತ್‌ಗಳ ಕೆಲಸಗಳನ್ನು ಗುರುತಿಸುವ ಕಡೆ ಹೆಜ್ಜೆಯನ್ನು ಇಟ್ಟಿದೆ.


ಪ್ರತೀ ಪಂಚಾಯತ್‌ನ 5 ವರ್ಷದ ಅವಧಿಯ ಆಡಳಿತದ, ಕೆಲಸ ಕಾರ್ಯಗಳ ಮಾಹಿತಿಗಳನ್ನು, ಖರ್ಚಿನ ಲೆಕ್ಕಗಳನ್ನು ಮಾಹಿತಿ ಹಕ್ಕಿನ ಅಡಿಯಲ್ಲಿ ಪಡೆಯುತ್ತಿದ್ದೇವೆ. ಪ್ರತಿಯೊಂದು ಪಂಚಾಯತ್, ಸೊಸೈಟಿಯ ಆಡಳಿತಕ್ಕೆ ಮತ್ತು ಅಧಿಕಾರಿಗಳಿಗೆ ತಮ್ಮ ಸಾಧನೆಯ ವಿವರಗಳನ್ನು ಸುದ್ದಿ ಚಾನೆಲ್‌ನ ಮೂಲಕ ಜನರ ಮುಂದೆ ನೀಡಲು ಮತ್ತು ಪತ್ರಿಕೆಯಲ್ಲಿ ಅವರ ಸಾಧನೆಯ ವಿವರಗಳನ್ನು ನೀಡಲು ಅವಕಾಶ ನೀಡುತ್ತಿದ್ದೇವೆ. ಆ ಕಾರ್ಯಕ್ರಮ ಜನರೊಂದಿಗೆ ನೇರ ಸಂಪರ್ಕದ ಕಾರ್ಯಕ್ರಮವಾಗಿರುವುದರಿಂದ ಅದರಲ್ಲಿ ಜನರಿಗೂ ಅವರನ್ನು ನೇರ ನೇರ ಗುರುತಿಸಲು ಮತ್ತು ಪ್ರಶ್ನಿಸಲು ಅವಕಾಶವಿರುತ್ತದೆ.

LEAVE A REPLY

Please enter your comment!
Please enter your name here